Select Page

ವಾಟ್ಸಾಪ್ ಮೆಸೇಜುಗಳು ಗ್ರೂಪುಗಳು ಮತ್ತು ಮಾನಸಿಕತೆ, ಸಾಮಾಜಿಕ ಸ್ವಾಸ್ಥ್ಯ!
ಚುನಾವಣೆ ಸಮಯ ಬಂದಾಗ ಹೇಗೆ ನಮ್ಮ ಜನರಲ್ಲಿ ಒಂದು ರೀತಿಯ “ಸಮೂಹ ಸನ್ನಿ “ ಪ್ರಾರಂಭವಾಗುತ್ತದೆ ಎನ್ನುವುದನ್ನು
ಗಮನಿಸಿ. ಹಲವಾರು ಶಾಲಾ ಮತ್ತು ಕಾಲೇಜ್ ಹಳೇ ವಿದ್ಯಾರ್ಥಿಗಳವಾಟ್ಸಪ್ ಗುಂಪುಗಳನ್ನು , ಹಲವು ವೃತ್ತಿಪರರ
ಗುಂಪುಗಳನ್ನು ಗಮನಿಸುತ್ತಿದ್ದೆ, ಹಾಗೆಯೇ ಇದರಲ್ಲಿ ಬರುವ ವಿಷಯಗಳು ಕೂಡ ನನ್ನ ಗಮನಕ್ಕೆ ಬಂದವು. ಕೆಲವರಂತೂ ತಾವೇ
ಹಿಂದೆ ಮಾಡಿದ ಕೃತ್ಯಗಳಿಗೆ ಬಲಿಪಶುಗಳು. ಈ ಹಿಂದೆ ಬೇರೆಯವರ ಆಸ್ತಿಪಾಸ್ತಿಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ವಾಟ್ಸಪ್
ಮಾಧ್ಯಮಗಳು ತಮ್ಮದೇ ಅಭ್ಯರ್ಥಿಯ ಬಗ್ಗೆ ಈ ರೀತಿ ಬಂದಾಗ ಒಮ್ಮೆಲೆ ಸಖೇದಾಶ್ಚರ್ಯ ಗೊಂಡದ್ದು ಹೌದು. ಒಟ್ಟಿನಲ್ಲಿ
ಮಾಡಿದ್ದುಣ್ಣೋ ಮಹಾರಾಯ!! ಇಲ್ಲಿ ಮಾಡಿದ್ದು ಸರಿ ತಪ್ಪು ಚರ್ಚೆಯಲ್ಲ. ಎಲ್ಲರೂ ತಿಳಿಯಬೇಕಾದ ವಿಷಯವೆಂದರೆ ಎಲ್ಲರ
ಮನೆಯ ದೋಸೆಗೆ ತೂತೆ. ಬಹುಶಹ ಹಿಂದಿ ಭಾಷೆಯ ಗಾದೆ “ಹಮಾಂ ಮೇ ಸಬ್ ನಂಗೆ ಹೋತೆ ಹೇ” ಬದಲಾಗಿ ಈಗ
“ಚುನಾವ್ ಮೇ ಸಬ್ ನಂಗೆ ಹೋತೆ ಹೇ” ಅಂತ ಆಗಿದೆ ಅನ್ನಬಹುದು.
ಮನೋವೈದ್ಯನಾಗಿ ನಾನು ಗಮನಿಸುತ್ತಾ ಇರುವುದೇನಂದರೆ ಇಂದು ಕೈಯಲ್ಲಿರುವ ಮೊಬೈಲ್ ಹಲವರಿಗೆ ಒಂದು ಅಸ್ತ್ರವಾಗಿದೆ.
ಅದರಲ್ಲೂ ಈ ಚುನಾವಣಾ ಸಮಯದಲ್ಲಿ ತಮಗೆ ಆಗದವರ ಬಗ್ಗೆ ಸೇಡು ತೀರಿಸಿಕೊಳ್ಳಲು, ವೈಯಕ್ತಿಕ ದ್ವೇಷವನ್ನು ಪಸರಿಸಲು
ಒಂದು ಸುವರ್ಣ ಅವಕಾಶ. ಹಾಗೆಯೇ ಕೆಲವೊಮ್ಮೆ ತಮ್ಮ “ಇಸಂ “ ಗಳನ್ನು ತೋರ್ಪಡಿಸಲು ಹಾಗೂ ಇತರರ ಮನಸ್ಸನ್ನು
ಮತ್ತು ಮೆದುಳನ್ನು ತಿದ್ದಲು ಆಗುತ್ತದೆಯೋ ನೋಡಲು ಒಂದು ಪ್ರಯತ್ನ. ಈ ಸುಳ್ಳು ಸುದ್ದಿಗಳು ನಮಗೆ ಬರುವುದು ಉಚಿತ ಆದರೆ
ಅದರಿಂದ ನಮ್ಮ ಮಾನಸಿಕ ಆರೋಗ್ಯ ಹಾಳಾಗುವುದು ಖಚಿತ .ನಕಾರಾತ್ಮಕ ವಿಷಯವು ಕೆಲವೊಮ್ಮೆ ನಮ್ಮ ನಂಬಿದ
ಸಿದ್ಧಾಂತಕ್ಕೆ ವಿರುದ್ಧವಾಗಿದ್ದರೆ ಅಥವಾ ಜಾತಿಗೆ ವಿರುದ್ಧವಾಗಿದ್ದರೆ ಅದು ಬಂದ ಕೂಡಲೇ ಮನಸ್ಸನ್ನು ಖಿನ್ನವಾಗಿ ಮಾಡಿಬಿಡುತ್ತದೆ.
ಇದಕ್ಕೊಂದು ಪ್ರತ್ಯುತ್ತರವನ್ನು ನೀಡಲೇಬೇಕು, ಅವರಿಗೆ ಬುದ್ಧಿ ಕಲಿಸಬೇಕು, ಎಂಬ ಅನಿಸಿಕೆ ಹಾಗೂ ಕೆಲವೊಮ್ಮೆ ಅದು
ವೈಯಕ್ತಿಕವಾಗಿ ನಮ್ಮ ಬಗ್ಗೆ ಅಲ್ಲದಿದ್ದರೂ ನಮ್ಮ ಮನಸ್ಸನ್ನು ನೋಯಿಸುವಂತೆ ಮಾಡಿಬಿಡುತ್ತದೆ.ನನಗೆ ಬರುತ್ತಿರುವ ಮೆಸೇಜ್
ಗಳನ್ನು ಗಮನಿಸಿದಾಗ ಮೆಸೇಜ್ ಮಾಡುವ ಹೆಚ್ಚಿನವರು ನಿರುದ್ಯೋಗಿಗಳು, ಇಲ್ಲವೇ ನಿವೃತ್ತ ಅಧಿಕಾರಿಗಳು ಇಲ್ಲವೇ
ಯಾವುದಾದರೂ ಒಂದು ಪಕ್ಷದ ಕಾರ್ಯಕರ್ತರು. ಅವರು ಕಳಿಸುವ ಮೆಸೇಜುಗಳು ಯಾವುದೇ ಒಂದು ಧರ್ಮದ ವಿರುದ್ಧ ಅಥವಾ
ಒಬ್ಬ ವ್ಯಕ್ತಿಯ ವಿರುದ್ಧ. ವಾಟ್ಸಾಪ್ ಗುಂಪುಗಳನ್ನು ಗಮನಿಸಿ ಅಲ್ಲಿ ಎಲ್ಲಾ ಧರ್ಮದ ವ್ಯಕ್ತಿಗಳು ಇರುತ್ತಾರೆ. ಅದನ್ನು ಪರಿಗಣಿಸದೆ
ಒಟ್ಟಾರೆಯಾಗಿ ಮೆಸೇಜುಗಳನ್ನು ಹಾಕುತ್ತಾರೆ. ಜಾತಿ ಧರ್ಮಗಳ ವ್ಯಕ್ತಿಗಳನ್ನು ಎಲ್ಲರೂ ಕಳ್ಳರು ಸುಳ್ಳರು ಎಂಬ ರೀತಿಯಲ್ಲಿ
ಬಿಂಬಿಸುತ್ತಾರೆ. ಅಲ್ಲಿ ಬರುವ ಮೆಸೇಜುಗಳು ಹಾಗೂ ಅದನ್ನು ಕಳುಹಿಸುವ ವ್ಯಕ್ತಿಗಳನ್ನು ಗಮನಿಸಿದಾಗ ಯಾವ ಮಟ್ಟಿಗೆ ನಮ್ಮ
ಸಮಾಜ ಹದೆಗಟ್ಟುತ್ತಾ ಇದೇ ಎಂದು ಬೇಸರವಾಗುತ್ತದೆ. ನಮ್ಮ ನಮ್ಮ ರಾಜಕೀಯ ನಂಬಿಕೆಗಳಾಗಲಿ, ಸಾಮಾಜಿಕ
ನಂಬಿಕೆಗಳಾಗಲಿ ಅಥವಾ ಧಾರ್ಮಿಕ ನಂಬಿಕೆಗಳಾಗಲಿ ಅವು ವೈಯಕ್ತಿಕ. ಅದನ್ನು ನಮಗೆ ಹೇಳುವ ,ಮಾತನಾಡುವ ಹಕ್ಕು ಇದೆ
. ನಮ್ಮ ನಮ್ಮ ಸಾಮಾಜಿಕ ಜಾಲತಾಣಗಳ ವಾಲ್ ಗಲಲ್ಲಿ ಆಗಲಿ ವೈಯಕ್ತಿಕ ಚರ್ಚೆಗಳಲ್ಲಾಗಳಿ ಹೇಳಿಕೊಳ್ಳ ಬಹುದು. ಸುಳ್ಳು
ಸತ್ಯ ತಿಳಿಯದೆ ಮೆಸೇಜ್ ಗಳನ್ನು ಗುಂಪಿನಲ್ಲಿ ಹಾಕುವುದು, ವ್ಯಕ್ತಿಗಳ ಜಾತಿ ಧರ್ಮಗಳ ತೇಜೋವಧೆಯನ್ನು ಮಾಡುವುದು ಎಷ್ಟು
ಸಮಂಜಸ? ಒಂದು ಪಕ್ಷ ಅಥವಾ ಕೋಮಿನವರನ್ನು ಭಯೋತ್ಪಾದಕರು ಎಂದು ಬಿಂಬಿಸುವುದು ಹಾಗೂ ಆ ನಂಬಿಕೆ ಸರಿ
ಎಂಬಂತೆ ವರ್ತಿಸುವುದು ಮತ್ತು ಒಂದು ಕೋಮಿನವರನ್ನು ಎಲ್ಲರನ್ನೂ ದೇಶದ್ರೋಹಿಗಳು ಎಂದು ಜರೆಯುವುದು ಎಷ್ಟರಮಟ್ಟಿಗೆ
ಸರಿ. ಆ ಶಾಲಾ ಗುಂಪಿನಲ್ಲಿರುವ ಆ ಕೋಮಿನ ವ್ಯಕ್ತಿಗಳ ಮನೋ ಸ್ಥಿತಿಗೆ ಏನು ಪರಿಣಾಮ ಬೀರಬಹುದು? ಕೆಲವೊಮ್ಮೆ ಗುಂಪಿನ

ಕೆಲವು ವ್ಯಕ್ತಿಗಳು ಒಂದೇ ಸಮನೆ ತಮ್ಮ ರಾಜಕೀಯ ಸಿದ್ದಾಂತವನ್ನು ಬಿಂಬಿಸುವ ಮೆಸೇಜುಗಳನ್ನು ಹಾಕುವುದು ಅಥವಾ ತಮಗೆ
ಬಂದ ಮೆಸೇಜುಗಳನ್ನು ಎಲ್ಲವನ್ನು ಗುಂಪಿಗೆ ಫಾರ್ವರ್ಡ್ ಮಾಡುತ್ತಾ ಇರುವುದು ನೋಡುತ್ತಿದ್ದೇವೆ. ಹಲವು ವಿಷಯಗಳು ಗುಂಪಿನ
ಹೆಚ್ಚಿನವರಿಗೆ ಸಂಬಂಧವೇ ಇರುವುದಿಲ್ಲ ಆದರೂ ಕೂಡ ಅದನ್ನು ಹಾಕುತ್ತಾರೆ. ಇದನ್ನು ಫಾರ್ವರ್ಡ್ ಮಾಡುವವರು ಹಾಗೆ ಅದನ್ನು
ಓದುವವರು ಅವರಿಗೆ ವ್ಯರ್ಥವಾಗುವ ಸಮಯ ಎಷ್ಟು?
ಹಲವೊಮ್ಮೆ ಸ್ನಾತಕೋತ್ತರ ಪದವಿ ಪಡೆದವರು ಕೂಡ ಸಂವೇದನಾ ರಹಿತವಾಗಿ ವರ್ತಿಸುವುದನ್ನು ನೋಡುತ್ತಾ ಇದ್ದೇವೆ.
ಇಂತಹ ಸಂವೇದನಾ ರಹಿತ ಗುಂಪುಗಳು ಮತ್ತು ಮೆಸೇಜ್ ಗಳು ಇದರ ಬಗ್ಗೆ ನಮ್ಮ ನಿಲುವುಗಳ ಪರಿಷ್ಕರಣೆ ನಮ್ಮ ಮನಸ್ಸಿನ
ಆರೋಗ್ಯಕ್ಕಾಗಿ ಅತಿ ಅಗತ್ಯ. ಯಾವುದೇ ವಾಟ್ಸಪ್ ಗುಂಪಾಗಲಿ ಅದರ ಬಗ್ಗೆ ಈ ರೀತಿ ವಿಶ್ಲೇಷಿಸಿ.. ಆ ಗುಂಪಿನಲ್ಲಿ ಬರುವುದೆಲ್ಲ
ನಿಜವೇ? ಆ ಗುಂಪಿನಲ್ಲಿ ಸಮಾಜಕ್ಕೆ ಉಪಯೋಗಕಾರಿಯಾದ ವಿಷಯಗಳು ಬರುತ್ತವೆಯೇ? ನಮಗೆ ಮುದ ನೀಡುವಂತಹ
ವಿಚಾರಗಳು ಹಂಚಿಕೊಳ್ಳಲಾಗುತ್ತದೆಯೇ? ಆ ಗುಂಪಿನಲ್ಲಿ ಇತರರ ಬಗ್ಗೆ ಒಳ್ಳೆಯ ವಿಚಾರಗಳು ಬರುತ್ತವೆ ಯೇ? ಈ ಪ್ರಶ್ನೆಗಳನ್ನು
ಗಮನಿಸಿ ಮುಂದುವರೆಯಿರಿ. ಈ ಪ್ರಶ್ನೆಗಳಲ್ಲಿ ಹೆಚ್ಚಿನವು ನಕಾರಾತ್ಮಕ ಉತ್ತರವಾಗಿದ್ದರೆ ಆ ಗುಂಪನ್ನು “ಮ್ಯೂಟ್” ಮಾಡಿ ಅಥವಾ
ಅದರಿಂದ ಹೊರಗೆ ಬನ್ನಿ. ನಾನಂತೂ ಪದೇಪದೇ ನಕಾರಾತ್ಮಕ ವಿಷಯಗಳನ್ನು ಪಸರಿಸುವ ವ್ಯಕ್ತಿಗಳನ್ನು ಮತ್ತು ಗ್ರೂಪ್ಗಳನ್ನು
ಬ್ಲಾಕ್ ಮಾಡಿಬಿಟ್ಟಿದ್ದೇನೆ. ಸಕಾರಾತ್ಮಕ ಮಾನಸಿಕ ಆರೋಗ್ಯಕ್ಕೆ ಇದು ಅತಿ ಅಗತ್ಯ.
ಚುನಾವಣೆಗಳೇನೋ ಬಂದು ಹೋಗುತ್ತವೆ. ಆದರೆ ಹಲವು ವರ್ಷಗಳ ಸ್ನೇಹ ಹಾಳು ಮಾಡಿಕೊಳ್ಳಲಾಗುತ್ತದೆಯಾ ? ನಾವು
ನಂಬಿದ ಸಿದ್ಧಾಂತಕ್ಕಾಗಿ ಬಾಲ್ಯದ ಮಿತ್ರರುಗಳನ್ನು ಕಳೆದುಕೊಳ್ಳಲಾಗುತ್ತದೆಯಾ ಯೋಚನೆ ಮಾಡಿ? ಸುಳ್ಳು ಸಂದೇಶಗಳಿಂದ
ಸಮಾಜದಲ್ಲಿ ಉಂಟಾಗುವ ಸಮಸ್ಯೆಗಳು ಹದೇಗಟ್ಟುವ ಶಾಂತಿ ಉಂಟಾಗುತ್ತಿರುವ ಕೊಲೆ ಜಾತಿ ವೈಶಮ್ಯಗಳು ಇವುಗಳು ನಮ್ಮ
ಮನಸ್ಸಿನ ಮೇಲೆ ಮಾಡುತ್ತಿರುವ ಪರಿಣಾಮವನ್ನು ಸಂಶೋಧನೆ ಮಾಡುವವರು ಯಾರು.
ನಾವೆಲ್ಲರೂ ಕುಳಿತು ಯೋಚನೆ ಮಾಡಬೇಕಾಗಿದೆ. ನಾವೇನೋ ನಾವು ನಂಬಿದ ಸಿದ್ಧಾಂತಕ್ಕಾಗಿ ಜಗಳ ಮಾಡುತ್ತವೆ ಆದರೆ ಆ
ರಾಜಕೀಯ ನಾಯಕರು ನೋಡಿ. ಗೆಲ್ಲುತ್ತಾರೋ ಸೋಲುತ್ತಾರೋ ಕೊನೆಗೆ ಎಲ್ಲರೂ ಒಟ್ಟಾಗಿ ನಮ್ಮನ್ನು ದೋಚುತ್ತಾರೆ. ಅವರಿಗೆ
ಸಿದ್ಧಾಂತ ಒಂದೇ “ಚುನಾವಣೆ ಇರಲಿ ಇಲ್ಲದಿರಲಿ, ಚಲಾವಣೆಯಲ್ಲಿ ಇರಬೇಕು”. ನಮ್ಮಲ್ಲಿ ಹಲವರು ಮುಖ ಕೆಡಿಸಿಕೊಂಡು ಕೆಲಸ
ಕಳೆದುಕೊಂಡು ಒದ್ದಾಡುವ ಪರಿಸ್ಥಿತಿ..