ನಾವು ತಿನ್ನುವ ಆಹಾರ ನಮ್ಮ ಮನಸ್ಸನ್ನು ರೂಪಿಸುತ್ತದೆ:
ಆಹಾರ ಮತ್ತು ಮಾನಸಿಕ ಆರೋಗ್ಯದ ನಡುವಿನ ನೇರ ಸಂಬಂಧ ಗಮನಿಸಬೇಕಾಗಿದೆ. ನಾವು ಹೆಚ್ಚಾಗಿ ಆಹಾರ ಮತ್ತು ದೇಹದ ತೂಕ ಅಥವಾ ಹೃದಯದ ಆರೋಗ್ಯದ ದೃಷ್ಟಿಯಿಂದ ಮಾತ್ರ ಯೋಚಿಸುತ್ತೇವೆ. ಪ್ರತಿದಿನ ನಾವು ತಿನ್ನುವ ಆಹಾರವು ನಮ್ಮ ಮನಸ್ಸಿನ ಮೇಲೆ ನೇರ ಮತ್ತು ಅಳೆಯಬಹುದಾದ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ . ನಮ್ಮ ಮನಸ್ಥಿತಿ, ನಮ್ಮ ನೆನಪಿನ ಶಕ್ತಿ, ಆತಂಕ ಮತ್ತು ಖಿನ್ನತೆಯನ್ನು ಎದುರಿಸುವ ಸಾಮರ್ಥ್ಯ — ಇವೆಲ್ಲವೂ ದಿನ ನಾವು ನಮ್ಮ ತಟ್ಟೆಯಲ್ಲಿ ಏನು ತಿನ್ನುತ್ತೇವೆ ಎನ್ನುವುದರ ಮೇಲೆ ಭಾಗಶಃ ನಿರ್ಧಾರವಾಗುತ್ತದೆ.
ಮೆದುಳಿಗೆ ಏನು ಬೇಕು?
ಮೆದುಳು ನಮ್ಮ ದೇಹದ ಅತ್ಯಂತ ಸಕ್ರಿಯ ಅಂಗ. ದೇಹದ ತೂಕದಲ್ಲಿ ಕೇವಲ ಎರಡು ಶೇಕಡಾ ಇದ್ದರೂ, ನಾವು ತೆಗೆದುಕೊಳ್ಳುವ ಒಟ್ಟು ಕ್ಯಾಲರಿಗಳ ಸುಮಾರು ಇಪ್ಪತ್ತು ಶೇಕಡಾವರೆಗೂ ಮೆದುಳು ಒಂದೇ ಬಳಸುತ್ತದೆ. ಪ್ರತಿ ಭಾವನೆ, ಪ್ರತಿ ನಿರ್ಧಾರ, ಪ್ರತಿಯೊಂದು ನೆನಪು – ಇವೆಲ್ಲಕ್ಕೂ ನಿರಂತರವಾದ, ಸಮತೋಲಿತ ಪೋಷಕಾಂಶ ಪೂರೈಕೆ ಅನಿವಾರ್ಯ. ಧಾನ್ಯ, ಕಾಳು–ಬೇಳೆ, ತರಕಾರಿ, ಹಣ್ಣು, ಒಳ್ಳೆಯ ಕೊಬ್ಬುಗಳಂತಹ ಉತ್ತಮ ಗುಣಮಟ್ಟದ ಆಹಾರ ಸತತವಾಗಿ ಲಭ್ಯವಿದ್ದಾಗ ಮೆದುಳಿನ ‘ಯಂತ್ರ’ ಸರಾಗವಾಗಿ, ಸ್ಥಿರವಾಗಿ ಕೆಲಸ ಮಾಡುತ್ತದೆ. ಅದರ ಬದಲು ತುಂಬಾ ಸಂಸ್ಕರಿಸಿದ, ಸಕ್ಕರೆ ಮತ್ತು ಕೆಟ್ಟ ಕೊಬ್ಬುಗಳಿರುವ ಆಹಾರಗಳನ್ನು ಹೆಚ್ಚಾಗಿ ತಿನ್ನುವುದರಿಂದ ದೇಹ ಮತ್ತು ಮೆದುಳಿನ ಉರಿಯೂತ ಹೆಚ್ಚುವುದು, ರಕ್ತದಲ್ಲಿನ ಸಕ್ಕರೆ–ಇನ್ಸುಲಿನ್ ನಿಯಂತ್ರಣ ತಪ್ಪುವುದು, ದೀರ್ಘಕಾಲದಲ್ಲಿ ಮೆದುಳಿನ ಕಾರ್ಯಕ್ಷಮತೆ ಮತ್ತು ಮಾನಸಿಕ ಸ್ಥಿರತೆಯನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ ಎಂದು ಈಗಿನ ಸಂಶೋಧನೆಗಳು ಸೂಚಿಸುತ್ತವೆ.
ಸಂಶೋಧನೆಗಳು ಏನು ಹೇಳುತ್ತದೆ?
ಮಾನಸಿಕ ಆರೋಗ್ಯಕ್ಕೆ ಪೌಷ್ಟಿಕ ಆಹಾರವೇ ಮದ್ದು ಸಂಶೋಧನೆಗಳ ಪ್ರಕಾರ, ನಾವು ಸೇವಿಸುವ ಆಹಾರ ಮತ್ತು ನಮ್ಮ ಮನಸ್ಥಿತಿಗೂ (Mood) ಅವಿನಾಭಾವ ಸಂಬಂಧವಿದೆ. ವಿಶೇಷವಾಗಿ ಮೀನು, ಮೊಟ್ಟೆ, ಹೆಚ್ಚಿನ ಪ್ರಮಾಣದ ತರಕಾರಿ ಮತ್ತು ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವವರಲ್ಲಿ ಖಿನ್ನತೆಯ (Depression) ಅಪಾಯ ಗಣನೀಯವಾಗಿ ಕಡಿಮೆ ಇರುವುದು ಹಲವಾರು ಅಧ್ಯಯನಗಳಲ್ಲಿ ದೃಢಪಟ್ಟಿದೆ. ಇಂತಹ ‘ಉತ್ತಮ ಗುಣಮಟ್ಟದ’ ಆಹಾರ ಶೈಲಿಯು ಕೇವಲ ದೈಹಿಕ ಆರೋಗ್ಯಕ್ಕಷ್ಟೇ ಅಲ್ಲದೆ, ಮನಸ್ಸಿನ ಶಾಂತಿ ಮತ್ತು
ಸಮತೋಲನವನ್ನು ಕಾಪಾಡುವಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಸಂಸ್ಕರಿಸಿದ ಜಂಕ್ ಫುಡ್ಗಳಿಗಿಂತ ನೈಸರ್ಗಿಕ
ಪೋಷಕಾಂಶಗಳಿರುವ ಈ ಆಹಾರ ಕ್ರಮವು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಮಾನಸಿಕ ಒತ್ತಡವನ್ನು ಎದುರಿಸುವ
ಶಕ್ತಿಯನ್ನು ನೀಡುತ್ತದೆ. ಆದ್ದರಿಂದ, ಆರೋಗ್ಯಕರ ಜೀವನಶೈಲಿಯಲ್ಲಿ ಪೌಷ್ಟಿಕ ಆಹಾರವು ಒಂದು ಪ್ರಮುಖ 'ಜೀವನ ರಕ್ಷಕ'
ಅಂಶವಾಗಿದೆ. "ಇತ್ತೀಚಿನ ದಿನಗಳಲ್ಲಿ 'ಮೆಡಿಟರೇನಿಯನ್ ಆಹಾರ ಪದ್ಧತಿ'ಯನ್ನು (ಭೂಮಧ್ಯಸಮುದ್ರದ ದೇಶಗಳ ಆಹಾರ ಕ್ರಮ) 'ಮೆದುಳಿಗೆ
ಅತ್ಯುತ್ತಮವಾದ ಆಹಾರ' ಎಂದು ಗುರುತಿಸಲಾಗುತ್ತಿದೆ.
ಈ ಆಹಾರ ಕ್ರಮವನ್ನು ಪಾಲಿಸುವುದರಿಂದ ವಯಸ್ಸಾದವರಲ್ಲಿ ಸಹಜವಾಗಿ ಕಾಣಿಸಿಕೊಳ್ಳುವ ಸ್ಮರಣಶಕ್ತಿ ಕುಸಿತ ಮತ್ತು ಮರೆವಿನ
ಕಾಯಿಲೆ (Dementia) ಬರುವ ಅಪಾಯ ಕಡಿಮೆ ಎಂದು ಜಗತ್ತಿನಾದ್ಯಂತ ನಡೆದ ಹಲವು ಸಂಶೋಧನೆಗಳು ದೃಢಪಡಿಸಿವೆ.
ಈ ಆಹಾರ ಪದ್ಧತಿಯ ಪ್ರಮುಖ ಅಂಶಗಳೆಂದರೆ:
* ತರಕಾರಿ, ಹಣ್ಣುಗಳು, ಕಾಳು-ಬೇಳೆಗಳು, ಒಣಬೀಜಗಳು (Nuts) ಮತ್ತು ಸಂಪೂರ್ಣ ಧಾನ್ಯಗಳನ್ನು (Whole grains) ಧಾರಾಳವಾಗಿ ಬಳಸುವುದು.
* ಅಡುಗೆಗೆ ಮತ್ತು ಕೊಬ್ಬಿನಂಶಕ್ಕಾಗಿ ಪ್ರಮುಖವಾಗಿ ಆಲಿವ್ ಎಣ್ಣೆಯನ್ನು (Olive oil) ಬಳಸುವುದು.
* ಮೀನು ಮತ್ತು ಕೋಳಿ ಮಾಂಸವನ್ನು ಮಿತವಾಗಿ ಸೇವಿಸುವುದು.
* ಕೆಂಪು ಮಾಂಸ (Red meat), ಸಕ್ಕರೆ ಮತ್ತು ಅತಿಯಾಗಿ ಸಂಸ್ಕರಿಸಿದ (Processed) ಆಹಾರಗಳಿಂದ ಆದಷ್ಟು ದೂರವಿರುವುದು.
ಮೆದುಳಿನ ಕಾರ್ಯಕ್ಷಮತೆಗೆ ಒಮೆಗಾ-೩ ಕೊಬ್ಬಾಮ್ಲಗಳು ಅತ್ಯಗತ್ಯ
ನಮ್ಮ ಮೆದುಳಿನ ಒಣ ತೂಕದ ಸುಮಾರು ೬೦% ರಷ್ಟು ಭಾಗವು ಕೊಬ್ಬಿನಿಂದ ಕೂಡಿದ್ದು, ಇದರಲ್ಲಿ ನರಕೋಶಗಳ ಪೊರೆಯನ್ನು
(Cell Membrane) ನಿರ್ಮಿಸಲು ಒಮೆಗಾ-೩ ಕೊಬ್ಬಾಮ್ಲಗಳು ಅತ್ಯಂತ ಅವಶ್ಯಕವಾಗಿವೆ. ಈ ವಿಶಿಷ್ಟವಾದ ಕೊಬ್ಬಿನಾಮ್ಲಗಳು
ನಮ್ಮ ದೇಹದಲ್ಲಿ ತಾನಾಗಿಯೇ ಉತ್ಪತ್ತಿಯಾಗುವುದಿಲ್ಲ, ಆದ್ದರಿಂದ ನಾವು ಇವುಗಳನ್ನು ಸೇವಿಸುವ ಆಹಾರದ ಮೂಲಕವೇ
ಪಡೆಯಬೇಕಾಗುತ್ತದೆ. ಮುಖ್ಯವಾಗಿ ಮೀನು, ಅಕ್ರೋಡು (Walnuts), ಅಗಸೆ ಬೀಜ (Flaxseeds) ಮತ್ತು ಚಿಯಾ ಬೀಜಗಳು
ಒಮೆಗಾ-೩ ರ ಅತ್ಯುತ್ತಮ ಮೂಲಗಳಾಗಿವೆ. ಆಹಾರದಲ್ಲಿ ಇದರ ಪ್ರಮಾಣ ಕಡಿಮೆಯಾದಾಗ ಮೆದುಳಿನಲ್ಲಿ ಉರಿಯೂತ
(Inflammation) ಹೆಚ್ಚಾಗುವ ಸಾಧ್ಯತೆಯಿದ್ದು, ಇದು ನೇರವಾಗಿ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ
ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ, ಮೆದುಳಿನ ಚುರುಕುತನ ಮತ್ತು ಮಾನಸಿಕ ಸ್ಥಿರತೆಗಾಗಿ ಒಮೆಗಾ-೩ ಯುಕ್ತ
ಆಹಾರವನ್ನು ನಿಯಮಿತವಾಗಿ ಸೇವಿಸುವುದು ಬಹಳ ಮುಖ್ಯ.
ತಪ್ಪಿಸಬೇಕಾದ ಆಹಾರಗಳು
ಅತಿ ಸಕ್ಕರೆ ಮತ್ತು ಮೈದಾ ತಿಂಡಿಗಳು, ಸಂಸ್ಕರಿಸಿದ ಆಹಾರ, ಕೋಲ್ಡ್ ಡ್ರಿಂಕ್ಸ್ — ಇವು ರಕ್ತದಲ್ಲಿ ಸಕ್ಕರೆ ತ್ವರಿತವಾಗಿ ಏರಿಸಿ
ಇಳಿಸುತ್ತವೆ. ಇದು ನಮ್ಮ ಮನಸ್ಥಿತಿಯಲ್ಲಿ ಅಸ್ಥಿರತೆ, ಕಿರಿಕಿರಿ, ಮತ್ತು ಏಕಾಗ್ರತೆ ಕೊರತೆ ಉಂಟು ಮಾಡುತ್ತದೆ. ದೀರ್ಘಕಾಲ ಈ
ಆಹಾರ ತಿಂದರೆ ಮಿದುಳಿನ ಜ್ಞಾಪಕ ಕೇಂದ್ರವಾದ ಹಿಪ್ಪೋಕ್ಯಾಂಪಸ್ಗೆ ಹಾನಿಯಾಗಬಹುದು. ಸಂಸ್ಕರಿಸಿದ ಮಾಂಸ, ಅತಿ
ಉಪ್ಪು ತಿನಿಸುಗಳು ಮತ್ತು ಆಲ್ಕೋಹಾಲ್ — ಇವು ಕೂಡ ಮಿದುಳಿಗೆ ಹಿತಕರವಲ್ಲ.
ಈಗಿನ ಆಧುನಿಕ ವೈದ್ಯಕೀಯ ಅಧ್ಯಯನಗಳ ಪ್ರಕಾರ, ನಮ್ಮ ಮನೆಯ ಸಾಂಪ್ರದಾಯಿಕ ಅಡುಗೆಯೇ ಮಿದುಳಿನ ಆರೋಗ್ಯಕ್ಕೆ
ಅತ್ಯಂತ ಹಿತಕರವಾದ 'ದಿನನಿತ್ಯದ ಔಷಧಿ' (Day-to-day Medicine). ತಟ್ಟೆ ತುಂಬಿರುವ ಬಣ್ಣ ಬಣ್ಣದ ತರಕಾರಿಗಳು ಮಿದುಳಿಗೆ ಅಗತ್ಯವಿರುವ ಆಂಟಿ-ಆಕ್ಸಿಡೆಂಟ್ಗಳನ್ನು ನೀಡಿದರೆ, ರಾಗಿ ಗಂಜಿ ಮತ್ತು ಅವರೆಕಾಳುಗಳಂತಹ ಪದಾರ್ಥಗಳು ನರಮಂಡಲದ
ಸುಗಮ ಕಾರ್ಯನಿರ್ವಹಣೆಗೆ ಬೇಕಾದ ಸಂಕೀರ್ಣ ಕಾರ್ಬೋಹೈಡ್ರೇಟ್ ಹಾಗೂ ಪ್ರೋಟೀನ್ಗಳನ್ನು ಒದಗಿಸುತ್ತವೆ. ಸಂಸ್ಕರಿಸಿದ ಆಹಾರಗಳಿಗಿಂತ ಇಂತಹ ನೈಸರ್ಗಿಕ ಮತ್ತು ಪೌಷ್ಟಿಕ ಆಹಾರ ಕ್ರಮವು ಮೆದುಳಿನ ಉರಿಯೂತವನ್ನು ಕಡಿಮೆ ಮಾಡಿ, ದೀರ್ಘಕಾಲದವರೆಗೆ ನೆನಪಿನ ಶಕ್ತಿ ಹಾಗೂ ಮಾನಸಿಕ ಸ್ಥಿರತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.. ತಾಳ್ಮೆ ಇರಲಿ, ಬದಲಾವಣೆ ಬರುತ್ತದೆ
ಒಂದು ವಾರದ ಒಳ್ಳೆಯ ಊಟ ಮೆದುಳನ್ನು ಬದಲಿಸುವುದಿಲ್ಲ, ಒಂದು ವಾರದ ಕೆಟ್ಟ ಊಟ ಅದನ್ನು ನಾಶ ಮಾಡುವುದಿಲ್ಲ.
ಆಹಾರ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧ ನಿರ್ಮಾಣವಾಗುವುದು ತಿಂಗಳು ಮತ್ತು ವರ್ಷಗಳ ಅಭ್ಯಾಸದಿಂದ.
ಪ್ರತಿದಿನ ಒಂದು ಚಿಕ್ಕ ಆಯ್ಕೆ — ಕೋಲ್ಡ್ ಡ್ರಿಂಕ್ ಬದಲು ನೀರು, ಬಿಸ್ಕೀಟ್ ಬದಲು ಬಾದಾಮಿ, ಮೈದಾ ರೊಟ್ಟಿ ಬದಲು ರಾಗಿ ಮುದ್ದೆ — ಇವು ಸಣ್ಣ ಕ್ರಮಗಳಾಗಿ ಕಾಣಿಸಬಹುದು. ಆದರೆ ವರ್ಷಗಳ ನಂತರ ಇವೇ ಕ್ರಮಗಳು ನಿಮ್ಮ ಮಿದುಳಿನ ರಕ್ಷಕರಾಗಿರುತ್ತಾರೆ.
ಆಹಾರವನ್ನು ಔಷಧವಾಗಿ ನೋಡಿ —
ಆರೋಗ್ಯಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ವಿದೇಶಿ ಪದಾರ್ಥಗಳನ್ನು ಕೊಳ್ಳುವ ಅಗತ್ಯವಿಲ್ಲ; ನಮ್ಮ ಮನೆಯ
ಸಾಂಪ್ರದಾಯಿಕ ರಾಗಿ-ಮುದ್ದೆ, ಸೊಪ್ಪಿನ ಸಾರು ಮತ್ತು ಕಾಳುಗಳೇ,ನಮ್ಮಲ್ಲಿ ದೊರೆಯುವ ಮೀನು ಮೊಟ್ಟೆಯೇ ಮೆದುಳು ಹಾಗೂ
ದೇಹದ ಆರೋಗ್ಯಕ್ಕೆ ಅತ್ಯುತ್ತಮ 'ಬಜೆಟ್ ಫ್ರೆಂಡ್ಲಿ' ಔಷಧಗಳು.








