Select Page

ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ:
ಇತ್ತೀಚೆಗೆ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಾಲೆ ಒಂದರಲ್ಲಿ ನಡೆದ ಕಾರ್ಯಕ್ರಮವನ್ನು ವಾಟ್ಸಪ್ ನಲ್ಲಿ ಹಾಗೂ ಫೇಸ್ಬುಕ್ನಲ್ಲಿ ಬಹಳಷ್ಟು
ವೈರಲ್ ಮಾಡಲಾಗಿದೆ .ಈ ಕಾರ್ಯಕ್ರಮವು ಜನಸಾಮಾನ್ಯರಲ್ಲಿ ಚರ್ಚಾ ವಿಷಯವೂ ಕೂಡ ಆಗಿದೆ . ಆ ಕಾರ್ಯಕ್ರಮವನ್ನು
ನೋಡಿದಾಗ ಸಾಧಾರಣ 5 ರಿಂದ 8 ತರಗತಿಯ ಮಕ್ಕಳು ಅವರಿಗೆ ಅವರ ಅಪ್ಪ ಅಮ್ಮಂದಿರ ಮೇಲೆ ಪ್ರೀತಿ ಬರಲು ಎಂದು ಹೇಳಿ
ಹಳೆಯ ನೆನಪುಗಳನ್ನು ಮೆಲಕು ಹಾಕಲು ತಿಳಿಸಲಾಗಿದೆ. ಮಗು ಹುಟ್ಟಿದಾಗಿನಿಂದ ಮಗುವಿನ ತಾಯಿ ಮಾಡಿದಂತಹ ಹಲವು
ತ್ಯಾಗಗಳ ಬಗ್ಗೆ ಮಗುವಿಗೆ ಯೋಚಿಸುವಂತೆ ಮಾಡಲಾಗಿದೆ. ಅಲ್ಲಿ ಬಹುಶಃ 200ಕ್ಕೂ ಮೇಲ್ಪಟ್ಟು ಹೆಚ್ಚಾಗಿ ಹೆಣ್ಣು ಮಕ್ಕಳು ಇದ್ದರು.
ಕೆಲವು ಮಕ್ಕಳು ಕಾರ್ಯಕ್ರಮ ನಡೆಸುವವರು ಮಾತನಾಡುತ್ತಿದ್ದಂತೆ ಅದನ್ನು ನೆನೆಸಿಕೊಂಡು ಅಳುತ್ತಿದ್ದರು. ತಮ್ಮ ಜೀವನದ
ಘಟನೆಗಳು ನೆನೆಸಿಕೊಳ್ಳುತ್ತಾ ಮಕ್ಕಳು ಅಳುತ್ತಿದ್ದಂತೆ ಅದನ್ನು ವೈರಲ್ ಮಾಡಲಾಗಿದೆ. ಈ ಕಾರ್ಯಕ್ರಮದ ಬಗ್ಗೆ ನಾಗರಿಕ
ಸಮಾಜದಿಂದ ಬಹಳ ಮೆಚ್ಚುಗೆ ಕೇಳಿ ಬಂದಿದೆ. ಇಂತಹ ಕಾರ್ಯಕ್ರಮಗಳ ಅಗತ್ಯತೆ ಬಹಳಷ್ಟು ಇದೆ ಎಂಬುದು ಹಲವರ
ಅಭಿಪ್ರಾಯ. ಆದರೆ ಒಬ್ಬ ಮನೋವೈದ್ಯನಾಗಿ ನಾನು ಈ ಕಾರ್ಯಕ್ರಮವನ್ನು ಒಟ್ಟಾರೆ ಒಪ್ಪುವುದಿಲ್ಲ. ಈ ರೀತಿಯ
ಕಾರ್ಯಕ್ರಮಗಳು ಮಕ್ಕಳ ಮನೋವೈಜ್ಞಾನಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದಿಲ್ಲವೇ? ಇದು ಮನೋವೈದ್ಯನಾಗಿ
ನನ್ನ ಪ್ರಶ್ನೆ. ಮಕ್ಕಳ ಗುಂಪಿನಲ್ಲಿ ಎಷ್ಟೋ ಮಕ್ಕಳು ನಿಜವಾಗಿ ಇಂತಹ ಅನುಭವಗಳನ್ನು ನೋಡಿಲ್ಲದೆಯೂ ಇರಬಹುದು ಹಾಗೆಯೇ
ಕೆಲವರಿಗೆ ನಿಜ ಜೀವನದಲ್ಲಿ ಹಲವು ಕಹಿ ಅನುಭವಗಳು ಉಂಟಾಗಿರಬಹುದು. ಮಕ್ಕಳ ಗುಂಪಿ ನೊಂದಿಗೆ ವ್ಯವಹರಿಸುವ
ಪ್ರತಿಯೊಬ್ಬ ವ್ಯಕ್ತಿಯು ಆ ಗುಂಪಿನಲ್ಲಿರುವ ಮಕ್ಕಳಲ್ಲಿರುವ ಸಾಮಾಜಿಕ ಆರ್ಥಿಕ ವಿವಿಧತೆಗಳು , ಮಕ್ಕಳು ಹುಟ್ಟಿ ಬೆಳೆದ ವಿವಿಧ
ಪರಿಸರಗಳು ಈ ಬಗ್ಗೆ ಅರಿವುಳ್ಳವರೂ ಆಗಿರಬೇಕು. ಹಾಗೆಯೇ ಭಾವ ಉದ್ವೇಗಕ್ಕೆ ಒಳಗಾಗಿ ಅಳುತ್ತಿದ್ದ ಮಕ್ಕಳು ಅವರ
ವಿಡಿಯೋ ಸೆರೆ ಹಿಡಿಯುವುದು ಎಷ್ಟು ಸರಿ? ಇಂತಹ ಕಾರ್ಯಕ್ರಮಗಳನ್ನು ನಡೆಸುವಾಗ ಈ ಮಕ್ಕಳ ತಾಯಿ ತಂದೆಯರ
ಒಪ್ಪಿಗೆಯನ್ನು ಶಾಲೆ ಪಡೆದಿರುತ್ತದೆಯೇ? ಇಂತಹ ಭಾವ ಉದ್ವೇಗಕ್ಕೆ ಒಳಗಾದ ಮಕ್ಕಳು ಕೆಲವೊಮ್ಮೆ ಮಾನಸಿಕ ಮತ್ತು
ಭಾವನಾತ್ಮಕ ಸಮಸ್ಯೆಗಳಿಗೆ ಒಳಗಾಗುವುದು ಸಹಜ ವಲ್ಲವೇ. ಈ ಮಕ್ಕಳಲ್ಲಿ ಯಾವುದಾದರೂ ಒಂದು ಮಗು ಈ ರೀತಿಯ
ಕಾರ್ಯಕ್ರಮವನ್ನು ನೋಡಿ ಪಾಪಪ್ರಜ್ಞೆ ಬೆಳೆಸಿಕೊಳ್ಳುವುದು, ತನ್ನ ಆತ್ಮಭಿಮಾನವನ್ನು ಕಡಿಮೆ ಮಾಡಿಕೊಳ್ಳುವುದು
ಮಾಡಿಕೊಂಡರು ಅದು ಯಾರು ಎಂದಿಗೂ ಚರ್ಚಿಸಲಿಕ್ಕಿಲ್ಲ. ಮನಸ್ಸಿನಲ್ಲೆ ನೊಂದುಕೊಂಡು ಕೆಲವೊಮ್ಮೆ ಆತಂಕದ ಸಮಸ್ಯೆ,
ಖಿನ್ನತೆ , ನಿದ್ರಾಹೀನತೆ ಮುಂತಾದ ಸಮಸ್ಯೆಗಳಿಗೆ ತುತ್ತಾಗಬಹುದು. ನಿಜ ಹೇಳಬೇಕೆಂದರೆ ಈ ವಿಡಿಯೋ ದಲ್ಲಿ
ಮಾತನಾಡಿರುವ ವ್ಯಕ್ತಿಯ ಬಗ್ಗೆ ನನಗೇನು ಗೊತ್ತಿಲ್ಲ ಮತ್ತು ಅವರು ಉಪಯೋಗಿಸಿದ ತಂತ್ರ ಏನು ಅನ್ನೋದರ ಬಗ್ಗೆ ಮಾಹಿತಿ
ಇಲ್ಲ. ಆದರೆ ಈ ರೀತಿಯಾಗಿ ಮಕ್ಕಳನ್ನು ಅಳಿಸುವ ಮತ್ತು ಅವರ ಮನಸ್ಸನ್ನು ಘಾಸಿಗೊಳಿಸುವ ಹಕ್ಕು ಯಾರಿಗೂ ಇಲ್ಲ . ಒಬ್ಬ
ಮನೋವೈದ್ಯನಾಗಿ ನನ್ನ ಅಭಿಪ್ರಾಯವೇನೆಂದರೆ ಜನಸಾಮಾನ್ಯರು ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರದಿಂದಿರಬೇಕು.
ಈಗಾಗಲೇ ನಮ್ಮ ಮಕ್ಕಳ ಮೇಲೆ ಸಾಕಷ್ಟು ಒತ್ತಡಗಳು ಏರಲಾಗುತ್ತಿದೆ ಸಣ್ಣ ಮಕ್ಕಳು ಈ ರೀತಿಯ ಕಾರ್ಯಕ್ರಮಗಳಿಂದ
ಬಹಳ ಬೇಗ ಪ್ರಭಾವಿತರಾಗುತ್ತಾರೆ ಹಾಗೂ ಅವರ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ ಎಂಬುದು
ತಿಳಿಯಬೇಕಾದ ವಿಷಯ easy suggestability ಅಂದರೆ ಮಕ್ಕಳು ಕೆಲವೊಂದು ವಿಷಯಗಳನ್ನು ಬಹಳ ಬೇಗ ನಂಬಿ ಬಿಡುತ್ತಾರೆ.
ಅಂತಹ ಸಂದರ್ಭದಲ್ಲಿ ಈ ಕಾರ್ಯಕ್ರಮಗಳಲ್ಲಿ ಹೇಳುವ ಕೆಲವು ವಿಷಯಗಳು ನಂಬಿ ಮಕ್ಕಳು ಪಾಪ ಪ್ರಜ್ಞೆ ಬೆಳೆಸಿಕೊಂಡರೆ
ಹೇಗೆ? ಮಕ್ಕಳ ಮನಸ್ಸಿನ ಮೇಲೆ ನಡೆಯುವ ಈ ರೀತಿಯ ಪ್ರಯೋಗಗಳ ಬಗ್ಗೆ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕು.

ಶಾಲೆಗಳಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಬೆಳೆಸುವ ಕಾರ್ಯಕ್ರಮಗಳಾಗಬೇಕು ಹಾಗೂ ಮಕ್ಕಳಿಗೆ ಮಾನಸಿಕ ಆರೋಗ್ಯದ ಬಗ್ಗೆ
ಅರಿವು ಮೂಡಿಸುವ ಕಾರ್ಯಕ್ರಮಗಳು ಸ್ವಾಗತಾರ್ಹ. ಇಂದು ಮಕ್ಕಳಿಗೆ ಬೇರೆ ಬೇರೆ ರೀತಿಯಲ್ಲಿ ಮಾನಸಿಕ ತೊಳಲಾಟಗಳು
ಹೆಚ್ಚುತ್ತಿವೆ. ಪರಿಚಿತದಿಂದಲೇ ಶೋಷಣೆಗೆ ಒಳಗಾಗುತ್ತಿರುವ ಮಕ್ಕಳು, ಮನೆಯಿಂದಲೇ ಒತ್ತಡಕೆ ಒಳಗಾಗುತ್ತಿರುವ ಮಕ್ಕಳು,
ತಮ್ಮನ್ನು ಇತರರೊಂದಿಗೆ ತುಲನೆ ಮಾಡಿಕೊಂಡು ಮುದುಡುತ್ತಿರುವ ಮಕ್ಕಳು, ಸಣ್ಣ ವಯಸ್ಸಿನಿಂದಲೇ ಆಟ ಮತ್ತು ಪಠ್ಯೇತರ
ಚಟುವಟಿಕೆಗಳಿಂದ ವಂಚಿತರಾಗಿ , ತಾಯಿ ತಂದೆಯವರಿಗೆ ಖುಷಿಪಡಿಸಲು ಮಾರ್ಕ್ಸ್ ಪಡೆದುಕೊಳ್ಳಲು ಒದ್ದಾಡುತ್ತಿರುವ ಮಕ್ಕಳು
ಹೀಗೆ ಮಕ್ಕಳ ಸಮಸ್ಯೆಗಳು ಹಲವು. ಇಂತಹ ಸಮಯದಲ್ಲಿ ಶಾಲೆಗಳಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಹೆಚ್ಚಿಸುವ
ಕಾರ್ಯಕ್ರಮಗಳ ಅಗತ್ಯತೆ ಬಹಳಷ್ಟು ಇದೆ. ಮಕ್ಕಳಿಗೆ ದೈಹಿಕ ಹಾಗು ಲೈಂಗಿಕ ಶೋಷಣೆ ಮಾಡುವವರನ್ನು ಗುರುತಿಸುವುದು
ಹೇಗೆ ಹಾಗೂ ಅವರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಬಗ್ಗೆ, “ಗುಡ್” ಟಚ್ ಮತ್ತು *ಬ್ಯಾಡ್” ಟಚ್ ಬಗ್ಗೆ ಸರಿಯಾದ
ಮಾಹಿತಿ ನೀಡುವ ಅಗತ್ಯತೆ ಇದೆ. ಹಾಗೆಯೇ ಹಲವು ಮಕ್ಕಳಿಗೆ ಅತಿ ಚಟುವಟಿಕೆ, ಕಲಿಕಾ ತೊಂದರೆಗಳು, ಬೌದ್ಧಿಕ ಅಸಾಮರ್ಥ್ಯ,
ಮನೆಯ ಇತರ ಮಕ್ಕಳೊಂದಿಗೆ ಮತ್ಸರ ಗುಣ, ಹಾಸಿಗೆಯಲ್ಲಿ ಮೂತ್ರ ಮಾಡುವುದು, ಅತಿಯಾದ ಮೊಬೈಲ್ ಬಳಕೆ, ಮುಂತಾದ
ಭಾವನಾತ್ಮಕ ಸಮಸ್ಯೆಗಳು ಇವುಗಳತ್ತ ಶಾಲೆಗಳು ಗಮನ ಹರಿಸಬೇಕು. ಮಕ್ಕಳಿಗೆ ಶಾಲೆಯಲ್ಲಿ ಆಟ ಹಾಗೆಯೇ ತಮ್ಮ ಆತ್ಮ
ಅಭಿಮಾನವನ್ನು ಹೆಚ್ಚಿಸಿಕೊಳ್ಳುವ ಕಾರ್ಯಕ್ರಮಗಳ ಅವಶ್ಯಕತೆ ಬಹಳಷ್ಟು ಇದೆ. ಮಕ್ಕಳು ಖುಷಿಯಿಂದ ಶಾಲೆಗೆ ಬಂದು
ಖುಷಿಯಿಂದಲೇ ಹೊರಗೆ ಹೋಗುವುದು ಅತಿ ಅಗತ್ಯವಾಗಿದೆ . ಆ ನಿಟ್ಟಿನಲ್ಲಿ ಶಾಲೆಗಳಲ್ಲಿ ವೈಜ್ಞಾನಿಕ ತಳಹದಿ ಹೊಂದಿರುವಂತಹ
ಕಾರ್ಯಕ್ರಮಗಳನ್ನು ಶಾಲೆ ನಡೆಸಬೇಕಾಗಿದೆ. ಈ ಬಗ್ಗೆ ಶಾಲೆಯವರು ನುರಿತ ತಜ್ಞರ ಅಭಿಪ್ರಾಯ ಪಡೆದು ಮಕ್ಕಳಿಗೆ
ಕಾರ್ಯಕ್ರಮಗಳನ್ನು ಮಾಡುವುದು ಒಳ್ಳೆಯದು. ಮಕ್ಕಳ ಮನೋಸ್ಥೈರ್ಯಕ್ಕೆ ಕುಂದುಂಟು ಮಾಡುವ ಕಾರ್ಯಕ್ರಮಗಳು
ಶಾಲೆಗಳಲ್ಲಿ ನಡೆಯದಿರಲಿ ಎಂಬುದು ಮನೋ ವೈದ್ಯನಾಗಿ ನನ್ನ ಹಾರೈಕೆ. ಈ ಬಗ್ಗೆ ಶಿಕ್ಷಣ ಇಲಾಖೆ ಕೂಡ ಯೋಚನೆ ಮಾಡಿ
ಶಾಲೆಗಳಿಗೆ ಕಾರ್ಯಕ್ರಮಗಳು ನಡೆಸುವಾಗ ವೈಜ್ಞಾನಿಕ ಬುನಾದಿ ಇರಬೇಕು, ಹಾಗೆಯೇ ಸಕಾರಾತ್ಮಕ ಮನಸ್ಥಿತಿ ಬೆಳೆಸುವ
ಕಾರ್ಯಕ್ರಮಗಳಾಗಬೇಕು ಹಾಗೂ ಕಾರ್ಯಕ್ರಮ ನಡೆಸುವವರು ಯಾರು ಮತ್ತು ಅವರ ಅನುಭವ ಮತ್ತು ಅದರಲ್ಲಿ ಅವರು ಪಡೆದ
ಪದವಿಗಳು ಈ ಬಗ್ಗೆ ಗಮನಹರಿಸಬೇಕು.