Select Page

ಅಪಸ್ಮಾರ ಚಿಕಿತ್ಸೆ ಈ ಹಿಂದೆ ತಿಳಿಸಿದಂತೆ ಫಿಟ್ಸ್ ಬಂದರೆ ಅದನ್ನು ಅಪಸ್ಮಾರ ರೋಗ ಅಥವಾ ಎಪಿಲೆಪ್ಸಿ ಎಂದು
ಪರಿಗಣಿಸಲಾಗುವುದಿಲ್ಲ. ಆದರೆ ಫಿಟ್ಸ್ ಬರಲು ಈ ಹಿಂದೆ ತಿಳಿಸಿದ ಯಾವುದೇ ದೈಹಿಕ ಕಾರಣಗಳು ಇಲ್ಲದೆ ಪದೇ ಪದೇ
ಫಿಟ್ಸ್ ಬರುತ್ತಿದ್ದರೆ ಹಾಗೂ ಮೆದುಳಿನ ಇಇಜಿಯಲ್ಲಿ ಬದಲಾವಣೆಗಳಿದ್ದರೆ ಅದನ್ನು “ಅಪಸ್ಮಾರ₹ ಎಂದು
ಪರಿಗಣಿಸುತ್ತಾರೆ.
ಫಿಟ್ಸ್ ಪದೇ ಪದೇ ಬರುತ್ತಿದ್ದಲ್ಲಿ ಮೆದುಳಿನ ವಿದ್ಯುತ್ ತರಂಗಗಳನ್ನು ನಿಯಂತ್ರಿಸಲು ಇಂಜೆಕ್ಷನ್ ಅಥವಾ ಮಾತ್ರೆಗಳನ್ನು
ಬಳಸುತ್ತಾರೆ.ಫಿಟ್ಸ್ ಯಾವುದೇ ಕಾರಣಕ್ಕೂ ಬಹಳಷ್ಟು ಹೊತ್ತು ಉಂಟಾದಲ್ಲಿ ಮೆದುಳಿನ ಮೇಲೆ ಪರಿಣಾಮ ಬೀರುವ ಕಾರಣದಿಂದ
ಅದನ್ನು ನಿಲ್ಲಿಸಲು ಕೆಲವು ಇಂಜೆಕ್ಷನ್ ಗಳು ಸಹಾಯಕ. ಒಂದು ಫಿಟ್ಸ್ ನ ಅವಧಿ ಹೆಚ್ಚೆಂದರೆ 1 ನಿಮಿಷದಿಂದ 3 ನಿಮಿಷ
ಇರಬಹುದು. ಅದಕ್ಕಿಂತ ಜಾಸ್ತಿ ಆದಲ್ಲಿ ಅದು ಒಂದು ವೈದ್ಯಕೀಯ ತುರ್ತು ಪರಿಸ್ಥಿತಿ. ಆ ಕೂಡಲೇ ಇಂಟ್ರವಿನಸ್ ಇಂಜೆಕ್ಷನ್
ಮುಖಾಂತರ ಫಿಟ್ಸ್ ನಿಲ್ಲಿಸಲೇಬೇಕು. ಆ ಕಾರಣದಿಂದ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಅಲ್ಲಿ ಫಿಟ್ಸ್ ತಡೆ
ಹಿಡಿಯುವ ಇಂಜೆಕ್ಷನ್ ಜೊತೆಗೆ ಮೆದುಳಿಗೆ ಆಮ್ಲಜನಕ ಕೂಡ ಕೊಡಬೇಕಾಗುತ್ತದೆ.
ಫಿಟ್ಸ್ ನ ರೀತಿ ಹಾಗೂ ಮೆದುಳಿನ ಇಇಜಿ ನೋಡಿ ವೈದ್ಯರು ಇನ್ನೊಮ್ಮೆ ಫಿಟ್ಸ್ ಬಾರದೇ ಇರುವಂತೆ “ಆಂಟಿ ಏಪ್ಪಿಲೆಪ್ಟಿಕ್
“ಮಾತ್ರೆಗಳನ್ನು ಬರೆದುಕೊಡುತ್ತಾರೆ. ಅದನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ನಂತೆ ತೆಗೆದುಕೊಳ್ಳಬೇಕು. ಫಿಟ್ಸ್ ನಿಲ್ಲದೆ ಹೋದಲ್ಲಿ ಈ
ಮಾತ್ರೆಗಳ ಡೋಸ್ ಏರಿಸುವುದು ಇಲ್ಲವೇ ಇನ್ನೊಂದು ಅದೇ ತರಹದ ಮಾತ್ರೆಯನ್ನು ತೆಗೆದುಕೊಳ್ಳಲು ಹೇಳುವುದು ವಾಡಿಕೆ.
ಕೆಲವೊಮ್ಮೆ ಈ ಮಾತ್ರೆಗಳ ರಕ್ತದ ಮಟ್ಟವನ್ನು ಕೂಡ ವೈದ್ಯರು ಪರೀಕ್ಷಿಸಲು ಹೇಳಬಹುದು. ಒಮ್ಮೆ ಪಿಟ್ಸ್ ನಿಂತ ಮೇಲೆ ಪ್ರತಿ
ಮೂರರಿಂದ ಆರು ತಿಂಗಳಿಗೊಮ್ಮೆ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಬೇಕು. ಇದು ದೀರ್ಘಕಾಲಿನ ಚಿಕಿತ್ಸೆ
ಆಗಿರುವುದರಿಂದ ಚಿಕಿತ್ಸೆಯಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಗುರುತಿಸಲು ವೈದ್ಯರು ಲಿವರ್ ಫಂಕ್ಷನ್ ಟೆಸ್ಟ್, ಕಿಡ್ನಿ
ಫಂಕ್ಷನ್ ಟೆಸ್ಟ್ ಮುಂತಾದ ಟೆಸ್ಟ್ ಗಳನ್ನು ವರ್ಷಕ್ಕೊಮ್ಮೆ ಮಾಡಲು ಹೇಳ ಬಹುದು. ಹಾಗೆಯೇ ಮೆದುಳಿನ ಇಇಜಿ ಕೂಡ ಅಗತ್ಯ
ಬಿದ್ದಾಗ ಮಾಡಲು ಹೇಳಬಹುದು.
ಫಿಟ್ಸ್ ಸಮಸ್ಯೆಗೆ ಫೀನೋ ಬಾರ್ಬಿಟೋನ್, ಹೆಪ್ಟಾಯಿನ್, ಕಾರ್ಬಮಜೆಪಿನ್, ಓಕ್ಸ್ ಕಾರ್ಬಜೆಪಿನ್, ವಾಲ್ಬ್ರೋಯಿಕ್
ಆಸಿಡ್,ಲೇವರಿಸಿಟೆಮ್, ಕ್ಲೋಬಜಾಮ್ ಮತ್ತು ಕ್ಲೋನೊಜಫ್ಯಾಮ್ ಮುಂತಾದ ಮಾತ್ರೆಗಳನ್ನು ಉಪಯೋಗಿಸುತ್ತಾರೆ.
ಇವುಗಳನ್ನು ಪ್ರಾರಂಭಿಸಿದ ಮೇಲೆ ಒಂದೇ ಒಂದು ಹೊತ್ತು ಕೂಡ ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಈ ಕಾಯಿಲೆ
ಇರುವಾಗ ಇದರ ಚಿಕಿತ್ಸೆಯೊಂದಿಗೆ ಬೇರೆ ದೈಹಿಕ ಸಮಸ್ಯೆಗಳ ಚಿಕಿತ್ಸೆ ಪಡೆಯುವಾಗ ಎಚ್ಚರ ವಹಿಸಬೇಕು. ಕೆಲವು
ಆಂಟಿಬಯೋಟಿಕ್ ಗಳು ಉಬ್ಬಸ ನಿವಾರಕಗಳು ಉದಾಹರಣೆಗೆ ಸಿಪ್ರೊ ಫ್ಲಾಕ್ಸಾಸಿನ್ , ಡೇರಿಫಿಲಿನ್ ಮುಂತಾದ ಮಾತ್ರೆಗಳನ್ನು
ತೆಗೆದುಕೊಳ್ಳಲು ಬೇರೆ ವೈದ್ಯರು ಹೇಳಿದರೆ ಫಿಟ್ಸ್ ಕಾಯಿಲೆಯ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ವೈದ್ಯರ ಗಮನ ಸೆಳೆಯಬೇಕು .
ಆದಷ್ಟು ಈ ಮಾತ್ರೆಗಳನ್ನು ತೆಗೆದುಕೊಳ್ಳಬಾರದು.
ಫಿಟ್ಸ್ ನ ಮಾತ್ರೆಗಳನ್ನು ನಿಲ್ಲಿಸಲು ನಿರ್ಧಾರವನ್ನು ವೈದ್ಯರು ವ್ಯಕ್ತಿಯ ರೋಗ ಚರಿತ್ರೆಯನ್ನು ಗಮನಿಸಿ ನಿರ್ಧಾರ ಮಾಡುತ್ತಾರೆ.
ಹಾಗೆಯೇ ವ್ಯಕ್ತಿ ಏನು ಕೆಲಸ ಮಾಡುತ್ತಾನೆ, ಆತನಿಗೆ ಬೇರೆ ಇನ್ನೇನು ಸಮಸ್ಯೆಗಳಿವೆ ಇವುಗಳನ್ನೆಲ್ಲ ಗಮನಿಸಿ ವೈದ್ಯರು ಮಾತ್ರೆ
ನಿಲ್ಲಿಸುವ ನಿರ್ಧಾರ ಮಾಡಬೇಕಾಗುತ್ತದೆ.

ಸಾಮಾನ್ಯವಾಗಿ ಫಿಟ್ಸ್ ಇಲ್ಲದೆ ಕನಿಷ್ಠ ಒಂದು ವರ್ಷವಾದರೂ ಕಳೆದಲ್ಲಿ ವೈದ್ಯರು ಮಾತ್ರೆಗಳನ್ನು ಕಡಿಮೆ ಮಾಡಲು
ನಿರ್ಧರಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಮೂರರಿಂದ ಐದು ವರ್ಷ ಫಿಟ್ಸ್ ಇಲ್ಲದೆ ಹೋದಾಗ ಮಾತ್ರೆಗಳನ್ನು ವೈದ್ಯರು ಕಡಿಮೆ
ಮಾಡುತ್ತಾ ನಿಲ್ಲಿಸಬಹುದು. ಕೆಲವೊಮ್ಮೆ ತಲೆಗೆ ಪೆಟ್ಟು ಬಿದ್ದು ಅಥವಾ ಮದ್ಯ ಮಾದಕ ದ್ರವ್ಯ ವ್ಯಸನದ ಹಿಂತೆಗೆತದ ಚಿಹ್ನೆಯಾಗಿ
ಫಿಟ್ಸ್ ಉಂಟಾಗಿದ್ದರೆ ಒಂದೇ ವರ್ಷದಲ್ಲಿ ಕೂಡ ಮಾತ್ರೆಗಳನ್ನು ನಿಲ್ಲಿಸುತ್ತಾರೆ. ಆದರೆ ಅದರ ಮುಂಚೆ ಇಇಜಿ ಪರೀಕ್ಷೆ
ಹೇಳಬಹುದು. ಇಇಜಿ ತರಂಗಗಳು ಓದಿ ಗಮನಿಸಿ ವೈದ್ಯರು ನಿರ್ಧಾರವನ್ನು ಮಾಡುತ್ತಾರೆ. ಯಾವುದೇ ಕಾರಣಕ್ಕೂ ವೈದ್ಯರ
ನಿರ್ಧಾರವಿಲ್ಲದೆ ಮಾತ್ರೆಗಳನ್ನು ಒಂದೇ ಒಂದು ಹೊತ್ತು ನಿಲ್ಲಿಸಬೇಡಿ.
ಅಪಸ್ಮಾರ ದ ಬಗ್ಗೆ ಹಲವು ಅಪನಂಬಿಕೆಗಳು ಜನಸಾಮಾನ್ಯರಲ್ಲಿ ಇದೆ. ಅಪಸ್ಮಾರ ಒಬ್ಬರಿಂದ ಇನ್ನೊಬ್ಬರಿಗೆ ಹಬ್ಬುವ ಕಾಯಿಲೆ
ಅಲ್ಲ. ಫಿಟ್ಸ್ ಬಂದಾಗ ಯಾರಾದರೂ ಮುಟ್ಟಿದರೆ ಅವರಿಗೂ ಬರುತ್ತದೆ ಅನ್ನುವುದು ಸುಳ್ಳು.
ಅಪಸ್ಮಾರ ಮಾನಸಿಕ ಕಾಯಿಲೆಯಲ್ಲ. ಈ ಬಗ್ಗೆ ಹಿಂದಿನ ಲೇಖನದಲ್ಲಿ ಸವಿಸ್ತಾರವಾಗಿ ತಿಳಿಸಿರುತ್ತೇನೆ. ಆದರೆ ಈ ಸಮಸ್ಯೆಯಿಂದ
ಬಳಲುತ್ತಿರುವ ಅನೇಕರಿಗೆ ಆತಂಕದ ಸಮಸ್ಯೆ ಖಿನ್ನತೆ ವ್ಯಕ್ತಿತ್ವ ದೋಷಗಳು ಉಂಟಾಗುವುದು.
ಅಪಸ್ಮಾರ ಇರುವವರು ಮದುವೆಯಾಗಬಾರದು ಎಂಬುದು ಸತ್ಯಕ್ಕೆ ದೂರವಾದ ವಿಷಯ. ಆದರೆ ಈ ಸಮಸ್ಯೆ ಇರುವುದನ್ನು
ಮುಚ್ಚಿಟ್ಟು ಮದುವೆಯಾಗಬಾರದು. ಈ ಸಮಸ್ಯೆಯ ಬಗ್ಗೆ ತಮ್ಮ ಭಾವಿ ಸಂಗಾತಿಯೊಂದಿಗೆ ಚರ್ಚಿಸಿ ನಿರ್ಧರಿಸಬೇಕು. ಈ
ಸಮಸ್ಯೆ ಮುಚ್ಚಿಟ್ಟು ಮದುವೆಯಾದಲ್ಲಿ ವಿಚ್ಛೇದನಕ್ಕೆ ನಾಂದಿ ಆಗಬಹುದು.
ಹಾಗೆಯೇ ಈ ಸಮಸ್ಯೆ ಇರುವವರು ಕೆಲವು ವಿಷಯಗಳಲ್ಲಿ ಎಚ್ಚರ ವಹಿಸಬೇಕು.
ಅಪಸ್ಮಾರ ಇರುವವರು ರಸ್ತೆಯಲ್ಲಿ ಡ್ರೈವಿಂಗ್ ಮಾಡುವಾಗ ಫಿಟ್ಸ್ ಉಂಟಾದಲ್ಲಿ ಅವರಿಗೂ ಅವರ ಜೊತೆ ಇರುವವರೆಗೂ
ಮಾರಣಾಂತಿಕವಾಗಬಹುದು. ಈ ಕಾರಣದಿಂದ ಕಾನೂನಿನಂತೆ ಈ ಕಾಯಿಲೆಯವರು ಡ್ರೈವ್ ಮಾಡಲು ಆಗುವುದಿಲ್ಲ. ಹಲವು
ಸಂದರ್ಭಗಳಲ್ಲಿ ಈ ಕಾಯಿಲೆಯ ಬಗ್ಗೆ ಮಾಹಿತಿಯನ್ನು ಮುಚ್ಚಿಟ್ಟು ಹಲವರು ಡ್ರೈವಿಂಗ್ ಮುಂದುವರಿಸುತ್ತಾರೆ .ಇದು ತಪ್ಪು.
ಹಾಗೆ ಈ ಸಮಸ್ಯೆ ಇರುವವರು ಬೆಂಕಿಯ ಹತ್ತಿರ ಕೆಲಸ ಮಾಡುವುದು, ಈಜುವುದು ನಿಷೇಧಿಸಲಾಗಿದೆ. ಇದಕ್ಕೆ ಪ್ರಮುಖ
ಕಾರಣವೆಂದರೆ ಈ ಸಮಯದಲ್ಲಿ ಅವರಿಗೆ ಏನಾದರೂ ಫಿಟ್ಸ್ ಬಂದಲ್ಲಿ ಅವರು ಅಪಘಾತಕ್ಕೊಳಗಾಗಬಹುದು.
ಈ ಸಮಸ್ಯೆ ಇರುವವರು ಎಂದಿಗೂ ಕೂಡ ನಿದ್ರೆಯನ್ನು ನಿರ್ಲಕ್ಷಿಸಬಾರದು. ಕನಿಷ್ಠ ಆರು ಗಂಟೆ ನಿದ್ರೆ ಇವರಿಗೆ ಅತಿ ಅಗತ್ಯ.
ನಿದ್ರಾಹೀನತೆ ಫಿಟ್ಸ್ ಬರುವಂತೆ ಪ್ರಚೋದಿಸಬಹುದು. ಈ ಸಮಸ್ಯೆ ಇರುವವರು ಆದಷ್ಟು ರಾತ್ರಿ ಪಾಳೇ ಕೆಲಸವನ್ನು ಮಾಡದೆ
ಇರುವುದು ಒಳ್ಳೆಯದು.
ಹಾಗೆಯೇ ಕೆಲವರಿಗೆ ಕೆಲವು ತರಹದ ವಾಸನೆಗಳು, ಅತ್ಯಂತ ಪ್ರಕಾಶಮಾನವಾದ ದೀಪಗಳು ಹಾಗೆಯೇ ಭಾರಿ ಜೋರಾದ
ಸಂಗೀತ ಫಿಟ್ಸ್ ಬರುವಂತೆ ಪ್ರಚೋದಿಸಬಹುದು. ಈ ಬಗ್ಗೆ ಈ ಸಮಸ್ಯೆ ಇರುವವರು ಗಮನಿಸಬೇಕು.
ಮೇಲೆ ತಿಳಿಸಿದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಲ್ಲಿ ಹಾಗೂ ಮಾತ್ರೆಗಳನ್ನು ಸರಿಯಾಗಿ ವೈದ್ಯರ ಸಲಹೆಯಂತೆ
ತೆಗೆದುಕೊಂಡಲ್ಲಿ ಈ ರೋಗ ಸಂಪೂರ್ಣ ನಿಯಂತ್ರಣದಲ್ಲಿ ಇಡಬಹುದು. ಸಮುದಾಯದಲ್ಲಿ ಇದರಿಂದ ಬಳಲುತ್ತಿರುವ ವ್ಯಕ್ತಿಗಳು
ಸಾಮಾನ್ಯ ಜೀವನವನ್ನು ನಡೆಸಬಹುದು. ಈ ಸಮಸ್ಯೆ ಇರುವವರು ಕಳಂಕಿತರಲ್ಲ ಹಾಗೂ ಅವರ ಯಾವುದೇ ತಪ್ಪಿನಿಂದ ಈ
ಸಮಸ್ಯೆ ಬರುವುದಲ್ಲ. ಅವರನ್ನು ಎಂದಿಗೂ ಸಮಾಜದ ಮುಖ್ಯ ವಾಹಿನಿಯಿಂದ ಬೇರ್ಪಡಿಸಬಾರದು.
ಇಲ್ಲಿಗೆ ಅಪಸ್ಮಾರದ ಬಗ್ಗೆ ಲೇಖನ ಮುಗಿಯಿತು.