ಕರಾವಳಿಗೆ ಲಗ್ಗೆ ಹಾಕುತ್ತಿರುವ ಭಯಾನಕ ಮಾದಕ ದ್ರವ್ಯಗಳು
ಮಾದಕ ದ್ರವ್ಯಗಳು ಇಂದು ಸಾರ್ವಜನಿಕ ಆರೋಗ್ಯವನ್ನು ಹಾಳು ಮಾಡುತ್ತಿರುವ ಬಹಳ ದೊಡ್ಡ ಪದಾರ್ಥಗಳು. ಈ ಬಗ್ಗೆ
ಸಾರ್ವಜನಿಕವಾಗಿ ಯಾರು ಮಾತನಾಡುವುದಿಲ್ಲ. ಹೆಚ್ಚೆಂದರೆ ಧೂಮಪಾನ ಮದ್ಯಪಾನವನ್ನು ತ್ಯಜಿಸುವ ಬಗ್ಗೆ ಹಾಗೂ ಅದರ
ಹಾನಿಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ ಮನೋವೈದ್ಯನಾಗಿ ನಾನು ಗಮನಿಸುತ್ತಿರುವುದೇನೆಂದರೆ ಇವತ್ತಿನ
ಯುವಜನತೆ ಯಲ್ಲಿ ಆತಂಕಕಾರಿ ರೀತಿಯಲ್ಲಿ ಇತರ ಮಾದಕ ದ್ರವ್ಯ ಪದಾರ್ಥಗಳ ಬಳಕೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳ ತೀವ್ರ ನಿಘಾ
ಘಟಕಕ್ಕೆ ಅಥವಾ ತುರ್ತು ನಿಘಾ ಘಟಕಕ್ಕೆ ಹಲವು ಯುವ ಜನರು ಈ ಪದಾರ್ಥಗಳ ಸೇವನೆಯಿಂದ ಉಂಟಾಗುವ ಮಾನಸಿಕ
ಹಾಗೂ ದೈಹಿಕ ಸಮಸ್ಯೆಗಳಿಂದ ಬರುತ್ತಿದ್ದಾರೆ.
ಗಾಂಜಾ : ಈ ಬಗ್ಗೆ ಬಹಳ ವಿಸ್ತಾರವಾಗಿ ಈ ಹಿಂದೆ ಬರೆದಿದ್ದೇನೆ. ಹದಿಹರೆಯದವರು ಇದೊಂದು “ನಿರುಪದ್ರವಿ ದ್ರವ್ಯ ‘ಎಂದು
ತಿಳಿದುಕೊಂಡು ಇದನ್ನು ಬಳಸುತ್ತಿದ್ದಾರೆ. ಇತ್ತೀಚೆಗೆ ಮಾದಕ ದ್ರವ್ಯ ವ್ಯಸನ ಕೇಂದ್ರ ಒಂದರಲ್ಲಿ ನಾನು ಹೋಗಿ ರೋಗಿಗಳನ್ನು
ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ವಿಷಯದ ಬಗ್ಗೆ ಬಹಳಷ್ಟು ಪ್ರಶ್ನೆಗಳು ಇದ್ದವು. ನಿಜವಾಗಿ ಹೇಳಬೇಕೆಂದರೆ ಗಾಂಜಾದ
ದೀರ್ಘಕಾಲಿನ ಉಪಯೋಗದಿಂದಾಗಿ ಯುವಜನರ ಪಠ್ಯ ನಿರ್ವಹಣೆ ಬಹಳಷ್ಟು ಕಡಿಮೆಯಾಗುತ್ತದೆ. ಹಲವರಿಗೆ ನೆನಪಿನ ಶಕ್ತಿಯ
ಕೊರತೆ ಪ್ರಾರಂಭವಾಗುತ್ತದೆ ಬಹಳಷ್ಟು ಜನ ಚಿತ್ತ ವಿಕಲತೆಯಂತಹ ಮಾನಸಿಕ ರೋಗಕ್ಕೆ ತುತ್ತಾಗುತ್ತಾರೆ.
ವೈದ್ಯರು ಬರೆಯುವ ಪ್ರಿಸ್ಕ್ರಿಪ್ಷನ್ ಮಾತ್ರೆಗಳು:
ನೋವು ನಿವಾರಕ ಮಾತ್ರೆಗಳು ಅಂದರೆ ಟ್ರಮಾಡೋಲ್, ಕೋಡಿನ ಪದಾರ್ಥ ಇರುವ ಸಿರಪ್ ಗಳು ದುರ್ಬಳಕೆ ಆಗುತ್ತಿದೆ.
ಇದನ್ನು ತೆಗೆದುಕೊಂಡಾಗ ಒಂದು ರೀತಿಯ ಸುಖೋನ್ಮಾದ ಉಂಟಾಗುತ್ತದೆ ಎಂದು ಹಲವು ವಿದ್ಯಾರ್ಥಿಗಳು ಇದರ
ಉಪಯೋಗವನ್ನು ಹೆಚ್ಚು ಮಾಡುತ್ತಿದ್ದಾರೆ. ಹಾಗೆಯೇ ಮನೋವೈದ್ಯರು ಬರೆಯುವ ಆತಂಕ ನಿವಾರಕ, ಖಿನ್ನತೆ ನಿವಾರಕ
ಮಾತ್ರೆಗಳ ದುರುಪಯೋಗ ಕೂಡ ಆಗುತ್ತಿದೆ. ಆಲ್ಪ್ರೋಜೋಲ್ಮ್ , ಡಯಾಜಾಪಂ ಮಾತ್ರೆಗಳು ಇವುಗಳನ್ನು
ಮದ್ಯಪಾನದೊಂದಿಗೆ ಬೆರೆಸಿ ಉನ್ಮಾದ ಹೆಚ್ಚಿಸುವ ಪ್ರಯತ್ನಗಳನ್ನು ಮಾಡುತ್ತಾರೆ. ಇಲ್ಲವೇ ಮದ್ಯಪಾನ ಸಿಗದ ದಿನಗಳಲ್ಲಿ
ಅವುಗಳನ್ನು ಬಳಸುತ್ತಾರೆ. ಇದು ಯುವಕರ ಆರೋಗ್ಯದ ಮೇಲೆ ಮಾಡುತ್ತಿರುವ ಪರಿಣಾಮಗಳ ಬಗ್ಗೆ ಯೋಚಿಸಲೇಬೇಕಾದ
ವಿಷಯ.
ಸಿಂಥೆಟಿಕ್ ದ್ರವ್ಯಗಳು ಎಂ ಡಿ ಎಂ ಎ ,ಎಲ್ ಎಸ್ ಡಿ , ಮೆಥ್ ಅಂಫಿಟಮಿನ್ ಇವುಗಳನ್ನು ಮೊದಲು ರೇವ್ ಪಾರ್ಟಿಗಳಲ್ಲಿ
ಮಾತ್ರ ಬಳಸಲಾಗುತ್ತಿತ್ತು. ದುರದೃಷ್ಟವೆಂದರೆ ಈಗ ಪರೀಕ್ಷೆಯ ಸಮಯದಲ್ಲಿ, ವಿದ್ಯಾರ್ಥಿಗಳ ಹುಟ್ಟುಹಬ್ಬ ಆಚರಣೆಯಲ್ಲಿ ಇದರ
ಬಳಕೆ ಆಗುತ್ತಿದೆ. ಈ ಪದಾರ್ಥಗಳ ಬಳಕೆಯಿಂದ ಹಲವು ವಿದ್ಯಾರ್ಥಿಗಳಿಗೆ ತೀವ್ರ ಬಗ್ಗೆ ಆತಂಕ ಅಂದರೆ ಪಾನಿಕ್ ಅಟ್ಯಾಕ್ , ಚಿತ್ತ
ವಿಕಲತೆ ಮತ್ತು ಕೆಲವೊಮ್ಮೆ ತೀವ್ರ ಬಗ್ಗೆಯ ಮೆದುಳಿನ ಡ್ಯಾಮೇಜ್ ಉಂಟಾಗುತ್ತಿದೆ.
ಇನ್ಹೇಳೆಂಟ್ಸ್.. ಪೆಟ್ರೋಲ್ ಮೂಸುವುದು ಅದರಿಂದ ಮನಸ್ಸಿಗೆ ಖುಷಿ ಸಿಗುವುದು ನಾವೆಲ್ಲ ಬಾಲ್ಯದಿಂದ ನೋಡಿಕೊಂಡು ಬಂದ
ವಿಷಯ. ಪೆಟ್ರೋಲ್ ನ ಹಾಗೆ ವೈಟ್ನರ್, ಅಂಟಿಸಲು ಬಳಸುವ ಗ್ಲೂ, ಪೇಯಿಂಟ್ ತಿನ್ನರ್, ಇವುಗಳು ಕೂಡ ಇದೇ ರೀತಿಯ
ಉನ್ಮಾದವನ್ನು ಸೃಷ್ಟಿಸುತ್ತದೆ. ಈ ಪದಾರ್ಥಗಳಲ್ಲಿ ಇರವ” ಟೋಲಿನ್ “ಎಂಬ ಒಂದು ಪದಾರ್ಥವು ಹಸಿವೆಯನ್ನು ಕಡಿಮೆ
ಮಾಡುತ್ತದೆ ಹಾಗೂ ಉನ್ಮಾದವನ್ನು ಹೆಚ್ಚಿಸುತ್ತದೆ. ನಾನು ನೋಡುತ್ತಿರುವುದೆಂದರೆ ಪಟ್ಟಣಗಳಲ್ಲದೆ ಗ್ರಾಮೀಣ ಹಿನ್ನೆಲೆಯ
ಹಲವಾರು ಯುವಕರು ಇದು ಬಹಳ ಕಡಿಮೆ ಬೆಲೆಗೆ ಸುಲಭವಾಗಿ ಸಿಗುತ್ತದೆ ಎಂದು ಇದಕ್ಕೆ ಬಲಿಯಾಗುತ್ತಿದ್ದಾರೆ. ಮನೆಯವರಿಗೆ
ಈ ಬಗ್ಗೆ ಸ್ವಲ್ಪವೂ ಸಂಶಯ ಕೂಡ ಬರುವುದಿಲ್ಲ. ಆದರೆ ಈ ಪದಾರ್ಥಗಳು ಕಿಡ್ನಿ ಲಿವರ್ ಮತ್ತು ಮೆದುಳಿಗೆ ಹಾನಿ
ಉಂಟುಮಾಡುತ್ತದೆ.
ಕೊಕೇನ್ ಮತ್ತು ಹೆರೋಯಿನ್ ಈ ಪದಾರ್ಥಗಳು ಉತ್ತರ ಭಾರತದಲ್ಲಿ ಅದರಲ್ಲಿಯೂ ಪಂಜಾಬ್ ರಾಜಸ್ಥಾನ್ ಗುಜರಾತ್
ಮುಂತಾದವುಗಳಲ್ಲಿ ಯುವಜನತೆ ಹೆಚ್ಚು ಉಪಯೋಗ ಮಾಡುತ್ತಿದ್ದರೂ ಮೆಲ್ಲ ಮೆಲ್ಲನೆ ಕರಾವಳಿಯಲ್ಲಿ ಕೂಡ ಇದರ
ದುರುಪಯೋಗ ಜಾಸ್ತಿ ಆಗುತ್ತಿದೆ. ಈ ಪದಾರ್ಥಗಳು ದೈಹಿಕ ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು
ಉಂಟುಮಾಡುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಪಂಜಾಬ್ ನಂತಹ ರಾಜ್ಯಗಳು ಇದರಿಂದಾಗಿ ಸಾಕಷ್ಟು ಬೆಚ್ಚಿ ಬಿದ್ದಿವೆ. ಈ
ಬಗ್ಗೆ ನಾವೆಲ್ಲ ಯೋಚಿಸಿ ಪಾಠ ಕಲಿಯಬೇಕಾಗಿದೆ.
ಈ ಲೇಖನ ಬರೆಯಲು ಮುಖ್ಯ ಕಾರಣ ನನ್ನ ಪ್ರಾಕ್ಟೀಸ್ ನಲ್ಲಿ ನಾನು ನೋಡುತ್ತಿರುವ ಈ ಪದಾರ್ಥಗಳ ಉಪಯೋಗದ ಏರಿಕೆ.
ಈ ಪದಾರ್ಥಗಳು ಡಾರ್ಕ್ ನೆಟ್ ಮುಖಾಂತರ ಟೆಲಿಗ್ರಾಂ ಮುಖಾಂತರ ಬಹಳ ಸುಲಭವಾಗಿ ಸಿಗುತ್ತಿವೆ ಹಾಗೆಯೇ ಸಾಮಾಜಿಕ
ಜಾಲತಾಣಗಳಲ್ಲಿ ಇದರ ಮಾರಾಟ ಆಗುತ್ತಿದೆ. ಇದು ಹೀಗೆ ಮುಂದುವರೆದಲ್ಲಿ ಬಹಳಷ್ಟು ಯುವಕರು ಮಾನಸಿಕ ಸಮಸ್ಯೆಗಳಿಂದ
ಬಳಲುವುದರಲ್ಲಿ ಸಂಶಯವಿಲ್ಲ.
ನಾವೇನು ಮಾಡಬೇಕು?
ಶಾಲಾ ಕಾಲೇಜುಗಳು ಈ ಬಗ್ಗೆ ಎಚ್ಚೆತ್ತುಕೊಂಡು ಈ ಪದಾರ್ಥಗಳ ಬಗ್ಗೆ ಸತ್ಯ ಆಧಾರಿತ ಮತ್ತು ವೈಜ್ಞಾನಿಕ ಚರ್ಚೆಗಳನ್ನು
ಮಾಡಬೇಕು ವಿನಹ ವಿದ್ಯಾರ್ಥಿಗಳಿಗೆ ಹೆದರಿಸಿ ಪ್ರಯೋಜನವಿಲ್ಲ.
ವಿದ್ಯಾರ್ಥಿಗಳ ಮಾನಸಿಕ ಒತ್ತಡ ನಿವಾರಣೆಗೆ ಪ್ರೌಢಶಾಲೆಯಿಂದಲೇ ನಾವು ಎಚ್ಚರಗೊಳ್ಳಬೇಕು. ಉತ್ತಮ ಅಂಕ ತೆಗೆದು
ಪ್ರೊಫೆಷನಲ್ ಕೋರ್ಸ್ ಗಳಿಗೆ ಹೋಗಿ ಅಲ್ಲಿ ಮನಸ್ಸಿನ ಒತ್ತಡ ನಿವಾರಣೆಗೆ ಡ್ರಗ್ ತೆಗೆದುಕೊಳ್ಳುತ್ತಿರುವ ಹಲವು ಯುವಕರನ್ನು
ನೋಡಿದ್ದೇನೆ. ಯುವಕರಿಗೆ ಆಟ ಓಟ ನೈತಿಕ ಬುನಾದಿಯನ್ನು ಹೆಚ್ಚಿಸಿಕೊಳ್ಳುವ ಕಾರ್ಯಕ್ರಮಗಳು, ವ್ಯಕ್ತಿತ್ವ ಬೆಳವಣಿಗೆಯ
ಕಾರ್ಯಕ್ರಮಗಳು ಈಗ ಬಹಳ ಕಡಿಮೆಯಾಗಿದೆ. ಕಾಟಾಚಾರಕ್ಕಾಗಿ ಕೆಲವು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಇದು
ಯಾವುದೇ ಪ್ರಯೋಜನ ಕೊಡುವುದಿಲ್ಲ. ಮಕ್ಕಳನ್ನು ಅಂಕ ತೆಗೆಯುವ ರೇಸ್ ಕುದುರೆಗಳನ್ನಾಗಿ ಮಾಡಿ ಬಿಟ್ಟರೆ ಅವರು ರೇಸ್
ನಲ್ಲಿ ಮುಂದೆ ಇರಲು ಏನು ಮಾಡಬೇಕು ಅದನ್ನು ಮಾಡುತ್ತಿದ್ದಾರೆ.. ಒತ್ತಡ ಮರೆತು ರೇಸ್ ಓಡಲು ಸುಲಭ ಉಪಾಯಗಳನ್ನು
ಅವರು ಹುಡುಕುತ್ತಿದ್ದಾರೆ. ಹಲವೋಮ್ಮೆ ಈ ಮಕ್ಕಳಿಗೆ ಮಾನಸಿಕ ಸಮಸ್ಯೆಗಳು ಬಂದರೆ ಆ ಬಗ್ಗೆ ಮನೆಯವರ ಹತ್ತಿರ ಅಥವಾ
ಶಾಲೆಯಲ್ಲಿ ಯಾರನ್ನು ಹೇಳಲು ಆಗುವುದಿಲ್ಲ ,ಹೇಳಿದರೆ ಸ್ಪಂದನೆ ಕೂಡ ಸಿಗುವುದಿಲ್ಲ. ಮಕ್ಕಳು ಶಿಕ್ಷೆ ಮತ್ತು ಕಳಂಕ ಇದಕ್ಕೆ
ಹೆದರಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಿಲ್ಲ.
ಸಮುದಾಯ ಏನು ಮಾಡಬೇಕು?
ಜನಪ್ರತಿನಿಧಿಗಳು, ಶಿಕ್ಷಕರು, ಪೋಷಕರು ಮತ್ತು ವೈದ್ಯರು ಒಟ್ಟಾಗಿ ಕೆಲಸ ಮಾಡಿ ಸಮುದಾಯದಲ್ಲಿ ಅರಿವು ಕಾರ್ಯಕ್ರಮಗಳನ್ನು
ಮಾಡಬೇಕು ಹಾಗೂ ಇಂತಹ ಪದಾರ್ಥಗಳ ಸೇವನೆ ಇರುವವರಿಗೆ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಬೇಕು.
ಆರೋಗ್ಯ ಇಲಾಖೆ ಮತ್ತು ಕಾನೂನು ಇಲಾಖೆ ಈ ಕೂಡಲೇ ಯೋಚಿಸಿ ವೈದ್ಯರುಗಳಿಗೆ ತರಬೇತಿ ನಡೆಸುವುದು ಹಾಗೆ
ಪುನರ್ವಸತಿ ಕೇಂದ್ರಗಳ ಸ್ಥಾಪಿಸುವುದು ಬಹಳ ಅಗತ್ಯ.
ಮನೋವೈದ್ಯನಾಗಿ ನನ್ನ ಅನಿಸಿಕೆ ಎಂದರೆ ಮದ್ಯ ವ್ಯಸನ ಖಂಡಿತ ಒಂದು ಸಮಸ್ಯೆ ಆದರೆ ಇದು ಒಂದೇ ಸಮಸ್ಯೆಯಲ್ಲ ಈಗ
ವೇಗವಾಗಿ ಬೆಳೆಯುತ್ತಿರುವ ಸಮಸ್ಯೆ ಮಾದಕ ದ್ರವ್ಯ ದುರುಪಯೋಗ ಇದರ ಬಗ್ಗೆ ನಾವು ಎಚ್ಚೆತ್ತುಕೊಳ್ಳದಿದ್ದರೆ ಇದು ಮೆಲ್ಲನೆ
ತೆವಳುತ್ತಾ ನಮ್ಮ ಇಡೀ ಪೀಳಿಗೆಯನ್ನು ಹಾಳು ಮಾಡುವ ಸಂಭವವಿದೆ.








