ಆ್ಯಸ್ಪರ್ಗರ್ ಸಿಂಡ್ರೋಮ್ ಎನ್ನುವುದು ಒಂದು ಸೌಮ್ಯ ತರಹದ ಸ್ವಲಿನತೆ ಎಂದು ಗುರುತಿಸಲಾಗಿದೆ. ಈ ಹಿಂದೆ ಸ್ವಲಿನತೆಯ ಬಗ್ಗೆ
ಬರೆದಿರುತ್ತೇನೆ. ಸ್ವಲಿನತೆ(Autism )ಎಂಬುದು ನರಮಂಡಲದ ಬೆಳವಣಿಗೆಯ ಒಂದು ಅಸ್ವಸ್ಥತೆ (Neurodevlopmental
Disorder).ಆ್ಯಸ್ಪರ್ಗರ್ ಸಿಂಡ್ರೋಮ್ ಇದನ್ನು ಆಟಿಸಂ ಸ್ಪೆಕ್ಟ್ರಮ್ ಡಿಸೋರ್ಡರ್ (Autism spectrum Disorder)ಅಡಿಯಲ್ಲಿ
ಗುರುತಿಸಲಾಗಿದೆ.
ಆ್ಯಸ್ಪರ್ಗರ್ ಸಿಂಡ್ರೋಮ್ ಎಂಬ ಹೆಸರು ಬರಲು ಕಾರಣ ಆಸ್ಟ್ರಿಯಾದ ಮಕ್ಕಳ ತಜ್ಞ ಹ್ಯಾನ್ಸ್ ಆ್ಯಸ್ಪರ್ಗರ್ ತನ್ನ ಹತ್ತಿರ ಬರುತ್ತಿದ್ದ
ಮಕ್ಕಳ ಕೆಲವು ಗುಣಲಕ್ಷಣಗಳನ್ನು ಗಮನಿಸಿ ಕೆಲವು ಮಕ್ಕಳು ಕೆಲವು ವೈಶಿಷ್ಟ್ಯಕರವಾದ ನಡವಳಿಕೆಗಳನ್ನು ಪ್ರದರ್ಶಿಸುತ್ತಾ
,ಸಾಮಾಜಿಕ ಸಂವಹನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಾ ಇರುವುದನ್ನು ಗಮನಿಸಿ 1944ರಲ್ಲಿ ಒಂದು ಪ್ರಬಂಧವನ್ನು
ಮಂಡಿಸಿದ. 1980 ರಲ್ಲಿ ಬಗ್ಗೆ ಡಿಎಸ್ಎಂ ಎಂಬ ವಿಶ್ವ ಮಾನ್ಯವಾದ ವೈದ್ಯಕೀಯ ಕಾಯಿಲೆಗಳ ಗುರುತಿಸುವ ಪುಸ್ತಕದಲ್ಲಿ ಇದಕ್ಕೆ
ಮಾನ್ಯತೆ ದೊರೆಯಿತು. 1994 ರಲ್ಲಿ ಇದನ್ನು ಒಂದು ವಿಶಿಷ್ಟವಾದ ವೈದ್ಯಕೀಯ ಅಸ್ವಸ್ಥತೆ ಎಂದು ಗುರುತಿಸಲಾಯಿತು. 2013ರ
ನಂತರ ಇದನ್ನು ಆರ್ಟಿಸಂ ಸ್ಪೆಕ್ಟ್ರಮ್ ಡಿಸ್ಆರ್ಡರ್ ಅಡಿಯಲ್ಲಿ ಗುರುತಿಸಲಾಗಿದೆ. ಗಮನಿಸಬೇಕಾದ ವಿಷಯವೆಂದರೆ
ಸ್ವಲಿನತೆಯಲ್ಲಿ ಕಂಡು ಬರುವ ಮಾತು ಮತ್ತು ಭಾಷೆಯ ಬೆಳವಣಿಗೆಯಲ್ಲಿಯ ಕೊರತೆ ಹಾಗೂ ಅರಿವಿನ ಬೆಳವಣಿಗೆಯ ಕೊರತೆ
ಇಲ್ಲಿ ಕಂಡು ಬರುವುದಿಲ್ಲ.
ಆ್ಯಸ್ಪರ್ಗರ್ ಸಿಂಡ್ರೋಮ್ ಇದರಲ್ಲಿ ವ್ಯಕ್ತಿಗಳು ಸಾಮಾಜಿಕ ಸಂವಹನದಲ್ಲಿ ಸಮಸ್ಯೆಗಳು, ಹಾಗೂ ಅವರ ವಿಚಿತ್ರ
ನಡುವಳಿಕೆಗಳಿಂದ ಗುರುತಿಸಲ್ಪಡುತ್ತಾರೆ ಹಾಗೂ ಇವರು ಏಕಾಂಗಿಗಳಾಗಿ ಬಿಡುತ್ತಾರೆ ಅಥವಾ ಕೆಲವೊಮ್ಮೆ ಯಾವುದಾದರೂ
ಒಂದು ವಿಶಿಷ್ಟ ವಿಷಯದ ಬಗ್ಗೆ ತಮ್ಮ ಆಸಕ್ತಿಯನ್ನು ಒಂದು ಬಗೆಯ ಗೀಳಿನಂತೆ ಪರಿವರ್ತಿಸಿ ಅದರಲ್ಲೇ ತಲ್ಲಿನರಾಗಿ ಬಿಡುತ್ತಾರೆ.
ಇದರಿಂದಾಗಿ ಅವರು ಸಮಾಜದಲ್ಲಿ ಹೆಚ್ಚು ಬೆರೆಯದೆ ಒಂದು ರೀತಿಯ ಏಕಾಂಗಿಗಳು ಆಗುತ್ತಾರೆ. ಈ ಸಮಸ್ಯೆ ಇರುವ ವ್ಯಕ್ತಿಗಳು
ಯಾವುದಾದರೂ ಒಂದು ವಿಶಿಷ್ಟ ವಿಷಯಗಳ ಮೇಲೆ ಬಹಳಷ್ಟು ಆಸಕ್ತಿ ಹೊಂದಿ ಅದರ ಬಗ್ಗೆ ಅಧ್ಯಯನ ನಡೆಸಿ ಅದರಲ್ಲಿ ಪರಿಣತಿ
ಸಾಧಿಸುತ್ತಾರೆ. ಆದರೆ ಸಾಮಾಜಿಕ ಕೌಶಲ್ಯಗಳು ಕೊರತೆಯಿಂದಾಗಿ ಅವರು ಹಲವು ಸಮಸ್ಯೆಗಳನ್ನು ಕೂಡ ಅನುಭವಿಸುತ್ತಾರೆ.
ಇವರಲ್ಲಿ ಸಾಮಾಜಿಕ ಕೌಶಲ್ಯಗಳು, ಇತರ ಜನರ ದೃಷ್ಟಿಕೋನ ಮತ್ತು ಭಾವನೆಗಳನ್ನು ಗ್ರಹಿಸುವುದರಲ್ಲಿ ಕೊರತೆ ಇರುತ್ತದೆ.
ಕೆಲವರು ಕಾರಣವಿಲ್ಲದೆ ಸಿಟ್ಟಿಗೆ ಒಳಗಾಗುವುದು, ಆಕ್ರಮಣ ಶೀಲರಾಗುವುದು ಕೂಡ ಕಂಡು ಬಂದಿದೆ.
ವಿಶ್ವದಲ್ಲಿ ಹೆಸರುವಾಸಿಯಾಗಿರುವ ಹವಾಮಾನ ಬದಲಾವಣೆಯ ಬಗ್ಗೆ ಅಧ್ಯಯನ ನಡೆಸುತ್ತಿರುವ ಕಾರ್ಯಕರ್ತೆ ಗ್ರೇಟಾ ಥನ್
ಬರ್ಗ್, ವಿಶ್ವದ ಹೆಸರುವಾಸಿ ವಾಣಿಜ್ಯೋದ್ಯಮಿ ಇಲ್ಲೋನ್ ಮಸ್ಕ್ ಇಬ್ಬರೂ ಕೂಡ ತಾವು ಮಾಡಿದ ಸಾಧನೆಗಳನ್ನು ಬಣ್ಣಿಸುತ್ತ
ತಮ್ಮಲ್ಲಿರುವ ಆ್ಯಸ್ಪರ್ಗರ್ ನ್ಯೂನತೆ ಒಂದು ರೀತಿಯಲ್ಲಿ ಅದಕ್ಕೆ ಕಾರಣವಾಯಿತು ಎಂದು ತಾವೇ ಘೋಷಿಸಿಕೊಂಡಿದ್ದಾರೆ.
ಈ ನ್ಯೂನತೆ ಇರುವ ವ್ಯಕ್ತಿಗಳು ಬಾಲ್ಯಾವಸ್ಥೆಯಲ್ಲಿ ಶಾಲೆಯಲ್ಲಿ ಇತರರಿಂದ ಬೇರ್ಪಡೆಗೊಳ್ಳುತ್ತಾರೆ. ಇದಕ್ಕೆ ಪ್ರಮುಖ ಕಾರಣ
ಅವರು ತಮ್ಮ ಆಸಕ್ತಿಗಳಿಂದ ಮತ್ತು ಧೋರಣೆಗಳಿಂದ ವಿಲಕ್ಷಣ ವ್ಯಕ್ತಿಗಳಂತೆ ತೋರುತ್ತಿರುತ್ತಾರೆ.
ಈ ನ್ಯೂನತೆ ಉಂಟಾಗಲು ಮೆದುಳಿನ ಬೆಳವಣಿಗೆಯಲ್ಲಿ ಅನುವಂಶಿಕ ಹಾಗೂ ಪರಿಸರದ ಕೆಲವು ಕಾರಣಗಳನ್ನು ವಿಜ್ಞಾನಿಗಳು
ಗಮನಿಸಿರುತ್ತಾರೆ. ಮಗುವಿನ ತಾಯಿಗೆ ಗರ್ಭಿಣಿ ಅವಸ್ಥೆಯಲ್ಲಿ ವೈರಲ್ ಅಥವಾ ಬ್ಯಾಕ್ಟೀರಿಯಗಳ ಸೋಂಕು ಬಂದಿದ್ದರೆ ಅಥವಾ
ತಾಯಿ ಗರ್ಭಿಣಿ ಅವಸ್ಥೆಯಲ್ಲಿ ನಿಷ್ಕ್ರಿಯ ಧೂಮಪಾನದ ಪ್ರಭಾವಕ್ಕೆ ಒಳಗಾಗಿದ್ದರೆ ಮಗುವಿನಲ್ಲಿ ನ್ಯೂನತೆ ಕಂಡು ಬರಬಹುದು
ಎಂದು ವಿಜ್ಞಾನಿಗಳು ತಿಳಿಸುತ್ತಾರೆ. ಈ ಸಮಸ್ಯೆ ಕೆಲವೊಂದು ಕುಟುಂಬಗಳಲ್ಲಿ ಹೆಚ್ಚು ಕಂಡುಬರುವುದರಿಂದ ಅನುವಂಶಿಕವಾಗಿ
ಕೂಡ ಮೆದುಳಿನ ರಚನೆಯಲ್ಲಿ ಸಮಸ್ಯೆಗಳಿರಬಹುದು ಎಂದು ಕೂಡ ವಿಜ್ಞಾನಿಗಳು ನಂಬುತ್ತಾರೆ. ತಾಯಿ ಗರ್ಭಿಣಿಯಾಗುವಾಗ
ತಾಯಿಯ ವಯಸ್ಸು 35ಕ್ಕಿಂತ ಹೆಚ್ಚು ಇದ್ದಲ್ಲಿ ಹುಟ್ಟುವ ಮಕ್ಕಳಲ್ಲಿ ಈ ನ್ಯೂನತೆ ಕಂಡು ಬರಬಹುದು ಎಂದು ಒಂದು ವಾದವಿದೆ.
ಬಾಲ್ಯಾವಸ್ಥೆಯಲ್ಲಿ ಈ ಮಕ್ಕಳು ಕೆಲವರು ಅತಿ ಚಟುವಟಿಕೆಯನ್ನು ಹೊಂದಿರುತ್ತಾರೆ. ಇದರಿಂದಾಗಿ ಕೂಡ ಶಾಲೆಯಲ್ಲಿ
ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ ನ್ಯೂನತೆಯಿಂದ ಬಳಲುವವರು ಕೆಲವರು ಹೆಚ್ಚಿನ ಬುದ್ಧಿಮತ್ತೆಯನ್ನು ಕೂಡ
ಹೊಂದಿರುತ್ತಾರೆ. ಇದರಿಂದಾಗಿ ಶಾಲೆಯಲ್ಲಿ ಹೇಳಿಕೊಡುವ ವಿಷಯಗಳು ಅವರಿಗೆ ಸಾಧಾರಣ ಮತ್ತು ಸರಳ ಅನ್ನಿಸಿ ಇದನ್ನು
ಹಾಗೆಯೇ ಶಿಕ್ಷಕರಿಗೆ ತಿಳಿಸಿದಾಗ ಅವರ ಸಿಟ್ಟಿಗೆ ಬಲಿಯಾಗುತ್ತಾರೆ.
ಈ ನ್ಯೂನತೆ ಇರುವ ವ್ಯಕ್ತಿಗಳು ತಮ್ಮದೇ ಆದ ಕೆಲವು ಪೂರ್ವ ನಿರ್ಧಾರಿತ ನಿಯಮಗಳು ಮತ್ತು ದಿನಚರಿಯನ್ನು
ಹೊಂದಿರುತ್ತಾರೆ. ಅದರಲ್ಲಿ ಸ್ವಲ್ಪ ಏನಾದರೂ ಬದಲಾವಣೆ ಕಂಡು ಬಂದಲ್ಲಿ ಅವರಿಗೆ ಮನಸ್ಸಿಗೆ ಕಿರಿಕಿರಿ ಉಂಟಾಗುತ್ತದೆ.
ಶಾಲೆಗಳಲ್ಲಿ ಇವರ ವಿಶಿಷ್ಟ ವಿಚಿತ್ರ ನಡುವಳಿಕೆಗಳು ಅವರನ್ನು ಸ್ನೇಹಿತರ ಮುಂದೆ ನಗೆ ಪಾಟಲು ಮಾಡಬಹುದು. ಈ
ಕಾರಣದಿಂದ ಈ ನ್ಯೂನತೆ ಇರುವ ಮಕ್ಕಳು ಶಾಲೆಗೆ ಹೋಗಲು ನಿರಾಕರಿಸಬಹುದು.
ಇಂತಹ ಮಕ್ಕಳು ವೈದ್ಯರ ಗಮನಕ್ಕೆ ಬರುವುದು ಹೆಚ್ಚಾಗಿ ಶಾಲಾ ನಿರಾಕರಣೆ ಅಥವಾ ಶಾಲೆಯಲ್ಲಿ ಅತಿ ಚಟುವಟಿಕೆ ಅಥವಾ
ಅವರ ವಿಚಿತ್ರ ವರ್ತನೆಗಳು ಉದಾಹರಣೆಗೆ ಪುನರಾವರ್ತಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಂತಾದ
ಕಾರಣಗಳಿಂದ.ಇದನ್ನು ಶಾಲೆಯಲ್ಲಿ ಗಮನಿಸಿ ಮನೋವೈದ್ಯರ ಅಥವಾ ಮಕ್ಕಳ ತಜ್ಞರ ಬಳಿ ಅವರನ್ನು ಕಳಿಸುತ್ತಾರೆ.
ಇದು ಒಂದು ಬೆಳವಣಿಗೆಯ ನ್ಯೂನ್ಯತೆ. ಇದಕ್ಕೆ ಯಾವುದೇ ಮಾತ್ರೆ ಚಿಕಿತ್ಸೆ ಲಭ್ಯವಿಲ್ಲ. ಆದರೆ ಸಮಾಜದಲ್ಲಿ ಪ್ರತಿಕೂಲ
ಪರಿಸ್ಥಿತಿಗಳನ್ನು ಎದುರಿಸುವಾಗ ಈ ನ್ಯೂನತೆಯ ಕಾರಣದಿಂದ ಇವರಲ್ಲಿ ಆತಂಕ ಅಥವಾ ಖಿನ್ನತೆ ಕಂಡು ಬರಬಹುದು. ಅಂತಹ
ಸಂದರ್ಭದಲ್ಲಿ ಇವರಿಗೆ ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುವ ಮಾತ್ರೆಗಳನ್ನು ವೈದ್ಯರು ಕೊಡಬಹುದು. ಈ ಮಕ್ಕಳ
ಸಂವಹನದ ವೈಶಿಷ್ಟತೆಯ ಕಾರಣದಿಂದ ಅವರಿಗೆ ಉಂಟಾಗುವ ಸಮಸ್ಯೆಗಳಿಗೆ ಸಂವಹನದ ಚಿಕಿತ್ಸೆ ಮತ್ತು ನಡವಳಿಕೆ ಚಿಕಿತ್ಸೆ
ಸ್ಪೀಚ್ ಥೆರಪಿಸ್ಟ್ ಮತ್ತು ಕ್ಲಿನಿಕಲ್ ಮನಶಾಸ್ತ್ರಜ್ಞರು ತಿಳಿಸಿಕೊಡುತ್ತಾರೆ. ಶಾಲಾ ಶಿಕ್ಷಣದಲ್ಲಿ ಇವರಿಗೆ ವಿಶಿಷ್ಟವಾದ
ಬದಲಾವಣೆಗಳನ್ನು ಮಾಡುವ ಅಗತ್ಯತೆ ಇರುತ್ತದೆ. ಶಾಲಾ ಶಿಕ್ಷಕರಿಗೆ ಈ ತರಹದ ಒಂದು ಸಮಸ್ಯೆ ಇದೆ ಅನ್ನುವ ಅರಿವಿನ
ಅಗತ್ಯತೆ ಇದೆ. What the mind does not know, eyes will not see ಆದ್ದರಿಂದ ಇಂತಹ ವಿಶಿಷ್ಟ ನ್ಯೂನತೆಗಳ ಬಗ್ಗೆ ಶಿಕ್ಷಕರಿಗೆ
ಅರಿವು ಅಗತ್ಯ.