ಮಾನಸಿಕ ಆರೋಗ್ಯದ ಸಮಸ್ಯೆ ಇರುವವರು ವಿದೇಶದಲ್ಲಿ ಕೆಲಸಕ್ಕೆ ಹೋಗಬಹುದೇ? ಇದು ಬಹಳಷ್ಟು ಜನ ನನ್ನ ಗ್ರಾಹಕರು
ಮತ್ತು ಅವರ ಮನೆಯವರು ಕೇಳುವ ಪ್ರಶ್ನೆ. ನನ್ನ 25 ವರ್ಷ ವೃತ್ತಿ ಜೀವನದಲ್ಲಿ ನಾನು ಗಮನಿಸಿರುವ ಕೆಲವು ವಿಷಯಗಳನ್ನು
ಪ್ರಸ್ತಾಪಿಸಿದ್ದೇನೆ.ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವವರು ವಿದೇಶಗಳಲ್ಲಿ ಹೋಗಿ ಕೆಲಸ ಮಾಡುವ ಬಹಳಷ್ಟು ಜನರನ್ನು
ಕಂಡಿದ್ದೇನೆ.ಆದರೆ ಕೆಲವು ಮುಂಜಾಗ್ರತಾ ಕ್ರಮಗಳು ಅಗತ್ಯ.
ಮಾನಸಿಕ ಸಮಸ್ಯೆಗಳಿಂದ ಬಳಲುವಾಗ ಪ್ರಮುಖವಾಗಿ ಬೇಕಾಗುವುದು ಪ್ರೀತಿ ಪಾತ್ರರ ಬೆಂಬಲ . ವಿದೇಶಗಳಿಗೆ ಒಬ್ಬರೇ
ಕೆಲಸಕ್ಕೆ ಹೋಗುವಾಗ ಇದು ಒಂದು ಸಮಸ್ಯೆ ಆಗಬಹುದು. ವಿದೇಶದಲ್ಲಿ ಒಬ್ಬರೇ ಇರುವಾಗ ಒಂಟಿತನ ಕಾಡಬಹುದು ಹಾಗೂ
ಒತ್ತಡಕ್ಕೆ ಕಾರಣವಾಗಬಹುದು.ಹಾಗೆಯೇ ಈ ಮಾನಸಿಕ ಕಾಯಿಲೆಗಳಲ್ಲಿ ಒಂದು ವಿಶೇಷತೆ ಎಂದರೆ ಕಾಯಿಲೆಯಿಂದ
ಬಳಲುತ್ತಿರುವವರಿಗೆ ಗುಣಲಕ್ಷಣಗಳ ಏರುಪೇರು ಬಳಲುತ್ತಿರುವ ರೋಗಿಗೆ ಗೊತ್ತಾಗದೆ ಇರಬಹುದು. ಕಾಯಿಲೆ
ಉಲ್ಬಣಗೊಂಡಾಗ ಹೆಚ್ಚಾಗಿ ಪ್ರೀತಿ ಪಾತ್ರರು ಗಮನಿಸಿ ಅದನ್ನು ಅವರ ಗಮನಕ್ಕೆ ತರುತ್ತಿದ್ದರು ಆದರೆ ಈಗ ಇವರು ಒಬ್ಬರೇ
ಇರುವುದರಿಂದ ಹಲವು ಗುಣಲಕ್ಷಣಗಳು ಇವರಿಗೆ ಗೊತ್ತಾಗದೆ ಸಮಸ್ಯೆ ಆಗಬಹುದು. . ಹಾಗೆಯೆ ರೋಗಿಗಳು ಮಾತ್ರೆಗಳನ್ನು
ಸರಿಯಾಗಿ ತೆಗೆದುಕೊಳ್ಳುತ್ತಾ ಇದ್ದಾರೋ ಇಲ್ಲವೋ ಎಂಬುದರ ಬಗ್ಗೆ ಮೇಲ್ವಿಚಾರಣೆ ನಡೆಸಬಹುದಿತ್ತು. ವಿದೇಶದಲ್ಲಿ ಅದು ಈಗ
ಸಾಧ್ಯವಾಗುವುದಿಲ್ಲ. ರೋಗಿಯು ಚಿಕಿತ್ಸೆಯನ್ನು ಸರಿಯಾಗಿ ತೆಗೆದುಕೊಳ್ಳದೆ ರೋಗ ಏರುಪೇರು ಆಗಬಹುದು.
ವಿದೇಶದಲ್ಲಿ ನೆಲೆಸಿರುವಾಗ ರೋಗಿಗಳು ಈ ಏರುಪೇರುಗಳನ್ನು ಗಮನಿಸಿದರು ಕೂಡ ವೈದ್ಯರ ಸಹಾಯ ಪಡೆಯಲು ಬೇರೆ
ಬೇರೆ ದೇಶಗಳಲ್ಲಿ ಮನೋವೈದ್ಯರನ್ನು ಕಾಣಲು ಬೇರೆ ಬೇರೆ ರೀತಿಯ ಸಮಸ್ಯೆಗಳಿವೆ. ಮುಂದುವರಿದ ದೇಶಗಳಲ್ಲಿಯೂ ಕೂಡ
ಮನೋವೈದ್ಯರನ್ನು ಕಾಣಬೇಕಿದ್ದರೆ ಮೊದಲು ಕುಟುಂಬ ವೈದ್ಯರ ರೆಫರೆನ್ಸ್ ಬೇಕು. ಸಮಸ್ಯೆ ಬಂದ ಕೂಡಲೇ ಮನೋವೈದ್ಯರ
ಸಹಾಯ ನಮ್ಮ ದೇಶದಲ್ಲಿ ಸಿಗುವಷ್ಟು ಸುಲಭವಾಗಿ ಪರದೇಶಗಳಲ್ಲಿ ಸಿಗುವುದಿಲ್ಲ, ಹೆಚ್ಚಿನ ದೇಶಗಳಲ್ಲಿ ಮನೋವೈದ್ಯರನ್ನು
ಕಾಣಲು ವೈಟಿಂಗ್ ಟೈಮ್ ಬಹಳಷ್ಟು ಇದೆ.ಹಾಗೆಯೇ ಹೊರ ರಾಷ್ಟ್ರಗಳಲ್ಲಿ ಮನೋವೈದ್ಯಕೀಯ ಚಿಕಿತ್ಸೆ ಬಹಳಷ್ಟು ದುಬಾರಿ.
ನಮ್ಮ ದೇಶದಲ್ಲಿ ಹಣದ ಸಮಸ್ಯೆ ಇರುವವರಿಗೆ ಉಚಿತ ಚಿಕಿತ್ಸೆಯ ಸಹಾಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತದೆ.ವಿದೇಶಗಳಲ್ಲಿ ಈ
ಚಿಕಿತ್ಸೆ ಹೊರಗಿನಿಂದ ಬಂದವರಿಗೆ ಸಿಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಅರಿವು ಅತಿ ಅಗತ್ಯವಾಗಿರುತ್ತದೆ.ಹಾಗೆಯೇ
ಭಾರತದಂತ ದೇಶದಿಂದ ಹೋದ ರೋಗಿಗಳಿಗೆ ಹೊರದೇಶಗಳ ವೈದ್ಯರು ಅಥವಾ ಅಲ್ಲಿ ಬಂದಿರುವ ಬೇರೆ ದೇಶದ ವೈದ್ಯರುಗಳು
ಚಿಕಿತ್ಸೆ ಕೊಡುವಾಗ ಭಾಷೆ ಬಾರದೆ ಇರುವುದು ಒಂದು ಸಮಸ್ಯೆ ಯೆ. ಹಾಗೆಯೇ ನಮ್ಮ ದೇಶದ ಸಂಸ್ಕೃತಿ ಆಚಾರ-ವಿಚಾರಗಳು
ಬೇರೆ.ಹೊರದೇಶದ ವೈದ್ಯರುಗಳಿಗೆ ನಮ್ಮ ರೋಗಿಗಳ ನಡುವಳಿಕೆ ಈ ಆಚಾರ ವಿಚಾರಗಳ ಚೌಕಟ್ಟಿನಲ್ಲಿ ಅರ್ಥ
ಮಾಡಿಕೊಳ್ಳುವುದು ಕಷ್ಟ .
ಮಾನಸಿಕ ರೋಗ ಚಿಕಿತ್ಸೆಯಲ್ಲಿ ರೋಗಿ ಹೇಳಿಕೊಳ್ಳುವುದನ್ನು ಅರ್ಥ ಮಾಡಿಕೊಂಡು, ಆತನ ಹಿನ್ನೆಲೆಯನ್ನು ಅರ್ಥ
ಮಾಡಿಕೊಂಡು ಚಿಕಿತ್ಸೆ ಕೊಡುವುದು ಬಹಳ ಪ್ರಮುಖವಾಗಿ ಅಗತ್ಯವಾಗಿರುತ್ತದೆ. ಆ ಕಾರಣದಿಂದಾಗಿ ರೋಗಿಗೆ ಸರಿಯಾದ
ಚಿಕಿತ್ಸೆ ಸಿಗದೇ ಇರಬಹುದು.
ಹಾಗೆಯೇ ಮಾನಸಿಕ ಸಮಸ್ಯೆಗಳಿಗೆ ಮಾತ್ರೆಗಳು ಬಹಳ ದುಬಾರಿ. ವಿದೇಶಗಳಲ್ಲಿ ನೆಲೆಸಿರುವವರಿಗೆ ಅದರಲ್ಲೂ ಗಲ್ಫ್
ದೇಶಗಳಲ್ಲಿ ನೆಲೆಸಿರುವವರಿಗೆ ಆ ಮಾತ್ರೆಗಳನ್ನು ಅಲ್ಲಿ ತೆಗೆದುಕೊಳ್ಳುವುದು ದುಬಾರಿಯಾದರೆ ಇಲ್ಲಿಂದ ತೆಗೆದುಕೊಂಡು
ಹೋಗುವುದು ಕಷ್ಟ ಸಾಧ್ಯ. ಹೆಚ್ಚಿನ ಮಾತ್ರೆಗಳು ನಾರ್ಕೋಟಿಕ್ ಮತ್ತು ಸೈಕೊಟ್ರೋಪಿಕ್ ಪದಾರ್ಥಗಳು ಎಂದು
ಪರಿಗಣಿಸಲಾಗುತ್ತದೆ. ಇದನ್ನು ಭಾರತದಿಂದ ತೆಗೆದುಕೊಂಡು ಹೋಗುವುದಾದರೂ ಕೇವಲ ಮೂರು ತಿಂಗಳಿಗೆ ಮನೋವೈದ್ಯರ
ಸರ್ಟಿಫಿಕೇಟ್ ನೊಂದಿಗೆ ತೆಗೆದುಕೊಂಡು ಹೋಗಬಹುದು. ಅದಕ್ಕಿಂತ ಹೆಚ್ಚು ತೆಗೆದುಕೊಂಡು ಹೋಗುವುದು ಶಿಕ್ಷಾರ್ಹ ಅಪರಾಧ.
ಆದರೆ ಮೂರು ತಿಂಗಳಿಗೊಮ್ಮೆ ರೋಗಿಯು ಅಲ್ಲಿಂದ ವಾಪಸ್ಸು ಬರಲು ಸಾಧ್ಯವೇ? ಭಾರತದಿಂದ ಅಲ್ಲಿಗೆ ಹೋಗುವ ಇತರರು
ಯಾರು ಕೂಡ ಈ ಮಾತ್ರೆಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಏಕೆಂದರೆ ಇದನ್ನು ಯಾರು ಉಪಯೋಗಿಸುತ್ತಾರೋ
ಅವರ ಹೆಸರಿನಲ್ಲೇ ಸರ್ಟಿಫಿಕೇಟ್ ಕೊಡಲಾಗುತ್ತದೆ.
ಮನೋವೈದ್ಯಕೀಯ ಚಿಕಿತ್ಸೆಯ ಮಾತ್ರೆಗಳು ವೈದ್ಯರು ಹೇಳಿದಂತೆ ತೆಗೆದುಕೊಳ್ಳಬೇಕು. ಸಕಾಲದಲ್ಲಿ ಮಾತ್ರೆಗಳು ಸಿಗದೇ
ಇದ್ದಲ್ಲಿ ರೋಗ ಉಲ್ಬಣಗೊಳ್ಳಬಹುದು. ರೋಗ ಉಲ್ಬಣವಾಗಿ ಒಳರೋಗಿ ಚಿಕಿತ್ಸೆ ಏನಾದರೂ ಪಡೆಯಬೇಕಾದರೆ ಅದು ಕೂಡ
ಬಹಳ ದುಬಾರಿ. ಮಾನಸಿಕ ಸಮಸ್ಯೆಗಳ ಚಿಕಿತ್ಸೆಗೆ ಎಷ್ಟೋ ರಾಷ್ಟ್ರಗಳಲ್ಲಿ ಇನ್ನೂ ಕೂಡ ವೈದ್ಯಕೀಯ ಇನ್ಸೂರೆನ್ಸ್ ಲಭ್ಯವಿಲ್ಲ.
ಭಾರತದಲ್ಲಿ ಕೂಡ ಇನ್ನೂ ಮನೋ ಚಿಕಿತ್ಸೆಗೆ ಇನ್ಸೂರೆನ್ಸ್ ಸರಿಯಾಗಿ ಲಭ್ಯವಾಗುತ್ತಿಲ್ಲ. ಒಟ್ಟಾರೆಯಾಗಿ ಸಮಯಕ್ಕೆ ಸರಿಯಾಗಿ
ಒಳರೋಗಿ ಚಿಕಿತ್ಸೆ ಸಿಗದೇ ವಿದೇಶದಲ್ಲಿ ಮಾನಸಿಕ ಸಮಸ್ಯೆಯಿಂದ ಏನಾದರೂ ನಡವಳಿಕೆ ಸಮಸ್ಯೆಗಳು ಅಥವಾ
ಇತರರೊಂದಿಗೆ ಜಗಳ ಮಾಡಿಕೊಂಡಲ್ಲಿ ಆ ದೇಶದ ಕಾನೂನಿನಂತೆ ಶಿಕ್ಷೆಗೆ ಒಳಪಡಬಹುದು. ಅಂತಹ ಸಂದರ್ಭದಲ್ಲಿ ಕಾನೂನಿನ
ಸಲಹೆ ,ವೈದ್ಯಕೀಯ ಪರೀಕ್ಷೆ ವೈದ್ಯಕೀಯ ಚಿಕಿತ್ಸೆ ಮುಂತಾದವುಗಳಿಗೆ ಬಹಳಷ್ಟು ಹಣ ಖರ್ಚಾಗಬಹುದು.
ಆದ್ದರಿಂದ ವಿದೇಶಗಳಲ್ಲಿ ಹೋಗಿ ಕೆಲಸ ಮಾಡಬೇಕು ಎನ್ನುವವರು ಅವರು ಹೋಗುವ ದೇಶದ ಕಾನೂನುಗಳ ಬಗ್ಗೆ ಅರಿವು, ಅಲ್ಲಿ
ಸಿಗುವ ವೈದ್ಯಕೀಯ ನೆರವಿನ ಬಗ್ಗೆ ಅರಿವು, ಅಲ್ಲಿ ಮಾತ್ರೆಗಳಿಗೆ ಎಷ್ಟು ಖರ್ಚಾಗುತ್ತದೆ ಹಾಗೂ ಮಾತ್ರೆಗಳನ್ನು ತಮ್ಮ ದೇಶದಿಂದ
ತೆಗೆದುಕೊಂಡು ಹೋಗಬಹುದೇ ಮುಂತಾದ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಹಾಗೆಯೇ ಹಣದ ಸಮಸ್ಯೆ ಇದ್ದಲ್ಲಿ
ಉಚಿತ ಚಿಕಿತ್ಸೆ ಎಲ್ಲಿ ಸಿಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇರಬೇಕು.
ಏನೇ ಆಗಲಿ ವಿದೇಶದಲ್ಲಿ ಒಬ್ಬರೇ ಕೆಲಸ ಮಾಡುವಾಗ ಕಾಯಿಲೆಯಿಂದ ಬಳಲುತ್ತಿರುವವರು ತಮ್ಮೊಂದಿಗೆ ಕೆಲಸ ಮಾಡುವವರು
ಅಥವಾ ತಮ್ಮೊಂದಿಗೆ ವಾಸಿಸುವವರು ಯಾರಾದರೂ ಒಬ್ಬರಿಗೆ ಅವರ ಈ ಕಾಯಿಲೆಯ ಬಗ್ಗೆ ಮಾಹಿತಿ ತಿಳಿಸಿರಲೇಬೇಕು.
ಕೆಲವೊಮ್ಮೆ ಕಾಯಿಲೆ ಏರುಪೇರು ಆದಾಗ ರೋಗಿಗೆ ಅದು ಅರ್ಥವಾಗುವುದಿಲ್ಲ. ಸ್ವಲ್ಪ ಏರುಪೇರಾದರೂ ಅಲ್ಲೇ ಚಿಕಿತ್ಸೆ ಅದು
ಸಾಧ್ಯವಿಲ್ಲದಲ್ಲಿ ಸ್ವದೇಶಕ್ಕೆ ಮರಳಿ ಚಿಕಿತ್ಸೆ ಪಡೆಯುವುದು ಈ ಬಗ್ಗೆ ಮೊದಲೇ ನಿರ್ಧರಿಸಿಕೊಂಡಿರಬೇಕು. ಇವೆಲ್ಲವನ್ನೂ ಗಮನಿಸಿ
ಜಾಗ್ರತೆ ವಹಿಸಿ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುವವರು ವಿದೇಶಗಳಿಗೆ ಕೆಲಸಕ್ಕೆ ಹೋಗಬಹುದು.