ಅತಿಯಾದ ಮೊಬೈಲ್ ಬಳಕೆ ಸಣ್ಣ ಮಕ್ಕಳ ಮೆದುಳಿಗೆ ಹಾನಿಕಾರಕವೇ? ಏನಿದು ವರ್ಚುವಲ್ ಆಟಿಸಂ?
ಇತ್ತೀಚಿನ ದಿನಗಳಲ್ಲಿ ತಾಯಿ ತಂದೆಯರು ನಮ್ಮ ಮಕ್ಕಳ ಮಾರ್ಗದರ್ಶನ ಕೇಂದ್ರಕ್ಕೆ ಬಂದು ತಮ್ಮ ಸಣ್ಣ ಮಕ್ಕಳು ಅಂದರೆ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಮಾತನಾಡುವುದರಲ್ಲಿ ವಿಳಂಬ ಕಾಣಿಸುತ್ತಿದೆ ಅತಿಯಾದ ಚಟುವಟಿಕೆ ಯಿಂದ ಇದ್ದಾರೆ ಹಾಗೂ ಭಾವನೆಗಳ ವ್ಯಕ್ತಪಡಿಸುವುದರಲ್ಲಿ ಸಾಮಾಜಿಕ ಬಾಂಧವ್ಯಗಳಲ್ಲಿ ಆಸಕ್ತಿ ತೋರಿಸುತ್ತಿಲ್ಲ ಇದು ಆಟಿಸಂ ಇರಬಹುದೇ ಎಂದು ಕೇಳುತ್ತಾರೆ.. ಹಲವು ಸಂದರ್ಭಗಳಲ್ಲಿ ಮಗುವಿನೊಂದಿಗೆ ನಾವು ಮಾತನಾಡಲು ಪ್ರಯತ್ನಿಸಿದಾಗ ಪರೀಕ್ಷಿಸಿದಾಗ ತಿಳಿಯುವ ವಿಷಯವೆಂದರೆ ಈ ಮಗು ಬಹಳಷ್ಟು ಸಮಯ ಮೊಬೈಲ್ ನಲ್ಲಿ ಕಳೆಯುತ್ತಿರುತ್ತದೆ.
“ವರ್ಚುವಲ್ ಆಟಿಸಂ “ಎಂಬುದು ವೈದ್ಯಕೀಯ ಪಠ್ಯಗಳಲ್ಲಿ ಅಧಿಕೃತವಾಗಿ ನಮೂದಿಸಲ್ಪಟ್ಟ ರೋಗವಲ್ಲ. ಆದರೆ ಇತ್ತೀಚೆಗೆ ಮಾನಸಿಕ ಆರೋಗ್ಯ ವೃತ್ತಿಪರರು ಹೆಚ್ಚಾಗಿ ಬಳಸುತ್ತಿರುವ ಪದವಾಗಿದೆ. ಮೊಬೈಲ್ ,ಟಿವಿ ಅಥವಾ ಟ್ಯಾಬ್ಲೆಟ್ ಹಿಡಿದುಕೊಂಡು ಮಕ್ಕಳು ಅದರಲ್ಲೇ ತಲ್ಲಿನ ರಾಗಿರುವಾಗ ವಿಶೇಷವಾಗಿ 0 ರಿಂದ 3 ವರ್ಷದ ಮಕ್ಕಳಲ್ಲಿ ಕೆಲವು ಸಮಸ್ಯೆಗಳನ್ನು ವೈದ್ಯರುಗಳು ನೋಡಿದ್ದಾರೆ. ಇದಕ್ಕೆ ಕಾರಣಗಳೇನು ಎಂದು ಗಮನಿಸುವಾಗ ಮೊದಲ ಮೂರು ವರ್ಷದಲ್ಲಿ ಮಗುವಿನ ಮೆದುಳು ಅತಿವ ವೇಗದಲ್ಲಿ ಬೆಳೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಅದರ ದೃಷ್ಟಿ ,ಮುಖಭಾವ, ಮಾತು, ಸ್ಪರ್ಶ ಇತ್ಯಾದಿಗಳಲ್ಲಿ ಬದಲಾವಣೆಗಳು ಉಂಟಾಗುತ್ತಿರುತ್ತದೆ. ಈ ಬದಲಾವಣೆಗಳು ಇತರರೊಂದಿಗೆ ಸಂಪರ್ಕ ಉತ್ತಮಗೊಳಿಸಲು ಬಹಳ ಅವಶ್ಯಕ. ಆದರೆ ಈ ಸಂದರ್ಭದಲ್ಲಿ ಹೊರಗಿನ ಪರಿಸರದ ಯಾವುದೇ ಉತ್ತೇಜನ ಸಿಗದೇ ಕೇವಲ ಮೊಬೈಲ್ ಅಥವಾ ಟಿವಿ ಯೊಂದಿಗೆ ಮಕ್ಕಳು ಬೆಳೆದು ಬಂದರೆ ಅವರ ಸಂವಹನದಲ್ಲಿ , ಜನರೊಂದಿಗೆ ಬರೆಯುವುದರಲ್ಲಿ ಮತ್ತು ಭಾವನೆಗಳಲ್ಲಿ ಕೊರತೆ ಎದ್ದು ಕಾಣುತ್ತದೆ. ಈ ಮಕ್ಕಳ ಮೆದುಳಿನ ಬೆಳವಣಿಗೆಯಲ್ಲಿ ಸಮಸ್ಯೆಗಳಿಗೆ ಮುಖ್ಯ ಕಾರಣ ಇತರ ಮನುಷ್ಯರನ್ನು ಹೆಚ್ಚು ಅವರು ನೋಡದೆ ಇರುವುದು ಹಾಗೂ ಅವರಿಗೆ ಒಂದೇ ಸಮನೆ ಕಡಿಮೆ ಸಮಯದಲ್ಲಿ ಬಹಳಷ್ಟು ವಿಚಾರಗಳು ಮೊಬೈಲ್ನಲ್ಲಿ ನೋಡುವಾಗ (information overload)ಅವರ ಮೆದುಳಿನ ಮೇಲೆ ಹೊರೆಯಾಗುವುದು ಮತ್ತು ಮೊಬೈಲ್ ಹೆಚ್ಚು ಹೆಚ್ಚು ನೋಡುವಾಗ ನಿದ್ರೆ ಮಾಡುವುದು ಕಡಿಮೆಯಾಗುತ್ತದೆ ಹಾಗೂ ನಿದ್ರಾ ಸಮಯ ಬಹಳ ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ ಹಾಗೂ ಇದರಿಂದಾಗಿ ಮಗುವಿನ ನಡವಳಿಕೆಯಲ್ಲಿ ಸಮಸ್ಯೆಗಳು ಕಂಡುಬರುತ್ತವೆ.
ತಾಯಿ ತಂದೆಯರು ಗಮನಿಸಿರುವ ಲಕ್ಷಣಗಳು ಎಂದರೆ ಮಾತಿನ ಬೆಳವಣಿಗೆಯಲ್ಲಿ ವಿಳಂಬ ಅಥವಾ ಮಾತನಾಡದೆ ಇರುವುದು, ಕಣ್ಣಲ್ಲಿ ಕಣ್ಣಿಟ್ಟು ಇತರರೊಡನೆ ಮಾತನಾಡದೆ ಇರುವುದು, ಮನಸ್ಸಿನಲ್ಲಿ ಉಂಟಾಗುವ ಭಾವನೆಗಳನ್ನು ವ್ಯಕ್ತಪಡಿಸದೇ ಇರುವುದು, ಅತಿಯಾದ ಚುರುಕುತನ, ಗಮನ ಕೊಟ್ಟು ಮಾಡಬೇಕಾದ ಕೆಲಸಗಳಲ್ಲಿ ಗಮನದ ಕೊರತೆ ಮೊಬೈಲ್ ತೆಗೆದಾಗ ಕೋಪ ಮತ್ತು ಕಿರಿಕಿರಿ..ಆಟಿಸಂ ಮಕ್ಕಳಲ್ಲಿ ಇರುವ ಹಲವು ಗುಣಲಕ್ಷಣಗಳು ಈ ಮಕ್ಕಳಲ್ಲೂ ಕಂಡು ಬರುತ್ತದೆ ಆದ್ದರಿಂದಲೇ ಈ ಹೆಸರು” ವರ್ಚುವಲ್ ಆಟಿಸಂ” .
ಈ ಬಗ್ಗೆ ಮನೋವೈದ್ಯರು ಅಥವಾ ಮನಶಾಸ್ತ್ರಜ್ಞರು ಮಗುವಿನೊಂದಿಗೆ ಮಾತನಾಡಿದಾಗ ಹಾಗೂ ಮಗುವಿನ ತಾಯಿ ತಂದೆಯೊಂದಿಗೆ ಚರ್ಚಿಸಿದಾಗ ಮತ್ತು ಮಗುವಿನ ನಡವಳಿಕೆಗಳನ್ನು ಗಮನಿಸಿದಾಗ ಮಾತ್ರ ಸ್ಪಷ್ಟವಾದ ಚಿತ್ರಣ ಬರುತ್ತದೆ. ಈ ಸಂದರ್ಭದಲ್ಲಿ ಪಾಲಕರೊಂದಿಗೆ ಚರ್ಚಿಸಿ ಮೊದಲು ಮಗುವಿಗೆ ಸ್ಕ್ರೀನ್ ಬಳಕೆ ನಿಯಂತ್ರಣ ಇದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸೊನ್ನೆಯಿಂದ ಮೂರರವರೆಗೆ ಈ ವಯಸ್ಸಿನಲ್ಲಿ ಆದಷ್ಟು ಮಕ್ಕಳಿಗೆ ಮೊಬೈಲ್ ಸ್ಕ್ರೀನ್ ತೋರಿಸದೆ ಇರುವುದೇ ಒಳ್ಳೆಯದು. ಎರಡರಿಂದ ಐದು ವರ್ಷದ ಒಳಗಿನ ಮಕ್ಕಳಿಗೆ ದಿನಕ್ಕೆ ಒಂದು ಗಂಟೆಗೂ ಕಡಿಮೆ ಮೊಬೈಲ್ ಅಥವಾ ಟಿವಿ ಬಳಸಲು ಬಿಡಬೇಕು. ಇದನ್ನು ಜನಸಾಮಾನ್ಯರು ಗಮನಿಸಬೇಕು.
ಇಂತಹ ಮಕ್ಕಳಿಗೆ ಮನುಷ್ಯರ ಸಂಪರ್ಕ ಹೆಚ್ಚಿಸಬೇಕು ಮಕ್ಕಳೊಂದಿಗೆ ಮಾತುಕತೆ ,ಹಾಡು, ಆಟ ,ಕಥೆ ಕೇಳುವುದು ಇಂತಹಹುದನ್ನು ಹೆಚ್ಚು ಮಾಡಬೇಕು. ಹಲವೊಮ್ಮೆ ತಾಯಿ ತಂದೆಯರು ತಮ್ಮ ಮೊಬೈಲ್ ಬಳಕೆಯನ್ನು ಕೂಡ ಕಡಿಮೆ ಮಾಡಬೇಕು. ಮಕ್ಕಳು ನಾವು ಹೇಳಿದ್ದನ್ನು ಕೇಳುತ್ತವೆಯೋ ಇಲ್ಲವೋ ನಾವು ಮಾಡಿದ್ದನ್ನು ಮಾಡುತ್ತವೆ. ಇದನ್ನು ಹಿರಿಯರು ಗಮನಿಸಬೇಕು. ಈ ಮಕ್ಕಳನ್ನು ಅಂಗನವಾಡಿ ಅಥವಾ ಪ್ರಿ ಸ್ಕೂಲ್ ನಲ್ಲಿ ಸೇರಿಸಿ ಬೇರೆ ಮಕ್ಕಳೊಂದಿಗೆ ಆಟ ಆಡಲು ಬಿಟ್ಟರೆ ಹಲವು ಮಕ್ಕಳು ತಮ್ಮ ಸಾಮಾಜಿಕ ಸಂವಹನವನ್ನು ಉತ್ತಮಗೊಳಿಸುತ್ತವೆ. ಬೇರೆ ಮಕ್ಕಳೊಂದಿಗೆ ಬೆರೆಯಲು ಪ್ರಾರಂಭಿಸುತ್ತವೆ. ಈ ಮಕ್ಕಳಲ್ಲಿ ಅತಿಯಾದ ಚಟುವಟಿಕೆ ಇರುವಾಗ ಹೊರಾಂಗಣದ ಆಟಗಳನ್ನು ಆಡಲು ಬಿಡಬೇಕು. ಹೊರಾಂಗಣದ ಆಟಗಳು ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಸಾಮಾಜಿಕ ಸಂವಹನವನ್ನು ಉತ್ತಮಗೊಳಿಸುತ್ತದೆ ಹಾಗೆಯೆ ಹೊರಾಂಗಣದ ಆಟದ ದಣಿವಿನಿಂದ ಇವರಲ್ಲಿ ಅತಿ ಚಟುವಟಿಕೆ ಕಡಿಮೆಯಾಗುತ್ತದೆ. ಇವರ ಮೆದುಳು ಇನ್ನಷ್ಟು ಉತ್ತೇಜನಗೊಳ್ಳುತ್ತದೆ. ಕನಿಷ್ಠ 9 ಗಂಟೆಗಳ ಕಾಲ ನಿದ್ರೆ ಬಹಳ ಅವಶ್ಯಕ. ಆಟಿಸಂ ಒಂದು ನರಮಂಡಲದ ಬೆಳವಣಿಗೆ ಸಮಸ್ಯೆ ಆದರೆ ವರ್ಚುವಲ್ ಆಟಿಸಂ ಅನ್ನೋದು ತಾಯಿ ತಂದೆಯರೇ ಮಗುವಿಗೆ ಮೊಬೈಲ್ ಸಣ್ಣ ವಯಸ್ಸಿನಲ್ಲೇ ಅಭ್ಯಾಸ ಮಾಡಿ ಉಂಟುಮಾಡಿರುವ ಕೃತಕವಾದ ವೈದ್ಯಕೀಯ ಸಮಸ್ಯೆ. ಮನೋವೈದ್ಯನಾಗಿ ನಾನು ಗಮನಿಸಿದ್ದೇನೆಂದರೆ ವಿದೇಶಗಳಲ್ಲಿ ಬೆಳೆಯುತ್ತಿರುವ ಭಾರತೀಯ ಮಕ್ಕಳು, ಅದರಲ್ಲಿಯೂ ತಾಯಿ ತಂದೆಯರು ಇಬ್ಬರು ಕೆಲಸದಲ್ಲಿದ್ದು ಈ ಮಕ್ಕಳು ಬೇರೆ ಮಕ್ಕಳೊಂದಿಗೆ ಬೆರೆಯುವ ಅವಕಾಶಗಳು ಕಮ್ಮಿ ಇರುವಾಗ ಹೆಚ್ಚಾಗಿ ಈ ಸಮಸ್ಯೆಯನ್ನು ನೋಡುತ್ತಿದ್ದೇವೆ. ಆದ್ದರಿಂದ ಸಣ್ಣವಯಸಿನಲ್ಲಿ ನಮ್ಮ ಮಕ್ಕಳು ಮೊಬೈಲು ಉಪಯೋಗಿಸುತ್ತಿದ್ದಾರೆ ಎಂದು ಹೆಮ್ಮೆ ಪಡುವ ತಾಯಿ ತಂದೆಯರು ಈ ಸಮಸ್ಯೆಯ ಬಗ್ಗೆ ಎಚ್ಚೆತ್ತುಕೊಳ್ಳಿ ಮತ್ತು ನಿಮ್ಮ ಮಕ್ಕಳ ಬೆಳವಣಿಗೆಯೆತ್ತ ಗಮನಹರಿಸಿ. ನಿಮ್ಮ ಮಕ್ಕಳ ಮೆದುಳು ಮೊದಲ ಐದು ವರ್ಷಗಳಲ್ಲಿ ಶೇಕಡ 80 ಕ್ಕೂ ಹೆಚ್ಚು ಬೆಳೆಯುತ್ತಿರುತ್ತದೆ. ಆ ಸಂದರ್ಭದಲ್ಲಿ ಅವರಿಗೆ ಸಿಗುವ ಪ್ರೀತಿ ,ಉತ್ತೇಜನ ,ಬೇರೆ ಮಕ್ಕಳ ಒಟ್ಟಿಗೆ ಆಟವಾಡಿ ಸಿಗುವ ಕಲಿಕೆ ನೀವು ಕೊಡುವ “ಶಬ್ಬಾಸ್ ಗಿರಿ”ಬಹಳ ಮುಖ್ಯವಾದದ್ದು. ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ ಮತ್ತು ಮೊಬೈಲ್ ಬಳಕೆಗೆ ಕಡಿವಾಣ ಹಾಕಿ.