ಋತುಮಾನದ ಮಾನಸಿಕ ಅಸ್ವಸ್ಥತೆ(Seasonal Affective Disorder)
ಋತುಮಾನದ ಮಾನಸಿಕ ಅಸ್ವಸ್ಥತೆಯು ಹೆಚ್ಚಾಗಿ ಚಳಿಗಾಲದಲ್ಲಿ ಪ್ರಾರಂಭವಾಗುವ ಒಂದು ಬಗೆಯ ಖಿನ್ನತೆ. ಕೆಲವು
ವ್ಯಕ್ತಿಗಳಲ್ಲಿ ಚಳಿಗಾಲದ ಅವಧಿಯಲ್ಲಿ ವಿಪರೀತ ಆತಂಕ ಖಿನ್ನತೆ ಪ್ರಕಟಗೊಳ್ಳುತ್ತದೆ. ಚಳಿಗಾಲದಲ್ಲಿ ಇದು ಹೆಚ್ಚು ಕಂಡು ಬಂದರು
ಕೆಲವು ವ್ಯಕ್ತಿಗಳಲ್ಲಿ ವಸಂತ ಋತು ಮತ್ತು ಬೇಸಿಗೆಕಾಲದಲ್ಲೂ ಮಾತ್ರ ಪ್ರಕಟಗೊಳ್ಳಬಹುದು. ಹೀಗೆ ಯಾವುದಾದರೂ ಒಂದು
ಋತುವಿನಲ್ಲಿ ಪ್ರತಿವರ್ಷ ಖಿನ್ನತೆಯ ಅವಧಿ ಉಂಟಾದರೆ ಅದನ್ನು ಋತುಮಾನದ ಮಾನಸಿಕ ಅಸ್ವಸ್ಥತೆ ಎಂದು ಕರೆಯುತ್ತಾರೆ.
ಅಮೆರಿಕಾದ ಮನಶಾಸ್ತ್ರಜ್ಞ ನಾರ್ಮನ್ ರೋಸಿನ್ಥಾಲ್ ಎನ್ನುವವರು 1984 ಇಸವಿಯಲ್ಲಿ ಇದನ್ನು ಪ್ರಥಮ ಬಾರಿಗೆ ಬಣ್ಣಿಸಿದರು.
ಋತುಮಾನದ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಖಿನ್ನತೆಯ ಲಕ್ಷಣಗಳನ್ನು ಹೋಲುತ್ತವೆ. ನಿರಂತರವಾಗಿ ಮನಸ್ಸಿಗೆ ಒಂದು
ರೀತಿಯ ಬೇಸರ, ಮನಸ್ಸಿಗೆ ಕಿರಿಕಿರಿ ,ಹತಾಶೆ ,ಅಪರಾಧ ಮನೋಭಾವ, ತಾನು ನಿಷ್ಪ್ರಯೋಜಕ ಎಂಬ ಭಾವನೆ, ಒಂದು
ರೀತಿಯ ಆಲಸ್ಯ, ನಿದ್ರಾಹೀನತೆ, ಬೆಳಿಗ್ಗೆ ಎದ್ದೇಳಲು ತೊಂದರೆ, ಕಾರ್ಬೋಹೈಡ್ರೇಟ್ ಗಳನ್ನು ಹೆಚ್ಚು ತಿನ್ನಬೇಕು ಎನ್ನುವ ಹಂಬಲ,
ತೂಕ ಹೆಚ್ಚಾಗುವುದು, ಏಕಾಗ್ರತೆಯ ಕೊರತೆ, ಕಾಮಾಸಕ್ತಿ ಕಡಿಮೆಯಾಗುವುದು ಮುಂತಾದ ಖಿನ್ನತೆಯ ಲಕ್ಷಣಗಳು ಕಂಡು
ಬರುತ್ತದೆ. ವಸಂತ ಋತು ಮತ್ತು ಬೇಸಿಗೆ ಕಾಲದಲ್ಲಿ ಉಂಟಾಗುವ ಖಿನ್ನತೆಯಲ್ಲಿ ನಿದ್ರಾಹೀನತೆ ,ಹಸಿವಿನ ಕೊರತೆ, ತೂಕದ
ನಷ್ಟ, ಒಂದು ರೀತಿಯ ಆತಂಕ ಕಿರಿಕಿರಿ ಇರುತ್ತದೆ.
ಬೈಪೋಲರ್ ಅಸ್ವಸ್ಥತೆ ಇರುವ ವ್ಯಕ್ತಿಗಳು ಹೆಚ್ಚಾಗಿ ಈ ರೀತಿಯ ಋತುಮಾನದ ಅಸ್ವಸ್ಥತೆಗಳನ್ನು ಹೊಂದಿರುತ್ತಾರೆ ಎಂದು ಕೂಡ
ಗಮನಿಸಲಾಗಿದೆ. ಉನ್ಮಾದ ಅಥವಾ ಮೇನಿಯಾ ಬೇಸಿಗೆ ಕಾಲದಲ್ಲಿ ಉಂಟಾಗಿ ಶರತ್ ಕಾಲ ಮತ್ತು ಚಳಿಗಾಲದಲ್ಲಿ ಖಿನ್ನತೆ
ಉಂಟಾಗುತ್ತದೆ ಎಂದು ಕೂಡ ಗಮನಿಸಲಾಗಿದೆ. (ಈ ಬೈಪೋಲರ್ ಅಸ್ವಸ್ತತೆಯ ಬಗ್ಗೆ ಈಗಾಗಲೇ ಇದೆ ಅಂಕಣದಲ್ಲಿ
ಚರ್ಚಿಸಲಾಗಿದೆ)
ಋತುಮಾನದ ಮಾನಸಿಕ ಅಸ್ವಸ್ತತೆಗೆ ನಿಖರವಾದ ಕಾರಣಗಳು ಇಲ್ಲಿಯವರೆಗೆ ಗೊತ್ತಾಗಿಲ್ಲ. ಚಳಿಗಾಲದಲ್ಲಿ ಸೂರ್ಯನ ಬೆಳಕಿನ
ಕೊರತೆ ಇರುವುದರಿಂದ ಈ ರೀತಿಯ ಖಿನ್ನತೆ ಇರುವವರು ಸೂರ್ಯನ ಬೆಳಕಿಗೆ ಒಡ್ಡಿ ಕೊಳ್ಳುವುದು ಕಡಿಮೆಯಾದಾಗ ಮೆದುಳಿನ
“ಆಂತರಿಕ ಗಡಿಯಾರ “ದ ಮೇಲೆ ಪ್ರಭಾವ ಬೀರಿ ಇದು ಭಾವನೆಗಳನ್ನು ನಿಯಂತ್ರಿಸುವ ಹಾರ್ಮೋನ್ ಗಳ ಶೇಖರಣೆಯಲ್ಲಿ
ಏರುಪೇರು ಮಾಡಿ ಇದರಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ ಎಂಬುದು ವಿಜ್ಞಾನಿಗಳ ಆಂಬೋಣ. ಹೆಚ್ಚಿದ ಕತ್ತಲೆಯ
ಕಾರಣದಿಂದ ಮೆಲೆಟೋನಿನ್ ಉತ್ಪಾದನೆ ಹೆಚ್ಚಾಗಬಹುದು ಇದರಿಂದ ನಿದ್ರಾಹೀನತೆ ಮತ್ತು ಆಲಸ್ಯ ಉಂಟಾಗಬಹುದು
ಎಂಬುದು ಇನ್ನೊಂದು ವೈಜ್ಞಾನಿಕ ವಿವರಣೆಯಾಗಿದೆ. ಚಳಿಗಾಲದಲ್ಲಿ ಕಡಿಮೆಯಾದ ಸೂರ್ಯನ ಬೆಳಕು ಮೆದುಳಿನ
ಸೇರಟೋನಿನ್ ಮಟ್ಟವನ್ನು ಕಡಿಮೆ ಮಾಡಿ ಮನಸ್ಥಿತಿಯ ಮೇಲೆ ನೇರ ಪ್ರಭಾವ ಬೀರುತ್ತದೆ ಎಂದು ಕೂಡ ನಂಬಲಾಗಿದೆ. ಈ
ತೊಂದರೆಯು ಅನುವಂಶಿಕವಾಗಿ ಕೂಡ ಉಂಟಾಗಬಹುದು ಎಂಬುದು ಸಂಶೋಧನೆಗಳು ತಿಳಿಸುತ್ತದೆ. ಹಾಗೆಯೇ ಸೂರ್ಯನ
ಬೆಳಕಿಗೆ ಒಡ್ಡಿಕೊಳ್ಳುವುದು ಕಡಿಮೆಯಾದಾಗ ವಿಟಮಿನ್ ಡಿ ಕೊರತೆ ಉಂಟಾಗಿ ಈ ಖಿನ್ನತೆ ಸಂಭವಿಸಬಹುದು ಎಂಬುದು
ಇನ್ನೊಂದು ವಿವರಣೆಯಾಗಿದೆ.
ಖಿನ್ನತೆಯ ಚಿಕಿತ್ಸೆ ಮತ್ತು ಲೈಟ್ ಥೆರಪಿ:
ಈ ಬಗ್ಗೆ ಖಿನ್ನತೆಯ ಚಿಕಿತ್ಸೆ ಎನ್ನುವಾಗ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದು ಇದು ಮುಖ್ಯವಾಗಿರುತ್ತದೆ. ಆದರೆ ಖಿನ್ನತೆ
ಇರುವ ವ್ಯಕ್ತಿ ಹೆಚ್ಚಾಗಿ ಮನೆಯಿಂದ ಹೊರಗೆ ಬರುವುದಿಲ್ಲ. ಇದರಿಂದಾಗಿ ಖಿನ್ನತೆ ಇನ್ನೂ ಹೆಚ್ಚಾಗಬಹುದು. ಬಿಸಿಲಿಗೆ
ಒಡ್ಡಿಕೊಳ್ಳುವುದು ಮನಸ್ಸನ್ನು ಸಕಾರಾತ್ಮಕ ಮಾಡಲು ಸಹಾಯಮಾಡುತ್ತದೆ. ಬಿಸಿಲಿಗೆ ಒಡ್ಡಿಕೊಳ್ಳಲು ಒಪ್ಪದ ವ್ಯಕ್ತಿಗಳಿಗೆ ಲೈಟ್
ತೆರಪಿ ಬಾಕ್ಸ್ ಗಳನ್ನು ಉಪಯೋಗಿಸಿ ಸೂರ್ಯನ ಬೆಳಕನ್ನು ಅನುಕರಿಸುವ ಪ್ರಕಾಶಮಾನವಾದ ಕೃತಕ ಬೆಳಕಿಗೆ
ಒಡ್ಡಿಕೊಳ್ಳುವಂತೆ ಮಾಡಬೇಕಾಗುತ್ತದೆ. 10,000 ಲಕ್ಸ್ ಬೆಳಕು ಹೊರ ಸೂಸುವ ಬೆಳಕಿನ ಪೆಟ್ಟಿಗೆಗಳನ್ನು ಪ್ರತಿದಿನ ಬೆಳಿಗ್ಗೆ
ಸುಮಾರು 30 ನಿಮಿಷಗಳ ಕಾಲ ಬಳಸಲಾಗುತ್ತದೆ ಈ ಚಿಕಿತ್ಸೆಯು ಕೆಲವು ದಿನಗಳಿಂದ ವಾರಗಳವರೆಗೆ ಕೊಡಬೇಕಾಗುತ್ತದೆ.
ಖಿನ್ನತೆ ಇರುವ ವ್ಯಕ್ತಿ ಈ ಲೈಟ್ ತೆರಪಿ ಬಾಕ್ಸ್ ಮುಂದೆ ಕಣ್ಣು ಮುಚ್ಚಿ ಕುಳಿತುಕೊಂಡು ಸ್ವಲ್ಪ ಹೊತ್ತು ಇದ್ದರೆ ದೇಹದಲ್ಲಿ
ಮೆಲೋಟೋನಿನ್ ಸ್ರವಿಸುವಿಕೆ ಕಡಿಮೆಯಾಗಿ ವ್ಯಕ್ತಿಯು ನಿದ್ರೆಯ ಭಾವದಿಂದ ಹೊರಗೆ ಬರುತ್ತಾರೆ ಎಂಬುದು ವಿಜ್ಞಾನಿಗಳ
ಅಂಬೋಣ.
ಈ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕೋಗ್ನೇಟಿವ್ ಬಿಹೇವಿಯರ್ ತೆರಪಿ ಅಂದರೆ ಖಿನ್ನತೆಯಿಂದ ಉಂಟಾಗುತ್ತಿರುವ
ಋಣಾತ್ಮಕ ಚಿಂತನೆಗಳನ್ನು ಬದಲಿಸಲು ಹಾಗೆಯೇ ಖಿನ್ನತೆಯಿಂದ ಉಂಟಾಗುವ ನಡವಳಿಕೆಗಳನ್ನು ಬದಲಿಸಲು
ಮನೋಶಾಸ್ತ್ರಜ್ಞರು ಹೇಳಿಕೊಡುತ್ತಾರೆ. ಹಾಗೆಯೇ ಜೀವನ ಶೈಲಿಯಲ್ಲಿ ಬದಲಾವಣೆಗಳ ಬಗ್ಗೆ ಆಪ್ತ ಸಲಹೆ ನೀಡುತ್ತಾರೆ.
ಈ ಬಗ್ಗೆ ಅಸ್ವಸ್ಥತೆಯು ತೀವ್ರವಾದಾಗ ಖಿನ್ನತೆ ನಿವಾರಕ ಮಾತ್ರೆಗಳು ಅದರಲ್ಲಿಯೂ ಮೆದುಳಿನ ಸರಟೋನಿನ್ ಮಟ್ಟವನ್ನು
ಹೆಚ್ಚಿಸಲು ಉಪಯೋಗಿಸುವ ಸರಟೋನಿನ್ ಸ್ಪೆಸಿಫಿಕ್ ರಿಅಪ್ಟೇಕ್ ಇನ್ನಿಬಿಟ್ಟರ್ಸ್ ಎಂಬ ಗುಂಪಿನ ಮಾತ್ರೆಗಳನ್ನು ಉಪಯೋಗಿಸಿ
ಚಿಕಿತ್ಸೆ ನೀಡುತ್ತಾರೆ.
ವೃತ್ತಿಪರ ಮಾನಸಿಕ ಆರೋಗ್ಯ ಚಿಕಿತ್ಸೆಯ ಜೊತೆಗೆ ಸ್ವ ಆರೈಕೆಯ ಬಗ್ಗೆ ಕೂಡ ಈ ಸಮಸ್ಯೆಯಿಂದ ಬಳಲುತ್ತಿರುವವರು
ಗಮನಕೊಡಬೇಕು. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ಪ್ರತಿ ದಿನ ವ್ಯಾಯಾಮ, ನಿಯಮಿತವಾಗಿ ನಿದ್ರೆಯ
ವೇಳಾಪಟ್ಟಿಯನ್ನು ನಿರ್ವಹಿಸುವುದು, ಧ್ಯಾನ, ರಿಲಾಕ್ಸೇಶನ್ ತಂತ್ರಗಳು ಇವುಗಳನ್ನು ಬಳಸುವುದರಿಂದ ಖಿನ್ನತೆ ಕಡಿಮೆ
ಮಾಡಿಕೊಳ್ಳಬಹುದು. ನಿದ್ರೆಯ ವೇಳಾಪಟ್ಟಿಯ ಬಗ್ಗೆ ಹೆಚ್ಚಿನ ಗಮನ ಇರಬೇಕು ಏಕೆಂದರೆ ಖಿನ್ನತೆಯಲ್ಲಿ ಸಾಕಷ್ಟು ಮಂದಿ ನಿದ್ರೆಯ
ಅಭಾವವನ್ನು ಹೊಂದಿದರೆ ಇನ್ನು ಕೆಲವರು ವಿಪರೀತ ನಿದ್ರೆ ಮಾಡಲು ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ವಿಪರೀತವಾಗಿ
ತಿನ್ನುವುದು, ವಿಪರೀತ ಕಾಫಿ ಕುಡಿಯುವುದು ಮುಂತಾದವುಗಳು ನಿದ್ರೆಯನ್ನು ಇನ್ನಷ್ಟು ಹಾಳು ಮಾಡುತ್ತದೆ. ಆದ್ದರಿಂದ ಆಹಾರ,
ಕಾಫಿ, ಟೀ ಮುಂತಾದ ದ್ರವ್ಯ ಸೇವನೆ, ಮದ್ಯಪಾನ, ಮಾದಕ ದ್ರವ್ಯ ಸೇವನೆ ಇವುಗಳ ಬಗ್ಗೆ ಗಮನವರಿಸಿ ಇವುಗಳನ್ನು
ತ್ಯಜಿಸಬೇಕು ಅಥವಾ ನಿಯಂತ್ರಿಸಬೇಕು. ಇದು ಖಿನ್ನತೆ ನಿವಾರಕ.
ಈ ಹಿಂದೆ ಅನೇಕ ಬಾರಿ ತಿಳಿಸಿದಂತೆ ಮಾನಸಿಕ ಖಿನ್ನತೆ ಇರುವವರು ಯಾವುದೇ ಕಾರಣಕ್ಕೂ ಒಬ್ಬರೇ ಇರಲು
ಪ್ರಯತ್ನಿಸಬಾರದು. ಸಾಧ್ಯವಿದ್ದಷ್ಟು ಹೊರಗೆ ಬಂದು ಪ್ರೀತಿ ಪಾತ್ರರ ಒಡನೆ ಮಾತನಾಡುತ್ತಾ ಕಾಲ ಕಳೆಯಲು ಪ್ರಯತ್ನಿಸಬೇಕು.