ಅಮಲು, ಆವೇಶ ಮತ್ತು ಅನಾಹುತ: ಮದ್ಯಪಾನ ಹೇಗೆ ಅಪರಾಧಕ್ಕೆ ದಾರಿಯಾಗುತ್ತದೆ?
ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಒಂದು ದುರಂತ ಘಟನೆ ನಮ್ಮೆಲ್ಲರನ್ನೂ ಬೆಚ್ಚಿಬೀಳಿಸಿದೆ. ಪಾರ್ಟಿಯ ಸಂಭ್ರಮದಲ್ಲಿದ್ದ
ಸ್ನೇಹಿತರ ನಡುವಿನ ಸಣ್ಣ ತಳ್ಳಾಟ, ಒಬ್ಬರ ಸಾವಿನಲ್ಲಿ ಅಂತ್ಯವಾಗಿದೆ. ಇದನ್ನು ಕೇವಲ ಒಂದು ಆಕಸ್ಮಿಕ ಘಟನೆ ಅಥವಾ
'ಪೊಲೀಸ್ ಕೇಸ್' ಎಂದು ನೋಡುವ ಬದಲು, ಮದ್ಯಪಾನವು ಮನುಷ್ಯನ ಮನಸ್ಥಿತಿಯ ಮೇಲೆ ಹೇಗೆ ಹಿಡಿತ ಸಾಧಿಸಿ,
ವಿವೇಚನೆಯನ್ನು ಕೊಲ್ಲುತ್ತದೆ ಎಂಬುದಕ್ಕೆ ಇದೊಂದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಒಬ್ಬ ಮನೋವೈದ್ಯನಾಗಿ , ಅದರಲ್ಲಿಯೂ ಮದ್ಯ
ವ್ಯಸನ ವಿಮುಕ್ತಿ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಯಕರ್ತನಾಗಿ ಇಂತಹ ದುರಂತಗಳ ಹಿಂದಿರುವ ಮಾನಸಿಕ ಕಾರಣಗಳನ್ನು
ಇಲ್ಲಿ ವಿವರಿಸುತ್ತಿದ್ದೇನೆ.
ಮದ್ಯ ಸೇವನೆ ಮಾಡಿದಾಗ ಏನೂ ಆಗುತ್ತದೆ ನಾವು ತಿಳಿದುಕೊಳ್ಳೋಣ.
೧. ಮೆದುಳಿನ 'ಬ್ರೇಕ್' ಫೇಲ್ ಆಗುತ್ತದೆ (Loss of Inhibition)
ಮದ್ಯಪಾನ ಮಾಡಿದಾಗ ಮೊದಲು ಪರಿಣಾಮ ಬೀರುವುದು ನಮ್ಮ ಮೆದುಳಿನ ಮುಂಭಾಗದ (Frontal Lobe) ಮೇಲೆ. ಈ ಭಾಗವು
ನಮಗೆ "ಇದು ತಪ್ಪು, ಇದು ಸರಿ", "ಇಲ್ಲಿ ಕೋಪ ಮಾಡಿಕೊಳ್ಳಬಾರದು" ಎಂದು ಎಚ್ಚರಿಸುವ ಜಾಗ. ಮದ್ಯದ ನಶೆಯಲ್ಲಿದ್ದಾಗ ಈ ವಿವೇಚನಾ ಶಕ್ತಿ ಕುಂದುತ್ತದೆ. ಕಾರು ಓಡಿಸುವಾಗ ಬ್ರೇಕ್ ಫೇಲ್ ಆದರೆ ಏನಾಗುತ್ತದೆಯೋ, ಮದ್ಯಪಾನ ಮಾಡಿದಾಗ ಮನುಷ್ಯನ ಮನಸ್ಥಿತಿಯೂ ಹಾಗೆಯೇ ಆಗುತ್ತದೆ. ಎದುರಿಗಿರುವ ವ್ಯಕ್ತಿ ತನ್ನ ಪ್ರಾಣ ಸ್ನೇಹಿತನಾದರೂ, ಆ ಕ್ಷಣಕ್ಕೆ ಆತ ಶತ್ರುವಿನಂತೆ ಕಾಣಬಹುದು.
೨. ಕ್ಷುಲ್ಲಕ ಕಾರಣಗಳೇ ದೊಡ್ಡದಾಗಿ ಕಾಣುತ್ತವೆ
ಈ ಘಟನೆಯಲ್ಲಿ ಜಗಳ ಶುರುವಾಗಿದ್ದು ಒಂದು ಸಣ್ಣ ಕಾರಣಕ್ಕೆ ಎಂದು ವರದಿಯಾಗಿದೆ. ಸಾಧಾರಣ ಸ್ಥಿತಿಯಲ್ಲಿದ್ದಾಗ ನಾವು
ಇಂತಹ ಸಣ್ಣ ಪುಟ್ಟ ಮಾತುಗಳನ್ನು ತಮಾಷೆಯಾಗಿ ತೆಗೆದುಕೊಂಡು ನಗುತ್ತೇವೆ. ಆದರೆ, ಮದ್ಯದ ಪ್ರಭಾವದಲ್ಲಿ ಸಣ್ಣ ಮಾತು
ಕೂಡ ದೊಡ್ಡ ಅವಮಾನದಂತೆ ಅಥವಾ ಸವಾಲಿನಂತೆ ಭಾಸವಾಗುತ್ತದೆ. ಮೆದುಳಿನಲ್ಲಿರುವ ರಾಸಾಯನಿಕಗಳ
ಬದಲಾವಣೆಯಿಂದಾಗಿ, ವ್ಯಕ್ತಿಯು ಅತಿಯಾದ ಆವೇಶ (Aggression) ಪ್ರದರ್ಶಿಸುತ್ತಾನೆ. "ನನ್ನನ್ನೇ ತಳ್ಳುತ್ತೀಯಾ?" ಎಂಬ ಸಣ್ಣ ಅಹಂಕಾರ ದೊಡ್ಡ ಜಗಳ ಮಾಡುವ ಮಟ್ಟಕ್ಕೆ ಬೆಳೆಯುತ್ತದೆ.
೩. ಎಚ್ಚರಿಕೆ ಮತ್ತು ಪರಾನುಭೂತಿಯ ಕೊರತೆ (Lack of Empathy)
ವರದಿಗಳ ಪ್ರಕಾರ, ಮೃತಪಟ್ಟ ವ್ಯಕ್ತಿಗೆ ಹೃದಯ ಸಂಬಂಧಿ ಸಮಸ್ಯೆಯಿತ್ತು ಮತ್ತು ಹಿಂದೆ ಶಸ್ತ್ರಚಿಕಿತ್ಸೆ ಕೂಡ ಆಗಿತ್ತು. ಆದರೆ, ಆ
ತಳ್ಳಾಟದ ಸಮಯದಲ್ಲಿ ಸ್ನೇಹಿತರಿಗೆ "ನನ್ನ ಸ್ನೇಹಿತ ದುರ್ಬಲನಿದ್ದಾನೆ, ಆತನಿಗೆ ಪೆಟ್ಟಾಗಬಹುದು" ಎಂಬ ಎಚ್ಚರಿಕೆ
ಇಲ್ಲವಾಯಿತು. ಮದ್ಯಪಾನವು ನಮ್ಮಲ್ಲಿರುವ 'ಪರಾನುಭೂತಿ'ಯನ್ನು (ಬೇರೆಯವರ ಕಷ್ಟವನ್ನು ಅರಿಯುವ ಗುಣ) ತಾತ್ಕಾಲಿಕವಾಗಿ ನಾಶಮಾಡುತ್ತದೆ. ಪರಿಣಾಮವಾಗಿ, ನಮ್ಮ ತಮಾಷೆಯಾಟ ಅಥವಾ ಆವೇಶ ಎದುರಿನ ವ್ಯಕ್ತಿಗೆ ಪ್ರಾಣಾಪಾಯ ತರಬಹುದು ಎಂಬ ಅಂದಾಜು ನಮಗೆ ಸಿಗುವುದಿಲ್ಲ. ಒಟ್ಟಾರೆ ಈ ಘಟನೆಯು ನಮ್ಮನ್ನು ಯೋಚಿಸುವಂತೆ ಮಾಡಬೇಕು..
ಜೀವನಪರ್ಯಂತ ಕಾಡುವ ಅಪರಾಧ ಪ್ರಜ್ಞೆ ಒಂದು ಜೀವ ಕಳೆದುಹೋಗಿದೆ, ಆದರೆ ಆತನ ಸಾವಿಗೆ ಕಾರಣರಾದ ಸ್ನೇಹಿತರು ಬದುಕಿದ್ದೂ ಸತ್ತಂತೆ. ಜೈಲು ಶಿಕ್ಷೆಗಿಂತ ಹೆಚ್ಚಾಗಿ, "ನನ್ನ ಕೈಯಾರೆ ನನ್ನ ಸ್ನೇಹಿತ ಸತ್ತ" ಎಂಬ ಅಪರಾಧ ಪ್ರಜ್ಞೆ (Guilt) ಅವರನ್ನು ಜೀವನಪರ್ಯಂತ ಕಾಡುತ್ತದೆ. ಮದ್ಯದ ಅಮಲು ಇಳಿದ ಮೇಲೆ ವಾಸ್ತವದ ಅರಿವಾಗುತ್ತದೆ, ಆದರೆ ಆಗ ಕಾಲ ಮಿಂಚಿರುತ್ತದೆ. ಒಂದು ರಾತ್ರಿಯ ಮೋಜು, ಹಲವು ಕುಟುಂಬಗಳ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ.
ನಾವೇನು ಕಲಿಯಬೇಕು?
ಈ ಘಟನೆ ಸಮಾಜಕ್ಕೆ ಮತ್ತು ಯುವಜನತೆಗೆ ಒಂದು ಎಚ್ಚರಿಕೆಯ ಗಂಟೆ: ಸ್ನೇಹಕ್ಕೆ ಅಮಲಿನ ಹಂಗೇಕೆ?: ಮದ್ಯಪಾನ ಮಾಡಿ ಸಂಭ್ರಮಿಸುವುದು ಆಧುನಿಕತೆ ಎಂದುಕೊಂಡಿದ್ದರೆ, ಅದು ನಿಮ್ಮನ್ನು ವಿನಾಶದತ್ತ ಒಯ್ಯುತ್ತದೆ. ನಿಜವಾದ ಸ್ನೇಹಕ್ಕೆ ಮದ್ಯದ ಅಗತ್ಯವಿಲ್ಲ.
ಸ್ವಯಂ ನಿಯಂತ್ರಣ: ಪಾರ್ಟಿಗಳಲ್ಲಿ ಮಾತುಕತೆ ವಿಕೋಪಕ್ಕೆ ಹೋದಾಗ, ಅಲ್ಲಿಂದ ಎದ್ದು ಹೊರಬರುವುದು ಹೇಡಿತನವಲ್ಲ, ಅದು
ಬುದ್ಧಿವಂತಿಕೆ. ಆರೋಗ್ಯದ ಅರಿವಿರಲಿ: ಸ್ನೇಹಿತರೊಂದಿಗೆ ಮೋಜು ಮಾಡುವಾಗ, ದೈಹಿಕ ಬಲ ಪ್ರದರ್ಶನ ಬೇಡ. ಮೇಲ್ನೋಟಕ್ಕೆ
ಆರೋಗ್ಯವಂತರಿಗಾಗೆ ಕಾಣುವವರ ಒಳಗಿನ ದೇಹಸ್ಥಿತಿ ಹೇಗಿದೆಯೋ ನಮಗೆ ತಿಳಿಯದು. "ಕ್ಷಣದ ಮೋಜು ಮತ್ತು ಕೋಪ, ಶಾಶ್ವತವಾದ ನೋವನ್ನು ತರಬಾರದು.” ವೈಜ್ಞಾನಿಕ ಅಧ್ಯಯನಗಳಲ್ಲಿ ಹಿಂಸಾತ್ಮಕ ಅಪರಾಧಗಳಲ್ಲಿನ ಸುಮಾರು ಅರ್ಧಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮದ್ಯದ ಪ್ರಭಾವವಿರುವುದಾಗಿ ವರದಿಯಾಗಿದೆ. ಭಾರತೀಯ ಅಧ್ಯಯನಗಳೂ ಕಳ್ಳತನ, ಹಲ್ಲೆ, ಕೊಲೆ, ಅತ್ಯಾಚಾರ, ಮನೆಗಳಲ್ಲಿ ನಡೆಯುವ ಹಿಂಸಾಚಾರ ಇತ್ಯಾದಿ ಹಲವು ಪ್ರಕರಣಗಳಲ್ಲಿ ಮದ್ಯ ಮಹತ್ತರ ಪಾತ್ರ ವಹಿಸುತ್ತದೆ ಎಂದು ಸೂಚಿಸಿವೆ.
ರಾತ್ರಿಯ ಮೋಜಿಗಾಗಿ ಕುಡಿದ ಎರಡು–ಮೂರು ಪೆಗ್ಗಳು ಹಲವಾರು ಕುಟುಂಬಗಳ ಇಡೀ ಬದುಕನ್ನು ಬದಲಾಯಿಸಬಹುದು
ಎಂಬ ಅರಿವು ಇಲ್ಲದಿರುವುದೇ ನಮ್ಮ ದೊಡ್ಡ ದುರಂತ.
ನಾವೇನು ಮಾಡಬಹುದು..
ತಡೆಗಟ್ಟುವ ಕ್ರಮಗಳು
ಸಮಾಜದ ಮಟ್ಟದಲ್ಲಿ:ಕಾಲೇಜು, ಉದ್ಯೋಗ ಸ್ಥಳಗಳಲ್ಲಿ ಮದ್ಯ, ಕೋಪ ನಿಯಂತ್ರಣ, ಕಾನೂನು ಪರಿಣಾಮಗಳ ಬಗ್ಗೆ ನೈಜ
ಉದಾಹರಣೆಗಳೊಂದಿಗೆ ಜಾಗೃತಿ ಕಾರ್ಯಕ್ರಮಗಳು ಅಗತ್ಯ . ಯುವ ಗುಂಪುಗಳಲ್ಲಿ “ಮದ್ಯವಿಲ್ಲದ ಸ್ನೇಹ” ಮತ್ತು “ರಾತ್ರಿಯ ಪಾರ್ಟಿಗೂ ಗಡಿ” ಎಂಬ ಹೊಸ ಸಂಸ್ಕೃತಿ ಬೆಳೆಸಬೇಕು. ವೈಯಕ್ತಿಕ ಮಟ್ಟದಲ್ಲಿ:ಮದ್ಯ ಕುಡಿದಾಗ “ನನಗೆ ಕೋಪ ಜಾಸ್ತಿ ಬರುತ್ತದೆ” ಎನ್ನುವವರು ಸಂಪೂರ್ಣ ತೊರೆಯುವುದು, ಅಥವಾ ಕಡ್ಡಾಯವಾಗಿ ಸೀಮಿತಗೊಳಿಸುವುದು ಸುರಕ್ಷಿತ.ಮದ್ಯದ ನಂತರ ಜಗಳ, ಹಲ್ಲೆ, ಮನೆ ಹಿಂಸೆ ಆಗುತ್ತಿರುವ ಮನೆಗಳಲ್ಲಿ ಅಂತಹ ವ್ಯಕ್ತಿಗಳು ಆದಷ್ಟು ಬೇಗ ಮನೋವೈದ್ಯರ ವೃತ್ತಿಪರ ಸಹಾಯ ಪಡೆಯುವುದು ಅತ್ಯಂತ ಮುಖ್ಯ .ಒಂದು ಕ್ಷಣದ ಕೋಪ, ಒಂದು ತಳ್ಳಾಟ, ಒಂದು ಕಿಕ್, ಒಂದು ಗ್ಲಾಸ್ ಮದ್ಯ—ಇವೆಲ್ಲ ಸೇರಿ ಒಂದು ಜೀವದ ಅಂತ್ಯಕ್ಕೆ, ಇನ್ನೂ ಹಲವರ ಜೀವಿತಾವಧಿಯ ಪಶ್ಚಾತ್ತಾಪಕ್ಕೆ ಕಾರಣವಾಗಬಾರದು. ಕೋಪವನ್ನು ತಡೆಯಲು ಕಲಿಯುವುದು, ಮದ್ಯದ ಮಿತಿಯನ್ನು ಅರಿಯುವುದು, ಸ್ನೇಹದ ಮೌಲ್ಯವನ್ನು ಜಾಗೃತ ಮನಸ್ಸಿನಿಂದ ಕಾಪಾಡಿಕೊಳ್ಳುವುದು—ಇದೆಲ್ಲವೂ ಕಾನೂನು ಪುಸ್ತಕಗಳಿಗಿಂತ ಹೆಚ್ಚಿನ “ಬುದ್ಧಿ ಪಾಠ” ನಮ್ಮ ಯುವಸಮಾಜಕ್ಕೆ ಬೇಕಾಗಿದೆ.








