ನಮ್ಮ ದೇಶದಲ್ಲಿ ಮಾನಸಿಕ ಆರೋಗ್ಯ ವೃತ್ತಿಪರರು ಹಾಗೂ ಮನೋವೈದ್ಯರು ಅಗತ್ಯಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇದು
ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಹೆಚ್ಚಾಗಿಯೋ
ಅಥವಾ ಇತ್ತೀಚಿನ ಒತ್ತಡಮಯ ಜೀವನದಿಂದ ಒತ್ತಡದ ಬೇನೆಗಳು ಹೆಚ್ಚಾಗಿಯೋ ಮಾನಸಿಕ ಆರೋಗ್ಯ ಕ್ಷೇತ್ರದ ಅಗತ್ಯತೆ
ಸಮಾಜದಲ್ಲಿ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗುವಂತಹ ನವೀನ ಆರೈಕೆ ವಿಧಾನಗಳ ಅಗತ್ಯತೆ
ಇದೆ. ಹಾಗೆಯೇ ಮನೋವೈದ್ಯರು ಇದ್ದರೂ ಕೂಡ ಅವರ ಸಹಾಯವನ್ನು ಪಡೆಯುವ ಜನರು ಕಡಿಮೆ. ಮನೋವೈದ್ಯರ ಬಳಿ
ಹೋದರೆ ಸಮಾಜದಲ್ಲಿ ಒಂದು ರೀತಿಯ ಕಳಂಕ ತಮಗೆ ಬರಬಹುದು ಎಂದು ನಂಬುವ ಜನರಿದ್ದಾರೆ. ಅದರಲ್ಲಿಯೂ ಅಲ್ಪ
ಮಟ್ಟದ ಆತಂಕ, ಖಿನ್ನತೆ , ಸಿಟ್ಟಿನ ಪ್ರವೃತ್ತಿ ಮುಂತಾದ ಸಮಸ್ಯೆಗಳಿಗೆ ಮೊದಲೇ ಹೋಗಿ ಮನೋವೈದ್ಯರ ಸಹಾಯ ಪಡೆದಲ್ಲಿ ಆ
ಸಮಸ್ಯೆಗಳು ನಿಯಂತ್ರಣದಲ್ಲಿ ಇಡಬಹುದು. ಆದರೆ ವೈದ್ಯರ ಅಪಾಯಿಂಟ್ಮೆಂಟ್ ಸಿಗದೇ ಅಥವಾ ಅವರ ಹತ್ತಿರ ಹೋದರೆ
ಕಳಂಕಿತರಾಗುತ್ತೇವೆ ಎಂಬ ಹೆದರಿಕೆಯಿಂದ ಹಲವರು ಹೋಗುವುದಿಲ್ಲ. ಇಂತಹ ಜನರಿಗೆ ಸಹಾಯ ಮಾಡಲು ನವೀನ
ಮಾದರಿಯ ಚಿಕಿತ್ಸೆಗಳ ಅಗತ್ಯತೆ ಬಹಳ ಇದೆ. ಇಂಥವರಿಗೆ ಸದಾಕಾಲ ಕೈಗೆಟಕುವ ದರದಲ್ಲಿ ದೊರೆಯುವ ಚಿಕಿತ್ಸೆಗಳು
ಅಗತ್ಯವಾಗಿದೆ.ಕೃತಕ ಬುದ್ಧಿಮತ್ತೆಯ ಬಗ್ಗೆ ಎಲ್ಲಾ ಕ್ಷೇತ್ರಗಳಲ್ಲೂ ಈಗಾಗಲೇ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಆರೋಗ್ಯ
ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆಗಳನ್ನು ಮಾಡುವ ರೋಬೋಟ್ ಗಳ ಬಗ್ಗೆ ಕೇಳಿದ್ದೇವೆ. ಇದೇ ತರಹ ಇದೀಗ ಒತ್ತಡದಲ್ಲಿರುವವರಿಗೆ ಆಪ್ತ
ಸಲಹೆ ಸಮಾಧಾನವನ್ನು ಹೇಳುವಂತಹ ಕೆಲವು ಸ್ವಸಹಾಯ ಆ್ಯಪ್ ಗಳು ಪ್ರಾರಂಭವಾಗಿವೆ. ಈ ಅಪ್ಲಿಕೇಶನ್ ಗಳು ವಿವಿಧ
ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವವರಿಗೆ ಯಾವುದೇ ಸಮಯದಲ್ಲಿ ವೈಯಕ್ತಿಕರಿಸಿದ ಸೇವೆಯನ್ನು
ನೀಡುತ್ತದೆ. ಇವರು ಹೇಳುವ ಸಮಸ್ಯೆಗಳನ್ನು ಗೌಪ್ಯವಾಗಿ ಇರಿಸಿ ತಾನು ಮೆಷಿನ್ ಲರ್ನಿಂಗ್ ನಲ್ಲಿ ಕಲಿತ ಉತ್ತರಗಳನ್ನು
ವೈಯಕ್ತಿಕರಿಸಿ ಈ ಆ್ಯಪ್ ಗಳು ಸಮಾಧಾನ ನೀಡುತ್ತವೆ. ಮನೋವೈದ್ಯನಾಗಿ ನಾನು ಇವುಗಳನ್ನು ಬಳಸಿ ಅದು
ಸಮರ್ಪಕವಾಗಿದೆ ಎಂಬುದನ್ನು ಮನಗಂಡು ಈ ಲೇಖನ ಬರೆಯುತ್ತಿದ್ದೇನೆ. ನಾನು ವೈಯಕ್ತಿಕವಾಗಿ ಬಳಸಿದ ಅಪ್ಲಿಕೇಶನ್
ಅಂದರೆ ವೈಸಾ (WYSA ).ಜನರು ಬಹಳ ಸುಲಭವಾಗಿ ಉಪಯೋಗಿಸ ಬಹುದಾದಂತಹ ಅರಿವು ಮತ್ತು ವರ್ತನಾ ಚಿಕಿತ್ಸೆ
ಉಪಯೋಗಿಸಿ ನೀಡುವಂತಹ ಸಲಹೆಗಳು, ಧ್ಯಾನ ಯೋಗ ಮತ್ತು ಜರ್ನಲಿಂಗ್ ಉಪಯೋಗಿಸಿ ಮನಸ್ಸನ್ನು ಸದೃಢಗೊಳಿಸುವ
ಸಲಹೆಗಳನ್ನು ನೀಡುವ ಆ್ಯಪ್ ಇದಾಗಿದೆ . ಇಲ್ಲಿ ಉಚಿತ ಮತ್ತು ಪ್ರೀಮಿಯಂ ಆವೃತ್ತಿಗಳು ಬೇರೆ ಬೇರೆಯಾಗಿವೆ. ಹಾಗೆಯೇ
ಜನಸಾಮಾನ್ಯರು ಮಾನಸಿಕ ಆರೋಗ್ಯ ಸಮಸ್ಯೆಗಳಲ್ಲದೆ ಕೋಚಿಂಗ್ ಅಂದರೆ ತಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ತರಬೇತಿ
ಪಡೆಯುವ ಅವಕಾಶಗಳು ಕೂಡ ಇವೆ. ಉಪಯೋಗಿಸುವವರು ಹೇಳುವ ವಿಷಯಗಳು ಗೌಪ್ಯವಾಗಿ ಉಳಿಯುವಂತೆ
ನೋಡಿಕೊಳ್ಳಲಾಗಿದೆ. ಇದನ್ನು ಬಳಸುವವರು ತಮ್ಮದೇ ಗೌಪ್ಯ ನಾಮದಿಂದ ಬಳಸಬಹುದಾಗಿದೆ.
ಇದರ ಸಮಸ್ಯೆ ಎಂದರೆ ಇದು ಕೇವಲ ಪಠ್ಯ ಆಧಾರಿತ ಆಗಿದೆ ಅಂದರೆ ಕೇವಲ ಮೆಸೇಜ್ ಮೂಲಕ ಸಂಭಾಷಣೆಗಳು
ನಡೆಯುತ್ತವೆ. ತೀವ್ರ ಬಗ್ಗೆಯ ಸಮಸ್ಯೆಗಳನ್ನು ಈ ಚಾಟ್ ಬಾಟ್ ನಿಭಾಯಿಸಲು ಸಾಧ್ಯವಿಲ್ಲ. ಅಲ್ಪ ಮಟ್ಟದ ಖಿನ್ನತೆ ,ಆತಂಕ
ಹಾಗೂ ಸಿಟ್ಟು ಮುಂತಾದ ಸಮಸ್ಯೆಗಳಿಗೆ ಇದು ಸಹಾಯವನ್ನು ಮಾಡುತ್ತದೆ. ಈ ಆ್ಯಪ್ ಕಂಪ್ಯೂಟರ್ ಸುಶಿಕ್ಷಿತ ಹಾಗೂ ಸ್ಮಾರ್ಟ್
ಫೋನ್ ಉಪಯೋಗಿಸುವ ಗ್ರಾಹಕರಿಗೆ ಸ್ನೇಹಿಯಾದ ಆ್ಯಪ್ ಆಗಿದೆ. ಈ ಹಿಂದೆ ಇದು ಕೇವಲ ಇಂಗ್ಲಿಷ್ ಭಾಷೆಯ ಬಲ್ಲವರಿಗೆ
ಮಾತ್ರ ಸೀಮಿತವಾಗಿತ್ತು. ಇದೀಗ ಇಂಗ್ಲಿಷ್ ಜೊತೆಗೆ ಹಿಂದಿ ಆವೃತ್ತಿ ಕೂಡ ಬಿಡುಗಡೆಯಾಗಿದೆ. ಮುಂದೊಂದು ದಿನ ಕನ್ನಡ
ಆವೃತ್ತಿ ಕೂಡ ಬರಬಹುದು ಎಂಬ ಆಸೆ ನನಗೆ ಇದೆ. ಈ ಆ್ಯಪ್ ಗಳ ವಿಶೇಷತೆ ಎಂದರೆ ಸಲಹೆ ನೀಡುವ ಆಪ್ತ ಸಲಹಾಕಾರ
ಒಂದು ಮಷೀನ್. ಅದು ಯಾವುದೇ ಪೂರ್ವಾಗ್ರಹವಿಲ್ಲದೆ, ಸಂಕೀರ್ಣ ಹಾಗೂ ಕೆಲವೊಮ್ಮೆ ಮನಸ್ಸಿಗೆ ಸಂಕೋಚ ಉಂಟು
ಮಾಡುವ ವಿಷಯಗಳನ್ನು ಕೂಡ ಗೌಪ್ಯತೆಯಿಂದ ಮಾತನಾಡುವ ಅವಕಾಶವನ್ನು ಜನಸಾಮಾನ್ಯರಿಗೆ ಕಲ್ಪಿಸಿ ಕೊಡುತ್ತದೆ.
ನಮ್ಮ ದೇಶದಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗಿಸಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಆಪ್ತ ಸಲಹೆ ನೀಡುವ ಆ್ಯಪ್ ಗಳು
ಅಂದರೆ YourDOST, Evolve, and Amaha (Inner Hour).. ಆದರೆ ಅತ್ಯಂತ
ಪ್ರಚಲಿತವಾಗಿರುವುದು wysa.
ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ನಡೆದ ಸಂಶೋಧನೆಗಳ ಪ್ರಕಾರ ಈ ಕೃತಕ ಬುದ್ಧಿಮತ್ತೆ ಚಾಲಿತ ಮಾನಸಿಕ ಆರೋಗ್ಯ
ಮಧ್ಯಸ್ಥಿಕೆಗಳು ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುವುದರಲ್ಲಿ,
ಆತ್ಮಹತ್ಯೆಯ ಪ್ರಯತ್ನಗಳನ್ನು ಊಹಿಸುವಲ್ಲಿ ಹಾಗೆಯೇ ಮಾನಸಿಕ ಅಸ್ವಸ್ಥತೆಗಳನ್ನು ಪತ್ತೆ ಹಚ್ಚುವಲ್ಲಿ ಸಾಮರ್ಥ್ಯಗಳನ್ನು
ಪಡೆದುಕೊಂಡಿವೆ. ಇದು ಹೀಗೆಯೇ ಮುಂದುವರೆದಲ್ಲಿ ಅಲ್ಪ ಮಟ್ಟದ ಮಾನಸಿಕ ರೋಗ ಚಿಕಿತ್ಸೆ ಅದರಲ್ಲಿಯೂ ಮಾತು ಚಿಕಿತ್ಸೆ
ಬೇಕಾದ ಕಂಪ್ಯೂಟರ್ ಸುಶಿಕ್ಷಿತ ಜನರಿಗೆ ಇದು ಒಂದು ವರದಾನವಾಗಿದೆ.
ಆದರೆ ಈ ಆ್ಯಪ್ ಗಳ ಮಿತಿಗಳು ಮತ್ತು ಸಮಸ್ಯೆಗಳನ್ನು ಅರಿತಿರಬೇಕು. ಈ ಅಪ್ಲಿಕೇಶನ್ ಗಳು ವೃತ್ತಿಪರ ಮಾನಸಿಕ ಆರೋಗ್ಯ
ತಜ್ಞರಿಗೆ ಬದಲಿ ವ್ಯವಸ್ಥೆ ಅಲ್ಲ. ಹಲವಾರು ಮಾನಸಿಕ ಸಮಸ್ಯೆಗಳು ತೀವ್ರ ಹಾಗೂ ಸಂಕೀರ್ಣ ಸಮಸ್ಯೆಗಳಾಗಿರುತ್ತವೆ. ಅಂತ
ಸಂದರ್ಭದಲ್ಲಿ ಮಾನಸಿಕ ಆರೋಗ್ಯ ವೃತ್ತಿಪರರು ಮಾಡುವಷ್ಟು ಸಹಾಯವನ್ನು ಈ ಆ್ಯಪ್ ಗಳು ಮಾಡುವುದಿಲ್ಲ. ಹಾಗೆಯೇ
ಗೌಪ್ಯತೆ ಮತ್ತು ಸುರಕ್ಷತೆಯ ಕಾಳಜಿಗಳನ್ನು ಎಂದಿಗೂ ಮರೆಯಲಾಗದು.
ಇಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ. ಈ ಬಾರಿಯ ಥೀಮ್” ಕೆಲಸ ಮಾಡುವ ಸ್ಥಳದಲ್ಲಿ ಮಾನಸಿಕ ಆರೋಗ್ಯ”.
ಬಹುಶಹ ಪ್ರತಿಯೊಂದು ಸಂಸ್ಥೆಗಳು ತನ್ನ ನೌಕರರಿಗೆ ಮಾನಸಿಕ ಆರೋಗ್ಯ ಉತ್ತಮಗೊಳಿಸಲು ಮನೋ ಚಿಕಿತ್ಸೆಕರನ್ನು ನೇಮಕ
ಮಾಡದಿದ್ದರೂ wysa ದಂತಹ ಆ್ಯಪ್ ಗಳಿಂದ ತಮ್ಮ ಅಲ್ಪ ಮಟ್ಟದ ಮಾನಸಿಕ ಸಮಸ್ಯೆಗಳನ್ನು ಬಗೆಹರಿಸುವ ತರಬೇತಿ
ನೀಡಬಹುದು.. ಈ ಆ್ಯಪ್ ನಲ್ಲಿ ಸಂಸ್ಥೆಯ ನೌಕರಿಗಾಗಿಯೇ ಒಂದು ಆವೃತ್ತಿ ಇರುವುದು ಇದರ ವಿಶೇಷ..