Select Page

ನಲವತ್ತೈದು ವರ್ಷದ ಬ್ಯಾಂಕ್ ಅಧಿಕಾರಿ ಹರೀಶ್ ಬೆಂಗಳೂರಿನ ನನ್ನ ಮಿತ್ರ ಹೃದಯರೋಗ ತಜ್ಞ ರೊಬ್ಬರಿಂದ ಒಂದು ಕಾಗದ
ಹಿಡಿದುಕೊಂಡು ಬಂದಿದ್ದರು .ಇವರು ಬೆಂಗಳೂರಿನವರೆಗೆ ನನ್ನನ್ನು ಹುಡುಕಿಕೊಂಡು ಬಂದಿದ್ದಾರೆ ..ಆದರೆ ಇವರಿಗೆ
ಅಗತ್ಯವಿರುವುದು ನಿನ್ನ ಸಹಾಯ ಎಂಬುದು ಈ ಕಾಗದದ ಸಾರಾಂಶ .
ಹರೀಶ್ ಹತ್ತಿರ ಮಾತನಾಡಿದಾಗ ತಿಳಿದುಬಂದ ವಿಷಯ ಇಷ್ಟೆ .ಅವರಿಗೆ ಎರಡು ವರ್ಷಗಳ ಹಿಂದೆ ಸಕ್ಕರೆ ಕಾಯಿಲೆ ಇದೆ
ಎಂಬುದು ಗೊತ್ತಾಯಿತು .ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕಾಗಿ ಸಾಕಷ್ಟು ಮಾತ್ರೆಗಳು ,ಆಹಾರದಲ್ಲಿ ಬದಲಾವಣೆ, ದಿನನಿತ್ಯ
ಒಂದು ಗಂಟೆ ವಾಕಿಂಗ್ ಮಾಡುತ್ತಾ ಇದ್ದರು .ಎರಡು ತಿಂಗಳ ಹಿಂದೆ ಕನ್ನಡ ನ್ಯೂಸ್ ಪೇಪರ್ ಒಂದನ್ನು ಓದುತ್ತಾ ಇದ್ದಾಗ
ಆರೋಗ್ಯ ಮಾಹಿತಿ ಕಾಲಂ ಒಂದರಲ್ಲಿ ಹೃದಯ ರೋಗದ ಬಗ್ಗೆ ಓದಿದರು .ಈ ಹೃದಯ ರೋಗ ಅನ್ನುವುದು ಸಕ್ಕರೆ ಕಾಯಿಲೆ
ಇರುವವರಲ್ಲಿ ಬಹಳಷ್ಟು ಕಾಮನ್ ಎಂಬ ವಿಷಯ ಬಾಕ್ಸೈಟಮ್ ಆಗಿ ಬರೆದಿತ್ತು .ಸಕ್ಕರೆ ಕಾಯಿಲೆ ಇರುವಾಗ ಹೃದಯಾಘಾತ
ಬಂದರೂ ಗೊತ್ತಾಗುವುದಿಲ್ಲ ಎಂಬ ವಿಷಯವನ್ನು ಎರಡು ಮೂರು ಕಡೆ ಬರೆದಿದ್ದರು .ಹೃದಯಾಘಾತದ ಚಿಹ್ನೆಗಳ ಬಗ್ಗೆ
ಬರೆಯುತ್ತಾ ಎಡ ಕೈ ಹತ್ತಿರ ನೋವು ಕಾಣಿಸಿಕೊಳ್ಳಬಹುದು ಹೃದಯ ಬಡಿತ ಹೆಚ್ಚಾಗಬಹುದು ಎಂಬುದನ್ನು ಕೂಡ ಬರೆದಿದ್ದರು
.ಇದನ್ನು ಓದಿದ ಹರೀಶ್ ತಮ್ಮ ದೇಹದ ಸಮಸ್ಯೆಗಳತ್ತ ಗಾಢವಾಗಿ ಯೋಚನೆ ಮಾಡಲು ಪ್ರಾರಂಭಿಸಿದರು .ಬ್ಯಾಂಕಿನಲ್ಲಿ
ಇನ್ಸ್ಪೆಕ್ಷನ್ ಬೇರೆ ನಡೆಯುತ್ತಾ ಇತ್ತು .ದೊಡ್ಡ ದೊಡ್ಡ ಫೈಲ್ಗಳನ್ನು ಎತ್ತಿಕೊಂಡು ಮನೆಗೆ ಬರುತ್ತಿದ್ದರು .ಕೆಲಸದ ಒತ್ತಡದಿಂದ ರಾತ್ರಿ
ನಿದ್ದೆಯೇ ಬರುತ್ತಿರಲಿಲ್ಲ .ಅದೇ ಸಮಯದಲ್ಲಿ ಇವರಿಗೆ ಈ ಪತ್ರಿಕೆಯ ಲೇಖನ ಪದೇ ಪದೇ ಮನಸ್ಸನ್ನು ಕಾಡತೊಡಗಿತು ತಮ್ಮ
ಸಕ್ಕರೆ ಕಾಯಿಲೆಗೆ ಮಾತ್ರ ನೀಡುತ್ತಿದ್ದ ಕುಟುಂಬ ವೈದ್ಯರ ಹತ್ತಿರ ಹೋಗಿ ತಮ್ಮ ಸಮಸ್ಯೆಗಳನ್ನು ಹೇಳಿದರು .ಕುಟುಂಬ ವೈದ್ಯರು
ಪರಿಚಯವಿರುವ ಫಿಸಿಷಿಯನ್ ಒಬ್ಬರ ಹತ್ತಿರ ಕಳಿಸಿದರು.ಬಹಳ ಹೊತ್ತು ಪರೀಕ್ಷೆ ಮಾಡಿದ ಫಿಸಿಷಿಯನ್ ಹರೀಶ್ ಗೆ ಒಂದು
ಇಸಿಜಿ ಮಾಡಲು ಹೇಳಿದರು . ಐಸಿಜೆಯಲ್ಲಿ ಏನೂ ಸಮಸ್ಯೆ ಇಲ್ಲ ಎನ್ನುವುದನ್ನು ತಿಳಿಸಿದರು .ಹರೀಶ್ಗೆ ಸ್ವಲ್ಪ
ಸಮಾಧಾನವಾಯಿತು ಮನೆಗೆ ಹೋದರು .ತಮ್ಮ ಹಲವು ಮಿತ್ರರಿಗೆ ಫೋನ್ ಮಾಡಿ ತಮ್ಮ ಸಮಸ್ಯೆಯ ಬಗ್ಗೆ ಹಾಗೂ ಅದು
ಪರಿಹಾರವಾದ ಬಗ್ಗೆ ಹೇಳಿದರು .ಕೆಲವೊಮ್ಮೆ ಕೆಲವು ಮಿತ್ರರು ಅತಿಯಾದ ಕಾಳಜಿ ಇದೆ ಎಂದು ತೋರಿಸಲು ಹೋಗಿ ಕೆಲವು
ಸಮಸ್ಯೆಗಳನ್ನು ತಂದು ಒಡ್ಡುತ್ತಾರೆ .ಹಾಗೆಯೇ ಕಿರಣ್ ಎಂಬ ಒಬ್ಬ ಮಿತ್ರ ಇಸಿಜಿಯಿಂದ ಏನೂ ಗೊತ್ತಾಗುವುದಿಲ್ಲ ..ಹಲವೊಮ್ಮೆ
ಹೃದಯಾಘಾತಗಳು ಅದರಲ್ಲೂ ಡಯಾಬಿಟಿಸ್ ಇರುವವರಿಗೆ ಸೈಲೆಂಟಾಗಿ ಆಗುತ್ತವೆ ..ಹೃದಯ ರೋಗ ತಜ್ಞರೊಬ್ಬರ ಸಲಹೆ
ಪಡೆಯುವುದು ಒಳ್ಳೆಯದು ಎಂದು ತಲೆಯಲ್ಲಿ ಒಂದು ಹುಳ ಬಿಟ್ಟರು .
ಹರೀಶರಿಗೆ ಮತ್ತೊಮ್ಮೆ ಎಡ ಕೈಯಲ್ಲಿ ನೋವು ,ಎದೆ ಬಡಬಡ ಹೊಡೆಯಲು ಶುರುವಾಯಿತು .ಎರಡು ದಿನ ಬಿಟ್ಟು ಹತ್ತಿರದ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿ ಹೃದಯ ರೋಗ ತಜ್ಞರನ್ನು ಭೇಟಿಯಾದರು .ಹೃದಯರೋಗ ತಜ್ಞರು ಈ ಸಿ ಜಿ
ಗಮನಿಸಿದ್ದರು ಮತ್ತು ಇವರ ಮನಸ್ಸಿನಲ್ಲಿರುವ ಹೆದರಿಕೆಯನ್ನು ಗಮನಿಸಿ ಸ್ಟ್ರೆಸ್ ಟೆಸ್ಟ್ ಎಂಬ ಟೆಸ್ಟ್ ಒಂದನ್ನು ಮಾಡಲು
ಹೇಳಿದರು ..ಸ್ಟ್ರೆಸ್ ಟೆಸ್ಟ್ ಎಂದರೆ ನಾವು ಜಿಮ್ನಲ್ಲಿ ನೋಡುವ ಟ್ರೆಡ್ ಮಿಲ್ ತರಹದ ಒಂದು ಯಂತ್ರದ ಮೇಲೆ ಓಡುವುದು ..ಆ
ಸಮಯದಲ್ಲಿ ಇಸಿಜಿ ಮಾಡುತ್ತಾರೆ ..ಹೃದಯಕ್ಕೆ ಓಡುವಾಗ ಒತ್ತಡವಾಗುತ್ತದೆ ಆ ಒತ್ತಡದಿಂದ ಏನಾದರೂ ಈ ಸಿಜಿಯಲ್ಲಿ
ಬದಲಾವಣೆಗಳು ಆಗುತ್ತವೆ ನೋಡುವುದು ಸ್ಟ್ರೆಸ್ ಟೆಸ್ಟ್ ನ ಉದ್ದೇಶ .ಇದು ಕೂಡ ಸರಿಯಾಗಿದೆ ಎಂದು ಹೃದಯರೋಗ ತಜ್ಞರು
ತಿಳಿಸಿದರು .

ಒತ್ತಡದಲ್ಲಿದ್ದಾಗ ಒಮ್ಮೊಮ್ಮೆ ತಲೆಯೊಳಗೆ ಏನಾದರೂ ವಿಷಯ ಹೋಯಿತೆಂದರೆ ಮುಗಿಯಿತು ಏನು ಮಾಡಿದರೂ ಅದು ಹೊರಗೆ
ಹೋಗುವುದಿಲ್ಲ .ಪದೇ ಪದೇ ತನಗೆ ಹೃದಯ ರೋಗವಿರಬಹುದು ಇಸಿಜಿ ಸ್ಟ್ರೆಸ್ ಟೆಸ್ಟ್ ನಿಂದ ಗೊತ್ತಾಗದಂತಹ ಸಮಸ್ಯೆ
ಇರಬಹುದು ಎಂಬ ಯೋಚನೆಗಳು ಹರೀಶರ ತಲೆಯಲ್ಲಿ ಬರತೊಡಗಿತು. ನಿದ್ರೆ ಕಡಿಮೆಯಾಗಿತ್ತು ಇಂಟರ್ನೆಟ್ ನಲ್ಲಿ ಪದೇ ಪದೇ
ಗೂಗಲ್ ಮಾಡಿ ಹೃದಯ ರೋಗದ ಚಿಹ್ನೆಗಳ ಬಗ್ಗೆ ಓದತೊಡಗಿದರು. ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳು ಇಬ್ಬರು
ಗಾಬರಿಗೊಂಡರು.ಹತ್ತಿರದ ಸಂಬಂಧಿಕರೊಬ್ಬರು ಬೆಂಗಳೂರಿನ ಸೂಪರ್ ಸ್ಪೆಸಿಯಾಲಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾ
ಇರುವುದರಿಂದ ಸಲಹೆ ಪಡೆಯಲು ಬೆಂಗಳೂರಿಗೆ ಹೋಗಲು ನಿರ್ಧರಿಸಿದ್ದರು .ಅಲ್ಲಿ ನನ್ನ ಮಿತ್ರ ಹೃದಯ ರೋಗ ತಜ್ಞರನ್ನು
ಅವರನ್ನು ಭೇಟಿಯಾದರು .
ಹರೀಶ ರ ಇಸಿಜಿ ಮತ್ತು ಸ್ಟ್ರೆಸ್ ಟೆಸ್ಟ್ ಗಮನಿಸಿದ ಡಾಕ್ಟರ್ ಕೆಲವು ರಕ್ತ ಪರೀಕ್ಷೆಗಳನ್ನು ಮಾಡಲು ಹೇಳಿದರು. ಈ ಎಲ್ಲಾ
ಪರಿಕ್ಷೆಗಳು ಸರಿ ಇದ್ದದ್ದನ್ನು ನೋಡಿ ಹರೀಶ ರೊಂದಿಗೆ ಬಹಳಷ್ಟು ಹೊತ್ತು ಮಾತನಾಡಿ ತಿಳಿ ಹೇಳಿದರು ತಿಳಿ ಹೇಳಿದರು ಆದರೂ
ಹರೀಶ್ ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಗೂಗಲ್ ನಲ್ಲಿ ಅವರು ಓದಿದ್ದು ಏನೆಂದರೆ ಹೃದಯದ ಕಾಯಿಲೆಯ ಬಗ್ಗೆ
ತಿಳಿದುಕೊಳ್ಳಲು ಮಾಡಬೇಕಾದ ದೊಡ್ಡ ಪರೀಕ್ಷೆ ಎಂದರೆ” ಅಂಜಿಯೊ ಗ್ರಾಂ”, ಅದನ್ನು ಮಾಡಿಯೇ ತೀರಬೇಕು ಎಂದು ಪಟ್ಟು
ಹಿಡಿದರು. ವೈದ್ಯರು ಎಷ್ಟೇ ಹೇಳಿದರು ತಿಳಿದುಕೊಳ್ಳುವ ಮನೋಸ್ಥಿತಿಯಲ್ಲಿ ಹರೀಶರಲ್ಲಿ ಇರಲಿಲ್ಲ .ಕೊನೆಗೆ ಅವರ
ಸಂಬಂಧಿಕರು ಮತ್ತು ಹೆಂಡತಿಯನ್ನು ಕರೆದು ಈ ಕಾಗದವನ್ನು ಬರೆದು ಅವರ ಹತ್ತಿರ ಕೊಟ್ಟು ನನ್ನನ್ನು ಭೇಟಿಯಾಗಲು
ತಿಳಿಸಿದರು. ಒಂದು ತಿಂಗಳವರೆಗೆ ಕೆಲವು ಮಾತ್ರೆಗಳನ್ನು ಕೊಟ್ಟು ಮುಂದಿನ ತಿಂಗಳು ಅಂಜಿಯೋಗ್ರಾಂ ಮಾಡುವುದು ಎಂದು
ಹೇಳಿ ಕಳಿಸಿದರು. ಮನಸ್ಸಿಲ್ಲದ ಮನಸ್ಸಿನಲ್ಲಿ ಹರೀಶ್ ಮತ್ತು ಮನೆಯವರು ಉಡುಪಿಗೆ ವಾಪಸ್ ಬಂದರು.
ಹರೀಶ ರೊಂದಿಗೆ ನಾನು ಮಾತನಾಡಿದಾಗ ನನಗೆ ತಿಳಿದು ಬಂದದ್ದೇನೆಂದರೆ ಅವರಿಗೆ ಬ್ಯಾಂಕಿನ ಒತ್ತಡ ಹಾಗು ಡಯಾಬಿಟಿಸ್
ರೋಗದ ಕಾರಣದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮನಸ್ಸಿನಲ್ಲಿ ಒಂದು ರೀತಿಯ ಹೆದರಿಕೆ ಇತ್ತು. ವೃತ್ತ ಪತ್ರಿಕೆಯ
ಲೇಖನ ಈ ಹೆದರಿಕೆಯನ್ನು ಉಲ್ಬಣ ಗೊಳಿಸಿದ್ದು ತನಗೆ ಹೃದಯದ ಕಾಯಿಲೆ ಇರಬಹುದು ಎಂಬ ಒಂದು ಶಂಖೆ ಮನಸ್ಸಿನಲ್ಲಿ
ಹಾಕಿಕೊಂಡಿತ್ತು. ಇದನ್ನು ನಾವು ನಮ್ಮ ಭಾಷೆಯಲ್ಲಿ
“ರೋಗ ಭಯ” ಅಥವಾ ಹೈಪೋಕೊಂಡ್ರಿಯಾಸಿಸ್ ಎಂದು ಕರೆಯುತ್ತೇವೆ.. ನೋಸೋಫೋಬಿಯ ಎಂಬ ಒಂದು ಹೆಸರು ಕೂಡ
ಇದಕ್ಕೆ ಇದೆ..
ಈ ರೀತಿಯ ಭಯದಲ್ಲಿ ರೋಗಿಯು ತನಗೆ ಯಾವುದೋ ಒಂದು ರೋಗ ಬಂದು ಬಿಟ್ಟಿದೆ ಉದಾಹರಣೆಗೆ ಕ್ಯಾನ್ಸರ್ ರೋಗ
ಅಥವಾ ಹೃದಯ ರೋಗ.. ಇದರ ಚಿಹ್ನೆಗಳನ್ನು ಓದಿಕೊಂಡು ತನಗೂ ಇದು ಬಂದು ಬಿಟ್ಟಿದೆ ಎಂದು ಆ ಚಿಹ್ನೆ ಗಳನ್ನೆಲ್ಲ
ಅನುಭವಿಸ ತೊಡಗುತ್ತಾನೆ.. ವೈದ್ಯರುಗಳು ಎಷ್ಟೇ ಸಲಹೆ ಸಮಾಧಾನ ಹೇಳಿದರು ಈ ರೋಗಿಗಳು ಸಮಾಧಾನ ಗೊಳ್ಳುವುದಿಲ್ಲ
ಆರೋಗ್ಯಕ್ಕೆ ಸಂಬಂಧಪಟ್ಟ ಟೆಸ್ಟ್ ಗಳು ಬೇಕೇ ಬೇಕು ಎಂದು ಪಟ್ಟು ಹಿಡಿಯುತ್ತಾರೆ. ಈಗ ಗೂಗಲ್ ಮಹಾಶಯ ಬಂದ
ಮೇಲಂತೂ ಇದರ ಸಮಸ್ಯೆ ಅತಿ ಹೆಚ್ಚಾಗಿದೆ.. ಒಂದು ಟೆಸ್ಟ್ ಮಾಡಿದರೆ ಸಾಕಾಗುವುದಿಲ್ಲ ಗೂಗಲ್ ಹೇಳುವ ಎಲ್ಲಾ ಟೆಸ್ಟ್ ಗಳು
ಆಗಬೇಕೆಂದು ಪಟ್ಟು ಹಿಡಿಯುವ ರೋಗಿಗಳು ಇದ್ದಾರೆ.
ಹರೀಶ ರೊಂದಿಗೆ ಸುದೀರ್ಘ ಮಾತುಕತೆ ನಡೆಯಿತು. ಹರೀಶ್ ಅವರು ಹೇಳುತ್ತಿದ್ದ ಎಲ್ಲಾ ಚಿಹ್ನೆಗಳು" ಒತ್ತಡದ ಬೇನೆಗಳು"
ಎಂಬುದರಲ್ಲಿ ಯಾವುದೇ ಸಂಶಯ ನನಗೆ ಇರಲಿಲ್ಲ.

ಈ ಒತ್ತಡದ ಬೇನೆಯಿಂದಾಗಿ ಅವರು ಒಂದು ರೀತಿಯ ಆತಂಕಕ್ಕೆ ಒಳಗಾಗಿದ್ದರು. ನಿದ್ರೆ ಸರಿಯಾಗಿ ಬರುತ್ತಿರಲಿಲ್ಲ ,ಎದೆ
ಬಡಬಡಾ ಹೊಡೆದುಕೊಳ್ಳುತ್ತಿತ್ತು, ಬ್ಯಾಂಕಿನ ಫೈಲುಗಳನ್ನು ಹೊತ್ತುಕೊಂಡು ಮನೆಗೆ ಹೋಗಿ ಎಡಕೈಯಲ್ಲಿ ನೋವು ಕೂಡ ಬಹಳ
ಜಾಸ್ತಿ ಆಗಿತ್ತು. ಇವೆಲ್ಲವನ್ನೂ ಹರೀಶ ರು ಹೃದಯಾಘಾತದ ಚಿಹ್ನೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದರು.
ತನಗೆ ಕಾಯಿಲೆ ಇದೆ ,ತಾನು ಸಾಯುತ್ತೇನೆ ಎಂಬ ಯೋಚನೆಯನ್ನು ಪದೇ ಪದೇ ಮಾಡಿದ ಹರೀಶ್ ಅವರು ಖಿನ್ನತೆಗೆ
ಒಳಗಾಗಿದ್ದರು.
ಹರೀಶ ರನ್ನು ಆಸ್ಪತ್ರೆಯ ಕ್ಲಿನಿಕಲ್ ಮನೋ ಶಾಸ್ತ್ರಜ್ಞರಿಗೆ ಪರಿಚಯ ಮಾಡಿಕೊಡಲಾಯಿತು. ಹಾಗೆಯೇ ಅವರ ಹೆದರಿಕೆ
ನಿದ್ರಾಹೀನತೆ ಶಮನಗೊಳಿಸಲು ಮಾತ್ರೆಗಳನ್ನು ಕೊಡಲಾಯಿತು. ಕ್ಲಿನಿಕಲ್ ಮನೋಶಾಸ್ತ್ರಜ್ಞರು ಇವರಿಗೆ ಕೆಲವು ರೀಲೆಕ್ಸೇಶನ್
ಎಕ್ಸಸೈಜ್ ಗಳನ್ನು ಹೇಳಿಕೊಟ್ಟರು. ಹಾಗೆಯೇ ಅವರ ಯೋಚನೆ ಗಳನ್ನು ಸರಿಯಾಗಿ ಪರಿಶೀಲಿಸಿ ಅವರು ಮಾಡುತ್ತಿದ್ದಂತ
ನಕಾರತ್ಮಕ ಯೋಚನೆಗಳನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಕೂಡ ಮಾಹಿತಿ ನೀಡಿದರು. ಸುಮಾರು
ಹದಿನೈದು ದಿನಗಳು ಆಗುತ್ತಾ ಹರೀಶರ ಸಮಸ್ಯೆಗಳು ಕಡಿಮೆಯಾಗುತ್ತಾ ಬಂತು.
ಈ “ರೋಗ ಭಯ” ಅನ್ನುವುದು ಬಹಳ ವಿಚಿತ್ರವಾದ ಕಾಯಿಲೆ.. ಯಾವುದೋ ಒಂದು ಗುಣವಾಗದ ರೋಗ ತನಗಿದೆ ಎಂದು
ಭ್ರಮೆಯಿಂದ ಹಲವಾರು ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವವರು.. ಯಾವುದೇ ಪರೀಕ್ಷೆಗಳನ್ನು ಮಾಡದೆ ಕೇವಲ ತನಗೆ
ಕಾಯಿಲೆ ಇದೆ ಎಂದು ಊಹಿಸಿಕೊಂಡು ಯಾರೊಂದಿಗೂ ಹಂಚಿಕೊಳ್ಳದೆ ಮನಸ್ಸಿನ ದುಗುಡವನ್ನು ಜಾಸ್ತಿ ಮಾಡಿಕೊಂಡು
ಆತ್ಮಹತ್ಯೆ ಮಾಡಿಕೊಳ್ಳುವ ರೋಗಿಗಳು ಇದ್ದಾರೆ . ಈ ರೋಗ ಭಯ ಅನ್ನೋದು ಹಲವೊಮ್ಮೆ ಸರಿಯಾದ ಸಮಯದಲ್ಲಿ
ಗುರುತಿಸಲಾಗದೆ ಇದ್ದರೆ ಅನಾವಶ್ಯಕವಾಗಿ ಹಲವಾರು ರಕ್ತಪರೀಕ್ಷೆಗಳು, ಸ್ಕ್ಯಾನ್ಗಳು ಮಾಡಿಕೊಂಡು ರೋಗಿಗಳು ಒಂದು
ವೈದ್ಯರಿಂದ ಇನ್ನೊಂದು ವೈದ್ಯರ ಹತ್ತಿರ ಹೋಗುತ್ತಾರೆ.. ಹಲವಾರು ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಾರೆ. ಅನಾವಶ್ಯಕವಾಗಿ
ಹಣ ಖರ್ಚು ಮಾಡಿ ಕೊಳ್ಳುತ್ತಾರೆ. ಕೊನೆಗೂ ಹರೀಶರು ತಮ್ಮ ರೋಗ ಭಯದಿಂದ ಗುಣಮುಖರಾದರು ಬೆಂಗಳೂರಿಗೆ ಪುನಹ
ಹೃದಯ ರೋಗ ಚಿಕಿತ್ಸೆಗೆ ಹೋಗಲಿಲ್ಲ.. ಆದರೆ ಹರೀಶರ ಹಾಗೆ ಹೆಚ್ಚಿನವರ ಈ "ರೋಗ ಭಯ" ಸುಖಾಂತ್ಯವನ್ನು ಕಾಣುವುದಿಲ್ಲ..
ಈ ರೋಗ ಭಯ ಎನ್ನುವ ಕಾಯಿಲೆ ಹಲವೊಮ್ಮೆ ವೈದ್ಯರುಗಳ ಸಮಯವನ್ನು ಹಾಳು ಮಾಡುತ್ತದೆ, ರೋಗಿಯ ಹಣವನ್ನು ವ್ಯರ್ಥ
ಗೊಳಿಸುತ್ತದೆ ಮನೆಯವರ ಗಾಬರಿಯನ್ನು ಹೆಚ್ಚಿಸುತ್ತದೆ.. ಆದ್ದರಿಂದ ಅತಿಯಾಗಿ ಗೂಗಲ್ ಅನ್ನು ನಂಬದೆ ನಿಮ್ಮ ಕುಟುಂಬ
ವೈದ್ಯರನ್ನು ಹೆಚ್ಚು ನಂಬಿ..