ಮದ್ಯಪಾನ ಮತ್ತು ಮೂರ್ಛೆರೋಗ.. ಈ ಹಿಂದೆ ಮೂರ್ಛೆ ರೋಗದ ಬಗ್ಗೆ ಬರೆದಿದ್ದೇನೆ. ಮೂರ್ಛೆರೋಗ ವೆಂದರೆ ಮೆದುಳಿನಲ್ಲಿ
ವಿದ್ಯುತ್ ಚಟುವಟಿಕೆಯಲ್ಲಿ ಏರುಪೇರು ಆಗುವುದರಿಂದ ಉಂಟಾಗುವ ಒಂದು ಪ್ರಕ್ರಿಯೆ. ಇದು ಉಂಟಾದಾಗ ಕೈಕಾಲು ಮೈಯೆಲ್ಲಾ
ನಡುಗುವುದು ಅಥವಾ ಒಮ್ಮೆಲೇ ಎಚ್ಚರ ತಪ್ಪುವುದು ಅಥವಾ ಒಂದೇ ಕಡೆ ನೋಡುತ್ತಾ ನಿಂತು ಬಿಡುವುದು ಆಗಬಹುದು ಇದನ್ನು
ಮೂರ್ಛೆಯ ಒಂದು ಅವಧಿ ಎಂದು ಕರೆಯುತ್ತೇವೆ. ಮೂರ್ಛೆ ಪದೇ ಪದೇ ಉಂಟಾದರೆ ಅದನ್ನು “ಅಪಸ್ಮಾರ “ ರೋಗ ಎಂದು
ಕರೆಯುತ್ತೇವೆ. ನೂರು ಜನರಿಗೆ ಅಪಸ್ಮಾರ ಬಂದಲ್ಲಿ ಎರಡರಿಂದ ಐದು ಜನರು ಮದ್ಯಪಾನದ ಅತಿಯಾದ ಉಪಯೋಗದಿಂದ
ಅಪಸ್ಮಾರಕ್ಕೆ ತುತ್ತಾಗುತ್ತಾರೆ.
ದೀರ್ಘಕಾಲಿನವಾಗಿ ಮದ್ಯಪಾನದ ಉಪಯೋಗ ಮಾಡಿದಾಗ ಮೆದುಳಿನ ಮೇಲ್ಮೈ ಮತ್ತು ಒಳಮೈಯಲ್ಲಿ ಉಂಟಾಗುವ
ಗಾಯಗಳು ಮೂರ್ಛೆರೋಗಕ್ಕೆ ಕಾರಣವಾಗುತ್ತದೆ. ಪದೇ ಪದೇ ಮೂರ್ಛೆ ಉಂಟಾದಲ್ಲಿ ಇದರಿಂದಾಗಿ ಮೆದುಳಿನಲ್ಲಿ
ಬದಲಾವಣೆಗಳಾಗಿ ಅಪಸ್ಮಾರ ಉಂಟಾಗಬಹುದು. ಈ ಬಗ್ಗೆ ಜನಸಾಮಾನ್ಯರಲ್ಲಿ ಹಾಗೂ ವೈದ್ಯರಲ್ಲಿ ಮಾಹಿತಿಯ ಕೊರತೆ
ಬಹಳಷ್ಟು ಇದೆ.
ಮದ್ಯ ವ್ಯಸನದಿಂದ ಮೂರ್ಛೆ ರೋಗ ಉಂಟಾದರೆ ಅದಕ್ಕೆ ಕಾರಣಗಳು ಹಲವು.. ಈ ಮೊದಲೇ ಹೇಳಿದಂತೆ ದೀರ್ಘಕಾಲಿನ
ಮದ್ಯ ದ ಉಪಯೋಗ ಅಂದರೆ ಕನಿಷ್ಠ 5 ರಿಂದ 10 ವರ್ಷ ದಿನಕ್ಕೆ 6 ರಿಂದ 8 ಯೂನಿಟ್ ಮದ್ಯದ ಉಪಯೋಗ, ಒಮ್ಮೆಲೆ
ಒಂದೆರಡು ಗಂಟೆಯಲ್ಲಿ ನಾಲ್ಕು ಪೆಗ್ ವರೆಗೆ ಕುಡಿಯುವುದು, ಬಹಳಷ್ಟು ಸಮಯದಿಂದ ಕುಡಿಯುತ್ತಿದ್ದವರು ಇದ್ದಕ್ಕಿದ್ದಂತೆ ನಿಲ್ಲಿಸಿ
ಬಿಡುವುದು , ಮದ್ಯಪಾನ ಮಾಡುತ್ತಿದ್ದವರು ಅನುವಂಶಿಕವಾಗಿ ಆಪಸ್ಮಾರ ದ ರೋಗವಿರುವ ಸಂಬಂಧಿಕರನ್ನು ಹೊಂದಿರುವುದು,
ಮದ್ಯ ವ್ಯಸನಿಗಳಲ್ಲಿ ತಲೆಗೆ ಪೆಟ್ಟು ಬಿದ್ದಿರುವುದು, ಅಥವಾ ಮೆದುಳಿಗೆ ಸೋಂಕು ತಗಲಿರುವುದು ಇಂತಹ ಪ್ರಸಂಗಗಳಲ್ಲಿ ಅವರಲ್ಲಿ
ಮೂರ್ಛೆ ರೋಗ ಸಂಭವಿಸಬಹುದು.
ಮದ್ಯಪಾನ ಮಾಡುವವರೆಲ್ಲ ಮೂರ್ಛೆ ರೋಗಕ್ಕೆ ತುತ್ತಾಗುತ್ತಾರೆ ಅನ್ನುವುದು ಸುಳ್ಳು. ಆದರೆ ದೀರ್ಘಕಾಲಿನ ಮದ್ಯ ವ್ಯಸನಿಗಳು,
ಮದ್ಯಪಾನ ಹಟಾತ್ತನೆ ನಿಲ್ಲಿಸಿದವರು, ಮೆದುಳಿಗೆ ಪೆಟ್ಟು ಅಥವಾ ಸೋಂಕು ತಗಲಿದ ಮದ್ಯಪಾನಿಗಳು ಇವರಲ್ಲಿ ಮೂರ್ಛೆ
ಉಂಟಾಗುವ ಸಂಭವ ಹೆಚ್ಚು.
ಮದ್ಯಪಾನ ಮತ್ತು ಮೂರ್ಛೆರೋಗ ಈ ಬಗ್ಗೆ ಸಂಶೋಧನೆಗಳು ತಿಳಿಸುವುದೇನೆಂದರೆ ಮದ್ಯಪಾನ ಮಾಡುವವರಲ್ಲಿ ವಿಟಮಿನ್ b1
ಕೊರತೆ, ಸಣ್ಣ ವಯಸ್ಸಿನಲ್ಲಿ ಜ್ವರ ಬಂದಾಗ ಮೂರ್ಚೆ ಹೊಂದಿರುವುದು ಹಾಗೆ ನಿದ್ರಾಹೀನತೆ ಕೂಡ ಹೆಚ್ಚು. ಈ
ಕಾರಣಗಳಿಂದಲೂ ಕೂಡ ಮೂರ್ಛೆರೋಗ ಸಂಭವಿಸಬಹುದು. ಒಮ್ಮೆ ಮೂರ್ಛೆಯ ಅವಧಿ ಉಂಟಾದಲ್ಲಿ ಮುಂಜಾಗ್ರತಾ
ಕ್ರಮಗಳನ್ನು ಕೈಗೊಂಡು ವೈದ್ಯಕೀಯ ಚಿಕಿತ್ಸೆ ಪಡೆದರೆ ಮತ್ತು ಕುಡಿತವನ್ನು ಹತೋಟಿಗೆ ತಂದರೆ ಸಮಸ್ಯೆ ಏನು ಬರುವುದಿಲ್ಲ.
ಆದರೆ ಅಪಸ್ಮಾರದ ಚಿಕಿತ್ಸೆಯನ್ನು ಪಡೆದು ಅದರೊಟ್ಟಿಗೆ ಕುಡಿತವನ್ನು ಮೊದಲಿನಂತೆ ಮುಂದುವರಿಸಿದರೆ ಈ ಕಾಯಿಲೆ
ಮರಣಾಂತಿಕವಾಗಬಹುದು.
ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದಾಗ ಅಥವಾ ಮಹಡಿ ಏರಿ ಪೇಂಟಿಂಗ್ ಮಾಡುತ್ತಿದ್ದಾಗ ಫಿಟ್ಸ್ ಬಂದು ಬಿದ್ದವರನ್ನು
ನೋಡಿದ್ದೇನೆ. ಹೆಚ್ಚಿನವರಿಗೆ ಕುಟುಂಬದಲ್ಲಿ ಆಗಲಿ ಅಥವಾ ವೈದ್ಯಕೀಯವಾಗಿ ಫಿಟ್ಸ್ ಬರಲು ಬೇರೆ ಕಾರಣಗಳಿಲ್ಲ.. ಕೇವಲ ಮದ್ಯ
ಪಾನದ ದುರುಪಯೋಗ ಮಾತ್ರ ಎದ್ದು ಕಾಣುತ್ತದೆ.
ಮದ್ಯ ವ್ಯಸನಿಗಳಲ್ಲಿ ಮದ್ಯಪಾನ ತ್ಯಜಿಸಿ ಆರರಿಂದ 48 ಗಂಟೆಗಳ ಒಳಗೆ ಮೂರ್ಛೆ ಅವಧಿ ಉಂಟಾಗಬಹುದು. ಆದ್ದರಿಂದ ಮದ್ಯ
ತ್ಯಜಿಸಿದಾಗ ವೈದ್ಯಕೀಯವಾಗಿ ಸಲಹೆ ಪಡೆದು ಡಿಟಾಕ್ಸಿಫಿಕೇಶನ್ ಎಂಬ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು. ಹಲವೊಮ್ಮೆ
ಮೂರ್ಛೆಯ ನಂತರ ವ್ಯಕ್ತಿ ಎದ್ದೇಳುವಾಗ ತಾನು ಎಲ್ಲಿದ್ದೇನೆ, ತನಗೇನಾಗಿದೆ ಗೊತ್ತಾಗದೆ, ಮೈ ಕೈ ಕಾಲುಗಳೆಲ್ಲ
ನಡುಗುತ್ತಿರುವುದು, ವಿಪರೀತ ಹೆದರಿಕೆ ಉಂಟಾಗುವುದು,ಕಿವಿಯಲ್ಲಿ ಯಾರೋ ಮಾತನಾಡಿದ ಹಾಗೆ, ಕಣ್ಣಿಗೆ ಹಾವು ,ಜಿರಳೆ, ಇಲಿ
ಮುಂತಾದ ಪ್ರಾಣಿಗಳು ಕಂಡ ಹಾಗೆ ಮಾಡುವುದು ,ಹೆದರುವುದು ಇದನ್ನು ನಡುಕ ಸನ್ನಿ ಎಂದು ಕರೆಯುತ್ತೇವೆ. ಇದು ಮೂರ್ಛೆಯ
ಅವಧಿ ಉಂಟಾಗದೆ ಕೂಡ ಸಂಭವಿಸಬಹುದು. ಇದು ಕೂಡ ಮೂರ್ಛೆಯಂತೆ ಕುಡಿತ ಬಿಟ್ಟ ಕೂಡಲೇ ಉಂಟಾಗುವ ಹಿಂತೆಗೆತದ
ಚಿಹ್ನೆ. ಮೂರ್ಚೆಯಾಗಲಿ ನಡುಕ ಸನ್ನಿ ಆಗಲಿ ಉಂಟಾದರೆ ಅದು ಮೆದುಳಿಗೆ ಪೆಟ್ಟು ಬೀಳುತ್ತಿದೆ ಎಂಬುದರ ಸಂಕೇತವಾಗಿದೆ.
ಇವೆರಡೂ ಕೂಡ ಕುಡಿತದ ಸಂಕಿರಣವಾದ ಹಿಂತೆಗೆತದ ಚಿಹ್ನೆಗಳಲ್ಲಿ ಒಂದು.ಮೆದುಳಿನಲ್ಲಿ ನರವಾಹಕಗಳು ಅಂದರೆ ಗಾಬ (gaba)
ಗ್ಲೂಟಮಿಕ್ ಆಸಿಡ್ (glutamate)ಈ ನರವಾಹಕಗಳಲ್ಲಿ ಏರುಪೇರು ಉಂಟಾಗಿ ಮೆದುಳಿನಲ್ಲಿ ಸಮಸ್ಯೆಗಳು ಉಂಟಾಗುತ್ತದೆ
ಎಂಬುದು ವಿಜ್ಞಾನಿಗಳ ಅಂಬೋಣ..ಪದೇ ಪದೇ ಮೂರ್ಛೆ ಪ್ರಸಂಗಗಳು ಕುಡಿತದಿಂದ ಉಂಟಾಗುತ್ತಿದ್ದು ಹಾಗೆಯೇ ವ್ಯಕ್ತಿಯು 50
ವರ್ಷಕ್ಕಿಂತ ಮೇಲೆ ಇದ್ದಲ್ಲಿ ಅಂತಹವರಲ್ಲಿ ಮರೆಗುಳಿತನ ಕೂಡ ಸಂಭವಿಸಬಹುದು.
ಆದ್ದರಿಂದ ಮದ್ಯ ಪಾನ ಮಾಡುವವರು ಮೂರ್ಛೆಯ ಪ್ರಸಂಗ ಉಂಟಾದಲ್ಲಿ ಮದ್ಯ ತ್ಯಜಿಸುವ ಬಗ್ಗೆ ಯೋಚಿಸುವುದು ಒಳ್ಳೆಯದು.
ಮದ್ಯ ಪಾನದ ಉಪಯೋಗ ಮತ್ತು ಆ ಸಂದರ್ಭದಲ್ಲಿ ಉಂಟಾಗುವ ಮೂರ್ಛೆ ರೋಗಕ್ಕೆ ಚಿಕಿತ್ಸೆಯ ಬಗ್ಗೆ ವೈದ್ಯರಲ್ಲಿ ಒಮ್ಮತವಿಲ್ಲ.
ಹಲವು ವೈದ್ಯರು ಮದ್ಯ ಪಾನ ತ್ಯಜಿಸಿ ಡಿಟಾಕ್ಸ ಚಿಕಿತ್ಸೆ ಪಡೆದರೆ ಸಾಕು ಅನ್ನುವುದು ಇದೆ. ಹಾಗೆಯೇ ಕೆಲವು ವೈದ್ಯರು ಮೂರ್ಛೆ
ರೋಗದ ಚಿಕಿತ್ಸೆ ಅಂದರೆ ಆಂಟಿ ಏಪಿಲಿಪ್ಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ. ಈ ಮಾತುಗಳು ಕನಿಷ್ಠ 3
ವರ್ಷಗಳು ತೆಗೆದುಕೊಳ್ಳಬೇಕು. ಮೂರು ವರ್ಷಗಳ ನಂತರ ಈಈಜಿ ಎಂಬ ಮೆದುಳಿನ ವಿದ್ಯುತ್ ವಾಹಕಗಳ ಮಾಪನ ಮಾಡಿ
ನಂತರ ಈ ಮಾತ್ರೆ ನಿಲ್ಲಿಸಲು ಅಥವಾ ಮುಂದುವರಿಸಲು ತಿಳಿಸುತ್ತಾರೆ. ಈ ಮಾತ್ರೆಗಳು ಇದ್ದಲ್ಲಿಯೂ ಕೂಡ ಕುಡಿತವನ್ನು
ಸಂಪೂರ್ಣವಾಗಿ ನಿಲ್ಲಿಸದಿದ್ದಲ್ಲಿ ಮತ್ತೊಮ್ಮೆ ಮೂರ್ಛೆರೋಗ ಉಂಟಾಗಬಹುದು. ಆದ್ದರಿಂದ ಮದ್ಯ ವ್ಯಸನಿಗಳು ಮೂರ್ಛೆ
ಉಂಟಾಗಿದ್ದಲ್ಲಿ ಕುಡಿತ ಬಿಡುವ ನಿಟ್ಟಿನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಹಾಗೆ ಈ ರೋಗಿಗಳು ನಿದ್ರಾಹೀನತೆ,
ಎತ್ತರದ ಮಹಡಿ, ಬೆಂಕಿ, ನೀರು ಮುಂತಾದ ಸ್ಥಳಗಳ ಬಗ್ಗೆ ಮುಂಜಾಗ್ರತಾ ಕ್ರಮವನ್ನು ವಹಿಸಬೇಕು. ಹಾಗೆಯೇ ವಾಹನಗಳನ್ನು
ಓಡಿಸದೇ ಇರುವುದು ಒಳ್ಳೆಯದು.