ನೀವು ತೆಗೆದುಕೊಳ್ಳುವ ಮಾತ್ರೆಗಳು ಕೂಡ ಖಿನ್ನತೆಗೆ ಕಾರಣವಾಗಬಹುದು ನೆನಪಿರಲಿ!
ಇತ್ತೀಚೆಗೆ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ನಿದ್ರಾಹೀನತೆ ಹೆದರಿಕೆ ಆಲೋಚನಾ ಶಕ್ತಿ ಇಲ್ಲದಂತಾಗಿದೆ ಪದೇ ಪದೇ ಆತ್ಮಹತ್ಯೆ
ಯೋಚನೆಗಳು ಬರುತ್ತಿದೆ ಮುಂತಾದ ಗುಣಲಕ್ಷಣಗಳನ್ನು ಇಟ್ಟುಕೊಂಡು ಕ್ಲಿನಿಕ್ ಗೆ ಬಂದಿದ್ದರು. ಅವರೊಡನೆ ಸಮಾಲೋಚನೆ
ಮಾಡಿದಾಗ ತಿಳಿದುಬಂದ ವಿಷಯವೆಂದರೆ ಅವರಿಗೆ ಸುಮಾರು ವರ್ಷಗಳಿಂದ ತಿಂಗಳಿಗೆ ಎರಡು ಮೂರು ಬಾರಿ ತಲೆನೋವು
ಕಾಣಿಸಿಕೊಳ್ಳುತ್ತಿತ್ತು. ಈ ತಲೆನೋವಿಗಾಗಿ ಅವರ ಕುಟುಂಬ ವೈದ್ಯರು ಅವರಿಗೆ ಫ್ಲುನಾರಿಸಿನ್ ಎಂಬ ಮಾತ್ರೆಯನ್ನು ಒಂದೆರಡು
ತಿಂಗಳ ಹಿಂದೆ ಪ್ರಿಸ್ಕ್ರೈಬ್ ಮಾಡಿದ್ದರು. ಈ ಮಾತ್ರೆ ತೆಗೆದುಕೊಂಡು ಒಂದು ತಿಂಗಳ ನಂತರ ಅವರಲ್ಲಿ ಮೇಲೆ ತಿಳಿಸಿದ
ಗುಣಲಕ್ಷಣಗಳು ಕಂಡುಬಂದವು. ಅವರ ಮನೆಯಲ್ಲಿ ಬೇರೆ ಯಾರಿಗೂ ಖಿನ್ನತೆ ಇರಲಿಲ್ಲ ಹಾಗೂ ಅವರಿಗೂ ಕೂಡ ಹಿಂದೆಂದೂ
ಖಿನ್ನತೆಯ ಪ್ರಸಂಗಗಳು ಉಂಟಾಗಿರಲಿಲ್ಲ. ಅವರ ಜೊತೆಗೆ ಸಮಾಲೋಚನೆಯ ನಂತರ ಅವರಿಗೆ ಖಿನ್ನತೆ ಇದೆ ಹಾಗೂ ಅದು
ಬಹುಶಹ ಈ ಫ್ಲುನಾರಿಸಿನ್ ಮಾತ್ರೆಯಿಂದಲೇ ಉಂಟಾಗಿದೆ ಎಂಬ ನಿರ್ಣಯಕ್ಕೆ ಬಂದು ಆ ಮಾತ್ರೆಗಳನ್ನು ನಿಲ್ಲಿಸಲಾಯಿತು
ಹಾಗೂ ಅವರ ಮೈಗ್ರೇನ್ ತಲೆನೋವು ಮತ್ತು ಖಿನ್ನತೆಗೆ ಸರಿಹೊಂದುವಂತಹ ಒಂದು ಖಿನ್ನತೆ ನಿವಾರಕ ಮಾತ್ರೆ ಚಿಕಿತ್ಸೆ
ನೀಡಲಾಯಿತು. ಚಿಕಿತ್ಸೆ ಪ್ರಾರಂಭವಾಗಿ ಒಂದು ತಿಂಗಳ ಒಳಗೆ ಅವರ ತಲೆನೋವು ಮತ್ತು ಖಿನ್ನತೆ ಎರಡು ಕಡಿಮೆ ಆಯಿತು.
ಇದನ್ನು ಗಮನಿಸಿದಾಗ ಜನ ಸಾಮಾನ್ಯರಿಗೆ ಈ ಬಗ್ಗೆ ಮಾಹಿತಿ ನೀಡುವ ಎಂದುಕೊಂಡೆ.
ಆಧುನಿಕ ವೈದ್ಯಕೀಯ ವಿಜ್ಞಾನವಾಗಲಿ ಪುರಾತನ ವೈದ್ಯಕೀಯ ವಿಜ್ಞಾನವಾಗಲಿ ಮಾತ್ರೆಗಳಾಗಲಿ ಗಿಡಮೂಲಿಕೆಗಳಾಗಲಿ
ಎಲ್ಲದರಲ್ಲೂ ಅಡ್ಡ ಪರಿಣಾಮಗಳು ಇವೆ. ಅಡ್ಡ ಪರಿಣಾಮಗಳಲ್ಲಿ ದೈಹಿಕ ಅಡ್ಡ ಪರಿಣಾಮಗಳಂತೆ ಮಾನಸಿಕ ಮತ್ತು ಭಾವನಾತ್ಮಕ
ಅಡ್ಡ ಪರಿಣಾಮಗಳು ಕೂಡ ಉಂಟಾಗಬಹುದು. ಈ ಮಾತ್ರೆಗಳು, ಗಿಡಮೂಲಿಕೆಗಳು ದೇಹದ ಬೇರೆ ಬೇರೆ ಅಂಗಾಂಗಗಳು ಮತ್ತು
ಜೀವಕೋಶಗಳ ಮೇಲೆ ಕೆಲಸ ಮಾಡುತ್ತವೆ. ಮೆದುಳಿನ ನರಕೋಶಗಳ ಮೇಲೆ ಕೂಡ ಕೆಲಸ ಮಾಡುತ್ತವೆ. ಹಾಗೆಯೇ
ರಸದೂತಗಳ ಶೇಖರಣೆಯ ಮೇಲೆ ಕೂಡ ಕೆಲಸ ಮಾಡುತ್ತವೆ. ಆದ್ದರಿಂದ ಬಹಳಷ್ಟು ಮಾತ್ರೆಗಳು ,ಗಿಡಮೂಲಿಕೆಗಳು ಖಿನ್ನತೆ
,ಆತಂಕ ,ಚಿತ್ತ ವಿಕಲತೆ ಮುಂತಾದ ಸಮಸ್ಯೆಗಳನ್ನು ಅಡ್ಡ ಪರಿಣಾಮಗಳ ತರಹ ಉಂಟು ಮಾಡಬಹುದು.
ರಕ್ತದ ಒತ್ತಡದ ಸಮಸ್ಯೆಗೆ ಉಪಯೋಗಿಸುವ ಕ್ಲೋನೈಡಿನ್, ಪ್ರೋಪೆರ್ನಲಾಲ್ , ಮೈಗ್ರೇನ್ ತಲೆ ನೋವಿಗೆ ಹಾಗೂ ತೂಕ
ಇಳಿಸಲು ಉಪಯೋಗಿಸುವ ಕೆಲವು ಮಾತ್ರೆಗಳು ಅಂದರೆ ಟೋಪಿರಮಿಟ್,ಆಯುರ್ವೇದದಲ್ಲಿ ನಿದ್ರಾಹೀನತೆ ಆತಂಕಕ್ಕೆ
ಉಪಯೋಗಿಸುವ ಸರ್ಪಗಂಧ, ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಉಪಯೋಗಿಸುವ ಆತಂಕ ನಿವಾರಕ ಮಾತ್ರೆಗಳು ಬೆಂಜೋ
ಡೈಜೆಪೀನ್ಸ ಇವುಗಳು ಕೂಡ ಖಿನ್ನತೆಗೆ ಕಾರಣವಾಗಬಹುದು. ಹಲವು ಸಮಸ್ಯೆಗಳಿಗೆ ರಾಮಬಾಣವಾಗಿರುವ ಸ್ಟೆರಾಯ್ಡ್ ಕೂಡ
ಒಂದು ರೀತಿಯ ಸುಸ್ತು ಹೆದರಿಕೆ ಉಂಟುಮಾಡಿ ಖಿನ್ನತೆ ಯಂತಹ ಸಮಸ್ಯೆ ಉಂಟು ಮಾಡಬಹುದು. ಆದ್ದರಿಂದ
ಜನಸಾಮಾನ್ಯರು ತಾವು ತೆಗೆದುಕೊಳ್ಳುವ ಮಾತ್ರೆಗಳ ಬಗ್ಗೆ ತಿಳಿದುಕೊಳ್ಳುವುದು ಅತಿ ಅಗತ್ಯ.
ಹೊಸದಾದ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವಾಗ ದೈಹಿಕ ಅಡ್ಡ ಪರಿಣಾಮಗಳನ್ನು ನಾವು ಗುರುತಿಸುತ್ತೇವೆ ಆದರೆ
ಮಾನಸಿಕ ಅಡ್ಡ ಪರಿಣಾಮಗಳು ಅಂದರೆ ಕಾರಣವಿಲ್ಲದೆ ಬೇಸರಾಗುತ್ತಿರುವುದು, ಹಿಂದೆ ಖುಷಿ ಕೊಡುತ್ತಿದ್ದ ಚಟುವಟಿಕೆಗಳಲ್ಲಿ ಈಗ
ಆಸಕ್ತಿ ಕಡಿಮೆಯಾಗುತ್ತಾ ಇರುವುದು, ನಿತ್ರಾಣ ,ಸುಸ್ತು ,ಏಕಾಗ್ರತೆಯ ಕೊರತೆ, ನಿದ್ರಾ ಹೀನತೆ ಹಸಿವೆ ಕಡಿಮೆ, ತೂಕ ಕಡಿಮೆ,
ಕೆಲಸದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಮಸ್ಯೆಗಳಾಗುವುದು ಮುಂತಾದ ವಿಷಯಗಳು ಆಗುವಾಗ ಇದು ಇತ್ತೀಚೆಗೆ ನಾವು
ತೆಗೆದುಕೊಳ್ಳುತ್ತಿರುವ ಯಾವುದಾದರೂ ದೀರ್ಘಕಾಲಿನ ಕಾಯಿಲೆಯ ಮಾತ್ರೆಗಳ ಚಿಕಿತ್ಸೆಯಿಂದ ಉಂಟಾಗಿರಬಹುದು ಎಂಬ
ಸಂಶಯ ನಮಗೆ ಬರಬೇಕು. ಈ ಬಗ್ಗೆ ಸಂಶಯಗಳು ಬಂದಾಗ ಆ ಮಾತ್ರೆಗಳನ್ನು ಪ್ರಾರಂಭಿಸಿದ ವೈದ್ಯರ ಬಳಿ ಹೋಗಬೇಕು
ಮತ್ತು ಅವರಲ್ಲಿ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬೇಕು. ಹಲವೊಮ್ಮೆ ವೈದ್ಯರುಗಳಿಗೆ ಕೂಡ ಈ ಬಗ್ಗೆ ಸರಿಯಾದ ಮಾಹಿತಿ
ಇರುವುದಿಲ್ಲ. ಅವರು ಪುಸ್ತಕಗಳನ್ನು ಓದಿ ಅಥವಾ ಇತರ ವೈದ್ಯರೊಂದಿಗೆ ಚರ್ಚಿಸಿ ನಿರ್ಣಯಕ್ಕೆ ಬರಬಹುದು.
ಇಂತಹ ಸಮಸ್ಯೆಗಳಿಗೆ ವೈದ್ಯರು ಮಾತ್ರೆಗಳನ್ನು ಬದಲಿಸಬಹುದು. ಕೆಲವೊಮ್ಮೆ ಇದ್ದಕ್ಕಿದ್ದಂತೆ ಈ ಮಾತ್ರೆಗಳನ್ನು ನಿಲ್ಲಿಸಲು
ಆಗುವುದಿಲ್ಲ. ಅವುಗಳನ್ನು ಹಂತ ಹಂತವಾಗಿ ಕಡಿಮೆ ಮಾಡಿ ನಿಲ್ಲಿಸಬೇಕಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಮಾತ್ರೆಗಳನ್ನು
ನಿಲ್ಲಿಸಿದ ಕೂಡಲೇ ಮಾನಸಿಕ ಪರಿಸ್ಥಿತಿ ಸರಿಹೋಗುತ್ತದೆ. ಕೆಲವೊಮ್ಮೆ ವೈದ್ಯಕೀಯ ಕಾರಣಗಳಿಂದ ಈ ಸಮಸ್ಯೆ ಉಂಟು
ಮಾಡುತ್ತಿರುವ ಮಾತ್ರೆಗಳನ್ನು ನಿಲ್ಲಿಸಲು ಆಗುವುದಿಲ್ಲ. ಅಥವಾ ಆ ಮಾತ್ರೆಗಳನ್ನು ನಿಲ್ಲಿಸಿ, ಬೇರೆ ಪರ್ಯಾಯ ಮಾತ್ರೆಗಳನ್ನು
ಹಾಕಿದರೆ ಹಿಂದೆ ಬಂದಿದ್ದಂತಹ ಒಳ್ಳೆಯ ಪರಿಣಾಮಗಳು ಈ ಪರ್ಯಾಯ ಮಾತ್ರೆಗಳಲ್ಲಿ ಬರುವುದಿಲ್ಲ. ಅಂತಹ ಸಂದರ್ಭದಲ್ಲಿ
ವೈದ್ಯರು ಈ ಖಿನ್ನತೆ ಉಂಟುಮಾಡುವ ಮಾತ್ರೆಗಳನ್ನೇ ಪುನಹ ಪ್ರಾರಂಭಿಸಬಹುದು. ಆದರೆ ಅದರೊಂದಿಗೆ ಖಿನ್ನತೆ ನಿವಾರಕ
ಮಾತ್ರೆಗಳನ್ನು ಕೂಡ ಕೊಡಬಹುದು.
ಜನಸಾಮಾನ್ಯರು ತಿಳಿಯಬೇಕಾದ ವಿಷಯವೆಂದರೆ ವೈದ್ಯಕೀಯ ಚಿಕಿತ್ಸೆಯಲ್ಲಿ ಪರಿಣಾಮಗಳು ಬರುವಾಗ ಅದರೊಂದಿಗೆ ಅಡ್ಡ
ಪರಿಣಾಮಗಳು ಇದ್ದೇ ಇರುತ್ತವೆ. ಈ ಅಡ್ಡ ಪರಿಣಾಮಗಳನ್ನು ಗುರುತಿಸುವುದು ವೈದ್ಯರ ಕರ್ತವ್ಯ ಹೌದು ಹಾಗೆಯೇ ಅವುಗಳನ್ನು
ಗಮನಿಸಿ ಹೇಳುವುದು ರೋಗಿಯ ಕರ್ತವ್ಯ ಕೂಡ. ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸೆ ಬೇಕು ಎನ್ನುವವರಿಗೆ ಪರಿಣಾಮಗಳು ಕೂಡ
ಬರಲಿಕ್ಕಿಲ್ಲ ಅನ್ನುವುದು ಗೊತ್ತಿರಬೇಕು. ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಯಾವುದೇ ಒಂದು ಮಾತ್ರೆಯನ್ನು
ಜನಸಾಮಾನ್ಯರಲ್ಲಿ ಉಪಯೋಗಿಸಲು ಪ್ರಾರಂಭ ಮಾಡುವ ಮೊದಲು ಅದರ ಅಡ್ಡ ಪರಿಣಾಮಗಳ ಕುರಿತು ಬಹಳಷ್ಟು
ಪರಿಶೀಲನೆಗಳು ಸಂಶೋಧನೆಗಳು ನಡೆಯುತ್ತವೆ. ಇದರ ಹೊರತಾಗಿಯೂ ಕೆಲವೊಮ್ಮೆ ಕೆಲವು ಅಡ್ಡ ಪರಿಣಾಮಗಳು
ಸಂಶೋಧನೆಯ ಸಮಯದಲ್ಲಿ ಗೊತ್ತಾಗುವುದಿಲ್ಲ. ಆದರೆ ಆ ಮಾತ್ರೆಗಳನ್ನು ಜನಸಾಮಾನ್ಯರಲ್ಲಿ ಉಪಯೋಗಿಸಲು ಪ್ರಾರಂಭ
ಮಾಡಿದ ಮೇಲೆ ಹೊಸ ಹೊಸ ಅಡ್ಡ ಪರಿಣಾಮಗಳು ವೈದ್ಯಕೀಯ ವಿಜ್ಞಾನಿಗಳ ಗಮನಕ್ಕೆ ಬರುತ್ತದೆ. ಇದೆ ಆಧುನಿಕ ವೈದ್ಯಕೀಯ
ವಿಜ್ಞಾನದ ಬೆಳವಣಿಗೆಯಲ್ಲಿ ಸಹಾಯಕಾರಿ. ಆದ್ದರಿಂದ ನೀವು ತೆಗೆದುಕೊಳ್ಳುವ ಮಾತ್ರೆಗಳ ಪರಿಣಾಮ ಅಡ್ಡ ಪರಿಣಾಮಗಳ ಬಗ್ಗೆ
ಮಾಹಿತಿ ಪಡೆದುಕೊಳ್ಳಿ ವೈದ್ಯರೊಂದಿಗೆ ಸಹಕರಿಸಿ.