Select Page

ಏನಿದು ICD ? Impulse control disorder? ಉದ್ವೇಗ ಅನಿಯಂತ್ರಣದ ಅಸ್ವಸ್ಥತೆಗಳು.. ಇದು ಒಂದು ವಿಚಿತ್ರ ರೀತಿಯ
ಅಸ್ವಸ್ಥತೆಗಳ ಗುಂಪು. ಈ ಗುಂಪಿನಲ್ಲಿ ಇದ್ದಕ್ಕಿದ್ದಂತೆ ಕಾರಣವಿಲ್ಲದೆ ಪದೇ ಪದೇ ಸಿಟ್ಟು ಬರುವುದು (intermittent explosive
disorder) ಬೆಂಕಿ ಹಚ್ಚುವುದು (pyromania) ತಮಗೆ ಅಗತ್ಯವಿಲ್ಲದಿದ್ದರೂ ಸಣ್ಣಪುಟ್ಟ ವಸ್ತುಗಳನ್ನು ಎಲ್ಲಿಯಾದರೂ ನೋಡಿದರೆ
ಅದನ್ನು ಕದ್ದುಬಿಡುವುದು (kleptomania) ತನ್ನ ತಲೆಯ ಅಥವಾ ಕೈಕಾಲುಗಳ ಮೇಲೆ ಇರುವ ಕೂದಲನ್ನು ಕಿತ್ತುಕೊಳ್ಳುವುದು
(trichotillomania) ಸಮಸ್ಯೆಗಳಾಗುತ್ತಿದ್ದರು ಜೂಜು ಮುಂದುವರಿಸುವುದು (Pathological Gambling) ಅನಗತ್ಯ ಎನಿಸಿದರು ಕೂಡ
ವಸ್ತುಗಳನ್ನು ಖರೀದಿಸಲು ಮುಂದಾಗುವುದು (pathological buying) ಮುಂತಾದ ವಿಚಿತ್ರ ನಡವಳಿಕೆಗಳ ಬೇರೆ ಬೇರೆ
ಕಾಯಿಲೆಗಳು ಈ ಗುಂಪಿನ ಅಡಿಯಲ್ಲಿ ಚರ್ಚಿಸಲ್ಪಡುತ್ತವೆ. ಈ ಗುಂಪಿನ ವಿಶೇಷತೆ ಎಂದರೆ ಇಲ್ಲಿ ವ್ಯಕ್ತಿಯು ಹಠಾತ್ತನೆ ತನಗೆ
ಅಥವಾ ಇತರರಿಗೆ ಹಾನಿಕಾರಕವಾದ ಕೆಲವು ವರ್ತನೆಗಳನ್ನು ಮಾಡಿಬಿಡುತ್ತಾನೆ. ಈ ಸಂದರ್ಭದಲ್ಲಿ ಮನಸ್ಸಿಗೆ ಬಂದ ಆಸೆಯನ್ನು
ಅಥವಾ ಯೋಚನೆಯನ್ನು ನಿರ್ವಹಿಸಬಾರದು ಎಂದು ಗೊತ್ತಿದ್ದರೂ ಕೂಡ ಕೆಲವೊಮ್ಮೆ ಆತ ನಿಯಂತ್ರಣವನ್ನು ಕಳೆದುಕೊಂಡು
ಬಿಡುತ್ತಾನೆ ಮತ್ತು ಆ ನಡವಳಿಕೆಯನ್ನು ಮಾಡಿ ತೋರಿಸುತ್ತಾನೆ. ಈತನ ಇಂತಹ ನಡವಳಿಕೆಗಳಿಂದ ಆತನಿಗೆ ಸಾಮಾಜಿಕ
ಜವಾಬ್ದಾರಿ ಮತ್ತು ತನ್ನ ಕೆಲಸದಲ್ಲಿ ಸಮಸ್ಯೆಗಳಾಗುತ್ತಿರುತ್ತವೆ ಆದರೂ ಈ ನಡವಳಿಕೆಗಳನ್ನು ಮುಂದುವರಿಸಿಕೊಂಡು
ಹೋಗುತ್ತಾನೆ.
ಹದಿಹರೆಯದ ಮಕ್ಕಳು ಕಾರಣವಿಲ್ಲದೆ ವಿರೋಧದ ಪ್ರತಿಭಟನೆಯ ನಡುವಳಿಕೆಗಳನ್ನು ತೋರಿಸುವುದು (oppositional defiant
disorder)ಕೂಡ ಈ ಗುಂಪಿನಲ್ಲಿ ವಿಜ್ಞಾನಿಗಳು ಸೇರಿಸಿದ್ದಾರೆ.
ಈ ಎಲ್ಲಾ ಮೇಲಿನ ವರ್ತನೆಗಳು ಗಮನಿಸಿದರೆ ಸಾಮಾನ್ಯವಾಗಿ ಎಲ್ಲರಲ್ಲೂ ಅಡಕವಾಗಿರುವ ಕೆಲವು ನಡವಳಿಕೆಗಳೇ
ಇವು.ಹಾಗೂ ಇವುಗಳನ್ನು ನಾವು ಮಾಡಬಾರದು, ನಿಯಂತ್ರಣದಲ್ಲಿ ಇಡಬೇಕು ಎಂಬುದು ಹೆಚ್ಚಿನವರಿಗೆ ಗೊತ್ತಿರುತ್ತದೆ .ಆದರೆ
ಸಮಸ್ಯೆ ಇರುವ ಈ ವ್ಯಕ್ತಿಯಲ್ಲಿ ಈ ನಡವಳಿಕೆಗಳು ಪದೇ ಪದೇ ಉಂಟಾಗುತ್ತದೆ, ಮತ್ತು ಈ ನಡವಳಿಕೆಗಳನ್ನು ಮಾಡಿದರೆ
ಸಮಸ್ಯೆ ಆಗಬಹುದು ಎಂದು ಗೊತ್ತಿದ್ದರೂ ವ್ಯಕ್ತಿಯು ಪದೇ ಪದೇ ಆ ನಡವಳಿಕೆಗಳನ್ನು ಮಾಡಿ ತೋರಿಸುತ್ತಾನೆ ಹಾಗೂ
ಇದರಿಂದ ಮುಜುಗರವನ್ನು ಮತ್ತು ಸಮಸ್ಯೆಗಳನ್ನು ಅನುಭವಿಸುತ್ತಾನೆ. ಈ ನಡವಳಿಕೆಗಳನ್ನು ಮಾಡದೇ ಇರುವಂತೆ
ಪ್ರಯತ್ನವನ್ನು ವ್ಯಕ್ತಿಯು ಮಾಡಿದಾಗ ಆತನಲ್ಲಿ ಒಂದು ಬಗೆಯ ಮನಸ್ಸಿನಲ್ಲಿ ಉದ್ವೇಗ ಉಂಟಾಗುತ್ತದೆ. ಆ ಉದ್ವೇಗವನ್ನು
ತಡೆಯಲಾರದೆ ಆತ ಈ ನಡವಳಿಕೆಯನ್ನು ಮಾಡಿಯೇ ತೀರುತ್ತಾನೆ. ಆ ನಡವಳಿಕೆ ಪ್ರಕಟಗೊಂಡ ಕೂಡಲೇ ಆತನ ಮನಸ್ಸಿನ
ಉದ್ವೇಗ ಕಡಿಮೆಯಾಗಿ ,ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಕ್ಕ ಹಾಗೆ ಆತನಿಗೆ ಅನಿಸುತ್ತದೆ. ಇವರ ಈ ನಡವಳಿಕೆಗಳು
ಅವರಿಗೂ ಸಮಾಜದಲ್ಲಿ ಇತರರಿಗೂ ಒಂದು ರೀತಿಯ ಮುಜುಗರ ಕೆಲವೊಮ್ಮೆ ಸಮಸ್ಯೆ ಉಂಟುಮಾಡುತ್ತದೆ.ಆದ್ದರಿಂದಲೇ
ಇಂತಹ ವ್ಯಕ್ತಿಗಳು ಸಮಾಜದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಾರೆ.
ಈ ಕಾಯಿಲೆಯ ಬಗ್ಗೆ ಸಂಶೋಧನೆಗಳು ತಿಳಿಸುವ ವಿಷಯವೆಂದರೆ ಈ ಕಾಯಿಲೆಗೆ ತುತ್ತಾಗಿರುವವರ ಅನುವಂಶಿಕ ಅಂಶಗಳನ್ನು
ನೋಡಿದರೆ ಇವರ ಕುಟುಂಬದಲ್ಲಿ ಇಚ್ಚಿತ್ತ ಚಿತ್ತವಿಕಲತೆ, ಅತಿ ಚಟುವಟಿಕೆ ,ಮದ್ಯ ಮಾದಕದ್ರವ್ಯ ವ್ಯಸನ, ಮತ್ತು ಸಮಾಜ
ವಿರೋಧಿ ವ್ಯಕ್ತಿತ್ವವುಳ್ಳ ಸಮಸ್ಯೆಗಳ ಸಂಬಂಧಿಕರು ಹೆಚ್ಚಾಗಿ ಇರುತ್ತಾರೆ.
ಹಾಗೆಯೇ ಸಣ್ಣ ವಯಸ್ಸಿನಲ್ಲಿ ಕಡು ಬಡತನ, ಹಿಂಸೆ ಪ್ರವೃತ್ತಿ ಇರುವ ಸಮುದಾಯ, ಸಣ್ಣ ವಯಸ್ಸಿನಲ್ಲಿ ಶೋಷಣೆ ಗೆ
ಒಳಗಾದವರು ಅಥವಾ ಶೋಷಣೆಯನ್ನು ನೋಡಿದವರು ಅಥವಾ ತಾಯಿ ತಂದೆಯರಿಂದ ಸಂಬಂಧಿಕರಿಂದ

ಕಡೆಗಾಣಿಸಲಾದವರು ಈ ತರಹದ ಸಮಸ್ಯೆಗಳನ್ನು ಪ್ರಕಟಪಡಿಸುತ್ತಾರೆ. ಇದನ್ನು ಗಮನಿಸಿದಾಗ ಅನುವಂಶಿಕತೆ ಹಾಗೂ
ಪರಿಸರ ಈ ಸಮಸ್ಯೆಗೆ
ಕಾರಣ ಎಂದು ತಿಳಿದು ಬರುತ್ತದೆ. ಮೆದುಳಿನಲ್ಲಿ “ಕಾರ್ಟಿಸೋಲ್ “ಎಂಬ ಕೆಮಿಕಲ್ ನ ಅಸಮತೋಲನ ಕೂಡ ಕಾರಣ ಎಂದು
ವಿಜ್ಞಾನಿಗಳು ತಿಳಿಸುತ್ತಾರೆ.
ಈ ಸಮಸ್ಯೆಗಳ ಬೇಗನೆ ಗುರುತಿಸುವುದು ಹಾಗೂ ಮನೋವೈದ್ಯಕೀಯ ಚಿಕಿತ್ಸೆಗೆ ಒಳಪಡಿಸುವುದು ಈ ಸಮಸ್ಯೆ
ಸರಿಪಡಿಸುವುದರಲ್ಲಿ ಸಹಕಾರಿ ಆಗುವುದು.
ಅದರಲ್ಲಿಯೂ ಸಣ್ಣ ಮಕ್ಕಳಲ್ಲಿ ಸಮಸ್ಯೆ ಕಂಡು ಬರುವಾಗ ಇದನ್ನು ಬೇಗನೆ ಗುರುತಿಸಿ, ಚಿಕಿತ್ಸೆಗೆ ಒಳಪಡಿಸಬೇಕಾಗುತ್ತದೆ.
ಈ ಸಮಸ್ಯೆಗಳ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳೋಣ
ಈ ಗುಂಪಿನ ಅಸ್ವಸ್ಥತೆಗಳಿಗೆ ssri ಎಂಬ ಗುಂಪಿನ ಖಿನ್ನತೆ ನಿವಾರಕ ಮಾತ್ರೆಗಳು ಚಿಕಿತ್ಸೆಗೆ ಮನೋವೈದ್ಯರು
ಉಪಯೋಗಿಸುತ್ತಾರೆ. ಹಾಗೆಯೇ ಬೈಪೋಲಾರ್ ಮೂಡ ಡಿಸಾರ್ಡಾರ್ ನಲ್ಲಿ ಉಪಯೋಗಿಸುವ ಕೆಲವು ಮೂಡು ಸ್ಟೆಬಿಲೈಜರ್ಸ್
ಮಾತ್ರೆಗಳನ್ನು ಕೂಡ ಉಪಯೋಗಿಸುತ್ತಾರೆ.
ಈ ಸಮಸ್ಯೆ ಇರುವವರಿಗೆ ಮನೋ ಸಾಮಾಜಿಕ ಚಿಕಿತ್ಸೆಗಳು ಬಹಳಷ್ಟು ಸಹಾಯಕಾರಿ. ಅದರ ಬಗ್ಗೆ ತಿಳಿದುಕೊಳ್ಳೋಣ
ಅರಿವು ಮತ್ತು ನಡವಳಿಕೆ ಬದಲಾವಣೆಯ ಚಿಕಿತ್ಸೆಗಳು (cognitive behaviour therapy) ಇಂತಹ ಸಮಸ್ಯೆಯಲ್ಲಿ ಉಪಯೋಗಿಸುವ
ಮನೋಶಾಸ್ತ್ರೀಯ ಚಿಕಿತ್ಸೆಯಾಗಿದೆ. ಸಣ್ಣ ಮಕ್ಕಳಲ್ಲಾದರೆ ತಾಯಿ ತಂದೆಯರು ಈ ಮಕ್ಕಳನ್ನು ಹೇಗೆ ನಿರ್ವಹಿಸಬೇಕು
ಅವರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ parental management training ಎಂಬ ಚಿಕಿತ್ಸಾಕ್ರಮವನ್ನು
ಉಪಯೋಗಿಸುತ್ತಾರೆ.
ಈ ಸಮಸ್ಯೆಗಳು ಸಮುದಾಯದಲ್ಲಿ ಬಹಳಷ್ಟು ಕಾಣದಿದ್ದರು ಮನೋವೈದ್ಯರ ಕ್ಲಿನಿಕ್ ನಲ್ಲಿ ಬೇರೆ ಬೇರೆ ಕಾರಣಗಳಿಂದ ಚಿಕಿತ್ಸೆಗೆ
ಬರುವ ಸಾಧ್ಯತೆ ಇದೆ. ಸಣ್ಣ ವಯಸ್ಸಿನಲ್ಲಿ ತಾಯಿ ತಂದೆಗೆ ಹೊಡೆಯುತ್ತಿರುವ ಮಗು, ಮನೆಯಯನ್ನು ಬೆಂಕಿ ಹಚ್ಚಿ ನಾಶ
ಮಾಡಲು ಯತ್ನಿಸಿದ ಮಗು, ಮಾಲ್ ಒಂದರಲ್ಲಿ” ಸಾಕ್ಸ್ “ಕದಿಯುತ್ತಿದ್ದ ಖ್ಯಾತ ನಾಮ ಕ್ರಿಕೆಟಿಗ, ಸಾಕಷ್ಟು ನಷ್ಟ ಅನುಭವಿಸಿದರೂ
ಮತ್ತೆ ಮತ್ತೆ ಹಣ ಹೂಡಿ ಜೂಜು ಆಡುತ್ತಾ ಸರ್ವಸ್ವ ಕಳೆದುಕೊಂಡ ವಕೀಲ, 70ನೇ ವಯಸ್ಸಿನಲ್ಲಿ ಒಂದೇ ತಿಂಗಳಿನಲ್ಲಿ ಒಂದು ಲಕ್ಷ
ರೂಪಾಯಿ ಶಾಪಿಂಗ್ ಮಾಡಿದ ವಯೋವೃದ್ದ, ತನ್ನ ತಲೆಯ ಕೂದಲನ್ನು ತಾನೇ ಕಿತ್ತುಕೊಳ್ಳುತ್ತಿರುವ ಚಿತ್ರನಟ ಹೀಗೆ ಹಲವಾರು
ವಿಷಯಗಳನ್ನು ಓದುತ್ತಿರಿ ಅಥವಾ ಕೇಳಿರುತ್ತೀರಿ.. ಇವರೇ ಈ ಸಮಸ್ಯೆ ಯಿಂದ ಬಳಲುವ ಹಲವರು. ಒಬ್ಬೊಬ್ಬರದು ಒಂದೊಂದು
ಸಮಸ್ಯೆ ,ಆದರೆ ಕಾರಣ ಮಾತ್ರ ಇದೆ ಉದ್ವೇಗವನ್ನು ನಿಯಂತ್ರಣದಲ್ಲಿ ಇಡಲು ಆಗದೆ ಇರುವುದು.
ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೇ ಇದ್ದಲ್ಲಿ ಇವರುಗಳು ಮದ್ಯ ಮಾದಕ ದ್ರವ್ಯ ವ್ಯಸನಿಗಳಾಗಬಹುದು, ಇಲ್ಲವೇ ಖಿನ್ನತೆ
,ನಿರುದ್ಯೋಗ ಸಮಸ್ಯೆ ಹಾಗೂ ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಸಮಸ್ಯೆ ಮುಂತಾದವುಗಳನ್ನು ತಮ್ಮ ಜೀವನದಲ್ಲಿ
ಅನುಭವಿಸಬಹುದು. ಆದ್ದರಿಂದ ಸಕಾಲದಲ್ಲಿ ಇಂತಹ ಸಮಸ್ಯೆಗಳಿಗೆ ಚಿಕಿತ್ಸೆ ಅಗತ್ಯ.