ಭಾರತದಲ್ಲಿ LGBTQIA+
ಹಲವು ವರ್ಷಗಳ ಹೋರಾಟದ ನಂತರ ಭಾರತದ ಸೇರಿ ವಿವಿಧ ದೇಶಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಇತರ ನಾಗರಿಕರಂತೆ
ಸಮಾನರು ಎಂದು ಕಾನೂನು ಇಂದು ತಿಳಿಸುತ್ತದೆ. ಆದರೂ ಕೂಡ ಸಾಮಾಜಿಕವಾಗಿ ಹಲವಾರು ತೊಡಕುಗಳು ಇವೆ. ಈ
ವಿಷಯದ ಆಳ ಅಗಲ ನನಗೆ ಅರ್ಥ ಆದದ್ದು ವೈದ್ಯರಿಬ್ಬರ ಮದುವೆ ಕೇವಲ ಒಂದೇ ತಿಂಗಳಿನಲ್ಲಿ ಸಂಘರ್ಷದ ಅಂಚಿಗೆ ಬಂದಾಗ.
ಅಲ್ಲಿ ತಿಳಿದು ಬಂದ ವಿಷಯವೆಂದರೆ ವೈದ್ಯೆ ಲೆಸ್ಬಿಯನ್ ಆಗಿದ್ದು ಈ ವಿಷಯ ಗೊತ್ತಿದ್ದರೂ ಕೂಡ ಆಕೆಯ ವೈದ್ಯ ತಾಯಿ
ತಂದೆಯರು ಅವಳನ್ನು ಮನೋವೈದ್ಯರ ಹತ್ತಿರ ಹಾಗೆ ತಮ್ಮ ಸಮಾಜದ ಧಾರ್ಮಿಕ ಮುಖಂಡರ ಹತ್ತಿರ ಕರೆದುಕೊಂಡು ಹೋಗಿ
ಮನವೊಲಿಸಿ ಮದುವೆ ಮಾಡಿದ್ದು. ಆ ಸಂದರ್ಭದಲ್ಲಿ ನನಗೆ ಹೊಳೆದ ಕೆಲವು ವಿಷಯಗಳನ್ನು ಬರೆದಿದ್ದೇನೆ.
ಮೊದಲನೆಯ ತೊಡಕು ಎಂದರೆ LGBTQIA+ ಅಂದರೆ ಏನು ಎನ್ನುವುದು ನಾಗರಿಕ ಸಮಾಜದ ಕೆಲವೊಬ್ಬರಿಗೆ ಇವತ್ತಿಗೂ
ಗೊತ್ತಿಲ್ಲ.
ಲೆಸ್ಬಿಯನ್ Lesbian ಅಂದರೆ ಹೆಣ್ಣು ಮತ್ತು ಹೆಣ್ಣಿನ ಮಧ್ಯೆ ಲೈಂಗಿಕ ಆಕರ್ಷಣೆ ಆಸಕ್ತಿ ಇರುವಂತಹವರು
ಗೇ Gay ಅಂದರೆ ಗಂಡು ಹಾಗೂ ಗಂಡಿನ ಮಧ್ಯೆ ಲೈಂಗಿಕ ಆಕರ್ಷಣೆ ಆಸಕ್ತಿ ಇರುವಂತಹವರು
ಬೈ ಸೆಕ್ಕುಸುವಲ್ Bisexual ಅಂದರೆ ಉಭಯಲಿಂಗಿಗಳು ಅಂದರೆ ಒಂದಕ್ಕಿಂತ ಹೆಚ್ಚು ಲಿಂಗಗಳ ಬಗ್ಗೆ ದೈಹಿಕ ಹಾಗು ಲೈಂಗಿಕ
ಆಕರ್ಷಣೆ, ಹಾಗೂ ಲೈಂಗಿಕ ನಡವಳಿಕೆ ತೋರಿಸಬಲ್ಲ ವ್ಯಕ್ತಿಗಳು
ಟ್ರಾನ್ಸ್ ಜೆಂಡರ್ಸ್ Transgenders ಇವರು ಹುಟ್ಟುವಾಗ ಒಂದು ಲಿಂಗ ನಿಯೋಜಿಸಲಾಗಿದ್ದರು ಈ ನಿಯೋಜಿಸಲಾದ ಲಿಂಗದ ಬಗ್ಗೆ
ಅಸಮಾಧಾನ ಗೊಂಡು ಅನ್ಯ ಲಿಂಗದ ನಡವಳಿಕೆ ಪ್ರಕಟಪಡಿಸುತ್ತಾರೆ. ಇವರನ್ನು ತೃತೀಯ ಲಿಂಗಿಗಳು ಎಂದು ಕೂಡ
ಕರೆಯುತ್ತಾರೆ.
ಕ್ವೀರ್ Queer ಎಂಬ ಪದವನ್ನು ಸಲಿಂಗಿ ದ್ವಿಲಿಂಗಿ ಟ್ರಾನ್ಸ್ ಜೆಂಡರ್ಸ್ ಸೇರಿದಂತೆ ಒಟ್ಟಾರೆ ಭಿನ್ನ ಸಾಮಾನ್ಯ ರನ್ನು
ಸಂಬೋಧಿಸಲು ಕ್ವೀರ್ ಪದವನ್ನು ಬಳಸಲಾಗುತ್ತದೆ.
ಇಂಟರ್ ಸೆಕ್ಸ್ Intersex ಗಂಡು ಅಥವಾ ಹೆಣ್ಣು ಲಿಂಗಕ್ಕೆ ಸರಿಹೊಂದುವಂತಹ ಗುಣಲಕ್ಷಣಗಳು ಹೊಂದದೆ ಹುಟ್ಟಿರುವ
ವ್ಯಕ್ತಿಗಳನ್ನು ಉಲ್ಲೇಖಿಸಿ ಬಳಸಲಾಗುತ್ತದೆ. ವಿಶ್ವೆಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯ ಪ್ರಕಾರ ಇಂಟರ್ಸೆಕ್ಸ್
ಜನರು ಲೈಂಗಿಕ ಗುಣಲಕ್ಷಣಗಳ ವಿಷಯದಲ್ಲಿ (ಜನನಾಂಗಗಳು ,ಜನನ ಗ್ರಂಥಿ ಮತ್ತು ಕ್ರೋಮೋಸೋಮ್ ಮಾದರಿಗಳನ್ನು
ಒಳಗೊಂಡಂತೆ) ಪುರುಷ ಅಥವಾ ಸ್ತ್ರೀ ದೇಹಗಳ ವಿಶಿಷ್ಟ ಬೈನರಿ ಕಲ್ಪನೆಗಳಿಗೆ ಹೊಂದಿಕೆಯಾಗುವುದಿಲ್ಲ
ಎಸೆಕ್ಕುಸುವಲ್ Asexual ಸಾಮಾನ್ಯವಾಗಿ ಉಂಟಾಗುವ ಲೈಂಗಿಕ ಆಕರ್ಷಣೆಗಿಂತಲೂ ಕಡಿಮೆ ಅಥವಾ ಯಾವುದೇ ಲೈಂಗಿಕ
ಆಕರ್ಷಣೆಯನ್ನು ಅನುಭವಿಸದೇ ಇರುವ ವ್ಯಕ್ತಿಗಳನ್ನು ಉಲ್ಲೇಖಿಸಿ ಇದನ್ನು ಉಪಯೋಗಿಸುತ್ತಾರೆ.
ಒಟ್ಟಾರೆಯಾಗಿ ಮೇಲೆ ಹೇಳಿರುವ ಎಲ್ಲಾ ವಿಭಿನ್ನ ಲಿಂಗ ಅಥವಾ ಲೈಂಗಿಕ ಆಕರ್ಷಣೆ ಅಥವಾ ಲೈಂಗಿಕ ನಡವಳಿಕೆ ಇರುವವರನ್ನು
LGBTQIA+ ಎಂದು ಸಂಬೋಧಿಸುತ್ತಾರೆ.
ಈ ಹಿಂದೆ ಇವರುಗಳ ಬಗ್ಗೆ ವ್ಯಂಗ್ಯವಾಗಿ ಅಥವಾ ಕೀಳು ಹಾಸ್ಯದೊಂದಿಗೆ ವ್ಯವಹರಿಸಲಾಗುತ್ತಿತ್ತು ಆದರೆ ಈಗ ಈ ಪರಿಸ್ಥಿತಿ
ಬಹಳಷ್ಟು ಬದಲಾಗಿದೆ. ಆದರೂ ಎಲ್ಲವೂ ಸರಿ ಇದೆ ಎಂದು ಹೇಳಲಾಗುವುದಿಲ್ಲ. ಈ ಲೇಖನದಲ್ಲಿ ಇನ್ನು ಮುಂದೆ ಇವರುಗಳನ್ನು
ಲೈಂಗಿಕ ಅಲ್ಪಸಂಖ್ಯಾತರು ಎಂದು ಸಂಬೋಧಿಸುತ್ತಾ ಮುಂದುವರಿಯುತ್ತೇನೆ.
ಬಹಳಷ್ಟು ಜನರಲ್ಲಿ ಇರುವ ಒಂದು ತಪ್ಪು ನಂಬಿಕೆ ಎಂದರೆ ಈ ಲೈಂಗಿಕ ಅಲ್ಪಸಂಖ್ಯಾತ ಮನೋಭಾವ ಒಂದು ರೋಗ..
ಅದರಲ್ಲಿಯೂ ಸಲಿಂಗ ಆಕರ್ಷಣೆ ಹೊಂದುವುದು ರೋಗ, ಟ್ರಾನ್ಸ್ ಜೆಂಡರ್ ಕೂಡ ವೈದ್ಯರು ಸರಿಪಡಿಸಬಹುದಾದ ಕಾಯಿಲೆ ಈ
ರೀತಿ ನಾಗರಿಕ ಸಮಾಜದಲ್ಲಿ ಕೂಡ ಬಹಳಷ್ಟು ಜನ ತಿಳಿದುಕೊಂಡಿದ್ದಾರೆ. ಈ ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಸಾಕಷ್ಟು
ತಾರತಮ್ಯಗಳು ಈಗಲೂ ನಡೆಯುತ್ತವೆ. ಜನರಿಂದ ಚುನಾಯಿತರಾದ ಜನಪ್ರತಿನಿಧಿಯೊಬ್ಬರು ಇತ್ತೀಚೆಗೆ ತಮ್ಮ ವಿರೋಧಿ ಪಕ್ಷದ
ನೇತಾರರೊಬ್ಬರ ಮಗ ಈ ಲೈಂಗಿಕ ಅಲ್ಪಸಂಖ್ಯಾತ ನಾಗಿದ್ದು ಅದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು
ಸಮಾಜದಲ್ಲಿ ಯಾರು ಅದನ್ನು ಪ್ರಶ್ನಿಸಲಿಲ್ಲ. ಇವತ್ತಿಗೂ ಹಲವಾರು ಲೈಂಗಿಕ ಅಲ್ಪಸಂಖ್ಯಾತರು ಲಿಂಗದ ಗುರುತಿನ ಬಗ್ಗೆ
ವಿಚಾರಣೆಗೆಂದು ಪೊಲೀಸ್ ಠಾಣೆಗೆ ಹೋದ ವಿಚಾರದ ಬಗ್ಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ. 18
ವರ್ಷಕ್ಕೊ ಮೇಲ್ಪಟ್ಟ ಹಲವಾರು ಲೈಂಗಿಕ ಅಲ್ಪಸಂಖ್ಯಾತರು ಅವರ ಮನೆಗಳಲ್ಲಿ ತಾರತಮ್ಯವನ್ನು ಪ್ರಶ್ನಿಸಿ, ಮನೆಯಿಂದ ಹೊರಗೆ
ಬಂದಾಗ ಅವರ ಮೇಲೆ ನಾನಾ ತರದ ಒತ್ತಡಗಳನ್ನು ಹೇರಿ ಮರಳಿ ಮನೆಗೆ ಬರುವಂತೆ ಹಾಗೂ ಈ ತಾರತಮ್ಯವನ್ನು
ಎದುರಿಸುವಂತೆ ಮಾಡಲಾಗುತ್ತದೆ. ಹಲವರು ತಮ್ಮ ಪ್ರೀತಿಪಾತ್ರರಿಂದಲೇ ದೂರವಾಗಿ ಒಂಟಿತನವನ್ನು ಎದುರಿಸುತ್ತಾರೆ.
ಕುಟುಂಬವು ಅವರಿಗೆ ಲಿಂಗ ಅಭಿವ್ಯಕ್ತಿಯನ್ನು ಮರೆಮಾಚಲು ಒತ್ತಡ ಹೇರುತ್ತದೆ. ಆದ್ದರಿಂದ ಕೆಲವರು ತಮ್ಮ ಈ ಲೈಂಗಿಕ
ಅಲ್ಪಸಂಖ್ಯಾತ ಆಲೋಚನೆಯನ್ನು ಬಿಟ್ಟುಬಿಡಬೇಕು ಮತ್ತು ಇತರರಂತೆ ಬದುಕಬೇಕು ಎಂದು ಮನಸ್ಸಿಲ್ಲದ ಮನಸ್ಸಿನಿಂದ
ಮನೋವೈದ್ಯರನ್ನು ಸಂಪರ್ಕಿಸಿದ್ದು ಉಂಟು. ಹಲವರು ಖಿನ್ನತೆ ಆತಂಕ ಮನೋಬೇನೆ ಮುಂತಾದ ಮಾನಸಿಕ ಸಮಸ್ಯೆಗಳಿಂದ
ಬಳಲುತ್ತಾರೆ. ಇವತ್ತಿಗೂ ಸಲಿಂಗ ವಿವಾಹಗಳ ಬಗ್ಗೆ ಕಾನೂನಾತ್ಮಕ ಮತ್ತು ಸಾಮಾಜಿಕ ನಿಲುವುಗಳು ಸ್ಪಷ್ಟವಾಗಿಲ್ಲ.
ಇವೆಲ್ಲ ಕಾರಣದಿಂದಲೋ ಏನೋ ಈ ಲೈಂಗಿಕ ಅಲ್ಪಸಂಖ್ಯಾತರು ಹಲವರು ನಿರಾಶ್ರಿತರಾಗುತ್ತಾರೆ. ಕೆಲವರು ಹೊಟ್ಟೆ ಪಾಡಿಗಾಗಿ
ಶೋಷಣೆಗೆ ಒಳಗಾಗುತ್ತಾರೆ. ಹಲವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಾಮಾಜಿಕ ಬಹಿಷ್ಕಾರವನ್ನು
ಎದುರಿಸುತ್ತಾರೆ. ಇವತ್ತಿಗೂ ಈ ಲೈಂಗಿಕ ಅಲ್ಪಸಂಖ್ಯಾತರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಯೋಚಿಸುವ ಮನೋಸ್ಥಿತಿ ನಮ್ಮಲ್ಲಿ
ಇದೆ. ಇಂತಹ ವ್ಯಕ್ತಿಗಳಿಗೆ ಆಗಾಗ ಮನೆ ನೀಡಲು ನಿರಕರಿಸಲಾಗುತ್ತದೆ ಅಥವಾ ಅವರನ್ನು ಮನೆಗಳಿಂದ ಹೊರಗೆ
ಹಾಕಲಾಗುತ್ತದೆ, ನೆರೆಹೊರೆಯವರು ಕಾನೂನು ರಕ್ಷಕರು ಕೂಡ ಇವರನ್ನು ಪೀಡಿಸುತ್ತಾರೆ. ಈ ಎಲ್ಲ ಸಮಸ್ಯೆಗಳಿಂದ ಹಲವಾರು
ಜನ ದೊಡ್ಡ ನಗರಗಳಲ್ಲಿ ಭಿಕ್ಷಾಟನೆಗೆ ರಸ್ತೆಗೆ ಇಳಿಯುತ್ತಾರೆ. ಸಾಮಾಜಿಕ ತಿರಸ್ಕಾರ ನಿರಾಕರಣೆ ಇಂದಿಗೂ ಭಾರತದಲ್ಲಿ
ಸತ್ಯವಾಗಿದೆ.
ಇವೆಲ್ಲ ಕಪ್ಪು ಛಾಯೆಗಳ ಮಧ್ಯೆ ಒಂದು ಉತ್ತಮ ಬೆಳವಣಿಗೆ ಅಂದರೆ ಕರ್ನಾಟಕ ಸರ್ಕಾರ ಟ್ರಾನ್ಸ್ಜೆಂಡರ್ ವ್ಯಕ್ತಿಗಳನ್ನು ಕಾನೂನು
ಬದ್ಧವಾಗಿ ಗುರುತಿಸುವ ಜಾಗೃತಿ ಅಭಿಯಾನ ಕೈಗೊಂಡಿದೆ.
ಕೊನೆಯದಾಗಿ ಹೇಳಬಯಸುವುದೇನೆಂದರೆ ಭಾರತದ ಸಂವಿಧಾನವು ಲೈಂಗಿಕ ಗುರುತಿನ ಆಧಾರದ ಮೇಲೆ ಯಾವುದೇ
ರೀತಿಯ ತಾರತಮ್ಯವನ್ನು ನಿಷೇಧಿಸುತ್ತದೆ. ಇದನ್ನು ನಾಗರಿಕ ಸಮಾಜ ಅರ್ಥಮಾಡಿಕೊಳ್ಳಬೇಕು. ಈ ಲೈಂಗಿಕ ಅಲ್ಪಸಂಖ್ಯಾತರ
ಬಾಳು ನನ್ನಂತೆ ನಿಮ್ಮಂತೆ ಬೆಳಗಬೇಕು.