Select Page

ಖಿನ್ನತೆ :ರೋಗ ನಿರ್ಣಯ ಹಾಗೂ ಅದರ ಮೌಲ್ಯಮಾಪನ ಹೇಗೆ?
ನೀವು ಮನೋವೈದ್ಯರ ಬಳಿ ಹೋದಾಗ ಖಿನ್ನತೆ ಬಗ್ಗೆ ವೈದ್ಯರು ಹೇಗೆ ನಿರ್ಧರಿಸುತ್ತಾರೆ ಎಂದು ಯೋಚಿಸುತ್ತಿರಬಹುದು. ವೈದ್ಯರ
ಕ್ಲಿನಿಕ್ ಗೆ ಹೋದಾಗ ವೈದ್ಯರು ನಿಮ್ಮೊಂದಿಗೆ ನಿಮ್ಮ ರೋಗದ ಲಕ್ಷಣಗಳು ಹಾಗೆ ನಿಮ್ಮ ಜೀವನದ ಮೇಲೆ ಅದರ ಪ್ರಭಾವಗಳು
ಇವುಗಳನ್ನು ಕೇಳುತ್ತಾರೆ. ಈ ರೋಗಲಕ್ಷಣಗಳು ಯಾವಾಗಿನಿಂದ ಇವೆ ?ಹಾಗೆ ನಿದ್ರೆ, ಹಸಿವೆ, ಕೆಲಸದಲ್ಲಿ ಏಕಾಗ್ರತೆ,
ಮನೋಸ್ಥೈರ್ಯ, ಕೆಲಸದಲ್ಲಿ ಆಸಕ್ತಿ ಮುಂತಾದ ವಿಷಯಗಳ ಬಗ್ಗೆ ಪ್ರಶ್ನಿಸುತ್ತಾರೆ. ಹಾಗೆಯೇ ಖಿನ್ನತೆಗೆ ಕಾರಣವಾಗುವಂತಹ
ಕೆಲವು ದೈಹಿಕ ಕಾಯಿಲೆಗಳ ಬಗ್ಗೆ ಗಮನದಲ್ಲಿ ಇಟ್ಟುಕೊಂಡು ಕೆಲವು ದೈಹಿಕ ಪರೀಕ್ಷೆಗಳನ್ನು ಹಾಗೆಯೇ ರಕ್ತ ಪರೀಕ್ಷೆಗಳನ್ನು
ಮಾಡಬಹುದು. ಥೈರಾಯಿಡ್ ನ ಸಮಸ್ಯೆ, ಸಕ್ಕರೆ ಕಾಯಿಲೆ,ವಿಟಮಿನ್ ಬಿ12 ಕೊರತೆ, ಫೋಲಿಕ್ ಆಸಿಡ್ ಕೊರತೆ , ಮದ್ಯ
ಮಾದಕ ದ್ರವ್ಯಗಳ ಉಪಯೋಗ, ದೇಹದಲ್ಲಿ ಸೋಡಿಯಂ ಪೊಟ್ಯಾಶಿಯಂ ಕ್ಲೋರೈಡ್ ಮುಂತಾದ ಲವಣಾಂಶಗಳ
ಅಸಮತೋಲನ, ಯಕೃತ್ ಗ್ರಂಥಿ ಅಥವಾ ಕಿಡ್ನಿಯ ಸಮಸ್ಯೆಗಳು ಮುಂತಾದವುಗಳು ಖಿನ್ನತೆಗೆ ಕಾರಣವಾಗಬಹುದು. ಈ ಬಗ್ಗೆ
ರಕ್ತ ತಪಾಸಣಾ ಪರೀಕ್ಷೆಗಳನ್ನು ಮಾಡುತ್ತಾರೆ. ಹಾಗೆಯೇ ಕೆಲವೊಮ್ಮೆ ಮೆದುಳಿನ ಸಿಟಿ ಸ್ಕ್ಯಾನ್ ಅಥವಾ ಎಂ ಆರ್ ಐ ಸ್ಕ್ಯಾನ್
ಕೂಡ ಮಾಡಲು ವೈದ್ಯರು ತಿಳಿಸಬಹುದು. ಇನ್ನು ಕೆಲವೊಮ್ಮೆ ತಲೆಯ ಈ ಈ ಜಿ, ಹೃದಯದ ecg ಪರೀಕ್ಷೆಗಳನ್ನು ಕೂಡ
ವೈದ್ಯರು ಮಾಡಬಹುದು. ಖಿನ್ನತೆಗೆ ಯಾವುದಾದರೂ ದೈಹಿಕ ಕಾಯಿಲೆಗಳು ಕಾರಣವೇ ಎಂಬುದನ್ನು ಪತ್ತೆಹಚ್ಚಲು ಈ ಮೇಲಿನ
ಪರೀಕ್ಷೆಗಳು ಸಹಾಯಕವಾಗುತ್ತವೆ. ಹಾಗೆಯೇ ಖಿನ್ನತೆಯ ಚಿಕಿತ್ಸೆ ಮಾಡುವಾಗ ಕಿಡ್ನಿ ಮತ್ತು ಯಕೃತ್ ನ ಪರಿಸ್ಥಿತಿ ಹೇಗೆ ಇದೆ
ಎಂಬುದನ್ನು ಗಮನಿಸಿ ವೈದ್ಯರು ಮುಂದೆ ನಿಮಗೇನಾದರೂ ಮಾತ್ರೆ ಚಿಕಿತ್ಸೆ ಅಗತ್ಯವಿದ್ದರೆ ಮಾತ್ರೆ ನೀಡಬೇಕಾಗುತ್ತದೆ. ಈ
ದೈಹಿಕ ತಪಾಸಣಾ ಪರೀಕ್ಷೆಗಳ ನಂತರ ವೈದ್ಯರು
ಸಂದರ್ಶನವನ್ನು ಮುಂದುವರಿಸುತ್ತಾ ನಿಮ್ಮ ಆಲೋಚನೆಗಳು ಭಾವನೆಗಳು ಮತ್ತು ನಡವಳಿಕೆಗಳನ್ನು ಚರ್ಚಿಸುವುದು ಹಾಗೂ
ನಿಮ್ಮಲ್ಲಿ ಉಂಟಾಗುತ್ತಿರುವ ಯೋಚನೆಗಳ ಬಗ್ಗೆ ಪ್ರಶ್ನಿಸುತ್ತಾರೆ. ಖಿನ್ನತೆಯಲ್ಲಿ ಹೆಚ್ಚಾಗಿ ವ್ಯಕ್ತಿಗೆ ತನ್ನ ಬಗ್ಗೆ ನಕಾರಾತ್ಮಕ
ಯೋಚನೆಗಳು, ತನ್ನ ಭೂತಕಾಲದ ಜೀವನದ ಬಗ್ಗೆ ನಕಾರಾತ್ಮಕ ಯೋಚನೆಗಳು ಹಾಗೆಯೇ ಭವಿಷ್ಯದ ಬಗ್ಗೆ ನಕಾರಾತ್ಮಕ
ಯೋಚನೆಗಳು ಹೆಚ್ಚಾಗಿರುತ್ತವೆ. ಈ ಕಾರಣದಿಂದ ಮನಸ್ಸಿನಲ್ಲಿ ದುಗುಡ , ಚಡಪಡಿಕೆ, ಆತಂಕ, ಹೆದರಿಕೆ ಉಂಟಾಗುತ್ತದೆ. ನಿದ್ರಾ
ಹೀನತೆ, ಏನು ತಪ್ಪು ಮಾಡದೆ ತಪ್ಪಿತಸ್ಥ ಮನೋಭಾವ, ಕೀಳರಿಮೆ ಹೆಚ್ಚಾಗಿರುತ್ತದೆ. ನಿಮ್ಮೊಂದಿಗೆ ಮಾತನಾಡಿದಾಗ ವೈದ್ಯರು
ಈ ವಿಷಯಗಳನ್ನು ಗಮನಿಸಿ ಖಿನ್ನತೆಯ ರೋಗ ನಿರ್ಣಯವನ್ನು ಮಾಡುತ್ತಾರೆ. ಖಿನ್ನತೆಯ ರೋಗ ನಿರ್ಣಯ ಮಾಡಲು
ವೈದ್ಯರುಗಳು ಹೆಚ್ಚಾಗಿ ರೋಗಗಳ ಅಂತರಾಷ್ಟ್ರೀಯ ವರ್ಗೀಕರಣ (icd 10/11) ಅಥವಾ ಮಾನಸಿಕ ಅಸ್ವಸ್ಥತೆಗಳ ರೋಗ
ನಿರ್ಣಯ ಮತ್ತು ಅಂಕಿ ಅಂಶಗಳ ಕೈಪಿಡಿ( dsm 5 )ಇದನ್ನು ಬಳಸಿ ಕನಿಷ್ಠ ಎರಡು ವಾರಗಳ ಕಾಲಾವಧಿಯಲ್ಲಿ ವ್ಯಕ್ತಿಯಲ್ಲಿ
ನಿರಂತರ ದುಃಖ, ನಿದ್ರೆ ,ಹಸಿವೆ ಬದಲಾವಣೆಗಳು, ಹತಾಶತೆಯ ಭಾವನೆಗಳು ಮುಂತಾದ ರೋಗ ಲಕ್ಷಣಗಳು ಇದ್ದಲ್ಲಿ ಹಾಗೂ
ಈ ರೋಗ ಲಕ್ಷಣಗಳು ಕೆಲಸ ,ಶಾಲೆ ಅಥವಾ ಸಂಬಂಧಗಳ ಮೇಲೆ ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಗಮನಾರ್ಹ
ಪರಿಣಾಮ ಬೀರುತ್ತವೆ ಎಂಬುದನ್ನು ವೈದ್ಯರು ಮನಗಂಡರೆ ವ್ಯಕ್ತಿಗೆ ಖಿನ್ನತೆ ಇದೆ ಎಂಬ ರೋಗ ನಿರ್ಣಯವನ್ನು ಮಾಡುತ್ತಾರೆ.
ಇದನ್ನು ಬರೆಯಲು ಮುಖ್ಯ ಕಾರಣ ಜನಸಾಮಾನ್ಯರು ಏನು ತಿಳಿಯಬೇಕೆಂದರೆ ಖಿನ್ನತೆಯನ್ನು ನಿಖರವಾಗಿ ಪತ್ತೆಹಚ್ಚಲು
ವೈದ್ಯರು ತಮ್ಮದೇ ಆದ ಕೆಲವು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಾರೆ.

ಇದಾದ ನಂತರ ಖಿನ್ನತೆಯ ತೀವ್ರತೆ ಎಷ್ಟರ ಮಟ್ಟಿಗೆ ಇದೆ ಎಂದು ತಿಳಿಯಲು ವೈದ್ಯರು ಕೆಲವು ಸಾಮಾನ್ಯ ಸ್ಕ್ರೀನಿಂಗ್
ಪರಿಕರಗಳು.. ಅಂದರೆ ರೋಗಿಗಳು ಕುಳಿತು ಉತ್ತರಿಸುವ ಪ್ರಶ್ನಾವಳಿಗಳು ಅಥವಾ ವೈದ್ಯರೇ ರೋಗಿಯೊಂದಿಗೆ ಮಾತನಾಡುತ್ತಾ
ಬೇರೆ ಬೇರೆ ಗುಣಲಕ್ಷಣಗಳ ತೀವ್ರತೆ ಎಷ್ಟು ಇದೆ ಎಂಬುದನ್ನು ನಿರ್ಧರಿಸುವ ಪರಿಕರಗಳನ್ನು ಬಳಸಿ ಖಿನ್ನತೆಯ ತೀವ್ರತೆಯನ್ನು
ಅಳೆಯುತ್ತಾರೆ. ರೋಗಿಯ ಆರೋಗ್ಯ ಪ್ರಶ್ನಾವಳಿ (phq9), ಬೆಕ್ಸ್ ಡಿಪ್ರೆಶನ್ ಇನ್ವೆಂಟ್ರಿ, ಹೇಮಿಲ್ಟನ್ ಡಿಪ್ರೆಶನ್ ರೇಟಿಂಗ್ ಸ್ಕೇಲ್,
ಜಿರಿಯಟ್ರಿಕ್ ಡಿಪ್ರೆಶನ್ ಸ್ಕೇಲ್ ಮುಂತಾದ ಪ್ರಶ್ನಾವಳಿಗಳನ್ನು ವೈದ್ಯರು ಬಳಸಿ ಮಾಹಿತಿ ಸಂಗ್ರಹ ಮಾಡಬಹುದು. ಪ್ರತಿ
ಬಾರಿಯೂ ನೀವು ವೈದ್ಯರಲ್ಲಿ ಹೋದಾಗ ಈ ಪ್ರಶ್ನಾವಳಿಗಳನ್ನು ಉತ್ತರಿಸಿ ನಿಮ್ಮ ಮನಸ್ಥಿತಿಯಲ್ಲಿ ಬದಲಾವಣೆಗಳು
ಉಂಟಾಗುತ್ತಿದೆಯೇ ಎಂಬುದನ್ನು ನೀವೇ ಗಮನಿಸಿಕೊಳ್ಳಲು ಹಾಗೆಯೇ ವೈದ್ಯರು ಕೂಡ ತಿಳಿದುಕೊಳ್ಳಲು ಇದು ಸಹಕಾರಿ.
ಈ ಮೇಲಿನಂತೆ ವೈದ್ಯರು ಬೇರೆ ಬೇರೆ ವಿಧಾನಗಳಿಂದ ನಿಮ್ಮ ಖಿನ್ನತೆಯ ತೀವ್ರತೆ ಹಾಗೆ ಅಗತ್ಯ ಚಿಕಿತ್ಸೆ ಬಗ್ಗೆ ಒಂದು
ನಿರ್ಣಯಕ್ಕೆ ಬರುತ್ತಾರೆ. ಅಲ್ಪ ಮಟ್ಟದ ಖಿನ್ನತೆಯಾಗಿದ್ದರೆ ಕೇವಲ ಆಪ್ತ ಸಮಾಲೋಚನೆ ಅಥವಾ ಸೈಕೋಥೆರಪಿ ಪಡೆದುಕೊಳ್ಳಲು
ವೈದ್ಯರು ಸೂಚಿಸಬಹುದು. ಮಧ್ಯಮ ಮಟ್ಟದ ಖಿನ್ನತೆ ಅಥವಾ ನಿಮಗೆ ನೀವೇ ಹಾನಿ ಮಾಡಿಕೊಳ್ಳುವ ಅಥವಾ ಜೀವನವನ್ನು
ಕೊನೆಗೊಳಿಸುವ ಆಲೋಚನೆಗಳು ಬರುತ್ತಿದ್ದರೆ ವಿದ್ಯುತ್ ಕಂಪನ ಚಿಕಿತ್ಸೆಯಂತಹ ಕೆಲವು ಬಗೆ ತುರ್ತು ಚಿಕಿತ್ಸೆ ಗಳ ಬಗ್ಗೆ
ವೈದ್ಯರು ಮಾಹಿತಿ ನೀಡಬಹುದು. ಹೆಚ್ಚಿನ ಪ್ರಕರಣಗಳಲ್ಲಿ ಖಿನ್ನತೆ ನಿವಾರಕ ಮಾತ್ರೆಗಳು, ಪ್ರತಿದಿನ ವ್ಯಾಯಾಮ, ಆಪ್ತ
ಸಮಾಲೋಚನೆ ಚಿಕಿತ್ಸೆಗಳನ್ನು ವೈದ್ಯರು ಸೂಚಿಸಬಹುದು.
ಜನಸಾಮಾನ್ಯರು ಗಮನಿಸಬೇಕಾದ ಒಂದು ವಿಷಯವೆಂದರೆ ವೈದ್ಯರ ಬಳಿ ಹೋದಾಗ ನಿಮ್ಮ ಖಿನ್ನತೆಯ ಲಕ್ಷಣಗಳ ಬಗ್ಗೆ
ಮಾತನಾಡುವಾಗ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಯನ್ನು ನೀವು ವೈದ್ಯರೊಂದಿಗೆ ಮಾಡುವುದು ಅತಿ ಅಗತ್ಯ. ಸರಿಯಾದ
ಮಾಹಿತಿಯನ್ನು ನೀಡಿದಲ್ಲಿ ವೈದ್ಯರು ರೋಗನಿರ್ಣಯ ಮತ್ತು ಪರಿಣಾಮಕಾರಿ ಚಿಕಿತ್ಸಾ ಯೋಜನೆಗಳನ್ನು ಮಾಡಲು
ಸಹಾಯವಾಗುತ್ತದೆ. ನೀವು ಚರ್ಚಿಸಬೇಕಾದ ವಿಷಯಗಳ ಬಗ್ಗೆ, ನಿರ್ದಿಷ್ಟ ಲಕ್ಷಣಗಳ ಬಗ್ಗೆ ಬರೆದುಕೊಂಡು ಹೋಗಿ ವೈದ್ಯರ
ಭೇಟಿಯಾಗುವುದು ಒಳ್ಳೆಯದು. ಆಗ ನೀವು ವೈದ್ಯರೊಂದಿಗೆ ಏನೇನು ಹೇಳಬೇಕು ಅನ್ನುವುದು ನೆನಪಿಟ್ಟುಕೊಳ್ಳುವ ಅಗತ್ಯ
ಇರುವುದಿಲ್ಲ. ವೈದ್ಯರ ಕ್ಲಿನಿಕ್ಕಿಗೆ ಹೋಗುವಾಗ ನಿಮ್ಮ ಮಾನಸಿಕ ಹಾಗು ದೈಹಿಕ ಪರಿಸ್ಥಿತಿಗಳು ಈ ಬಗ್ಗೆ ಪಟ್ಟಿ
ಮಾಡಿಕೊಳ್ಳುವುದು, ನೀವು ಗಮನಿಸಿರುವ ರೋಗಲಕ್ಷಣಗಳ ಬಗ್ಗೆ ಪಟ್ಟಿ ಮಾಡುವುದು, ನೀವು ಗಮನಿಸಿದಂತಹ ಕೆಲವು ಅಸಹಜ
ನಡವಳಿಕೆಗಳು, ನಿಮ್ಮ ಇತರ ವೈದ್ಯಕೀಯ ಕಾಯಿಲೆಗಳು ಹಾಗೂ ಅದಕ್ಕೆ ತೆಗೆದುಕೊಳ್ಳುತ್ತಿರುವ ಮಾತ್ರೆಗಳು ಹಾಗೆ ನಿಮ್ಮ
ಕುಟುಂಬದಲ್ಲಿ ಯಾರಿಗಾದರೂ ಮಾನಸಿಕ ಸಮಸ್ಯೆಗಳಿದ್ದರೆ ಆ ಬಗ್ಗೆ ನಿಮಗೆ ತಿಳಿದಿರುವ ವಿಷಯಗಳು, ನೀವು
ತೆಗೆದುಕೊಳ್ಳುತ್ತಿರುವ ಮಾತ್ರೆಗಳ ಪಟ್ಟಿ, ನಿಮ್ಮ ಜೀವನ ಶೈಲಿಯ ಕೆಲವು ಅಂಶಗಳು ಅಂದರೆ ತಂಬಾಕು ಸೇವನೆ, ಕುಡಿತ,
ಮಾದಕ ದ್ರವ್ಯದ ಉಪಯೋಗ ಮುಂತಾದ ವಿಷಯಗಳನ್ನು ವೈದ್ಯರೊಂದಿಗೆ ನೇರವಾಗಿ ಚರ್ಚಿಸಿ. ನಿಮ್ಮ ಜೀವನದಲ್ಲಿ ಇತ್ತೀಚೆಗೆ
ನಡೆಯುತ್ತಿರುವ ಘಟನೆಗಳು ಹಾಗೂ ನಿಮಗೆ ಒತ್ತಡ ಉಂಟು ಮಾಡುತ್ತಿರುವ ಸನ್ನಿವೇಶಗಳು ಈ ಬಗ್ಗೆ ಕೂಡ ವೈದ್ಯರಿಗೆ ತಿಳಿಸಿ.
ಒಟ್ಟಿನಲ್ಲಿ ಖಿನ್ನತೆಯ ಚಿಕಿತ್ಸೆಗೆ ವೈದ್ಯರೊಂದಿಗೆ ಮುಕ್ತ ಸಮಾಲೋಚನೆ ಬಹಳ ಅಗತ್ಯವಿರುತ್ತದೆ ಎಂಬುದು ಗಮನಿಸಿ.