Select Page

ಎಪಿಲೆಪ್ಸಿ ಅಥವಾ ಮೂರ್ಛೆರೋಗ ಅಥವಾ ಫಿಟ್ಸ್ ಅಥವಾ ಅಪಸ್ಮಾರ ಈ ಬಗ್ಗೆ ಬರೆಯೋಣ ಅಂದುಕೊಂಡೆ .ಜನಸಾಮಾನ್ಯರಲ್ಲಿ
ಈ ಕಾಯಿಲೆಯ ಬಗ್ಗೆ ಸಾಕಷ್ಟು ಅಪನಂಬಿಕೆಗಳು ಸಮಾಜದ ಎಲ್ಲಾ ವರ್ಗದ ಜನರಲ್ಲಿ ಇವೆ. ಇದು ನನ್ನ ಮನಸ್ಸಿಗೆ
ಗೋಚರವಾದದ್ದು ಇತ್ತೀಚಿಗೆ ವಿಧಾನ ಮಂಡಲದಲ್ಲಿ ವಿಧಾನಸಭೆಯ ಸ್ಪೀಕರ್ ಆಗಿರುವ ಯುಟಿ ಖಾದರ್ ಅವರು ಸದಸ್ಯರು
ಒಬ್ಬರು ಜೋರಾಗಿ ಸದನದಲ್ಲಿ ಗದ್ದಲ ಎಬ್ಬಿಸುತ್ತಿದ್ದಾಗ ಅವರ ಕೈಗೆ ಕಬ್ಬಿಣ ಕೊಡಿ ಎಂದು ಹೇಳಿದ್ದು. ಅಲ್ಲಿ ಅವರು ಹೇಳಲು
ಬಯಸಿದ್ದು ಆ ಸದಸ್ಯರು ಫಿಟ್ಸ್ ಬಂದವರ ಹಾಗೆ ಮಾಡುತ್ತಿದ್ದಾರೆ, ಆದ್ದರಿಂದ ಅವರ ಕೈಗೆ ಕಬ್ಬಿಣ ಕೊಡಿ ಎಂದು. ಇದೊಂದು ಅಪ
ನಂಬಿಕೆ, ಈ ಬಗ್ಗೆ ಕೊನೆಯಲ್ಲಿ ಬರೆದಿದ್ದೇನೆ
ಮೊದಲು ತಿಳಿಯಬೇಕಾದ ವಿಷಯವೆಂದರೆ ಫಿಟ್ಸ್ ಮಾನಸಿಕ ಸಮಸ್ಯೆಯಲ್ಲ. ಇದು ಮೆದುಳಿನ ನರಕೋಶಗಳಲ್ಲಿ ಉಂಟಾಗುವ
ಬದಲಾವಣೆಯಿಂದ ಪ್ರಕಟ ಗೊಳ್ಳುವ ಸಮಸ್ಯೆ. ಇದಕ್ಕೆ ಚಿಕಿತ್ಸೆ ನೀಡುವವರು ನರರೋಗ ತಜ್ಞರು. ಆದರೆ ಭಾರತದಲ್ಲಿ ನರರೋಗ
ತಜ್ಞರ ಕೊರತೆ ಇರುವುದರಿಂದ ಸಾಮಾನ್ಯ ಸಲಹಾ ವೈದ್ಯರು, ಮನೋವೈದ್ಯರು ಕೂಡ ಈ ಸಮಸ್ಯೆಗೆ ಚಿಕಿತ್ಸೆ ಕೊಡುತ್ತಾರೆ.
ಫಿಟ್ಸ್ ಬರಲು ಕಾರಣಗಳು
ಫಿಟ್ಸ್ ಬರಲು ಪ್ರಮುಖ ಕಾರಣಗಳಲ್ಲಿ ದೇಹದಲ್ಲಿ ಸೋಡಿಯಂ ನ ಅಸಮತೋಲನ, ಸಕ್ಕರೆ ಅಂಶ ಕಡಿಮೆಯಾಗುವುದು, ಬಿದ್ದು
ತಲೆಗೆ ಪೆಟ್ಟು ಆಗುವುದು, ಮೆದುಳಿನಲ್ಲಿ ಗೆಡ್ಡೆ ಬೆಳೆಯುವುದು, ತಲೆಗೆ ಜ್ವರ ಏರುವ ಸೋಂಕುಗಳು ಪ್ರಮುಖ ಕಾರಣಗಳಾಗಿವೆ.
ಅತಿಯಾದ ಮದ್ಯಪಾನ ಮಾಡುವವರಲ್ಲಿ ಮದ್ಯಪಾನವನ್ನು ಒಮ್ಮೆಲೇ ನಿಲ್ಲಿಸಿದಾಗ “ರಂ ಫಿಟ್ಸ್” ಎಂಬ ಒಂದು ಸಮಸ್ಯೆ
ತಲೆದೂರಬಹುದು. ಇದು ಮದ್ಯಪಾನದ ಹಿಂತೆಗೆತದ ಚಿಹ್ನೆಯಾಗಿದೆ.
ಮೆದುಳಿನ ವಿದ್ಯುತ್ ಚಟವಟಿಕೆಗಳಲ್ಲಿ ಸಮಸ್ಯೆಗಳಾಗುವುದು ಈ ಫಿಟ್ಸ್ ಬರಲು ಮುಖ್ಯ ಕಾರಣ . ಮೆದುಳಿನ ಮೇಲ್ಮೈ ಅಥವಾ
ಒಳಮೈಯಲ್ಲಿ ಗಾಯಗಳಾದರೆ ಅಲ್ಲಿಂದ ಈ ವಿದ್ಯುತ್ ಶಕ್ತಿ ಪ್ರಸರಣದಲ್ಲಿ ಸಮಸ್ಯೆಯಾಗಬಹುದು. ತಿಳಿದುಕೊಳ್ಳಬೇಕಾದ
ಇನ್ನೊಂದು ವಿಷಯ ಏನೆಂದರೆ ಈ ಫಿಟ್ಸ್ ಪದೇಪದೇ ಬಂದರೆ ಅದನ್ನು ನಾವು “ಅಪಸ್ಮಾರ” ಕಾಯಿಲೆ ಎಂದು ಕರೆಯುತ್ತೇವೆ.
ಎಪಿಲೆಪ್ಸಿ ಅಥವಾ ಅಪಸ್ಮಾರ ದ ವಿಧಾನಗಳು
ಮೆದುಳಿನ ಬೇರೆ ಬೇರೆ ಭಾಗಗಳಿಂದ ಒಮ್ಮೆಲೇ ವಿದ್ಯುತ್ ಪ್ರಸರಣದಲ್ಲಿ ಸಮಸ್ಯೆಯಾದಲ್ಲಿ ದೇಹದ ಎಲ್ಲಾ ಭಾಗಗಳಲ್ಲೂ ನಡುಕ
ಸ್ನಾಯು ಸೆಳೆತ ಪ್ರಾರಂಭವಾಗಿ ವ್ಯಕ್ತಿಯು ಪ್ರಜ್ಞೆಯನ್ನು ಕಳೆದುಕೊಳ್ಳಬಹುದು. ಅದನ್ನು “ಜನರಲೈಸೆಡ್ ಎಪಿಲೆಪ್ಸಿ” ಎಂದು
ಕರೆಯುತ್ತಾರೆ. ಈ ರೀತಿಯ ಫಿಟ್ಸ್ ಬರುವಾಗ ವಿಪರೀತ ಬೆವರುವಿಕೆ, ತಲೆ ತಿರುಗುವುದು ,ಬಾಯಿಂದ ಜೊಲ್ಲು ಸುರಿಸುವುದು
,ಹೃದಯ ಬಡಿತದಲ್ಲಿ ಬದಲಾವಣೆ ,ತಾತ್ಕಾಲಿಕ ಗೊಂದಲ ,ಸ್ನಾಯು ಬಿಗಿತ, ಕಾಲು ತೋಳುಗಳು ತನ್ನಷ್ಟಕ್ಕೆ ಅಲುಗಾಡುವುದು,
ಎದ್ದ ಕೂಡಲೇ ಒಂದು ರೀತಿಯ ದಿಗ್ಭ್ರಮೆ ಮತ್ತು ಭಯ ,ಆತಂಕ, ಕೋಪದ ನೋಟ ಇವುಗಳೆಲ್ಲ ನೋಡಲು ಸಿಗಬಹುದು.
ಕೆಲವೊಮ್ಮೆ ಈ ರೀತಿಯ ಫಿಟ್ಸ್ ಬಂದಾಗ ಬಾಯಲ್ಲಿದ್ದ ಆಹಾರ ಅಥವಾ ಕೃತಕ ಹಲ್ಲು ಶ್ವಾಸಕೋಶಕ್ಕೆ ಹೋಗಿ ವ್ಯಕ್ತಿಗೆ
ಮಾರಣಾಂತಿಕ ಸಮಸ್ಯೆಗಳು ಆಗಬಹುದು.
ಹಾಗೆಯೇ ಕೆಲವೊಮ್ಮೆ ಮೆದುಳಿನ ಯಾವುದಾದರೂ ಒಂದು ಭಾಗ ದ ವಿದ್ಯುತ್ ಪ್ರಸರಣದಲ್ಲಿ ಸಮಸ್ಯೆ ಉಂಟಾದಾಗ ಕೇವಲ
ಎಡ ಕೈ ಅಥವಾ ಎಡ ಕಾಲು ಅಥವಾ ಬಲಕೈ ಅಥವಾ ಬಲಕಾಲು ನಡುಗುವುದು ಮತ್ತು ವ್ಯಕ್ತಿ ಇದನ್ನು ಗಮನಿಸುತ್ತಿದ್ದರು ಅದನ್ನು
ನಿಲ್ಲಿಸಲು ಆತನಿಗೆ ಅಗಲಿಕ್ಕಿಲ್ಲ. ಆತ ಪ್ರಜ್ಞೆ ಕಳೆದುಕೊಳ್ಳುವುದಿಲ್ಲ. ಇದನ್ನು “ಫೋಕಲ್ ಎಪಿಲೆಪ್ಸಿ” ಎಂದು ಕರೆಯುತ್ತೇವೆ.

ಮೆದುಳಿನ ಎಡ ಭಾಗದ ಸಮಸ್ಯೆಯು ಬಲಗೈ ನಡುಗುವಂತೆ ಮಾಡಿದರೆ ಬಲಭಾಗದ ಸಮಸ್ಯೆಯು ಎಡಗೈ ನಡುಗುವಂತೆ
ಮಾಡುತ್ತದೆ. ಫಿಟ್ಸ್ ಬರುವ ಮೊದಲು ವ್ಯಕ್ತಿಯು ಕಣ್ಣುಗಳ ಮುಂದೆ ಹೊಳಪನ್ನು ಕಾಣುವುದು ಅಥವಾ ವಿಚಿತ್ರ ವಾಸನೆಯನ್ನು
ಅನುಭವಿಸಿದಂತಾಗುವುದು ಎಂಬುದು ಕೆಲವರ ಅನುಭವ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ” ಔರ”(aura )ಎಂದು
ಕರೆಯುತ್ತಾರೆ. ಫಿಟ್ಸ್ ಬರುವ ಮುಂಚೆ ಇದು ಒಂದು ಮುನ್ನೆಚ್ಚರಿಕೆಯಂತೆ.
ಕೆಲವೊಮ್ಮೆ ನಡುಕ ಕಾಣದೆ ವ್ಯಕ್ತಿ ಇದ್ದಕ್ಕಿದ್ದಂತೆ ಕೆಲವೇ ಸೆಕೆಂಡುಗಳಿಗೆ ಪ್ರಜ್ಞಾಹೀನನಾಗುವುದು ಮತ್ತು ಇದ್ದಕ್ಕಿದ್ದಂತೆ
ಚೇತರಿಸಿಕೊಳ್ಳುವುದು ಆಗಬಹುದು. ಇದನ್ನು “ಅಬ್ಸನ್ಸ್ “ಎಪಿಲೆಪ್ಸಿ ಎಂದು ಕರೆಯುತ್ತೇವೆ. ಇಲ್ಲಿ ವ್ಯಕ್ತಿಯು ಕೆಲವೇ ಕೆಲವು ಸೆಕೆಂಡು
ಬಾಯಿ ಚಪ್ಪರಿಸುವುದು, ಇಲ್ಲವೇ ಚಾಕಲೇಟ್ ಸಿಪಿ ದ ಹಾಗೆ ಮಾಡುವುದು ಇತರರು ಗಮನಿಸುತ್ತಾರೆ ,ಆದರೆ ವ್ಯಕ್ತಿಗೆ ಅದು
ನೆನಪಿಗೆ ಬರುವುದಿಲ್ಲ ಅಥವಾ ವಿದ್ಯಾರ್ಥಿಯಾಗಿದ್ದರೆ ಬರೆಯುತ್ತಿದ್ದ ಹಾಗೆ ಕೈಯಿಂದ ಪೆನ್ನು ಬಿದ್ದುಬಿಡುತ್ತದೆ. ಒಂದೆರಡು ಸೆಕೆಂಡ್
ನಲ್ಲಿ ವಿದ್ಯಾರ್ಥಿ ಅದನ್ನು ಗಮನಿಸಿ ಪೆನ್ ಎತ್ತಿಕೊಳ್ಳುತ್ತಾನೆ. ಈ ಬಗೆಯ ಅಪಸ್ಮಾರ ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ.
ಅಪಸ್ಮಾರ ಕಾಯಿಲೆ ಶೇಕಡ 40 ಅನುವಂಶಿಕ. ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ಇದ್ದೇ ಇರುತ್ತದೆ. ಹೆಚ್ಚಾಗಿ ಇದು ಸಣ್ಣ
ವಯಸ್ಸಿನಲ್ಲಿ ಕಂಡುಬರುತ್ತದೆ. ಹಾಗೆಯೇ ಬೌದ್ಧಿಕ ಅಸಮರ್ಥತೆ, ಆಟಿಸಂ ಮುಂತಾದ ಸಮಸ್ಯೆಗಳಿರುವ ವ್ಯಕ್ತಿಗಳಲ್ಲಿ ಕೂಡ ಫಿಟ್ಸ್
ಬರಬಹುದು. ಸಣ್ಣ ಮಕ್ಕಳಲ್ಲಿ ಪದೇ ಪದೇ ಫಿಟ್ಸ್ ಬರುತ್ತಿದ್ದರೆ ಅದು ಮೆದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರಬಹುದು.
ಇದರಿಂದಾಗಿ ಬುದ್ಧಿಶಕ್ತಿಯ ಮೇಲೆ ಕೂಡ ಪ್ರಭಾವ ಬೀರಬಹುದು.
ಅಪಸ್ಮಾರ ರೋಗ ಪತ್ತೆಗೆ ಪರೀಕ್ಷೆಗಳೇನು?
ವ್ಯಕ್ತಿಗೆ ಫಿಟ್ಸ್ ಉಂಟಾದಾಗ ಆತನ ಮೆದುಳಿನ ವಿದ್ಯುತ್ ಶಕ್ತಿಯ ಪ್ರಸರಣದ ರೀತಿಯನ್ನು ವೈದ್ಯರು ತಿಳಿದುಕೊಳ್ಳಲು EEG
ಮಾಡುತ್ತಾರೆ. EEG ಮಾಡಿದಾಗ ರೋಗಿಯ ಮೆದುಳಿನ ಯಾವ ಯಾವ ಭಾಗದಲ್ಲಿ ವಿದ್ಯುತ್ ಪ್ರಸರಣದಲ್ಲಿ ಸಮಸ್ಯೆಗಳಿವೆ
ಗೊತ್ತಾಗುತ್ತದೆ.
ಹಾಗೆಯೇ ಮೆದುಳಿನ ಸಿಟಿ ಸ್ಕ್ಯಾನ್ ಅಥವಾ ಎಂ ಆರ್ ಐ ಕೂಡ ಮಾಡಬಹುದು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರೆ ಅಥವಾ
ಗೆಡ್ಡೆಗಳಿದ್ದರೆ ಇದರಿಂದ ಗೊತ್ತಾಗುತ್ತದೆ.
ಈ ಹಿಂದೆ ಬರೆದಂತೆ ರಕ್ತದಲ್ಲಿ ಸೋಡಿಯಂ, ಬ್ಲಡ್ ಶುಗರ್ ಟೆಸ್ಟ್ ಗಳನ್ನು ಕೂಡ ಮಾಡಬಹುದು.
ಈ ಕಾಯಿಲೆಯ ಬಗ್ಗೆ ಸಾಕಷ್ಟು ಅಪನಂಬಿಕೆಗಳು ಇವೆ. ಫಿಟ್ಸ್ ಬರುತ್ತಿರುವಾಗ ಕೈಗೆ ಕಬ್ಬಿಣದ ರಾಡ್ ಮುಟ್ಟಿಸಿದರೆ ಫಿಟ್ಸ್
ಕಡಿಮೆಯಾಗುವುದು ಎಂಬುದು ತಪ್ಪು ನಂಬಿಕೆ. ನಿಜವಾಗಿ ನೋಡಿದರೆ ಈ ರೋಡ್ ಹತ್ತಿರ ತಂದು ಆ ಸಂದರ್ಭದಲ್ಲಿ ಕೈಕಾಲು
ಜೋರಾಗಿ ಅಲುಗಾಡುತ್ತಿದ್ದರೆ ಬಡೆದು ಗಾಯಗಳೇ ಆಗಬಹುದು. ಫಿಟ್ಸ್ ಬರುತ್ತಿರುವಾಗ ವ್ಯಕ್ತಿಗೆ ಗಾಯಗಳಾಗದಂತಹ ಸುರಕ್ಷಿತ
ಸ್ಥಳದಲ್ಲಿ ಮಲಗಿಸಬೇಕು ,ಕಾಲು ತೋಳುಗಳನ್ನು ಬಲವಾಗಿ ಹಿಡಿದು ಫಿಟ್ಸ್ ನಿಲ್ಲಿಸಲು ಪ್ರಯತ್ನಿಸಬಾರದು. ಫಿಟ್ಸ್ ಬರುತ್ತಿರುವ
ವ್ಯಕ್ತಿಗೆ ಬಟ್ಟೆಗಳನ್ನು ಸಡಿಲ ಗೊಳಿಸಿ ಆತನಿಗೆ ಸರಿಯಾಗಿ ಗಾಳಿ ಸಿಗುವಂತೆ ಮಾಡಬೇಕು. ಹೆಚ್ಚಿನ ಫಿಟ್ಸ್ ಕೆಲವು ನಿಮಿಷಗಳಲ್ಲಿ
ತನ್ನಷ್ಟಕ್ಕೆ ನಿಲ್ಲುತ್ತದೆ. ನಾಲ್ಕೈದು ನಿಮಿಷದಲ್ಲಿ ನಿಲ್ಲದಿದ್ದಲ್ಲಿ ಇದು ವೈದ್ಯಕೀಯ ತುರ್ತು ಪರಿಸ್ಥಿತಿ. ಆ ಕೂಡಲೇ ವ್ಯಕ್ತಿಯನ್ನು
ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಫಿಟ್ಸ್ ನಿಲ್ಲಿಸಲು ವೈದ್ಯರು ಇನ್ಟ್ರಾ ವಿನಸ್ ಇಂಜೆಕ್ಷನ್ ಗಳನ್ನು ನೀಡಬಹುದು ಹಾಗೂ
ಮೆದುಳಿಗೆ ಆಮ್ಲಜನಕದ ಅಗತ್ಯತೆ ಇರುವುದರಿಂದ ಆ ಕೂಡಲೇ ಮೂಗಿನ ನಾಳೆಗಳ ಮೂಲಕ ಆಕ್ಸಿಜನ್ ಕೊಡಬಹುದು. ಇದು
ಜೀವ ರಕ್ಷಕ.

ಮುಂದಿನ ವಾರದಲ್ಲಿ ಚಿಕಿತ್ಸೆಯ ಬಗ್ಗೆ ಬರೆಯುತ್ತೇನೆ.