Select Page

ವಯೋ ನಿವೃತ್ತಿಯ ನಂತರ ಬಹಳಷ್ಟು ಜನ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಸರ್ಕಾರಿ ಅಧಿಕಾರಿಗಳು, ಟೀಚರ್ ಗಳು,
ಬ್ಯಾಂಕ್ ಗುಮಾಸ್ತರು ಹೀಗೆ ಎಲ್ಲರಿಗೂ ನಿವೃತ್ತಿಯ ವಯಸ್ಸು ಅನ್ನುವುದು ಮೊದಲೇ ನಿರ್ಧರಿತ. ಆದರೆ ಹೆಚ್ಚಿನವರು ಆ ದಿನಗಳ
ಬಗ್ಗೆ ಯೋಚಿಸದೇ ತಮ್ಮ ಕೆಲಸಗಳಲ್ಲಿ ತಲ್ಲಿನ ರಾಗಿರುತ್ತಾರೆ. ನಿವೃತ್ತರಾದ ಕೂಡಲೇ ಒಮ್ಮೆಲೇ ಒಂದು ರೀತಿಯ ಒತ್ತಡ ಇವರಲ್ಲಿ
ಪ್ರಾರಂಭ ಆಗುತ್ತದೆ. ಕೆಲವರಿಗೆ ಆತಂಕ ಇನ್ನು ಕೆಲವರಿಗೆ ಖಿನ್ನತೆ ಕಾಡಲು ಪ್ರಾರಂಭವಾಗುತ್ತದೆ. ನಿವೃತ್ತಿಯ ದಿನ ಪೂರ್ವ
ನಿಗದಿತವಾಗಿದ್ದರೂ ಕೂಡ ಇವರು ಅದು ಬರುತ್ತದೆ ಎಂದು ಅಂದುಕೊಳ್ಳಲೇ ಇಲ್ಲ ಎಂಬಂತೆ ಅವರು ಕೆಲಸ ಮಾಡುತ್ತಿರುತ್ತಾರೆ.
ಆದರೆ ನಿವೃತ್ತಿಯ ದಿನ ಬಂದ ಕೂಡಲೇ ಮನಸ್ಸಿಗೆ ಒಂದು ರೀತಿಯ ಶೂನ್ಯತೆ, ಒಂಟಿತನ ಮತ್ತು ನಿಷ್ಪ್ರಯೋಜಕತೆಯ
ಭಾವನೆಗಳು ಬರಲು ಪ್ರಾರಂಭವಾಗುತ್ತದೆ. ಈ ಕಾರಣದಿಂದಲೇ ನಿವೃತ್ತಿ ಹೊಂದುವವರು ಸರಿಸುಮಾರು ಎರಡು-ಮೂರು
ವರ್ಷಗಳ ಮುಂಚೆಯಿಂದಲೇ ನಿವೃತ್ತ ಜೀವನದ ಬಗ್ಗೆ ಯೋಚಿಸಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಈ ಸಂದರ್ಭದಲ್ಲಿ
ಮನೆಯವರ ಮತ್ತು ಪ್ರೀತಿ ಪಾತ್ರರ ಭಾವನಾತ್ಮಕ ಬೆಂಬಲ ಕೂಡ ಅಗತ್ಯ.
ಜನರೊಂದಿಗೆ ಬೆರೆತು, ಬಿಡುವಿಲ್ಲದ ದಿನಾಚರಿಯೊಂದಿಗೆ ಕೆಲಸ ಮಾಡುತ್ತಿದ್ದರು, ಉದಾತ್ತ ಉದ್ದೇಶಗಳನ್ನು ಇಟ್ಟುಕೊಂಡು ಕೆಲಸ
ಮಾಡುತ್ತಿದ್ದ ವ್ಯಕ್ತಿಗಳಿಗೆ ಆ ಕ್ರಿಯಾತ್ಮಕ ಜೀವನ ಹಠಾತ್ತನೆ ನಿಂತು ಹೋಗಿ ಮನೆಯಲ್ಲೇ ಇರುವಂತೆ ಆದಾಗ ಹಲವಾರು
ಸಮಸ್ಯೆಗಳು ಉಂಟಾಗುತ್ತವೆ.
ನಿವೃತ್ತಿ ಹೊಂದಿದ ವ್ಯಕ್ತಿಯಲ್ಲಿ ಬಹಳ ಬೇಗ ಬಳಲಿಕೆ ಪ್ರಾರಂಭವಾಗುವುದು, ಪ್ರೇರಣೆಯ ಕೊರತೆ, ನಿರಂತರವಾಗಿ ಮನಸ್ಸಿಗೆ
ಒಂದು ರೀತಿಯ ಬೇಸರ, ಸಣ್ಣಪುಟ್ಟ ವಿಷಯಗಳಿಗೆ ಹೆದರಿಕೆ, ಆತಂಕ ಇವುಗಳು ಖಿನ್ನತೆಯ ಲಕ್ಷಣಗಳಾಗಿರುತ್ತವೆ.
ಲವಲವಿಕೆಯಿಂದ ಇದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಸಪ್ಪೆಯಾಗಿ ಬಿಡುತ್ತಾರೆ. ಇದನ್ನು ಮನೆಯವರು ಗಮನಿಸಿದರೆ ಕೂಡ ಪ್ರಾಯಶಃ ಇದು
ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಂಡಿರುವುದರಿಂದ ಎಂದುಕೊಂಡು ಮನೆಯವರು ಸುಮ್ಮನಾಗುತ್ತಾರೆ. ಬರ ಬರುತ್ತಾ ಖಿನ್ನತೆ
ಜಾಸ್ತಿಯಾಗ ತೊಡಗುತ್ತದೆ. ನಿದ್ರಾ ಹೀನತೆ, ಪ್ರೀತಿ ಪಾತ್ರರೊಂದಿಗೆ ಮಾತನಾಡಲು ಹಿಂಜರಿಯುವುದು, ಒಬ್ಬರೇ
ಕುಳಿತುಕೊಳ್ಳಲು ಪ್ರಾರಂಭಿಸುವುದು, ಆತ್ಮಹತ್ಯೆ ಬಗ್ಗೆ ಯೋಚಿಸುವುದು ಮುಂತಾದವು ಪ್ರಾರಂಭವಾಗುತ್ತದೆ. ಕೆಲವರು ಮದ್ಯ
ಮಾದಕ ದ್ರವ್ಯ ವ್ಯಸನಕ್ಕೆ ಮಾರುಹೋಗುತ್ತಾರೆ. ಇತ್ತೀಚೆಗಂತೂ ಕೆಲವು ವಯೋ ವೃದ್ಧರು ಅತಿಯಾದ ಮೊಬೈಲ್ ಬಳಕೆ,
ಆನ್ಲೈನ್ ಜೂಜಾಟ ಮುಂತಾದವುಗಳಿಗೆ ತೊಡಗಿಸಿಕೊಂಡು ಖಿನ್ನತೆಯನ್ನು ಮರೆಯಲು ಹೋಗಿ ಅದು ಉಲ್ಬಣಗೊಳ್ಳುವ ಪರಿಸ್ಥಿತಿ
ಕೂಡ ನೋಡಿದ್ದೇನೆ.
ಹಿಂದೆ ಇದ್ದ ದಿನಚರಿ ಕಳೆದುಕೊಳ್ಳುವುದು, ಜನಸಾಮಾನ್ಯರ ಸಂಪರ್ಕ ಕಳೆದುಕೊಳ್ಳುವುದು, ತಾವು ಒಬ್ಬ ಆಫೀಸರ್ ಅಥವಾ
ಟೀಚರ್ ಎಂಬ ಗುರುತು ಕಳೆದುಕೊಳ್ಳುವುದು, ಆರ್ಥಿಕ ಅಸ್ಥಿರತೆ, ಕೆಲಸದಲ್ಲಿ ಇರುವಾಗಲೇ ಬಳಲುತ್ತಿದ್ದ ದೀರ್ಘಕಾಲಿನ
ಆರೋಗ್ಯದ ತೊಂದರೆಗಳು, ಒಂಟಿತನದ ಭಾವನೆಗಳು ಇವು ನಿವೃತ್ತಿಯ ನಂತರದ ಖಿನ್ನತೆಗೆ ಪ್ರಮುಖ ಕಾರಣಗಳಾಗಿವೆ.
ಹಲವಾರು ಸಂದರ್ಭಗಳಲ್ಲಿ ಸರಿಯಾಗಿ ಯೋಚಿಸಿ ನೋಡಿದರೆ ಈ ವಯೋ ನಿವೃತ್ತಿ ಮನಸ್ಸಿಗೆ ಆರಾಮವನ್ನು ಕೊಡಬೇಕು ಮತ್ತು
ವರ್ಷಾನುಗಟ್ಟಲೆ ಮಾಡಿದ ಕೆಲಸದ ಬಗ್ಗೆ ತೃಪ್ತಿ ತರಬೇಕು. ಇದು ಬೇಕಾದಾಗ ಕೆಲಸ ಮಾಡುವ ಬೇಕಾದಾಗ ಆರಾಮಾಗಿ
ಸಮಯ ಕಳೆಯುವ ಸ್ವಾತಂತ್ರ್ಯವನ್ನು ತಂದುಕೊಡುತ್ತದೆ. ಆದರೆ ಹಲವಾರು ಜನ ಇದನ್ನು ಸಮಸ್ಯೆಯ ಘಟ್ಟವನ್ನಾಗಿ
ಮಾಡಿಕೊಳ್ಳುತ್ತಾರೆ. ಹಳೆಯ ಜೀವನದ ಸುಖವನ್ನು, ಆಗ ಸಿಕ್ಕಿದ್ದ ಅಧಿಕಾರವನ್ನು ನೆನೆದುಕೊಂಡು ಬಹಳ ದೊಡ್ಡ ನಷ್ಟವಾಗಿದೆ

ಎಂದು ದುಃಖಿಸುತ್ತಾರೆ. ಮುಂದೆ ದಿನ ದೂಡುವುದು ಹೇಗೆ ಎಂದು ಯೋಚಿಸಲಾರಂಭಿಸುತ್ತಾರೆ. ಬಹಳಷ್ಟು ಜನರು ಈ ಹಿಂದೆ
ಕೇವಲ ತಮ್ಮ ಕಚೇರಿಯ ಕೆಲಸಗಳಲ್ಲಿ ತಲ್ಲಿನ ರಾಗಿ ಮನೆಯ ಸಂಬಂಧಗಳು ,ಮನೆಯ ಸಮಸ್ಯೆಗಳ ಬಗ್ಗೆ ಯೋಚಿಸಿರುವುದಿಲ್ಲ.
ಯಾವುದೇ ಹವ್ಯಾಸಗಳು ಅವರಿಗೆ ಇರುವುದಿಲ್ಲ.ಈಗ ಒಮ್ಮೆಲೇ ಮನೆಯಲ್ಲಿ ಕುಳಿತಾಗ ಇವೆಲ್ಲ ಅವರ ಮನಸ್ಸಿಗೆ ಕಿರಿಕಿರಿ ಉಂಟು
ಮಾಡುತ್ತದೆ. ಹಲವೊಮ್ಮೆ ಮನೆಯವರಿಗೂ ಕೂಡ ಇದು ಮುಜುಗರ ಉಂಟುಮಾಡುವ ಅನುಭವವೇ ಆಗಿದೆ. ಮನೆಯಲ್ಲಿ ಮಕ್ಕಳ
ಮೊಮ್ಮಕ್ಕಳ ಬಗ್ಗೆ ಸಣ್ಣ ಸಣ್ಣ ವಿಷಯಗಳನ್ನು ಇಟ್ಟುಕೊಂಡು ಕೊರಗಲು ಪ್ರಾರಂಭಿಸುತ್ತಾರೆ. ಇದು ಅವರಿಗೂ ಸಮಸ್ಯೆ ಉಂಟು
ಮಾಡುತ್ತದೆ.
ಈಗ ಮನುಷ್ಯನು ದೀರ್ಘಾಯುಷ್ಯ ಉಳ್ಳವನು ಆಗಿದ್ದಾನೆ. ನಿವೃತ್ತಿ 60 ರಿಂದ 65 ರವರ ಒಳಗೆ ಆದರೆ ಬಹಳಷ್ಟು ಜನ ಒಳ್ಳೆಯ
ಆರೋಗ್ಯವಿದ್ದರೆ ಇನ್ನು ಕೆಲಸ ಮಾಡುವ ಸ್ಥಿತಿಯಲ್ಲಿ ಇರುತ್ತಾರೆ. ಆದರೆ ಅವರಿಗೆ ಅವರ ಕಚೇರಿ ಕೆಲಸ ಬಿಟ್ಟು ಬೇರೆ ಏನು
ಗೊತ್ತಿರುವುದಿಲ್ಲ. ಇವರಿಗೆ ಬೇರೆ ಹವ್ಯಾಸಗಳು ಇರುವುದಿಲ್ಲ. ಇದರಿಂದಾಗಿ ಸಮಸ್ಯೆಗಳಾಗುತ್ತಾ ಇದೆ ಎಂದು ನನ್ನ ಅನಿಸಿಕೆ .
ನಿವೃತ್ತಿಯ ಅಂಚಿನಲ್ಲಿರುವ ಪ್ರತಿಯೊಬ್ಬ ಅಧಿಕಾರಿಗೆ ಅಥವಾ ಗುಮಾಸ್ತರಿಗೆ ನಿವೃತ್ತಿ ಅಂದರೆ ಏನು? ನಿವೃತ್ತಿಯ ನಂತರ
ಜೀವನದ ಸವಾಲುಗಳೇನು? ನಿವೃತ್ತಿಯ ನಂತರ ಕೂಡ ಅವರಿಗೆ ಏಕೆ ಜನ ಸಂಪರ್ಕ ಬೇಕು? ಮುಂತಾದ ವಿಷಯಗಳು ತಿಳಿಸಿ
ಕೊಡುವ ಪ್ರಯತ್ನ ನಡೆಯಬೇಕಾಗಿದೆ. ನಿವೃತ್ತಿಯ ನಂತರ ಸಕಾರಾತ್ಮಕ ಜೀವನ ನಡೆಸುತ್ತಿರುವ ವಯೋ ವೃದ್ಧರು ನಮ್ಮ ನಿಮ್ಮ
ನಡುವೆ ಬಹಳಷ್ಟು ಜನ ಇದ್ದಾರೆ. ಅವರು ಈ ಬಗ್ಗೆ ಮಾಹಿತಿ ನೀಡಿದರೆ ಬಹಳ ಒಳ್ಳೆಯದು. ಹಾಗೆ ಯೇ ನಿವೃತ್ತಿಯ ನಂತರ
ಸಾಮಾಜಿಕ ಬೆಂಬಲದ ಅಗತ್ಯತೆ, ಸಾಮಾಜಿಕ ಜೀವನದಲ್ಲಿ ಸಕ್ರಿಯರಾಗಿರುವುದು ಇದನ್ನು ಮಾಡಿದಲ್ಲಿ ಮನಸ್ಸಿನ ಖಿನ್ನತೆ
ಕಡಿಮೆಯಾಗುತ್ತದೆ ಎಂಬ ವಿಷಯದ ಬಗ್ಗೆ ಮಾಹಿತಿಯ ಕೊರತೆ ಬಹಳಷ್ಟು ಜನರಿಗೆ ಇದೆ.ನಿವೃತ್ತಿಯ ಮುಂಚೆ ಈ ಬಗ್ಗೆ
ಯೋಜನೆಗಳನ್ನು ಹಾಕಿಕೊಂಡರೆ ಬಹಳ ಒಳ್ಳೆಯದು. ಹಲವೊಮ್ಮೆ ಖಿನ್ನತೆ ಜಾಸ್ತಿಯಾದಾಗ ವೃತ್ತಿಪರರ ಮಾರ್ಗದರ್ಶನ
ಬೇಕಾಗುತ್ತದೆ. ಮನಶಾಸ್ತ್ರಜ್ಞರು ಅಥವಾ ಮನೋಸಾಮಾಜಿಕ ಆರೋಗ್ಯ ತಜ್ಞರು ಆಪ್ತ ಸಲಹೆಯನ್ನು ಈ ಬಗ್ಗೆ ನೀಡುತ್ತಾರೆ.
ಅವರ ಸಹಾಯ ಬೇಕಾಗಬಹುದು. ಹಾಗೆ ನಿದ್ರಾಹೀನತೆ, ತಪ್ಪಿತಸ್ಥ ಮನೋಭಾವ, ಜನರಿಂದ ಪ್ರತ್ಯೇಕರಾಗಿರ ಇರುವ ಮನೋ
ಸ್ಥಿತಿ ಮುಂತಾದವುಗಳು ಉಂಟಾದಾಗ ಮನೋವೈದ್ಯರು ಚಿಕಿತ್ಸೆ ನೀಡಬೇಕಾಗುತ್ತದೆ. ಕೆಲವೊಮ್ಮೆ ಆಪ್ತ ಸಲಹೆ ಮಾತ್ರ
ಸಾಕಾಗಬಹುದು ಆದರೆ ಇನ್ನೂ ಕೆಲವೊಮ್ಮೆ ಮಾತ್ರೆ ಚಿಕಿತ್ಸೆ ಕೂಡ ಬೇಕಾಗಬಹುದು.
ಒಟ್ಟಿನಲ್ಲಿ ವಯೋ ನಿವೃತ್ತಿ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದು. ಇದನ್ನು ನಿಭಾಯಿಸಲು ಮೊದಲೇ ಯೋಜನೆಗಳನ್ನು ಹಾಕಿ
ಮುಂದುವರೆಯುವುದು ಒಳ್ಳೆಯದು. ಈ ಬಗ್ಗೆ ಯೋಚನೆ ಮಾಡಿ ಪ್ರೀತಿ ಪಾತ್ರರೊಂದಿಗೆ ಚರ್ಚಿಸಿ ಅಗತ್ಯ ಬಿದ್ದರೆ ಪ್ರತಿಪರರ
ಸಲಹೆಯನ್ನು ಪಡೆದು ಮುಂದೆ ಹೋಗುವುದು ಒಳ್ಳೆಯದು.