Select Page

ಕಾಂತಾರ ಚಾಪ್ಟರ್ ಒಂದು ಸಿನಿಮಾ ನೋಡಿದ ಮೇಲೆ ಸಾಕಷ್ಟು ಜನ ಸಿನಿಮಾ ಟಾಕೀಸ್ ನಲ್ಲಿ ಅಥವಾ ಟಾಕೀಸಿನ ಹೊರಗೆ
ತಮಗೆ ಮೈಮೇಲೆ ದೇವರು ಬಂದಂತೆ ಮಾಡುತ್ತಿದ್ದದ್ದು ಕಂಡು ಬಂದಿದೆ. ಈ ಸಂದರ್ಭದಲ್ಲಿ ಅವರು ವಿಚಿತ್ರ ಧ್ವನಿಗಳಲ್ಲಿ
ಮಾತನಾಡುವುದು ನಡುಗುವುದು ಮತ್ತು ತಕ್ಷಣಕ್ಕೆ ಒಂದು ರೀತಿಯ ಆವೇಶದ ಸ್ಥಿತಿಗೆ ಹೋಗುವುದು, ಈ ವರ್ತನೆಯ
ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಬಹಳಷ್ಟು ಕಾಣಿಸಿಕೊಳ್ಳುತ್ತಿವೆ.
ಒಬ್ಬ ಮನೋವೈದ್ಯನಾಗಿ ಇಂತಹ ವಿದ್ಯಮಾನಗಳನ್ನು ಸಾಂಸ್ಕೃತಿಕ ಸೂಕ್ಷ್ಮತೆ ಮತ್ತು ವೈಜ್ಞಾನಿಕ ಸ್ಪಷ್ಟತೆಯಿಂದ ಅರ್ಥ
ಮಾಡಿಕೊಳ್ಳುವುದು ಬಹಳ ಮುಖ್ಯ. ಈ ರೀತಿಯ ನಡವಳಿಕೆಗಳ ಹಿಂದಿರುವ ಮಾನಸಿಕ ಪ್ರಕ್ರಿಯೆಯನ್ನು ನಾವು
ಅರ್ಥಮಾಡಿಕೊಳ್ಳಬೇಕು.
ದೇವರು ಮೈಮೇಲೆ ಬರುವುದು ಅನ್ನುವುದರ ಬಗ್ಗೆ ಭಾರತ ದೇಶದಲ್ಲಿ ಅನೇಕ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ
ಕರ್ನಾಟಕ, ಕೇರಳ, ತಮಿಳುನಾಡು ಭಾಗಗಳಲ್ಲಿ ದೇವರು ಮೈಮೇಲೆ ಬರುವುದು ಎಂಬ ಒಂದು ಅನುಭವವನ್ನು ಕಾಯಿಲೆ ಎಂದು
ಪರಿಗಣಿಸಲು ಆಗುವುದಿಲ್ಲ. ದೇವ ಅಥವಾ ದೈವ ತಾತ್ಕಾಲಿಕವಾಗಿ ಆಯ್ದ ಮನುಷ್ಯನೊಬ್ಬನ ದೇಹದಲ್ಲಿ ಆವಾಹನೆ ಆಗಿ ದೈವಿಕ
ವಾಗ್ದಾನಗಳನ್ನು ನೀಡುತ್ತದೆ. ಕೆಲವೊಮ್ಮೆ ಸಮುದಾಯಕ್ಕೆ ಮಾರ್ಗದರ್ಶನ, ನ್ಯಾಯ ಒದಗಿಸುತ್ತದೆ ಎಂಬ ಒಂದು ನಂಬಿಕೆ ಇದೆ.
ಹಲವಾರು ದೇವಸ್ಥಾನಗಳಲ್ಲಿ, ದೈವಸ್ಥಾನಗಳಲ್ಲಿ ದರ್ಶನ ಬರುವ ಈ ಪ್ರಕ್ರಿಯೆಯನ್ನು ಜನ ನಂಬುತ್ತಾರೆ. ಆದ್ದರಿಂದ ಇದನ್ನು
ಯಾವುದೇ ಕಾರಣಕ್ಕೂ ಸಹ ಮನೋವೈದ್ಯರು ಒಂದು ಕಾಯಿಲೆ ಎಂದುಕೊಂಡು ವಿಶ್ಲೇಷಿಸುವುದಿಲ್ಲ. ಇದು ಪುರಾತನ ಕಾಲದಲ್ಲಿ
ಮನೋವೈದ್ಯಕೀಯ ಸೇವೆಗಳು ಲಭ್ಯವಿಲ್ಲದಾಗ ಒಂದು ರೀತಿಯ ಭಾವನಾತ್ಮಕ ಸಮತೋಲನವನ್ನು ಒದಗಿಸುತ್ತ ಇತ್ತು
ಅನ್ನುವುದನ್ನು ಕೂಡ ಅಲ್ಲಗಳೆಯವಂತಿಲ್ಲ. ಈ ಬಗ್ಗೆ ಈ ಹಿಂದೆ ಇದೇ ಲೇಖನ ಸರಣಿಯಲ್ಲಿ ಹಾಗೂ ಹಲವಾರು ಸಮುದಾಯದ
ಕಾರ್ಯಕ್ರಮಗಳಲ್ಲಿ ತಿಳಿಯಪಡಿಸಿದ್ದೇನೆ.
ಕಾಂತಾರದಂತಹ ಚಲನಚಿತ್ರವು ಈ ಆಚರಣೆಗಳನ್ನು ದೃಶ್ಯ ವೈಭವ, ಲಯಬದ್ಧ ಮಂತ್ರಗಳು ಮತ್ತು ಭಾವನಾತ್ಮಕ ಕಥೆಯ
ಮೂಲಕ ಪ್ರಸ್ತುತಪಡಿಸಿದಾಗ, ಅದು ಮನರಂಜನೆಯನ್ನು ನೀಡುವುದಲ್ಲದೆ, ಸಾಮೂಹಿಕ ಸಾಂಸ್ಕೃತಿಕ ನೆನಪುಗಳನ್ನು
ಜಾಗೃತಗೊಳಿಸುತ್ತದೆ. ಒಂದು ರೀತಿಯ‌ ಸಮೂಹ ಸನ್ನಿಯನ್ನು (Mass Hesteria) ಸೃಷ್ಟಿಸುವ ಅಪಾಯವನ್ನೂ ಸಹ
ಅಲ್ಲಗಳೆಯುವಂತಿಲ್ಲ. ಅನೇಕರಿಗೆ, ಈ ಚಿತ್ರಣಗಳು ತಮ್ಮ ಪೂರ್ವಜರ ಗುರುತು ಮತ್ತು ಆಧ್ಯಾತ್ಮಿಕ ಸಂಬಂಧವನ್ನು ಮತ್ತಷ್ಟು
ದೃಢಪಡಿಸುತ್ತವೆ.
ಆದರೆ ಮೈಮೇಲೆ ದೇವರು ಅಥವಾ ದೈವ ಬರುವ ಪ್ರಕ್ರಿಯೆ ಸಿನಿಮಾ ಟಾಕೀಸ್ ನ ಒಳಗೆ ಅಥವಾ ಸಿನಿಮಾ ನೋಡಿ ಬಂದ
ಕೂಡಲೇ ಆಗುವಾಗ ಇಂತಹ ಅನುಭವಗಳನ್ನು ನಾವು ಮನೋವೈದ್ಯರು ವಿಘಟಿತ ಅಸ್ವಸ್ಥತೆಗಳು dissociative disorders
ಎಂದೇ ಗುರುತಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿಗೆ ಆ ಘಟನೆಯ ಜಾಗೃತಿ ಗುರುತು ಮತ್ತು ದೈಹಿಕ ನಿಯಂತ್ರಣದ
ನಡುವಿನ ತಾತ್ಕಾಲಿಕ ಸಂಪರ್ಕ ಕಡಿತಗೊಂಡಿರುತ್ತದೆ. ಹಾಗೂ ಇದು ಪ್ರಜ್ಞಾಪೂರ್ವಕವಾಗಿ ಬೇರ್ಪಡಿಸಲು ಸಾಧ್ಯವಾಗದಷ್ಟು
ತೀವ್ರವಾದ ಭಾವನೆಗಳು ಉಂಟಾದಾಗ ಈ ರೀತಿಯ ಘಟನೆ ಸಂಭವಿಸುತ್ತದೆ. ಭಾವನಾತ್ಮಕವಾಗಿ ಮನಸ್ಸಿಗೆ ನಾಟಿರುವ

ಹಾಗೆಯೇ ವೈಯಕ್ತಿಕ ಅಥವಾ ಸಾಂಸ್ಕೃತಿಕ ನಂಬಿಕೆಗಳಿಗೆ ನಿಕಟವಾಗಿ ಸಂಬಂಧಿಸಿದ ವಿಷಯಗಳನ್ನು ನೋಡಿದಾಗ ವ್ಯಕ್ತಿಗಳು ಈ
ರೀತಿ ಅನುಭವಕ್ಕೆ ಒಳಗಾಗಬಹುದು.
ಕೆಲವೊಮ್ಮೆ ದೃಶ್ಯದ ತೀವ್ರತೆಯು ಹೃದಯ ಬಡಿತ ಹೆಚ್ಚಿಸುವುದು ಉಸಿರಾಟದ ಬದಲಾವಣೆ ತರುವುದು ಮುಂತಾದ ದೈಹಿಕ
ಪ್ರಚೋದನೆಯನ್ನು ಉಂಟು ಮಾಡಿ ಭಾವನಾತ್ಮಕ ಒತ್ತಡ ಉಂಟು ಮಾಡುತ್ತದೆ. ಹಾಗೆಯೇ ಕೆಲವು ವ್ಯಕ್ತಿಗಳಲ್ಲಿ ದೈವದ ಪಾತ್ರದ
ಬಗ್ಗೆ ಆಳವಾಗಿ ಯೋಚಿಸತೊಡಗಿ ಅದರೊಂದಿಗೆ ಅವಿನಾಭಾವ ಗುರುತಿಸಿಕೊಳ್ಳುವಿಕೆ ಉಂಟಾಗಿ ಇದರಿಂದಾಗಿ ಆವೇಶ ಬಂದ
ಹಾಗೆ ಆಗಬಹುದು. ಇದನ್ನು ನಾವು” ಟ್ರಾನ್ಸ್ “ಸ್ಟೇಟ್ ಎಂದು ಕರೆಯುತ್ತೇವೆ. ಕೆಲವೊಮ್ಮೆ ಆಂತರಿಕ ಸಂಘರ್ಷ, ಭಯ ಅಥವಾ
ಮನಸ್ಸಿನಲ್ಲಿ ಉಳಿದುಕೊಂಡಿದ್ದ ಹೇಳಿಕೊಳ್ಳಲಾಗದ ನೋವುಗಳನ್ನು ಹೊರ ಹಾಕುವುದಕ್ಕೆ ಉಂಟಾಗುವ ಒಂದು ಅರೆ ಪ್ರಜ್ಞೆಯ
ಪರಿಸ್ಥಿತಿ. ಈ ಪ್ರಕ್ರಿಯೆಗಳು ಸಂಪೂರ್ಣವಾಗಿ ಮಾನಸಿಕ ವಿದ್ಯಮಾನಗಳಾಗಿರುತ್ತವೆ. ಇಲ್ಲಿ ಯಾವುದೇ ರೀತಿಯ ಅಲೌಕಿಕ ಆವೇಶ
ಇರುವುದಿಲ್ಲ.
ಇಂತಹ ಪರಿಸ್ಥಿತಿಗಳು ಈ ಹಿಂದೆ ಸಿನಿಮಾಹಾಲ್ ಅಲ್ಲದೆ ಹಬ್ಬದ ಜನಸಂದಣಿಯಲ್ಲಿ, ಶಾಲೆಯ ಎಸ್ಸೆಂಬ್ಲಿಯಲ್ಲಿ ಉಂಟಾಗಿ ಈ
ಭಾವನಾತ್ಮಕ ಪ್ರಚೋದನೆಯು ಒಬ್ಬರಿಂದ ಮತ್ತೊಬ್ಬರಿಗೆ ವೇಗವಾಗಿ ಹರಡುವುದು ಹಾಗೂ ಒಬ್ಬ ವ್ಯಕ್ತಿ ಆವೇಶಕ್ಕೆ ಒಳಗಾದಾಗ
ಇತರರು ಅದನ್ನು ಅರಿವಿಲ್ಲದೆ ಅನುಕರಿಸುವುದು ಹೀಗೆಲ್ಲಾ ಆಗುವುದನ್ನು ಇದನ್ನು ನಾವು “ಸಮೂಹ ಸನ್ನಿ" (ಮಾಸ್ ಹಿಸ್ಟೀರಿಯಾ)
ಎಂದು ಕರೆಯುತ್ತೇವೆ. ಸಾಮೂಹಿಕ ಭಾವನೆಗಳಿಂದ ಸುಲಭವಾಗಿ ಪ್ರಭಾವಿತರಾಗುವ ಜನರು, ತೀವ್ರವಾದ ಆಧ್ಯಾತ್ಮಿಕತೆ ಮತ್ತು
ಕಲ್ಪನಾ ಶಕ್ತಿ ಇದ್ದುಕೊಂಡು ಆಳವಾದ ಅಂತಃ ಪ್ರಜ್ಞೆಯುಳ್ಳ ಅಥವಾ ಹೆಚ್ಚು ಕಲ್ಪನಾಶೀಲ ಜನರು ಈ ಪರಿಸ್ಥಿತಿಗೆ ಹೋಗುತ್ತಾರೆ
ಎಂದು ನಂಬಲಾಗಿದೆ. ಹಾಗೆಯೇ ಮನಸ್ಸಿನಲ್ಲಿ ಬಗೆಹರಿಸಲಾಗದ ಭಾವನಾತ್ಮಕ ನೋವು ಅಥವಾ ಸಂಘರ್ಷಗಳು ಇಂತಹ
ಸಂದರ್ಭದಲ್ಲಿ ಆವೇಶದಂತಹ ನಡವಳಿಕೆಯ ಮೂಲಕ ಸಾಂಕೇತಿಕವಾಗಿ ಹೊರಹೊಮ್ಮುವುದು ಎಂಬುದು ಕೂಡ ಒಂದು
ಮನೋವೈದ್ಯಕೀಯ ವಿಶ್ಲೇಷಣೆ. ಆತಂಕಕ್ಕೆ ಒಳಗಾಗುವ ವ್ಯಕ್ತಿಗಳು ಅಥವಾ ಅವಲಂಬಿತ ವ್ಯಕ್ತಿತ್ವವನ್ನು ಹೊಂದಿರುವವರು
ಇಂತಹ ನಡವಳಿಕೆಗಳನ್ನು ಪ್ರದರ್ಶಿಸಬಹುದು. ಹಾಗೆಯೆ ಕೆಲವೊಮ್ಮೆ ಆಯಾಸ ಅಥವಾ ನಿದ್ರೆ ಕೊರತೆ ಕೂಡ ಮಾನಸಿಕ
ಸ್ಥಿರತೆಯನ್ನು ಕಡಿಮೆ ಮಾಡಿ ಇಂತಹ ನಡವಳಿಕೆಗಳಿಗೆ ಕಾರಣವಾಗಬಹುದು.
ಈ ಲೇಖನದ ಮುಖ್ಯ ಉದ್ದೇಶ ಇಷ್ಟೇ. ಜನಸಾಮಾನ್ಯರು ಇಂತಹ ನಡವಳಿಕೆಗಳನ್ನು ಗಮನಿಸಿ ಅದರ ವೈಜ್ಞಾನಿಕ ಅರ್ಥವನ್ನು
ತಿಳಿದುಕೊಂಡು ಇಂತಹ ವ್ಯಕ್ತಿಗಳ ಬಗ್ಗೆ ಸಹಾನುಭೂತಿಯಿಂದ ಸ್ಪಂದಿಸಲು ಸಾಧ್ಯವಾಗುತ್ತದೆ ಎಂಬುದು ಲೇಖಕರ ಅನಿಸಿಕೆ.
ಒಂದು ವಿಡಿಯೋದಲ್ಲಿ ಈ ಥರದ ಒಂದು ಸನ್ನಿವೇಶದ ಬಗ್ಗೆ ವೈದ್ಯರೇ ಒಬ್ಬರು ಇಂತಹ ವ್ಯಕ್ತಿಯನ್ನು ಶಿಕ್ಷಿಸಬೇಕು ಎಂದು
ಜೋರಾಗಿ ಹೇಳುತ್ತಿರುವುದು ಕಂಡಾಗ ನನಗೆ ಈ ಬಗ್ಗೆ ಬರೆಯಬೇಕು ಎನಿಸಿತು. ಇನ್ನೊಂದು ವಿಡಿಯೋದಲ್ಲಿ ಇವರನ್ನು ಚಿಕಿತ್ಸೆಗೆ
ಒಳಪಡಿಸಿ ಎಂದು ಹೇಳಿದರು ಅಲ್ಲಿ ವ್ಯಂಗ್ಯ ಎದ್ದು ಕಾಣುತ್ತಿತ್ತು. ಇಂತಹ ಘಟನೆ ಒಂದು ಬಾರಿ ನಡೆದಿದ್ದರೆ ಅದನ್ನು
ನಿರ್ಲಕ್ಷಿಸಬಹುದು. ಆದರೆ ಕೆಲವೊಮ್ಮೆ ವೃತ್ತಿಪರ ಚಿಕಿತ್ಸಕರ ಸಹಾಯವನ್ನು ಪಡೆಯಬೇಕಾಗುತ್ತದೆ. ಅದು ಯಾವಾಗ ಎಂದರೆ
ಆಚರಣೆಯ ಸಂದರ್ಭಗಳನ್ನು ಹೊರತುಪಡಿಸಿ ಪದೇ ಪದೇ ಆವೇಶದ ಸ್ಥಿತಿಗೆ ಜಾರಿದರೆ. ಭಯ, ನಿದ್ರಾಹೀನತೆ ಅಥವಾ ದೈವದ
ನಂಬಿಕೆಗಳಿಗೆ ಸಂಬಂಧಿಸಿದ ಖಿನ್ನತೆಯಿಂದ ನಿರಂತರವಾಗಿ ಬಳಲುತ್ತಿದ್ದರೆ. ವ್ಯಕ್ತಿತ್ವ ಅಥವಾ ದೈನಂದಿನ ಕಾರ್ಯನಿರ್ವಹಣೆಯಲ್ಲಿ
ತೀವ್ರ ಬದಲಾವಣೆಗಳನ್ನು ತೋರಿಸಿದರೆ. ಒಬ್ಬ ಮಾನಸಿಕ ಆರೋಗ್ಯ ವೃತ್ತಿಪರರು ಸೂಕ್ತವಾದ ಸಮಾಲೋಚನೆ ಮತ್ತು
ಚಿಕಿತ್ಸೆಯನ್ನು ನೀಡಬಹುದು.

ಒಬ್ಬ ಮನೋ ಚಿಕಿತ್ಸೆಕನಾಗಿ ನನ್ನ ಅನಿಸಿಕೆ ಏನೆಂದರೆ ಇದು ಕೇವಲ ಕಾಯಿಲೆಯಲ್ಲ. ಮಾನಸಿಕ ಆರೋಗ್ಯ ವೃತ್ತಿಪರರಾಗಿ,
ನಾವು ಸಾಂಸ್ಕೃತಿಕ ಗುರುತನ್ನು ಗೌರವಿಸುತ್ತಾ, ವೈಯಕ್ತಿಕ ಯೋಗಕ್ಷೇಮದ ಕಡೆಗೆ ಮಾರ್ಗದರ್ಶನ ನೀಡುವ ಮೂಲಕ ಇಂತಹ
ಅನುಭವಗಳನ್ನು ಸೂಕ್ಷ್ಮವಾಗಿ ಗಮನಿಸಿ ಪ್ರತಿಕ್ರಿಯಿಸುವುದು ನಮ್ಮ ಕರ್ತವ್ಯ. ಭಾರತೀಯ ಸಂಸ್ಕೃತಿಯ ಸನ್ನಿವೇಶದಲ್ಲಿ, ನಂಬಿಕೆ
ಮತ್ತು ವಿಜ್ಞಾನ ಎರಡರ ಮೂಲಕವೂ ಈ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳುವುದು, ಸಂಪ್ರದಾಯ ಮತ್ತು ಆಧುನಿಕ
ಮಾನಸಿಕ ಆರೋಗ್ಯ ಜ್ಞಾನದ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.