ಖಿನ್ನತೆ ಇರುವ ರೋಗಿಯ ಯೋಗಕ್ಷೇಮ ನೋಡಿಕೊಳ್ಳಲು ಮನೆಯವರ ಮತ್ತು ಪ್ರೀತಿ ಪಾತ್ರರ ಜವಾಬ್ದಾರಿಗಳು
ನಿಮ್ಮ ಪ್ರೀತಿ ಪಾತ್ರರು ಯಾರಾದರೂ ಖಿನ್ನತೆಯಿಂದ ಬಳಲುತ್ತಿದ್ದರೆ ಅವರೊಂದಿಗೆ ಹೇಗೆ ವರ್ತಿಸುವುದು ಎಂದು
ಗೊತ್ತಾಗುವುದಿಲ್ಲ. ಅದೂ ಒಂದು ದೊಡ್ಡ ಸವಾಲೇ ಸರಿ. ಖಿನ್ನತೆಯಲ್ಲಿ ಅವರು ತಮ್ಮ ಬಗ್ಗೆ ತಾವೇ ನಕಾರಾತ್ಮಕ
ಯೋಚನೆಗಳನ್ನು ಮಾಡುತ್ತಾರೆ ಹಾಗೆಯೆ ನಿನ್ನೆಯ ಬಗ್ಗೆ ,ನಾಳೆಯ ಬಗ್ಗೆ ಕೂಡ ನಕಾರಾತ್ಮಕವಾಗಿ
ಮಾತನಾಡುತ್ತಿರುತ್ತಾರೆ.ನೀವು ಅವರೊಂದಿಗೆ ಮಾತನಾಡುವಾಗ ಜಾಗೃತೆವಹಿಸಿ. ಅವರ ಸಮಸ್ಯೆಗಳನ್ನು ಮನಸ್ಸು ಬಿಚ್ಚಿ
ಆಲಿಸುವುದು ಅತಿ ಅಗತ್ಯ. ನಿಮ್ಮ ಮುಕ್ತ ಸಂಭಾಷಣೆಯು ಅವರಿಗೆ ಚೇತೋಹಾರಿಯಾಗಬಲ್ಲದು. ಖಿನ್ನತೆ ಬರುವ ಮುಂಚೆ ನಿಮ್ಮ
ಅವರ ಸಂಬಂಧಗಳ ಬಗ್ಗೆ ಪೂರ್ವಾಗ್ರಹ ಪೀಡಿತರಾಗದೆ ಅವರು ಹೇಳಿದ್ದನ್ನು ಕೇಳಿ. ಅವರು ತೋಡಿಕೊಂಡ ನೋವುಗಳಿಗೆ
ತಕ್ಷಣವೇ ಏನೋ ಒಂದು ಹಾರಿಕೆಯ ಉತ್ತರದ ಪರಿಹಾರವನ್ನು ಹೇಳುವುದು ಅಥವಾ ಅವರ ಭಾವನೆಗಳು ಸರಿ ತೋರದಿದ್ದರೆ
ಅದನ್ನು ಆ ಕೂಡಲೇ ತಿರಸ್ಕರಿಸುವುದು ಆ ಬಗ್ಗೆ ಋಣಾತ್ಮಕವಾಗಿ ಮಾತನಾಡುವುದು ಮಾಡಬೇಡಿ. ಸರಳವಾಗಿ
ಅರ್ಥವಾಗುವಂತೆ “ನಾನು ನಿನಗಾಗಿ ಇದ್ದೇನೆ “ “ನೀನು ಒಂಟಿಯಲ್ಲ “ಎಂಬ ಮಾತುಗಳು ಅವರಿಗೆ ಬಹಳಷ್ಟು ಸಮಾಧಾನವನ್ನು
ನೀಡಬಹುದು. ಆದರೆ ರೋಗಿಯು ಇಷ್ಟಪಡದಿದ್ದರೆ ಸಲಹೆಗಳನ್ನು ನೀಡಬೇಡಿ. ರೋಗಿಯು ಏನಾದರೂ ವಿಷಯಗಳು ಹೇಳಿದಾಗ
ಆತ ಭಾವಿಸಿದಷ್ಟು ಸಮಸ್ಯೆಯ ಗಂಭೀರತೆ ಇಲ್ಲ ಅಂತ ನಿಮಗೆ ಅನಿಸಿದರೂ ಒಮ್ಮೆಲೆ ಆತನ ಭಾವನೆಗಳನ್ನು ತಳ್ಳಿ ಹಾಕಬೇಡಿ.
ಅವರಿಗೆ ವೃತ್ತಿಪರ ಚಿಕಿತ್ಸೆಯನ್ನು ಪಡೆಯಲು ಪ್ರೋತ್ಸಾಹಿಸಿ. ಮನೋವೈದ್ಯರು ಅಥವಾ ಕ್ಲಿನಿಕಲ್ ಮನೋಶಾಸ್ತ್ರಜ್ಞರು ಖಿನ್ನತೆಗೆ
ಚಿಕಿತ್ಸೆ ನೀಡಬಲ್ಲರು ಎಂಬುದನ್ನು ತಿಳಿಸಿ. ಅವರಿಗೆ ಇಷ್ಟವಿದ್ದಲ್ಲಿ ನೀವು ಕೂಡ ಅವರೊಂದಿಗೆ ಹೋಗಿ ವೈದ್ಯರನ್ನು ಭೇಟಿ ಮಾಡಿ
ಯಾಕೆಂದರೆ ಖಿನ್ನತೆಯ ಕಾರಣದಿಂದ ವೈದ್ಯರಲ್ಲಿ ಹೋಗುವುದೋ ಬೇಡವೋ ಎಂದು ಇವರು ನಿರ್ಧರಿಸುವುದು ಕೂಡ
ಕಷ್ಟವಾಗಬಹುದು. ಮನೋವೈದ್ಯರು ಶಿಫಾರಸು ಮಾಡಿದ ಔಷಧಿ ಚಿಕಿತ್ಸೆ, ಮಾತು ಚಿಕಿತ್ಸೆ ಅಥವಾ ಜೀವನಶೈಲಿಯ
ಬದಲಾವಣೆಗಳು ಇದನ್ನು ಸರಿಯಾಗಿ ನಿರ್ವಹಿಸಲು ಅವರಿಗೆ ಪ್ರೋತ್ಸಾಹಿಸಿ.
ಖಿನ್ನತೆಯ ಬಗ್ಗೆ ನೀವೇ ಓದಿ ತಿಳಿದುಕೊಳ್ಳಿ. ಖಿನ್ನತೆ ಎಂಬುದು ವೈದ್ಯಕೀಯ ಸ್ಥಿತಿ ಹೊರತು ವೈಯಕ್ತಿಕ ದೌರ್ಬಲ್ಯ ಅಲ್ಲ ಎಂದು
ಅರ್ಥ ಮಾಡಿಕೊಳ್ಳಿ. ಖಿನ್ನತೆಯ ಬಗ್ಗೆ ಓದುವುದು ನಿಮಗೆ ರೋಗಿಯೊಂದಿಗೆ ಇನ್ನೂ ಹೆಚ್ಚು ಅನುಭೂತಿ ಮತ್ತು
ಸಹಾನುಭೂತಿಯಿಂದ ಹಾಗೂ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಸಹಾಯ ಮಾಡುತ್ತದೆ. ರೋಗಿಯಲ್ಲಿ ಉಂಟಾಗುವ
ರೋಗಲಕ್ಷಣಗಳ ಬದಲಾವಣೆಗಳನ್ನು ಗುರುತಿಸಲು ಕಲಿಯಿರಿ. ನಿಶಕ್ತಿ, ಆಸಕ್ತಿಯ ಕೊರತೆ ,ನಿದ್ರೆ ಅಥವಾ ಹಸಿವಿನ
ಬದಲಾವಣೆಗಳು ಮತ್ತು ಹತಾಶತೆಯ ಭಾವನೆಗಳು ಖಿನ್ನತೆಯಲ್ಲಿ ಸಾಮಾನ್ಯವಾಗಿ ಉಂಟಾಗುವ ಗುಣಲಕ್ಷಣಗಳು ಎಂಬುದನ್ನು
ತಿಳಿಯಿರಿ. ನಾನು ಮನೋವೈದ್ಯನಾಗಿ ಗಮನಿಸಿದ್ದೇನೆಂದರೆ ಮೇಲೆ ತಿಳಿಸಿದ ಈ ಗುಣಲಕ್ಷಣಗಳನ್ನು ಪ್ರೀತಿಪಾತ್ರರು ಸರಿಯಾಗಿ
ಗಮನಿಸದೆ ರೋಗಿಯು ಬೇಕಂತಲೇ ಮಾಡುತ್ತಿದ್ದಾರೆ, ಸೋಮಾರಿ ಮುಂತಾಗಿ ಅವಹೇಳನೆ ಮಾಡುವುದು ಕಂಡಿದ್ದೇನೆ. ಇದು
ರೋಗಿಗೆ ಮತ್ತಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು. ಖಿನ್ನತೆಯಲ್ಲಿ ದೈನಂದಿನ ಕಾರ್ಯಗಳನ್ನು ಮಾಡಲು ಕೂಡ
ರೋಗಿಯು ಹಿಂಜರಿಯುತ್ತಿರಬಹುದು. ಸರಳವಾದ ಕೆಲಸಗಳು ಕೂಡ ಕಷ್ಟಕರ ಎಂದು ಅವರಿಗೆ ಅನಿಸಬಹುದು. ಇಂತಹ
ಸಂದರ್ಭದಲ್ಲಿ ಮನೆಗೆಲಸ, ಅಡುಗೆ , ದೈನಂದಿನ ಸ್ವ ಆರೈಕೆಯ ಕೆಲಸಗಳು ಅಂದರೆ ಸ್ನಾನ ಮಾಡುವುದು ಊಟ ಮಾಡುವುದು
ಶೌಚಕ್ಕೆ ಹೋಗುವುದು ಮುಂತಾದ ವಿಷಯಗಳಲ್ಲಿ ಅವರು ಆಸಕ್ತಿ ತೋರಿಸಲಿಕ್ಕಿಲ್ಲ.ನಿಮಗೆ ಸಾಧ್ಯವಿದ್ದಷ್ಟು ನೀವು ಅವರಿಗೆ
ಸಹಾಯ ಮಾಡಿ. ರೋಗಿಗಳು ತಮ್ಮ ಆರೈಕೆ ಯತ್ತಾ ಗಮನಹರಿಸುವಂತೆ ಪ್ರೋತ್ಸಾಹಿಸಿ. ಪ್ರತಿದಿನ ನಡಿಗೆ ,ನೆಚ್ಚಿನ ಹವ್ಯಾಸ,
ಮನಸ್ಸಿಗೆ ಮುದ ನೀಡುವ ವ್ಯಾಯಾಮಗಳು ಮುಂತಾದ ಚಟುವಟಿಕೆಗಳನ್ನು ಮಾಡಲು ಪ್ರೋತ್ಸಾಹಿಸಿ ಆದರೆ ಒತ್ತಾಯಿಸಬೇಡಿ.
ಅವರು ಹೀಗೇಕೆ ಮಾಡುತ್ತಾರೆ ಎಂಬುದು ನೀವು ಮೊದಲು ಅರ್ಥಮಾಡಿಕೊಳ್ಳಬೇಕು ಮತ್ತು ನೀವು ತಾಳ್ಮೆಯಿಂದ ಇರಬೇಕು.
ಚೇತರಿಕೆ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಚೇತರಿಕೆ ಪ್ರಾರಂಭವಾದ ಮೇಲು ಕೆಲವು ದಿನಗಳಲ್ಲಿ ಹೆಚ್ಚು ಕಡಿಮೆ
ವ್ಯತ್ಯಾಸಗಳನ್ನು ತೋರಿಸಬಹುದು. ಇಂತಿಷ್ಟು ದಿನಗಳಲ್ಲಿ ಇಂತಿಷ್ಟು ಪ್ರಗತಿ ಸಾಧಿಸಬೇಕು ಎಂದು ಅವರ ಮೇಲೆ ಒತ್ತಾಯ
ತರುವುದು ವೈಜ್ಞಾನಿಕವಲ್ಲ ತಿಳಿದಿರಲಿ. ಮಾತ್ರೆ ಚಿಕಿತ್ಸೆ, ಮಾತು ಚಿಕಿತ್ಸೆ ಅಥವಾ ಜೀವನಶೈಲಿಯ ಬದಲಾವಣೆ ಶುರು ಮಾಡಿ
ಸಾಧಾರಣ ಎರಡು ವಾರದಿಂದ ಒಂದು ತಿಂಗಳು ಬದಲಾವಣೆ ಬರಲಿಕ್ಕಿಲ್ಲ. ಇದನ್ನು ಗಮನಿಸಿ. ಇದಕ್ಕಿಂತ ಹೆಚ್ಚು ಸಮಯ
ತಗಲುತ್ತಿದ್ದರೆ ಮನೋವೈದ್ಯರನ್ನು ಪುನಹ ಸಂಪರ್ಕಿಸಿ. ಚಿಕಿತ್ಸೆಯಲ್ಲಿ ಬದಲಾವಣೆಗಳನ್ನು ಅವರು ಮಾಡಬಹುದು.
ಹಾಗೆಯೇ ನಿಯಮಿತ ದೈಹಿಕ ಚಟುವಟಿಕೆಗಳು ,ಆರೋಗ್ಯಕರ ಸಮತೋಲಿತ ಪೌಷ್ಟಿಕಾಂಶ ಭರಿತ ಆಹಾರ ಮನೋ ಸ್ಥಿತಿಯ
ಮೇಲೆ ಪರಿಣಾಮ ಬೀರುತ್ತದೆ. ಈ ವಿಷಯಗಳನ್ನು ರೋಗಿಯೊಂದಿಗೆ ಆಗಾಗ ಚರ್ಚಿಸಿ.ನಿಯಮಿತ ನಿದ್ರೆ ಖಿನ್ನತೆಯನ್ನು ಕಡಿಮೆ
ಮಾಡುತ್ತದೆ. ಆದ್ದರಿಂದ ನಿದ್ರೆ ನೈರ್ಮಲ್ಯದ ಅತ್ತ ಗಮನಹರಿಸಲು ಪ್ರೋತ್ಸಾಹಿಸಿ.ರೋಗಿಯಲ್ಲಿ ಉಂಟಾಗುತ್ತಿರುವ
ಬದಲಾವಣೆಗಳನ್ನು ಗಮನಿಸಿ. ತನಗೆ ತಾನು ಹಾನಿ ಮಾಡಿಕೊಳ್ಳುವುದು ಅಥವಾ ಆತ್ಮಹತ್ಯೆಯ ಬಗ್ಗೆ ಮಾತನಾಡುವುದು
ಮಾಡುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಅವರನ್ನು ಒಬ್ಬರೇ ಇರಲು ಬಿಡಬೇಡಿ. ಅಗತ್ಯ ಬಿದ್ದರೆ ತುರ್ತು ಚಿಕಿತ್ಸೆಗೆ
ವೈದ್ಯರಲ್ಲಿ ಕರೆದುಕೊಂಡು ಹೋಗಿ ಹಾಗೆಯೇ ಅವರಿಗೆ ತುರ್ತು ಸಮಯದಲ್ಲಿ ಸಹಾಯ ಮಾಡುವ ಟೆಲಿಫೋನ್
ಸಹಾಯವಾಣಿಯ ಬಗ್ಗೆ ಕೂಡ ಮಾಹಿತಿ ನೀಡಿ. ಖಿನ್ನತೆಯ ತೀವ್ರ ಬಗ್ಗೆಯ ಚಿಹ್ನೆಗಳು ಅಂದರೆ ತಾನು ತಪ್ಪು ಮಾಡಿದ್ದೇನೆ ಎಂಬ
ಭ್ರಮೆ, ತಾನೊಬ್ಬ ಪಾಪಿ, ತನಗೆ ದೊಡ್ಡ ಶಿಕ್ಷೆ ಆಗುತ್ತದೆ, ತನಗೆ ಗುಣಪಡಿಸಲಾಗದ ಕಾಯಿಲೆಯೊಂದು ಬಂದಿದೆ ಮುಂತಾದ ಬಗ್ಗೆ
ಮಾತನಾಡುತ್ತಿದ್ದರೆ ಆ ಕೂಡಲೇ ಮನೋವೈದ್ಯಕೀಯ ಚಿಕಿತ್ಸೆಯ ಅಗತ್ಯತೆ ಇರುತ್ತದೆ. ಕೆಲವೊಮ್ಮೆ ಖಿನ್ನತೆ ತೀವ್ರಗೊಂಡಾಗ
ರೋಗಿ ಊಟ ತಿಂಡಿ ಮಾಡುವುದನ್ನು ನಿಲ್ಲಿಸಬಹುದು. ಇಂತಹ ಸಂದರ್ಭದಲ್ಲಿ ಕೂಡ ವೈದ್ಯಕೀಯ ಚಿಕಿತ್ಸೆ ಅತಿ
ಅಗತ್ಯವಾಗಿರುತ್ತದೆ.
ರೋಗಿಯ ಅಗತ್ಯಗಳ ಬಗ್ಗೆ ಗಮನಿಸುತ್ತಾ ಹಲವು ಆರೈಕೆದಾರರು ಒತ್ತಡದಿಂದ ಬರಿದಾಗುವುದನ್ನು ನೋಡಿದ್ದೇನೆ.
ಆರೈಕೆದಾರರು ಕೂಡ ತಮ್ಮ ಆರೋಗ್ಯದತ್ತ ಗಮನ ನೀಡಬೇಕು. ಹಲವರು ತಮ್ಮ ಅಗತ್ಯತೆಗಳನ್ನು ನಿರ್ಲಕ್ಷಿಸಿ, ಬೇರೆಯವರಿಗೆ
ಸಹಾಯ ಮಾಡಲು ಹೋಗಿ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಏರುಪೇರು ಕಂಡುಕೊಳ್ಳುತ್ತಾರೆ. ಆದ್ದರಿಂದ
ಖಿನ್ನತೆ ರೋಗದ ಆರೈಕೆ ಮಾಡುವಾಗ ಒತ್ತಡ ಉಂಟಾದಲ್ಲಿ ಮಿತ್ರರುಗಳ ಪ್ರೀತಿ ಪಾತ್ರರ ಬೆಂಬಲವನ್ನು ಪಡೆಯಲು
ಮರೆಯಬೇಡಿ. ಒಬ್ಬರೇ ಎಲ್ಲವನ್ನು ಮಾಡುತ್ತೇನೆಂದು ಹೋಗಬೇಡಿ.