Pocso ಕಾಯ್ದೆ ಶಿಕ್ಷಕ ಮಿತ್ರರು ಏನು ತಿಳಿದುಕೊಂಡಿರಬೇಕು? ಸರ್ಕಾರದ ಸುತ್ತೋಲೆ ಒಂದನ್ನು ನೋಡಿದೆ. ಎಲ್ಲಾ ಶಾಲೆಗಳಲ್ಲಿ
Pocso ಕಾಯ್ದೆಯ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಬೇಕು ಎಂದು ತಿಳಿಸಲಾಗಿದೆ. ಹಾಗೆ ಶಿಕ್ಷಕರಿಗೆ ಈ ಕಾಯ್ದೆಯ ಬಗ್ಗೆ ಸ್ವಲ್ಪ
ಮಾಹಿತಿ ಬರೆಯುವ ಎಂದುಕೊಂಡೆ.
Pocso ಅಂದರೆ protection of children from sexual offences Pocso act 2012. ಈ ಕಾಯ್ದೆಯ ಬಗ್ಗೆ ಮಾಹಿತಿ ಶಾಲಾ ಶಿಕ್ಷಕರಿಗೆ
ಹಾಗೂ ಮಕ್ಕಳ ಪೋಷಕರಿಗೆ ಇಬ್ಬರಿಗೂ ಇರಬೇಕು. ಈ ಕಾಯ್ದೆಯ ಬಗ್ಗೆ ತರಬೇತಿ ಅಂದರೆ ಪೋಷಕರಿಗೆ ಮಕ್ಕಳ ಲೈಂಗಿಕ
ಶೋಷಣೆ ಎಂದರೇನು? ಇದರ ಬಗ್ಗೆ ತಿಳಿದು ಕೊಂಡಾಗ ಏನು ಮಾಡಬೇಕು? ಕಾನೂನು ಏನು ಹೇಳುತ್ತದೆ ಇದನ್ನು ತಿಳಿಸಬೇಕು.
ಅದೇ ರೀತಿ ಕಾರ್ಯಾಗಾರಗಳು ಮಕ್ಕಳಿಗೆ ಕೂಡ ನಡೆಯಬೇಕು. ಎರಡನೇ ತರಗತಿಯಿಂದ ಮಕ್ಕಳಿಗೆ ಈ ಬಗ್ಗೆ ತಿಳಿಸುವುದು
ಒಳ್ಳೆಯದು. ಮಕ್ಕಳನ್ನು ಮುಟ್ಟುವ ರೀತಿ ಅಂದರೆ ಹಿರಿಯರು ಅವರೊಂದಿಗೆ ನಡೆದುಕೊಳ್ಳುವಾಗ Good touch ,Bad touch
ಅಂದರೆ ಏನು ?ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ಹಾಗೆಯೇ ಮಕ್ಕಳು ಇಂತಹ ದೌರ್ಜನ್ಯಕ್ಕೆ ಗುರಿ ಆದರೆ ಅವರು
ಏನು ಮಾಡಬೇಕು ಎಂಬ ಮಾಹಿತಿ ಕೊಡಬೇಕು. ಮಕ್ಕಳಿಗೆ ವೈಯಕ್ತಿಕ ರಕ್ಷಣೆಯ ಬಗ್ಗೆ ,ದೈಹಿಕ ಅಂಗಾಂಗಗಳ ಬಗ್ಗೆ, ಆನ್ಲೈನ್
ಸುರಕ್ಷತೆಯ ಬಗ್ಗೆ ಹಾಗೂ ಶೋಷಣೆಯಿಂದ ರಕ್ಷಣೆಯ ಬಗ್ಗೆ ಮಾಹಿತಿ ಶಿಬಿರಗಳನ್ನು ನುರಿತ ತಜ್ಞರು ಹಾಗೆ ಪೊಲೀಸ್
ಅಧಿಕಾರಿಗಳು ಮತ್ತು ವಕೀಲರಿಂದ ನಡೆಸುವುದು ಸೂಕ್ತ. ಹಲವೊಮ್ಮೆ ಶಾಲೆಯ ಪೋಷಕರ ಸಹಾಯವನ್ನು ಕೂಡ
ಪಡೆಯಬಹುದು. ಹಾಗೆಯೇ ಶಿಕ್ಷಕರಿಗೆ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ತಡೆಗೆ ಏನೇನು ವ್ಯವಸ್ಥೆ ಗಳಿರಬೇಕು? ಮಕ್ಕಳ
ಶೋಷಣೆಯ ಬಗ್ಗೆ ಮಾಹಿತಿ ಸಿಕ್ಕಾಗ ಶಿಕ್ಷಕರ ಜವಾಬ್ದಾರಿಗಳೇನು? ಈ ಬಗ್ಗೆ ಸರಿಯಾಗಿ ತಿಳಿದಿರಬೇಕು .
ಪ್ರತಿಯೊಂದು ಶಾಲೆಯು ತನ್ನದೇ ಆದ ಮಕ್ಕಳ ರಕ್ಷಣಾ ನೀತಿ ಹೊಂದಿರಬೇಕು. ಯಾವುದಾದರೂ ಒಂದು ಶೋಷಣೆಯ ಘಟನೆ
ನಡೆದಲ್ಲಿ ಅದನ್ನು ಯಾರಿಗೆ ತಿಳಿಸಬೇಕು?ಆ ಘಟನೆ ಈ ಕಾಯ್ದೆ ಅಡಿಯಲ್ಲಿ ಬರುತ್ತದೆಯೇ? ಇದನ್ನು ಮಕ್ಕಳ ರಕ್ಷಣಾ ಘಟಕಕ್ಕೆ
ತಾವೇ ತಿಳಿಸಬೇಕೆ? ಅಥವಾ ಪೋಷಕರ ಮೂಲಕ ತಿಳಿಸಬೇಕೆ? ಇಂತಹ ಘಟನೆ ಒಂದು ನಡೆದಿದ್ದು ಅದು ಲೈಂಗಿಕ ದೌರ್ಜನ್ಯವೇ
ಎಂದು ಅನಿಸಿದ್ದಲ್ಲಿ ಆ ಕೂಡಲೇ ಶಾಲೆಯವರೇ ಪೊಲೀಸರಿಗೆ ಮಾಹಿತಿ ನೀಡತಕ್ಕದ್ದು ಹಾಗೆಯೇ ಶಿಕ್ಷಕರು ಗಮನಿಸಿದಂತೆ
ಮಗುವಿನಲ್ಲಿ ಏನಾದರೂ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ಚಿಹ್ನೆಗಳು ಇದೆ ಎಂದಾದರೆ ಅಥವಾ ಯಾವುದೇ ಪೋಷಕರು
ಶಿಕ್ಷಕರು ಅಥವಾ ಇತರ ಸಹೋದ್ಯೋಗಿಗಳು ಇಂತಹ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಸಂಶಯವಿದ್ದಲ್ಲಿ ಆ ಬಗ್ಗೆ ಕಾನೂನಾತ್ಮಕ
ಕ್ರಮವನ್ನು ತೆಗೆದುಕೊಳ್ಳಲೇಬೇಕು . ಇದನ್ನು ಶಾಲೆ ಕಂಪ್ಲೇಂಟ್ ಕಮಿಟಿಗೆ ತಿಳಿಸಲೇಬೇಕು.ಕೆಲವೊಮ್ಮೆ ಮಕ್ಕಳೇ ಬಂದು ಇಂತಹ
ದೌರ್ಜನ್ಯ ಎಸೆಗುತ್ತಿದ್ದವರ ಬಗ್ಗೆ ಮಾಹಿತಿ ನೀಡಬಹುದು, ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಕೆಲವೊಮ್ಮೆ ಬೇರೊಂದು
ಮಗು ತನ್ನ ಮೇಲೆ ಲೈಂಗಿಕವಾಗಿ ದುರ್ವರ್ತನೆ ನಡೆಸುತ್ತಿದೆ ಎಂದು ಮಕ್ಕಳು ಬಂದು ನಿಮ್ಮಲ್ಲಿ ಹೇಳಬಹುದು.ನೆನಪಿರಲಿ ಇದು
ಕೂಡ ಈ ಕಾಯ್ದೆ ಅಡಿಯಲ್ಲಿ ಬರುತ್ತದೆ.ಕೆಲವೊಮ್ಮೆ ದುರ್ವರ್ತನೆ ನಡೆಸಿದ ಮಗು ಕೂಡ ತಾನು ಹೀಗೆ ಮಾಡಿದೆ ಎಂದು ಬಂದು
ಹೇಳಿದ್ದು ಇದೆ. ಹಾಗೆಯೇ ಕೆಲವು ಮಕ್ಕಳು ಶಾಲೆಗೆ ಅಶ್ಲೀಲ ಚಿತ್ರಗಳನ್ನು ತರುವುದು ಅಥವಾ ವಿಡಿಯೋಗಳನ್ನು ತಂದು ಇತರ
ಮಕ್ಕಳಿಗೆ ವೀಕ್ಷಿಸುವಂತೆ ಮಾಡುವುದು ಇಂತಹ ಮಾಹಿತಿಗಳು ದೊರೆತಾಗ ಶಿಕ್ಷಕರು ಎಚ್ಚೆತ್ತುಕೊಂಡು ಈ ಎಲ್ಲಾ ಘಟನೆಗಳು ಈ
ಕಾಯ್ದೆ ಅಡಿಯಲ್ಲಿ ಬರುತ್ತವೆಯೇ ಎಂದು ಆ ಕೂಡಲೇ ಪರಿಶೀಲಿಸಬೇಕು.ಶಿಕ್ಷಕರು ಅಥವಾ ಇತರ ಸಹೋದ್ಯೋಗಿಗಳು ಅಥವಾ
ಯಾರಾದರೂ ಅಪರಿಚಿತರು ಇಂತಹ ಚಿತ್ರಗಳನ್ನೆಲ್ಲ ತೆಗೆದುಕೊಂಡು ಬರುತ್ತಿದ್ದರೆ ಆ ಕೂಡಲೇ ಈ ಕಾಯ್ದೆ ಅಡಿಯಲ್ಲಿ ರಿಪೋರ್ಟ್
ಮಾಡುವುದು ಅತಿ ಅಗತ್ಯ. ಪ್ರತಿ ಶಾಲೆಯಲ್ಲಿ ತನ್ನದೇ ಆದ ಸ್ಕೂಲ್ ಕಂಪ್ಲೇಂಟ್ಸ್ ಕಮಿಟಿ ಇರಲೇಬೇಕು.ಇಂತಹ ದೌರ್ಜನ್ಯಗಳು
ಆ ಕಮಿಟಿಯ ಗಮನಕ್ಕೆ ತರಲೇಬೇಕು.ಶಾಲೆಯಲ್ಲಿ ಈ ಬಗ್ಗೆ ಎಲ್ಲ ಮಕ್ಕಳಿಗೆ ಗೊತ್ತಿರುವಂತೆ ಒಂದು ಕಂಪ್ಲೇಂಟ್ ಪೆಟ್ಟಿಗೆ
ಇರಲೇಬೇಕು. ಕೆಲವೊಮ್ಮೆ ಶಾಲೆಗೆ ಸಂಬಂಧವಿಲ್ಲದ ವ್ಯಕ್ತಿಗಳು ಉದಾಹರಣೆಗೆ ಮಕ್ಕಳು ಬರುವ ಖಾಸಗಿ ಅಥವಾ ಸರ್ಕಾರಿ ಬಸ್
ನಲ್ಲಿ ನಡೆದ ಘಟನೆ, ಆಟೋದಲ್ಲಿ ನಡೆದ ಘಟನೆ ಇಂಥವು ಕೂಡ ಶಾಲಾ ಶಿಕ್ಷಕರಿಗೆ ಅಥವಾ ಕಂಪ್ಲೇಂಟ್ಸ್ ಕಮಿಟಿಗೆ ಗಮನಕ್ಕೆ
ಬಂದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು.ಹಾಗೆಯೇ ಇಂತಹ ಘಟನೆಗಳು ನಡೆಯ ದಂತೆ ಶಾಲೆ ಕೂಡ ಸಾಕಷ್ಟು ಗಮನ
ಕೊಡಬೇಕು. ಶಾಲೆಯಲ್ಲಿ ಸಿಸಿಟಿವಿ ಅಳವಡಿಕೆ ಸರಿಯಾಗಿದೆಯೇ? ಶಾಲೆಗೆ ಬರುವ ಸಂದರ್ಶಕರು, ಅಪರಿಚಿತರು ಇವರ ಬಗ್ಗೆ
ನಿಗಾ ಇಡಬೇಕು ಮತ್ತು ಮಕ್ಕಳು ಶಾಲೆಯಿಂದ ಯಾರ ಜೊತೆಗೆ ಹೊರಗೆ ಹೋಗುತ್ತಾರೆ ಈ ಬಗ್ಗೆ ನಿಗಾ ಇಡಬೇಕು. ಹಾಗೆಯೇ
ಶಾಲೆಯಲ್ಲಿ ಮಕ್ಕಳ ಫೋಟೋಗಳನ್ನು ತೆಗೆಯುವವರು ,ಇಂಟರ್ನೆಟ್ ಉಪಯೋಗಿಸುವವರು ಇವರ ಬಗ್ಗೆ ನಿಗಾ ಇರಲಿ. ಶಾಲೆಗೆ
ಹೊಸ ಶಿಕ್ಷಕರನ್ನು ಆಯ್ಕೆ ಮಾಡುವಾಗ ಶಿಕ್ಷಕರ ಹಿನ್ನೆಲೆ ಗಮನಿಸುವುದು ಅತಿ ಅಗತ್ಯ. ಎಷ್ಟೋ ಪ್ರತಿಷ್ಠಿತ ಶಾಲೆಗಳು ಇದನ್ನು
ಮಾಡದೆ ಇರುವುದು ಕಂಡಿದ್ದೇನೆ.
ಶಾಲೆಯ ಶಿಕ್ಷಕರಿಗೆ ಇಂತಹ ಲೈಂಗಿಕ ದೌರ್ಜನ್ಯದ ಬಗ್ಗೆ ಮಗು ಏನಾದರೂ ತಿಳಿಸಿದರೆ ಅದನ್ನು ಯಾವ ರೀತಿ ನಡೆಸಿಕೊಳ್ಳಬೇಕು
ಹಾಗೆಯೆ ಕಾನೂನಾತ್ಮಕ ಕ್ರಮಗಳು ಏನು ಮತ್ತು ಈ ಮಗುವಿನ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳುವುದು ಮತ್ತು ಮಗುವಿನ
ಹೆಸರು ಗೌಪ್ಯವಾಗಿ ಇಡಲು ಏನೆಲ್ಲ ಮಾಡಬೇಕು ಈ ಬಗ್ಗೆ ಸರಿಯಾಗಿ ಶಾಲಾ ಶಿಕ್ಷಕರಿಗೆ ಮಾಹಿತಿ ಇರಬೇಕು. ಇಂತಹ ಘಟನೆ
ನಡೆದಾಗ ಮಗುವಿನ ತಾಯಿ ತಂದೆಯರನ್ನು ಕರೆದು ಅವರಿಗೂ ಕೂಡ ಈ ಬಗ್ಗೆ ಮಾಹಿತಿ ನೀಡಬೇಕು.
ಶಾಲಾ ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ಶಿಬಿರಗಳು ನಡೆಯಬೇಕು. ಪ್ರತಿ ಶಾಲೆಯಲ್ಲಿ ವಾರಕ್ಕೆ ಒಂದು ದಿನವಾದರೂ
ಮನೋವೈದ್ಯಕೀಯ ವಿಷಯಗಳಲ್ಲಿ ನುರಿತ ಆಪ್ತ ಸಲಹಾಕಾರರು ಸರ್ಕಾರ ನೇಮಿಸಬೇಕು. ಶಿಕ್ಷಕರಿಗೆ ಮಕ್ಕಳ ಮಾನಸಿಕ
ಸಮಸ್ಯೆಗಳನ್ನು ಅರಿತುಕೊಳ್ಳುವ ಬಗ್ಗೆ ಮಾಹಿತಿ ನೀಡಬೇಕು. ಈ ಬಗ್ಗೆ ಕಾರ್ಯಗಾರಗಳು ಬೇಕಾದಲ್ಲಿ ಅಥವಾ ಬೇರೆ ಯಾವುದೇ
ಸಂಶಯಗಳು ಇದ್ದಲ್ಲಿ ಲೇಖಕರನ್ನು ಜನಪ್ರತಿನಿಧಿ ಪತ್ರಿಕೆಯ ಮೂಲಕ ಯಾವುದೇ ಶಿಕ್ಷಕರು ಸಂಪರ್ಕಿಸಬಹುದು.