Select Page

ಇತ್ತೀಚೆಗೆ ಭಾರತೀಯ ಮೂಲದ ಮನೋವೈದ್ಯರು ಡಾಕ್ಟರ್ ರಾಮಸ್ವಾಮಿ ವಿಶ್ವನಾಥನ್ ಅಮೆರಿಕ ಮನೋವೈದ್ಯಕೀಯ ಸಂಘ
ಇದರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಅಲ್ಲಿ “ಲೈಫ್ ಸ್ಟೈಲ್ ಸೈಕ್ಯಾಟ್ರಿ” ಎಂಬ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಮಾತ್ರೆ ಚಿಕಿತ್ಸೆ ,ಮನೋಚಿಕಿತ್ಸೆ ಅಥವಾ ಮಾತು ಚಿಕಿತ್ಸೆ, ಗುಂಪು ಚಿಕಿತ್ಸೆ, ಇವೆಲ್ಲದರ
ಜೊತೆಗೆ ವಿದ್ಯುತ್ ಕಂಪನ ಚಿಕಿತ್ಸೆ, ನ್ಯೂರೋ ಮೋದ್ಯುಲೆಷನ್ ಚಿಕಿತ್ಸೆಗಳು ಮುಂತಾದ ಯಂತ್ರಗಳ ಮುಖಾಂತರ ಚಿಕಿತ್ಸೆ
ಇವುಗಳ ಬಗ್ಗೆ ಹೆಚ್ಚಿನ ಮನೋವೈದ್ಯರು ಒಲವು ತೋರಿಸುತ್ತಿರುವಾಗ ರಾಮಸ್ವಾಮಿ ವಿಶ್ವನಾಥನ್ ಅವರ “ಜೀವನ ಶೈಲಿಯ
ಮನೋವೈದ್ಯಕೀಯ ವಿಭಾಗ “”ಲೈಫ್ ಸ್ಟೈಲ್ ಸೈಕ್ಯಾಟ್ರಿ “ಇಂದು ಹಲವು ಮನೋವೈದ್ಯರನ್ನು ಬಡಿದು ಎಬ್ಬಿಸಿದೆ. ಕೇವಲ ಜೀವನ
ಶೈಲಿಯ ಬದಲಾವಣೆಯಿಂದ ಮಾನಸಿಕ ರೋಗಕ್ಕೆ ಚಿಕಿತ್ಸೆ ಸಾಧ್ಯವಿಲ್ಲ ಆದರೆ ಜೀವನ ಶೈಲಿಯ ಬದಲಾವಣೆ ಇತರ
ಚಿಕಿತ್ಸೆಗಳೊಂದಿಗೆ ರೋಗಿಯ ಕಾಯಿಲೆಯ ಮೇಲೆ ಸಾಕಷ್ಟು ಪರಿಣಾಮ ಬೀರಬಹುದು ಎಂಬುದನ್ನು ನಾವು
ಕಡೆಗಣಿಸಬಾರದು.ಮನೋವೈದ್ಯರು ಎಲ್ಲೇ ಪ್ರಾಕ್ಟೀಸ್ ಮಾಡುತ್ತಿದ್ದರು ಅಲ್ಲಿ ಕಿಕ್ಕಿರಿದು ಜನರು ಚಿಕಿತ್ಸೆಗೆ ಬರುತ್ತಾರೆ ಎಂಬುದು
ಸತ್ಯ. ನಮಗೆ ರೋಗಿಗಳೊಂದಿಗೆ ಸಮಯ ಕಳೆಯುವುದು ಇಂದಿನ ದಿನಗಳಲ್ಲಿ ಕಷ್ಟಕರ. ಆದರೂ ಕೂಡ ರೋಗಿಗಳಿಗೆ ವಿವಿಧ
ವಿಷಯಗಳಲ್ಲಿ ಮಾಹಿತಿ ಕೊಡುವಾಗ ಜೀವನ ಶೈಲಿಯ ಬಗ್ಗೆ ಇನ್ನಷ್ಟು ಉತ್ಸುಕತೆಯಿಂದ ಮಾಹಿತಿ ನೀಡಲು ರಾಮಸ್ವಾಮಿ,
ವಿಶ್ವನಾಥನ್ ಪ್ರೇರಪಿಸಿದ್ದಾರೆ. ಕಳೆದ ೨೫ ವರ್ಷಗಳ ನನ್ನ ಅನುಭವವು ಕೂಡ ಇದೆ. ರೋಗಿಗಳಿಗೆ ನಮ್ಮ ಜೀವನ ಶೈಲಿ
ಬದಲಾವಣೆಯ ಬಗ್ಗೆ ಹೇಳುವುದು ಅಲ್ಲದೆ ಅದರಿಂದ ಉಂಟಾಗುವ ಚಿಕಿತ್ಸಕ ಪರಿಣಾಮಗಳ ಬಗ್ಗೆ ನಾನು ಯಾವಾಗಲೂ
ಹೇಳುತ್ತೇನೆ. ಆದ್ದರಿಂದ ಈ ಬಾರಿ ಇದರ ಬಗ್ಗೆ ಬರೆಯುವ ಅಂದುಕೊಂಡೆ.
ನೀವು ಯಾವುದೇ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಈ ಜೀವನ ಶೈಲಿಯ ಬದಲಾವಣೆಗಳು ನಿಮ್ಮಲ್ಲಿ ಸಾಕಷ್ಟು
ಬದಲಾವಣೆಗಳನ್ನು ತಂದುಕೊಡುತ್ತದೆ ನೆನಪಿರಲಿ. ವ್ಯಾಯಾಮ ,ಆಹಾರ ಕ್ರಮದಲ್ಲಿ ಬದಲಾವಣೆ , ನಿದ್ರೆಯ ಕ್ರಮ , ಸಾಮಾಜಿಕ
ಚಟುವಟಿಕೆಗಳ ಕಡೆ ಗಮನ, ಒತ್ತಡ ನಿಯಂತ್ರಣ ಹಾಗೆ ತಂಬಾಕು ಮದ್ಯ ಮಾದಕ ದ್ರವ್ಯಗಳ ವರ್ಜನೆ ಇವುಗಳನ್ನು ನಾವು
ಜೀವನಶೈಲಿಯ ಬದಲಾವಣೆ ಎಂಬ ಹೆಸರಿನಲ್ಲಿ ಓದಿಕೊಳ್ಳ ಬಹುದು.
ವ್ಯಾಯಾಮ
ಪ್ರತಿದಿನ ಒಂದು ಗಂಟೆ ವ್ಯಾಯಾಮ. ವ್ಯಾಯಾಮ ಅಂದರೆ ಕೂಡಲೇ ನಡಿಗೆ ,ಈಜುವುದು, ಸೈಕ್ಲಿಂಗ್ ,ಜಿಮ್ ಗೆ ಹೋಗುವುದು
ಇದು ಯಾವುದೇ ಆಗಬಹುದು. ಇದನ್ನು ಪ್ರತಿದಿನ ಪಾಲಿಸಿದಲ್ಲಿ ಮನಸ್ಸಿಗೆ ಮುದ ನೀಡುವ ನರವಾಹಕಗಳ ಬದಲಾವಣೆ ನಮ್ಮ
ಮೆದುಳಿನಲ್ಲಿ ಉಂಟಾಗಿ ಮನಸ್ಸಿಗೆ ಖುಷಿ ಉಂಟಾಗುವುದು ಖಚಿತ.
ಆಹಾರ ಕ್ರಮದಲ್ಲಿ ಬದಲಾವಣೆ
ನಾವು ತಿನ್ನುವ ಆಹಾರದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗಿ ಹಾಗೆಯೇ ಕಾರ್ಬೋಹೈಡ್ರೇಟ್ಸ್ ಜಾಸ್ತಿಯಾದಾಗ ಅದು
ಆಯಾಸವನ್ನುಂಟು ಮಾಡಬಹುದು ಹಾಗೆಯೆ ಮಾನಸಿಕ ಖಿನ್ನತೆಯನ್ನು ಹೆಚ್ಚಿಸಬಹುದು. ತಿನ್ನುವ ಆಹಾರದಲ್ಲಿ ಸಮತೋಲನ
ಅದರಲ್ಲಿಯೂ ಹಸಿರು ತರಕಾರಿ, ಪ್ರೋಟಿನ್ ಯುಕ್ತ ಆಹಾರ, ಅಂದರೆ ಮೀನು ,ಮೊಟ್ಟೆ ,ಕೋಳಿ ,ಗೇರು ಬೀಜ ,ಬಾದಾಮ್
ಮುಂತಾದವುಗಳು ಮಾನಸಿಕ ಆರೋಗ್ಯ ವರ್ಧಕ, ಇವುಗಳನ್ನು ಆಹಾರದಲ್ಲಿ ಹೆಚ್ಚಿಸಿಕೊಂಡಲ್ಲಿ ಮಾನಸಿಕ ಆರೋಗ್ಯ

ವೃದ್ಧಿಯಾಗುತ್ತದೆ ಎಂಬುದರ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಸಸ್ಯಾಹಾರ ಮಾತ್ರ ಸಾತ್ವಿಕ ಅನ್ನುವುದಕ್ಕೆ ಯಾವುದೇ
ಪುರಾವೆಗಳಿಲ್ಲ.
ವ್ಯಾಯಾಮ ಮತ್ತು ಆಹಾರ ಕ್ರಮ ಮನಸ್ಸಿನ ಉಲ್ಲಾಸವನ್ನು ಹೆಚ್ಚಿಸುವುದಲ್ಲದೆ ಮೆದುಳಿಗೆ ರಕ್ತ ನೀಡುವ ರಕ್ತನಾಳಗಳು ಹಾಗೂ
ಮೆದುಳಿನ ನರ ಕೋಶಗಳ ಮೇಲೆ ಕೂಡ ಪರಿಣಾಮವನ್ನು ಬೀರಿ ಮೆದುಳಿನ ಆರೋಗ್ಯವನ್ನು ಉತ್ತಮ ಮಾಡುತ್ತದೆ ಎಂದು
ಸಂಶೋಧನೆಗಳು ತಿಳಿಸುತ್ತವೆ. ಹಾಗೆಯೇ ಇವು ಬಿಪಿ ಕಾಯಿಲೆ ,ಸಕ್ಕರೆ ಕಾಯಿಲೆ ,ಹೃದಯ ರೋಗದ ನಿಯಂತ್ರಣದಲ್ಲಿ ಸಾಕಷ್ಟು
ಪಾತ್ರ ವಹಿಸುತ್ತದೆ ಎಂಬುದು ಎಲ್ಲರಿಗೂ ತಿಳಿದ ಮಾತು. ಈಗ ಇವೆ ಮಾನಸಿಕ ಆರೋಗ್ಯವನ್ನು ಕೂಡ ಉತ್ತಮಗೊಳಿಸುತ್ತದೆ
ಎಂಬುದು ತಜ್ಞರ ಅಂಬೋಣ. ದೈಹಿಕ ಕಾಯಿಲೆಗಳಿಂದ ಬಳಲುತ್ತಾ ಇರುವವರು ನಿಮ್ಮ ತಜ್ಞ ವೈದ್ಯರ ಸಲಹೆ ಪಡೆದು ಈ ಜೀವನ
ಶೈಲಿ ಬದಲಾವಣೆ ಮಾಡಿಕೊಳ್ಳಿ.
ನಿದ್ರೆ ಮತ್ತು ಮಾನಸಿಕ ಆರೋಗ್ಯ
ಕಡಿಮೆ ನಿದ್ರೆ ಮಾಡುವವರು ಬಹಳಷ್ಟು ಸಾಧನೆಗಳನ್ನು ಮಾಡುತ್ತಾರೆ ಎಂಬುವ ಹಾಗೆ ಸಮಾಜದಲ್ಲಿ ಬಿಂಬಿಸಲಾಗುತ್ತದೆ. ಆದರೆ
ಇದು ಸತ್ಯಕ್ಕೆ ದೂರವಾದ ಮಾತು. ನಿಮ್ಮ ಮಾನಸಿಕ ಆರೋಗ್ಯ ಉತ್ತಮಗೊಳ್ಳಬೇಕಾದರೆ ಕನಿಷ್ಠ ಏಳರಿಂದ ಎಂಟು ಗಂಟೆ ನಿದ್ರೆ
ಅಗತ್ಯ. ನೀವೇ ಗಮನಿಸಿರಬಹುದು ಮಾನಸಿಕ ಆರೋಗ್ಯ ಹದಿಗೆಟ್ಟಿದೆ ಎನ್ನುವ ಗುಣಲಕ್ಷಣಗಳಲ್ಲಿ ನಿದ್ರಾಹೀನತೆ, ಪ್ರಮುಖವಾಗಿ
ಎದ್ದು ಕಾಣುತ್ತದೆ. ಸರಿಯಾಗಿ ನಿದ್ರೆ ಮಾಡದೇ ಇದ್ದಲ್ಲಿ ಮೂಡ್ ಡಿಸ್ಆರ್ಡರ್ ನಂತಹ ಕಾಯಿಲೆಗಳು ಉಲ್ಬಣಗೊಳ್ಳಬಹುದು.
ಆದ್ದರಿಂದ ಜೀವನ ಶೈಲಿಯ ಬದಲಾವಣೆ ಮಾಡುವಾಗ ಕನಿಷ್ಠ ಏಳರಿಂದ ಎಂಟು ಗಂಟೆ ನಿದ್ರೆ ಕಡೆ ಗಮನ ಕೊಡಿ.
ಸಾಮಾಜಿಕ ಚಟುವಟಿಕೆಗಳು ಅಂದರೆ ಕುಟುಂಬದೊಡನೆ ಒಡನಾಟ ,ಮಿತ್ರರು ಸಹೋದ್ಯೋಗಿಗಳೊಂದಿಗೆ ಬೆರೆಯುವುದು ಇದು
ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ. ನಮ್ಮ ಜೊತೆಗೆ ಪ್ರೀತಿ ಪಾತ್ರರು ಇದ್ದಾರೆ ಎನ್ನುವಾಗ ಮನಸ್ಸು ಸದೃಢ ಗೊಳ್ಳುತ್ತದೆ.
ಇತ್ತೀಚೆಗೆ ಮೊಬೈಲ್ ಕಂಪ್ಯೂಟರ್ನಿಂದ ಯಾಂತ್ರಿಕವಾಗಿರುವ ನಮ್ಮ ಜೀವನಗಳಲ್ಲಿ ಸಾಮಾಜಿಕ ಚಟುವಟಿಕೆಗಳನ್ನು
ಹೆಚ್ಚಿಸಿಕೊಳ್ಳುವುದು, ಮೊಬೈಲ್ ಕಂಪ್ಯೂಟರ್ ಇಂಟರ್ನೆಟ್ ನಿಂದ ದೂರ ಇರುವುದು ಮಾನಸಿಕ ಆರೋಗ್ಯ ವೃದ್ಧಿಸಲು ಸಹಾಯಕ
ಎನ್ನುವುದು ತಜ್ಞರ ಅಂಬೋಣ. ಪ್ರತಿದಿನ ಒಂದು ಗಂಟೆಯಾದರೂ ಪ್ರೀತಿ ಪಾತ್ರದೊಡನೆ ಮಾತನಾಡುವುದು ಅವರ
ಸಂಪರ್ಕದಲ್ಲಿ ಇರುವುದು ವಾರಕ್ಕೆ ಒಂದು ದಿನವಾದರೂ ಬಾಲ್ಯ ಮಿತ್ರರು ಅಥವಾ ಮನಸ್ಸಿಗೆ ಖುಷಿ ಕೊಡುವ ಗೆಳೆಯ ಗೆಳತಿಯ
ರೊಂದಿಗೆ ಸಮಯ ಕಳೆಯುವುದು ಮಾನಸಿಕ ಆರೋಗ್ಯ ಉತ್ತಮಗೊಳಿಸುತ್ತದೆ. ಹಾಗೆಯೇ ರಕ್ತದಾನ ಮಾಡುವುದು, ವೃದ್ಧಾಶ್ರಮ
ಅನಾಥಾಶ್ರಮಗಳಲ್ಲಿ ಹೋಗಿ ಸೇವೆ ಮಾಡುವುದು, ಹಬ್ಬ ಹರಿ ದಿನಗಳಲ್ಲಿ ಜಾತ್ರೆ ದೇವಸ್ಥಾನ ಮಸೀದಿ ಮತ್ತು ಚರ್ಚು ಮುಂತಾದ
ಸ್ಥಳಗಳಿಗೆ ಹೋಗಿ ಅಲ್ಲಿ ಜನರ ಒಟ್ಟಿಗೆ ಸಮಯ ಕಳೆಯುವುದು ಮನಸ್ಸಿಗೆ ಖುಷಿ ನೀಡುವ ಖರ್ಚೇ ಇಲ್ಲದ ಸಾಧನೆಗಳು ಎಂದು
ಸಂಶೋಧನೆಗಳು ತಿಳಿಸುತ್ತವೆ.
ಇನ್ನು ಒತ್ತಡ ನಿಯಂತ್ರಣ ಕ್ರಮಗಳ ಬಗ್ಗೆ ಗಮನಿಸಿದರೆ ಮನಸ್ಸಿನಲ್ಲಿ ಇದ್ದ ವಿಷಯಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡರೆ
ಮನಸ್ಸು ಹಗುರವಾಗುತ್ತದೆ ಆದ್ದರಿಂದ ಪ್ರೀತಿ ಪಾತ್ರರೊಂದಿಗೆ ಇರುವಾಗ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಹಾಗೆಯೇ
ಮನಸ್ಸಿಲ್ಲದೆ ಕೆಲವು ಕೆಲಸಗಳನ್ನು ನಾವು ಮಾಡುತ್ತಿದ್ದರೆ ಮಾಡಲು ಇಷ್ಟವಿಲ್ಲ ಎಂದು ನೇರವಾಗಿ ಹೇಳಿ ಸುಮ್ಮನಾದರೆ ಮನಸ್ಸಿಗೆ
ಎಷ್ಟೋ ಒಳಿತು. ಈ ಹೇಳುವ ಧೈರ್ಯವನ್ನು ಪ್ರತಿಯೊಬ್ಬರೂ ಕಲಿಯಬೇಕು. ಹಾಗೆಯೇ ಅನುದಿನ ನಮ್ಮ ದಿನಚರಿಯನ್ನು
ನಿರ್ಧರಿಸುವುದು ಅದನ್ನು ಪಾಲಿಸುವುದು ಹಾಗೆಯೇ ಪ್ರತಿದಿನ ರಾತ್ರಿ ಮಲಗುವಾಗ ನಾವು ದಿನದಲ್ಲಿ ಮಾಡಿದ ಕೆಲಸಗಳ ಬಗ್ಗೆ

ಯೋಚಿಸಿ ಆತ್ಮವಲೋಕನ ಮಾಡಿ ಬರೆದಿಡುವುದು ಇದನ್ನು “ಜರ್ನಲಿಂಗ್ “ಎನ್ನುತ್ತೇವೆ ಇದು ಮಾನಸಿಕ ಆರೋಗ್ಯ ವೃದ್ಧಿಯನ್ನು
ಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಉತ್ತಮ ಸಮಯ ನಿರ್ವಹಣೆ ಉತ್ತಮ ಮಾನಸಿಕ ಆರೋಗ್ಯಕ್ಕೆ ಅಗತ್ಯ.
ಇವೆಲ್ಲದರ ಜೊತೆಗೆ ಬಿಪಿ ಕಾಯಿಲೆ ,ಸಕ್ಕರೆ ಕಾಯಿಲೆ ಮತ್ತು ಹೃದಯ ರೋಗ ಇವುಗಳ ನಿಯಂತ್ರಣ ಹಾಗೂ ಈ ಬಗ್ಗೆ
ವೈದ್ಯರೊಂದಿಗೆ ಸಮಾಲೋಚನೆ ಹಾಗೆ ಈ ಕಾಯಿಲೆಗಳ ಬಗ್ಗೆ “ಗೂಗಲ್ “ಮಾಡದೇ ಇರುವುದು ಇವೆಲ್ಲವೂ ಮಾನಸಿಕ
ಆರೋಗ್ಯಕ್ಕೆ ಒಳ್ಳೆಯದು.
ಒಟ್ಟಿನಲ್ಲಿ ಜೀವನ ಕ್ರಮ ಬದಲಾವಣೆ ಕೂಡ ಒಂದು ಚಿಕಿತ್ಸಾಕ್ರಮ. ಇದು ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ ಮಾನಸಿಕ
ಆರೋಗ್ಯಕ್ಕೆ ಕೂಡ ಅನ್ನುವುದನ್ನು ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಿ.
ಮದ್ಯ ಸೇವನೆ ,ಮಾದಕ ದ್ರವ್ಯ ಸೇವನೆ ,ತಂಬಾಕು, ಅತಿಯಾದ ಮೊಬೈಲ್ ,ಇಂಟರ್ನೆಟ್ ,ಕಂಪ್ಯೂಟರ್ ಬಳಕೆ ಇಂದು
ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತಿರುವ ವಿಷಯಗಳು ಅದರಿಂದ ಇವುಗಳಿಂದ ದೂರ ಇರುವುದು ಮಾನಸಿಕ
ಆರೋಗ್ಯವನ್ನು ವೃದ್ಧಿಗೊಳಿಸುತ್ತದೆ.