Select Page

ನಿದ್ರಾ ಹೀನತೆ ನೀವೇನು ಮಾಡಬೇಕು? ಮನುಷ್ಯನಿಗೆ ತನ್ನ ದೈನಂದಿನ ಕೆಲಸಗಳ ಅತ್ಯುತ್ತಮ ಕಾರ್ಯನಿರ್ವಹಣೆ ಮತ್ತು ಆತನ
ಯೋಗಕ್ಷೇಮಕ್ಕೆ ಅಗತ್ಯವಾದ ನಿದ್ರೆಯ ಪ್ರಮಾಣವನ್ನು ಪಡೆಯಲು ಬಹಳಷ್ಟು ಸಮಯದಿಂದ ಅಸಮರ್ಥತೆ ಉಂಟಾಗಿದ್ದರೆ
ಅದನ್ನು ಇನ್ಸೋಮ್ನಿಯಾ ಎಂದು ಕರೆಯುತ್ತೇವೆ. ಮನುಷ್ಯನಿಗೆ ಯಾವುದೇ ವಯಸ್ಸಿನಲ್ಲಿಯೂ ಕೂಡ ಕನಿಷ್ಠ ಆರರಿಂದ ಎಂಟು
ಗಂಟೆ ನಿದ್ರೆಯ ಅಗತ್ಯತೆ ಇದೆ. ಇದನ್ನು ಜನಸಾಮಾನ್ಯರು ತಿಳಿದುಕೊಳ್ಳಬೇಕು. ವಯಸ್ಸಾಗುತ್ತಿದ್ದಂತೆ ನಿದ್ರೆಯ ಸಮಯ ಸ್ವಲ್ಪ
ಕಡಿಮೆಯಾಗಬಹುದು. 60 ವರ್ಷ ಮೇಲ್ಪಟ್ಟವರಿಗೆ ಕನಿಷ್ಠ ಐದು ಗಂಟೆ ನಿದ್ರೆ ಯ ಅಗತ್ಯತೆ ಇದೆ.
ಇನ್ಸೋಮ್ನಿಯಾ ಅಥವಾ ನಿದ್ರಾಹೀನತೆ ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒತ್ತಡ, ಆತಂಕ ,ಖಿನ್ನತೆ, ನಿದ್ರಾ ಪದ್ಧತಿಗಳು ಸರಿಯಾಗಿ
ಇಲ್ಲದೇ ಇರುವುದು ,ವಿಪರೀತ ಕೆಫಿನ್ ಅಥವಾ ಮದ್ಯಪಾನ ಸೇವನೆ ,ನಿದ್ರಾ ಸಮಯ ಆಗಾಗ ಬದಲಾವಣೆಯಾಗುವ ಶಿಫ್ಟ್
ಕೆಲಸಗಳು , ಮಲಗುವ ಪರಿಸರದಲ್ಲಿ ಅಡಚಣೆಗಳು, ಕೆಲಸದಲ್ಲಿ ಒತ್ತಡಗಳು , ಪ್ರೀತಿ ಪಾತ್ರರೊಂದಿಗೆ ಸಂಬಂಧದಲ್ಲಿ
ಸಮಸ್ಯೆಗಳು, ಹಣಕಾಸಿನ ಚಿಂತೆಗಳು ಹೀಗೆ ಬೇರೆ ಬೇರೆ ಕಾರಣಗಳಿಂದ ನಿದ್ರಾಹೀನತೆ ಸಂಭವಿಸಬಹುದು. ಕೆಲವೊಮ್ಮೆ ಕೆಲವು
ವೈದ್ಯಕೀಯ ಪರಿಸ್ಥಿತಿಗಳು ಅಂದರೆ ಅನಿಯಂತ್ರಿತ ಸಕ್ಕರೆ ಕಾಯಿಲೆ, ಬೊಜ್ಜು, ಶ್ವಾಶಕೋಶದ ಸಮಸ್ಯೆಗಳು, ಥೈರಾಯಿಡ್ ನ
ಸಮಸ್ಯೆ ಹೀಗೆ ಬೇರೆ ಬೇರೆ ಕಾರಣಗಳಿಂದ ನಿದ್ರಾಹೀನತೆ ಉಂಟಾಗಬಹುದು. ದೀರ್ಘಕಾಲಿನ ನೋವುಗಳಿಂದ ಕೂಡ ನಿದ್ರೆಗೆ
ಅಡಚಣೆ ಉಂಟಾಗಬಹುದು.
ಹಾಗೆ ದೈಹಿಕ ಸಮಸ್ಯೆಗಳಿಗೆ ಸೇವಿಸುವ ಕೆಲವು ಮಾತ್ರೆಗಳು ಕೂಡ ನಿದ್ರಾಹೀನತೆಯನ್ನು ಉಂಟುಮಾಡಬಹುದು. ಉಬ್ಬಸದ
ಕಾಯಿಲೆಗೆ ತೆಗೆದುಕೊಳ್ಳುವ ಡೇರಿಫಿಲಿನ್, ಸಾಲ್ಬಟಮಾಲ್, ಖಿನ್ನತೆ ನಿವಾರಕ ಮಾತ್ರೆ ಬ್ಯೂಪ್ರೋಪಿಯನ್, ಮೂತ್ರ ವಿಸರ್ಜನೆ
ಜಾಸ್ತಿ ಮಾಡುವ ಡಯೂರೆಟಿಕ್ ಮಾತ್ರೆಗಳು, ನೆಗಡಿ ಕೆಮ್ಮಕ್ಕೆ ತೆಗೆದುಕೊಳ್ಳುವ ಸೂಡೋ ಎಫೆಡ್ರಿನ್ ಇರುವ ಮಾತ್ರೆಗಳು, ಬಿಪಿ
ಹೃದ್ರೋಗ ಮತ್ತು ಆತಂಕ ಇದಕ್ಕೆ ಬಳಸುವ ಪ್ರೋಪ್ರನಾಲ್ ಮಾತ್ರೆ, ಸ್ಟೆರಾಯ್ಡ್ ಮಾತ್ರೆಗಳು, ಅತಿ ಚಟುವಟಿಕೆಗೆ
ಉಪಯೋಗಿಸುವ ಸ್ಟೀಮ್ಯೂಲೆಂಟ್ ಮಾತ್ರೆಗಳು ನಿದ್ರಾಹೀನತೆಯನ್ನು ಉಂಟುಮಾಡಬಹುದು.
ವ್ಯಕ್ತಿಯ ಪರಿಸರ ಜೀವನ ಶೈಲಿ ಮತ್ತು ಮಾನಸಿಕ ಪರಿಸ್ಥಿತಿ ನಿದ್ರೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ.
ನಿದ್ರಾಹೀನತೆಯಿಂದ ಬಂದ ರೋಗಿಯ ವಿವರವಾದ ವೈದ್ಯಕೀಯ ಇತಿಹಾಸ, ದೈಹಿಕ ಪರೀಕ್ಷೆ, ರಕ್ತ ಪರೀಕ್ಷೆಗಳು,ನಿದ್ರೆ ಹೇಗೆ
ಬರುತ್ತಿದೆ ಎಂಬುದನ್ನು ಪರೀಕ್ಷಿಸಲು ಪಾಲಿಸೋಮ್ನಗ್ರಫಿ ಎಂಬ ವಿಶೇಷ ನಿದ್ರೆಯ ಅಧ್ಯಯನ ಮಾಡುವ ಒಂದು ವಿಶಿಷ್ಟ ಪರೀಕ್ಷೆ,
ಮುಂತಾದವುಗಳನ್ನು ವೈದ್ಯರು ಮಾಡಬೇಕಾಗಬಹುದು.
ಈ ಪರೀಕ್ಷೆಗಳ ಮೌಲ್ಯಮಾಪನ ಮಾಡಿ ನಿದ್ರಾಹೀನತೆಗೆ ವೈದ್ಯರು ಚಿಕಿತ್ಸೆಗಳನ್ನು ತಿಳಿಸಬಹುದು.
ನಿದ್ರಾ ನೈರ್ಮಲ್ಯದತ್ತ ಕೆಲವು ಸಲಹೆಗಳು .
ನಿದ್ರೆ ತೊಂದರೆಗಳಿಗೆ ಹಲವಾರು ನಕಾರಾತ್ಮಕ ಆಲೋಚನೆಗಳು ಮತ್ತು ನಡವಳಿಕೆಗಳು ಕಾರಣವಾಗಿರುತ್ತದೆ. ಇವುಗಳತ್ತ
ರೋಗಿಯು ಗಮನ ವಹಿಸಬೇಕು. ಪ್ರತಿದಿನ ಒಂದೇ ಸಮಯದಲ್ಲಿ ಮಲಗುವ ಅಭ್ಯಾಸವನ್ನು ಮಾಡಿಕೊಳ್ಳುವುದು ಉತ್ತಮ. ಹಾಗೆ
ಒಂದೇ ಸಮಯದಲ್ಲಿ ಏಳುವುದು ಕೂಡ. ಸಂಜೆ 6 ಗಂಟೆಯ ನಂತರ ಕೆಫಿನ್ ಸೇವನೆಯನ್ನು ನಿಲ್ಲಿಸುವುದು ಉತ್ತಮ. ಮಲಗುವ
ಕೋಣೆಯಲ್ಲಿ ಎಲೆಕ್ಟ್ರಾನಿಕ್ ಸಾಧನೆಗಳನ್ನು ಇಟ್ಟುಕೊಂಡು ನೋಡುತ್ತಾ ಮಲಗಿದ್ದಲ್ಲಿ ನಿದ್ರೆಯ ಸಮಸ್ಯೆಗಳಾಗಬಹುದು. ಈ
ಸಮಸ್ಯೆ ಇರುವವರು ಟಿವಿ, ಮೊಬೈಲ್ ಇಟ್ಟುಕೊಂಡು ಮಲಗುವುದು ಸಮಂಜಸವಲ್ಲ. ಮಲಗುವ ಕೋಣೆಯಲ್ಲಿ
ಪ್ರಕಾಶಮಾನವಾದ ದೀಪಗಳಿಗೆ ಹಾಗೆ ಈ ಹಿಂದೆ ಹೇಳಿದಂತೆ ಟಿವಿ ಮತ್ತು ಮೊಬೈಲ್ ಇವುಗಳಿಗೆ ಸ್ಥಾನವಿಲ್ಲ ಅವು

ಮೆಲ್ಲಟೋನಿನ್ ಉತ್ಪಾದನೆಗೆ ಅಡ್ಡಿ ಉಂಟು ಮಾಡಬಹುದು ಹಾಗೂ ಇದರಿಂದಾಗಿ ನಿದ್ರೆಗೆ ಸಮಸ್ಯೆ ಆಗಬಹುದು.ಮದ್ಯ
ನಿದ್ರಾಹೀನತೆಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ಮದ್ಯ ನಿದ್ರಾಹೀನತೆಗೆ ಮದ್ದು ಅಲ್ಲ.. ಮಲಗುವ ಕನಿಷ್ಠ ಎರಡು ಗಂಟೆ
ಮುಂಚೆ ಊಟ ಮಾಡಿದರೆ ಒಳ್ಳೆಯದು. ರಾತ್ರಿ ಹೊತ್ತು ಭಾರಿ ಊಟವನ್ನು ಮಾಡಿದರೆ ಅದು ನಿದ್ರೆಗೆ ಕಂಟಕವಾಗಬಹುದು.
ಹಾಗೆಯೇ ಮಲಗುವ ಸಮಯದ ಮೂರು ಗಂಟೆ ಮೊದಲು ದೈಹಿಕ ವ್ಯಾಯಾಮ ಮುಗಿಸಿರಬೇಕು. ದೇಹಕ್ಕೆ ಶ್ರಮ ನೀಡುವ
ದೈಹಿಕ ವ್ಯಾಯಾಮ ನಿದ್ರೆಗೆ ಪೂರಕವಾಗಿದೆ. ಅನುದಿನ ಒಂದು ಗಂಟೆ ನಡಿಗೆ ಅಥವಾ ಈಜುವುದು ಅಥವಾ ಸೈಕ್ಲಿಂಗ್
ಮುಂತಾದ ವ್ಯಾಯಾಮಗಳು ನಿದ್ರೆಗೆ ಪೂರಕವಾಗಿದೆ.
ನಿದ್ರಾ ಹೀನತೆ ಎಂಬುದು ದೀರ್ಘಕಾಲಿನ ಸಮಸ್ಯೆ. ಇದಕ್ಕೆ ಪರಿಹಾರೋಪಾಯಗಳನ್ನು ಹುಡುಕುವಾಗ ಮಾತ್ರೆ ಚಿಕಿತ್ಸೆಯ
ಮೊದಲು ಇತರ ಚಿಕಿತ್ಸೆಗಳ ಬಗ್ಗೆ ಮಾಹಿತಿ ಪಡೆಯಬೇಕು. ಆದರೆ ನಿದ್ರಾಹೀನತೆಯು ಖಿನ್ನತೆ, ಆತಂಕ ಮನೋಬೇನೆ ಮುಂತಾದ
ಸಮಸ್ಯೆಗಳಿಂದ ಉಂಟಾಗುತ್ತಿದ್ದರೆ ಅದಕ್ಕೆ ವೈದ್ಯರು ತಿಳಿಸಿದ ಚಿಕಿತ್ಸೆ ಅತಿ ಅಗತ್ಯ. ವೈದ್ಯರ ಸಲಹೆ ಇಲ್ಲದೆ ವೈದ್ಯಕೀಯ ಶಾಪ್
ಗಳಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುವುದು ಉಚಿತವಲ್ಲ. ನಿದ್ರಾಹೀನತೆಗೆ ಬಳಸುವ ಮಾತ್ರೆಗಳು ಬರ ಬರುತ್ತಾ ನಿದ್ರೆ ಬರಲು
ಡೋಸ್ ಹೆಚ್ಚು ಮಾಡಬೇಕಾಗುವುದು ಅಥವಾ ಮಾತ್ರೆ ನಿಲ್ಲಿಸಿದ ಕೂಡಲೇ ಕೈ ಕಾಲು ನಡುಕ ಹೆದರಿಕೆ ಮುಂತಾದ ಹಿಂತೆಗೆತದ
ಚಿನ್ನೆಗಳು ಉಂಟಾಗಬಹುದು. ಮುಂದೆ ಇದು ನಿದ್ರೆ ಮಾತ್ರೆ ಸೇವನೆಯ ವ್ಯಸನವೂ ಉಂಟಾಗುವಂತೆ ಮಾಡ ಬಹುದು. ಆ
ಕಾರಣದಿಂದಾಗಿ ಈ ಮಾತ್ರೆಗಳನ್ನು ಬರೆದುಕೊಡುವಾಗ ವೈದ್ಯರು ಎಚ್ಚರ ವಹಿಸುವರು.
ನಿದ್ರಾ ಹೀನತೆ ಇರುವವರಲ್ಲಿ ಮೊಟ್ಟಮೊದಲನೆಯದಾಗಿ ಅರಿವು ಮತ್ತು ವರ್ತನೆಯ ಚಿಕಿತ್ಸೆ ಅಂದರೆ ನಿದ್ರೆ ಬರುವುದಿಲ್ಲ ಎಂಬುದರ
ಬಗ್ಗೆ ಅತಿಯಾಗಿ ಯೋಚನೆ ಮಾಡುತ್ತಿರುವ ವ್ಯಕ್ತಿಗೆ ಈ ಯೋಚನೆಗಳಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು
ಮಾಡಿಕೊಡುವುದು ಹಾಗೆಯೆ ನಿದ್ರಾಹೀನತೆಗೆ ಪೂರಕವಾದ ವರ್ತನೆಗಳನ್ನು ಬದಲಾಯಿಸಲು ಸಲಹೆಗಳನ್ನು ನೀಡುವುದು ಈ
ಚಿಕಿತ್ಸೆಯ ಪ್ರಮುಖ ಅಂಗವಾಗಿದೆ. ಸಮಸ್ಯೆ ಇರುವ ವ್ಯಕ್ತಿಗೆ ನಿದ್ರೆಯ ಬಗ್ಗೆ ರೋಗಿಯ ಅನಿಸಿಕೆಗಳಿರುವ ಸ್ಲೀಪ್ ಡೈರಿ ಬರೆಯಲು
ವೈದ್ಯರು ತಿಳಿಸಬಹುದು.ರೋಗಿಯು ಬರೆದ ಡೈರಿಯನ್ನು ಆಧರಿಸಿ ನಿದ್ರಾಹೀನತೆಗೆ ಪ್ರಚೋದಕ ಅಂಶಗಳನ್ನು ಗುರುತಿಸಿ
ಅವುಗಳನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು. ಪ್ರಚೋದಕ ಅಂಶಗಳಾದ ಲೈಟ್ ,ಮೊಬೈಲ್, ಕಾಫಿ ,ಮದ್ಯಪಾನ ಸೇವನೆ,
ಮಧ್ಯಾಹ್ನ ಮಲಗುವುದು ಮುಂತಾದವುಗಳ ನಿಯಂತ್ರಣದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಹಾಗೆಯೇ ಹಲವರಿಗೆ ಒತ್ತಡ ಕಡಿಮೆ
ಮಾಡುವ ರಿಲಾಕ್ಷನ್ ವ್ಯಾಯಾಮಗಳು, ಸ್ನಾಯುಗಳಲ್ಲಿ ಒತ್ತಡವನ್ನು ಕಡಿಮೆ ಮಾಡುವ ಬಯೋ ಫೀಡ್ಬ್ಯಾಕ್, ಮೆದುಳಿನ ಈಈಜಿ
ಬಯೋ ಫೀಡ್ಬ್ಯಾಕ್ ಮುಂತಾದ ಚಿಕಿತ್ಸೆಗಳನ್ನು ಮನಶಾಸ್ತ್ರಜ್ಞರು ಹೇಳಿಕೊಡಬಹುದು. ಒಟ್ಟಿನಲ್ಲಿ ನಿದ್ರಾಹೀನತೆಗೆ ವಿವಿಧ ಬಗೆಯ
ಚಿಕಿತ್ಸಾ ಕ್ರಮಗಳನ್ನು ಅನುಸರಿಸಿ ಮಾತ್ರೆ ಇಲ್ಲದೆ ನಿದ್ರೆ ಬರಿಸಲು ಪ್ರಯತ್ನ ಮಾಡಲಾಗುತ್ತದೆ. ನಿದ್ರಾಹೀನತೆಗೆ ಇತ್ತೀಚೆಗೆ
ಜನಪ್ರಿಯವಾದ ಮಾತ್ರೆ ಎಂದರೆ ಮೆಲೆಟೋನಿನ್. ಇದು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೂಡ ಸಿಗುತ್ತಿದೆ. ಆದರೆ ಯಾವುದೇ
ಮಾತ್ರೆಗಳನ್ನು ಕೂಡ ಅನಿರ್ದಿಷ್ಟವಾಗಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಉಪಯೋಗಿಸಬೇಡಿ.
ಒಟ್ಟಿನಲ್ಲಿ ನಿದ್ರಾ ಹೀನತೆಗೆ ನಿದ್ರೆ ನೈರ್ಮಲ್ಯವನ್ನು ಹೆಚ್ಚಿಸಿ, ನಿದ್ರಾಹೀನತೆ ಪ್ರಚೋದಿಸುವಂತಹ ವಿಷಯಗಳನ್ನು ತಿಳಿದು
ಬದಲಾಯಿಸುವುದರಿಂದ ಹಾಗೂ ಜೀವನ ಶೈಲಿಯ ಬದಲಾವಣೆಯಿಂದ ನಿದ್ರಾಹೀನತೆ ಸರಿಪಡಿಸಬಹುದು