Select Page

ಇತ್ತೀಚೆಗೆ ನನ್ನ ಕ್ಲಿನಿಕ್ ಗೆ ಬಂದ ಗ್ರಾಹಕರೊಬ್ಬರು ತಮ್ಮ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಬರುತ್ತಿಲ್ಲ ಆದ್ದರಿಂದ ಅದನ್ನು
ನಿಯಂತ್ರಿಸಲು ತಾನು ಇಪ್ಪತ್ತು ವರ್ಷಗಳಿಂದ ತೆಗೆದುಕೊಳ್ಳುತ್ತಿರುವ ಬೈಪೋಲಾರ್ ಡಿಸ್ಆರ್ಡರ್ ಸಮಸ್ಯೆಯ ಮಾತ್ರೆಗಳನ್ನು
ನಿಲ್ಲಿಸಲು ಅಥವಾ ಒಂದೆರಡು ದಿನ ಅಡ್ಮಿಟ್ ಆಗಿ ಕಡಿಮೆ ಮಾಡಿಸಲು ತಮ್ಮ ವೈದ್ಯಕೀಯ ಸಲಹಾ ವೈದ್ಯರು ತಿಳಿಸಿದ್ದಾರೆ
ಎಂದು ಬಂದು ತಿಳಿಸಿದರು. ಆದರೆ ತಾನು ಮಾತ್ರ ಅದಕ್ಕೆ ಒಪ್ಪಲಿಲ್ಲ ನನ್ನ ಮನೋವೈದ್ಯರ ಸಲಹೆಯನ್ನು ಪಡೆದು ನಂತರ
ನಿರ್ಧರಿಸುವೆ ಎಂದು ಹೇಳಿ ಬಂದೆ ಎಂದು ತಿಳಿಸಿದರು. ಹೌದು, ಇದು ಸರಿಯಾದ ನಿರ್ಧಾರ ಏಕೆಂದರೆ ದೀರ್ಘಕಾಲಿನ ಮಾನಸಿಕ
ಕಾಯಿಲೆಗಳಾದ ಬೈಪೋಲಾರ್ ಡಿಸ್ಆರ್ಡರ್ ಮತ್ತು ಸ್ಕೀಝೋಫ್ರೆನಿಯಾ ಮೆದುಳಿನ ನರವಾಹಕಗಳ ಅಸಮತೋಲನದಿಂದ
ಉಂಟಾಗುವ ಕಾಯಿಲೆಗಳು. ಅವರ ಸಲಹೆ ವೈದ್ಯರು ತಿಳಿಸಿದಂತೆ ಈ ಕಾಯಿಲೆಗೆ ಕೊಡುವ ಕೆಲವು ಮಾತ್ರೆಗಳು ಸಕ್ಕರೆ
ಕಾಯಿಲೆಗೆ ಕೊಡುವ ಮಾತ್ರೆಗಳೊಂದಿಗೆ ಇಂಟರಾಕ್ಟ್ ಮಾಡಿ ಸಕ್ಕರೆ ಕಾಯಿಲೆಯ ಚಿಕಿತ್ಸೆಗೆ ಅಡ್ಡ ಬರಬಹುದು. ಆದರೆ ಈ
ಮಾತ್ರೆಗಳನ್ನು ನಿಲ್ಲಿಸುವ ಅಥವಾ ಕಡಿಮೆ ಮಾಡುವ ವೈಜ್ಞಾನಿಕ ವಿಧಾನವಿದೆ. ಒಂದೆರಡು ದಿನ ಅಡ್ಮಿಟ್ ಮಾಡಿದಲ್ಲಿ ವೈದ್ಯರಿಗೂ
ಆಸ್ಪತ್ರೆಗೂ ಲಾಭವಿರಬಹುದು ಹೊರತು ರೋಗಿಯ ರೋಗಕ್ಕೆ ಯಾವುದೇ ಸಹಾಯವಾಗಲಿಕ್ಕಿಲ್ಲ.
ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನೀಡಲಾಗುವ ಔಷಧಿಗಳನ್ನು ಒಮ್ಮಿಂದೊಮ್ಮೆಲೆ ನಿಲ್ಲಿಸುವುದು ಅಥವಾ ಕಡಿಮೆ
ಮಾಡುವುದು ಅತ್ಯಂತ ಅಪಾಯಕಾರಿ. ಈ ಲೇಖನದಲ್ಲಿ, ಮಾನಸಿಕ ಔಷಧಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಅವುಗಳನ್ನು
ಏಕೆ ಒಮ್ಮಿಂದೊಮ್ಮೆಲೆ ನಿಲ್ಲಿಸಬಾರದು ಮತ್ತು ಅವುಗಳನ್ನು ಸುರಕ್ಷಿತವಾಗಿ ಕಡಿಮೆ ಮಾಡುವ ವಿಧಾನಗಳ ಬಗ್ಗೆ
ತಿಳಿದುಕೊಳ್ಳೋಣ.
ಮಾನಸಿಕ ಔಷಧಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ?
ಮಾನಸಿಕ ಔಷಧಿಗಳು ಮೆದುಳಿನ ರಾಸಾಯನಿಕ ಸಮತೋಲನವನ್ನು ಸರಿಪಡಿಸುತ್ತವೆ. ಅವು ಡೋಪಮೈನ್, ಸೆರೊಟೊನಿನ್
ಮತ್ತು ನೊರೆಪಿನೆಫ್ರಿನ್ ಮುಂತಾದ ನ್ಯೂರೋಟ್ರಾನ್ಸ್‌ಮಿಟರ್‌ಗಳ ಮಟ್ಟವನ್ನು ನಿಯಂತ್ರಿಸುತ್ತವೆ. ಈ ರಾಸಾಯನಿಕಗಳು
ಮನಸ್ಥಿತಿ, ಯೋಚನೆ ಮತ್ತು ನಡವಳಿಕೆಯನ್ನು ನಿಯಂತ್ರಿಸುತ್ತವೆ. ಖಿನ್ನತೆ ,ಬೈಪೋಲರ್ ಅಸ್ವಸ್ಥತೆ ಮತ್ತು ಸ್ಕಿಜೋಫ್ರೇನಿಯಾ
ಇದರಲ್ಲಿ ಗುಣಲಕ್ಷಣಗಳನ್ನು ಗಮನಿಸಿದರೆ ಇವು ಮನಸ್ಥಿತಿಯ ಬದಲಾವಣೆಗಳು, ಯೋಚನೆಗಳಲ್ಲಿ ವ್ಯತ್ಯಾಸಗಳು ಮತ್ತು
ನಡುವಳಿಕೆಯಲ್ಲಿ ಸಮಸ್ಯೆಗಳು ಕಂಡುಬರುತ್ತವೆ. ಇವುಗಳನ್ನು ಮಾತ್ರೆಗಳ ಸಹಾಯದಿಂದ ಸ್ವಲ್ಪಮಟ್ಟಿಗೆ ಸರಿಪಡಿಸಬಹುದು. ಈ
ಎಲ್ಲಾ ಕಾಯಿಲೆಗಳಲ್ಲಿ ಬಿಪಿ ಸಕ್ಕರೆ ಕಾಯಿಲೆಯಂತೆ ದೀರ್ಘಕಾಲಿನ ಚಿಕಿತ್ಸೆ ಅಗತ್ಯ ಅನ್ನೋದು ಸಂಶೋಧನೆಗಳಿಂದ
ತಿಳಿದುಬಂದ ವಿಚಾರಗಳು.
ಸ್ಕಿಜೋಫ್ರೇನಿಯಾ:ಈ ರೋಗದಲ್ಲಿ ಮೆದುಳಿನ ಕೆಲವು ಭಾಗಗಳಲ್ಲಿ ಡೋಪಮೈನ್ ಅತಿಯಾಗಿ ಕ್ರಿಯಾಶೀಲವಾಗಿರುತ್ತದೆ.
ಆಂಟಿಸೈಕೋಟಿಕ್ ಔಷಧಿಗಳು ಡೋಪಮೈನ್ ಮಟ್ಟವನ್ನು ಸ್ಥಿರಗೊಳಿಸಿ, ಭ್ರಮೆಗಳು ಮತ್ತು ಭ್ರಾಂತಿಗಳನ್ನು ತಡೆಯುತ್ತವೆ. ಇನ್ನು

ಕೆಲವು ಭಾಗಗಳಲ್ಲಿ ಸೆರೆಟೊ ನಿನ್ ನರವಾಹಕದಲ್ಲಿ ವ್ಯತ್ಯಾಸಗಳು ಉಂಟಾಗುತ್ತವೆ ಆ ಕಾರಣದಿಂದ ಆಂಟಿ ಸೈಕೋಟಿಗಳನ್ನು
ಉಪಯೋಗಿಸುತ್ತಾರೆ.
ಬೈಪೋಲರ್ ಅಸ್ವಸ್ಥತೆ: ಈ ಕಾಯಿಲೆಯಲ್ಲಿ ನ್ಯೂರೋಟ್ರಾನ್ಸ್‌ಮಿಟರ್‌ಗಳ (ನರವಾಹಕಗಳ)ಅಸಮತೋಲನದಿಂದ
ಮನಸ್ಥಿತಿಯಲ್ಲಿ ಏರಿಳಿತಗಳುಂಟಾಗುತ್ತವೆ. ಮೂಡ್ ಸ್ಟೆಬಿಲೈಸರ್‌ಗಳು ಮತ್ತು ಆಂಟಿಸೈಕೋಟಿಕ್ ಔಷಧಿಗಳು ಉನ್ಮಾದ ಮತ್ತು
ಖಿನ್ನತೆಯ ಅವಧಿಗಳನ್ನು ತಡೆಯುತ್ತವೆ ಅಥವಾ ಕಡಿಮೆ ಮಾಡುತ್ತವೆ. ಈ ಮೂಡ್ಸ್ತೆಬಿಲೈಜರ್ ಮಾತ್ರೆಗಳು ಅಂದರೆ ಲಿಥಿಯಮ್
, ಸೋಡಿಯಂ ವಾಲ್ಪೇಪರೆಟ್, ಕಾರ್ಬಮಜೆಪಿನ್, ಮುಂತಾದವುಗಳು ಪರಿಣಿತ ಮನೋವೈದ್ಯರ ಮೇಲ್ವಿಚಾರಣೆಯಲ್ಲಿ
ಕೊಡಬೇಕಾಗುತ್ತದೆ. ಈ ಮಾತ್ರೆಗಳು ದೇಹದ ಪ್ರಮುಖ ಅಂಗಗಳಾದ ಕಿಡ್ನಿ ಲಿವರ್ ಥೈರಾಯ್ಡ್ ಗ್ರಂಥಿ ಮುಂತಾದವುಗಳ ಮೇಲೆ
ಪ್ರಭಾವ ಬೀರುವುದರಿಂದ ಅವುಗಳ ರಕ್ತದ ಲೆವೆಲ್ ಗಳನ್ನು ವೈದ್ಯರು ಆಗಾಗ ಪರೀಕ್ಷಿಸಬಹುದು. ಇವೆಲ್ಲವುಗಳ ಬಗ್ಗೆ ವೈದ್ಯಕೀಯ
ಪ್ರೋಟೋಕಾಲ್ಗಳನ್ನು ವೈದ್ಯರು ಪಾಲಿಸುತ್ತಾರೆ. ಇದು ಜನಸಾಮಾನ್ಯರು ತಿಳಿದುಕೊಳ್ಳಬೇಕಾದ ವಿಷಯ.
ಮಾನಸಿಕ ಚಿಕಿತ್ಸೆಯ ಔಷಧಿಗಳನ್ನು ಒಮ್ಮಿಂದೊಮ್ಮೆಲೆ ನಿಲ್ಲಿಸಬಾರದು ಏಕೆ?
ಮಾನಸಿಕ ಔಷಧಿಗಳನ್ನು ಒಮ್ಮಿಂದೊಮ್ಮೆಲೆ ನಿಲ್ಲಿಸುವುದರಿಂದ ಅನೇಕ ಅಪಾಯಗಳಿವೆ:
1. ಹಿಂತೆಗೆತದ ಪರಿಣಾಮಗಳು:*ನಿದ್ರಾಹೀನತೆ, ಆತಂಕ, ಮನಸ್ಥಿತಿಯ ಬದಲಾವಣೆಗಳು ಮತ್ತು ಮನೋವಿಕಾರದ ಲಕ್ಷಣಗಳು
ಕಾಣಿಸಿಕೊಳ್ಳಬಹುದು.
2. ರೋಗ ಮರುಕಳಿಸುವ ಅಪಾಯ: ಸ್ಕಿಜೋಫ್ರೇನಿಯಾ ರೋಗಿಗಳಲ್ಲಿ ಆಂಟಿಸೈಕೋಟಿಕ್ ಔಷಧಿಗಳನ್ನು ನಿಲ್ಲಿಸಿದರೆ ಒಂದು
ವರ್ಷದೊಳಗೆ ರೋಗ ಮರುಕಳಿಸುವ ಸಾಧ್ಯತೆ 80% ಕ್ಕಿಂತ ಹೆಚ್ಚು.
3. ಆತ್ಮಹತ್ಯೆಯ ಅಪಾಯ ಹೆಚ್ಚಳ: ಬೈ ಪೋಲಾರ್ ಅಸ್ವಸ್ಥತೆ ಇರುವ ರೋಗಿಗಳು ಔಷಧಿ ನಿಲ್ಲಿಸಿದರೆ ಆತ್ಮಹತ್ಯೆಯ ಅಪಾಯ
ಹೆಚ್ಚಾಗುತ್ತದೆ.
4. ಕಾಯಿಲೆಯು ಇನ್ನೂ ದೀರ್ಘಕಾಲಿನವಾಗುವುದು ಅಥವಾ ಚಿಕಿತ್ಸೆಗೆ ಸಮರ್ಪಕವಾಗಿ ಬಗ್ಗಲಿಕ್ಕಿಲ್ಲ.
ಔಷಧಿಗಳನ್ನು ಯಾವಾಗ ಮತ್ತು ಹೇಗೆ ಕಡಿಮೆ ಮಾಡಬೇಕು?ಮಾನಸಿಕ ಔಷಧಿಗಳನ್ನು ಕೇವಲ ಮನೋವೈದ್ಯರ
ಮೇಲ್ವಿಚಾರಣೆಯಲ್ಲಿ ಮಾತ್ರ ಕಡಿಮೆ ಮಾಡಬೇಕು. ರೋಗಿಯ ದೈಹಿಕ ಕಾಯಿಲೆಗಳಲ್ಲಿ ಏನಾದರೂ ವ್ಯತ್ಯಾಸ ಬಂದಲ್ಲಿ ಅಂದರೆ
ಲಿವರ್ ಅಥವಾ ಕಿಡ್ನಿ ಫಂಕ್ಷನಿಂಗ್ ನಲ್ಲಿ ಏನಾದರೂ ವ್ಯತ್ಯಾಸ ಬಂದರೆ ಅಂತಹ ಸಮಯದಲ್ಲಿ ಸಲಹಾ ವೈದ್ಯರು ಮತ್ತು ಮನೋ
ವೈದ್ಯರು ಪರಸ್ಪರ ಚರ್ಚಿಸಿ ಮಾತ್ರೆಗಳಲ್ಲಿ ಬದಲಾವಣೆಗಳನ್ನು ತರಬಹುದು.
1. ಕ್ರಮೇಣ ಕಡಿಮೆ ಮಾಡುವುದು:*ಔಷಧಿಗಳನ್ನು ನಿಧಾನವಾಗಿ, ದಿನಗಳು ವಾರಗಳ ಅಥವಾ ತಿಂಗಳುಗಳ ಕಾಲ ಕಡಿಮೆ
ಮಾಡಬೇಕು.
2. ರೋಗ ಮರುಕಳಿಸುವುದನ್ನು ಗಮನಿಸುವುದು: ರೋಗಿಗಳನ್ನು ನಿಕಟವಾಗಿ ಗಮನಿಸಿ, ಯಾವುದೇ ಲಕ್ಷಣಗಳು ಮರುಕಳಿಸಿದರೆ
ತಕ್ಷಣ ಗಮನಿಸಬೇಕು.

3. ಔಷಧಿಯೇತರ ವಿಧಾನಗಳೊಂದಿಗೆ ಸಂಯೋಜನೆ: ನಡವಳಿಕೆ ಚಿಕಿತ್ಸೆ, ಜೀವನಶೈಲಿ ಬದಲಾವಣೆಗಳು ಮತ್ತು ಒತ್ತಡ
ನಿರ್ವಹಣೆ ತಂತ್ರಗಳನ್ನು ರೋಗಿಗೆ ತಿಳಿಸಿ ಔಷಧಿಗಳನ್ನು ಕಡಿಮೆ ಮಾಡುವಾಗ ಸ್ಥಿರತೆ ಕಾಪಾಡಲು ಸಹಾಯ ಮಾಡುತ್ತವೆ.
ಸಕ್ಕರೆ ಕಾಯಿಲೆ, ಬಿಪಿ ಕಾಯಿಲೆ ನಿಯಂತ್ರಿಸಲು ಮಾನಸಿಕ ಆರೋಗ್ಯದ ಮಾತ್ರೆಗಳ ಬದಲಾವಣೆ ಮಾಡಲೇಬೇಕು ಅಂತ ಇಲ್ಲ.
ಜೀವನ ಶೈಲಿಯ ಬದಲಾವಣೆ ಆಹಾರ ತೆಗೆದುಕೊಳ್ಳುವುದರಲ್ಲಿ ಬದಲಾವಣೆ ಇದರತ್ತ ಮೊದಲು ಗಮನಹರಿಸಬೇಕು.
ಅಂತಿಮವಾಗಿ ಹೇಳುವುದಾದರೆ
ಮಾನಸಿಕ ಔಷಧಿಗಳನ್ನು ಕಡಿಮೆ ಮಾಡುವ ಅಥವಾ ನಿಲ್ಲಿಸುವ ಬಗ್ಗೆ ಯೋಚಿಸುತ್ತಿದ್ದರೆ, ಮೊದಲು ಮನೋವೈದ್ಯರನ್ನು
ಸಂಪರ್ಕಿಸಿ. ಸರಿಯಾದ ವಿಧಾನದಿಂದ ಮಾತ್ರೆಗಳನ್ನು ಕಡಿಮೆ ಮಾಡಿದರೆ ನಿರಂತರ ಚೇತರಿಕೆಗೆ ಸಹಾಯವಾಗುತ್ತದೆ ಮತ್ತು
ಅಪಾಯಕಾರಿ ಮರುಕಳಿಕೆಯನ್ನು ಉಂಟು ಮಾಡುವ ಸನ್ನಿವೇಶವನ್ನು ಕಡಿಮೆ ಮಾಡುತ್ತದೆ . ಮಾನಸಿಕ ಆರೋಗ್ಯ ಚಿಕಿತ್ಸೆಯನ್ನು
ಗೌರವಿಸಿ ಮತ್ತು ಸರಿಯಾಗಿ ಅನುಸರಿಸೋಣ.