Select Page

INTERNET-DERIVED INFORMATION OBSTRUCTING TREATMENT SYNDROME

ಇಂಟರ್ನೆಟ್ ನಲ್ಲಿ ದೊರೆತ ಹಲವಾರು ವಿಷಯಗಳನ್ನು ತಿಳಿದುಕೊಂಡು ವೈದ್ಯರಲ್ಲಿ ಬಂದು ತನಗೆ ಹಾಗೆ ಆಗಿದೆ, ತನಗೆ ಹೀಗೆ
ಆಗಿದೆ ಎಂದು ಹೇಳುವ ಹಲವಾರು ಯುವಕರು ಇತ್ತೀಚೆಗೆ ಮನೋವೈದ್ಯದರಲ್ಲಿಗೆ ಬರುವುದು ಸರ್ವೇಸಾಮಾನ್ಯವಾಗಿದೆ.
ಇಂಟರ್ನೆಟ್ ನಲ್ಲಿ ಇರುವ ಮಾಹಿತಿಯನ್ನು ತಮಗೆ ಉಂಟಾಗುತ್ತಿರುವ ಸಮಸ್ಯೆಗಳ ಗುಣಲಕ್ಷಣಗಳನ್ನು ತಾಳೆ ಹಾಕಿ ತನಗೆ ಆ
ಕಾಯಿಲೆ ಇದೆ ಈ ಕಾಯಿಲೆ ಇದೆ ಎಂದು ಬರುವುದು. ವೈದ್ಯರು ಪರೀಕ್ಷಿಸಿ ಅವರ ಸಮಸ್ಯೆಗಳ ಬಗ್ಗೆ ತಿಳಿ ಹೇಳುವಾಗ ವೈದ್ಯರಿಗೆ
ಮರು ಪ್ರಶ್ನೆಗಳನ್ನು ಹಾಕುವುದು, ತಮಗೆ ಏನು ಅನ್ನಿಸುತ್ತದೆ ಎಂದು ಹೇಳುವುದು ಹಾಗೆಯೇ ಮೊಬೈಲ್ನಲ್ಲಿ ತಾವು ಓದಿರುವ
ವಿಷಯಗಳ ಬಗ್ಗೆ ವೈದ್ಯರಿಗೆ ತೋರಿಸುವುದು ಇಂಥವರ ಪರಿಪಾಠ. ಎಷ್ಟೋ ಸಾರಿ ಅವರು ಹೇಳಿದ ಕಾಯಿಲೆಗಳ ಗುಣಲಕ್ಷಣಗಳು
ಇಲ್ಲದಿದ್ದರೂ ಹಾಗೂ ಆ ಕಾಯಿಲೆಗಳ ಟೆಸ್ಟ್ ಗಳು ನೆಗೆಟಿವ್ ಆಗಿದ್ದರೂ ಕೂಡ ಇವರು ಈ ಕಾಯಿಲೆ ತನಗೆ ಇದ್ದೇ ಇದೆ ಎಂದು
ವಾದಿಸುವುದು, ಇತರ ವೈದ್ಯರೊಂದಿಗೆ ಸಮಾಲೋಚನೆ ನಡೆಸಬಹುದೇ ಎಂದು ವೈದ್ಯರನ್ನು ಕೇಳುವುದು, ಆಸ್ಪತ್ರೆಯಿಂದ
ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವುದು ಇದನ್ನು ನಾವು” ಡಾಕ್ಟರ್ ಶಾಪಿಂಗ್ “ಎಂದು ಕರೆಯುತ್ತೇವೆ. ಹಾಗೆಯೇ ಕೆಲವೊಬ್ಬರು ಬೇರೆ
ಯಾವುದೋ ಒಂದು ಖಾಯಿಲೆಗೆ ವೈದ್ಯರು ನೀಡಿದ ಚಿಕಿತ್ಸೆ ತನ್ನಲ್ಲಿ ಉಂಟಾಗಿರುವ ಸಮಸ್ಯೆಗೆ ಕಾರಣ ಎಂದು ದೂರುವುದು, ಆ
ಚಿಕಿತ್ಸೆಯ ಅಡ್ಡ ಪರಿಣಾಮಗಳು ಇಂಟರ್ನೆಟ್ ನಲ್ಲಿ ಹುಡುಕಿ ಯಾವುದಾದರೂ ಒಂದು ಅಡ್ಡ ಪರಿಣಾಮ ಎತ್ತಿಹಿಡಿದು ಅದು ತನ್ನಲ್ಲಿ
ಉಂಟಾಗಿರುವುದು ಈ ಚಿಕಿತ್ಸೆಯ ನಂತರವೇ ಎಂದು ಹೇಳುವುದು .ಇದು ಹೆಚ್ಚಾಗಿ ಮನೋವೈದ್ಯಕೀಯ ಕಾಯಿಲೆಗಳಲ್ಲಿ ಇದ್ದರೂ
ಹಲವಾರು ಬಾರಿ ದೈಹಿಕ ಕಾಯಿಲೆಗಳ ಚಿಕಿತ್ಸೆಯ ನಂತರವೂ ಉಂಟಾಗಬಹುದು. ಸಾಮಾನ್ಯವಾಗಿ ನೋಡುವ ಗುಣಲಕ್ಷಣಗಳು
ಎಂದರೆ ಸುಸ್ತು, ಲೈಂಗಿಕ ನಿಷ್ಕ್ರಿಯತೆ, ಲೈಂಗಿಕ ಅಂಗಾಂಗಗಳು ಉದ್ರೇಕ ಗೊಳ್ಳುವುದಿಲ್ಲ ಎನ್ನುವುದು, ಹೊಟ್ಟೆ ಉರಿ ,ಮೈ ಉರಿ
, ನಿದ್ರಾಹೀನತೆ , ತೂಕ ಕಡಿಮೆಯಾಗಿದೆ ಅಥವಾ ತೂಕ ಜಾಸ್ತಿಯಾಗಿದೆ ,ನೆನಪಿನ ಶಕ್ತಿಯ ಕೊರತೆ ಮುಂತಾದವುಗಳು. ಹೆಚ್ಚಾಗಿ
ಈ ವಿಷಯಗಳನ್ನು ಇಂಟರ್ನೆಟ್ ನಲ್ಲಿ ಓದಿಕೊಂಡು ತನಗೆ ಈ ಸಮಸ್ಯೆ ಸಂಭವಿಸಿ ಬಿಟ್ಟಿದೆ ಎಂದು ಯೋಚಿಸುವುದು ಈ ಬಗ್ಗೆ
ಇಂಟರ್ನೆಟ್ ನಲ್ಲಿ ಬಹಳಷ್ಟು ಸಂಶೋಧನೆಗಳನ್ನು ನಡೆಸುವುದು ಅದನ್ನೇ ಯೋಚಿಸಿಕೊಂಡು ಕುಳಿತುಕೊಳ್ಳುವುದು, ಹಲವು
ವೈದ್ಯಕೀಯ ಸಲಹೆಗಳ ನಂತರವೂ ಈ ಸಮಸ್ಯೆ ತನಗೆ ಇದೆ ಎಂದು ನಂಬುವುದು, ಹಾಗೂ ತನ್ನ ದೈನಂದಿನ ಕೆಲಸಗಳನ್ನು
ಮರೆತು, ಸಾಮಾಜಿಕ ಜವಾಬ್ದಾರಿಗಳನ್ನು ಮರೆತು ಕುಳಿತುಕೊಳ್ಳುವುದು , ಕೆಲವೊಮ್ಮೆ ಅವರಿಗೆ ನಿಜವಾಗಲೂ ಇದ್ದ ಕಾಯಿಲೆಗೆ
ಸರಿಯಾದ ಚಿಕಿತ್ಸೆ ಪಡೆದುಕೊಳ್ಳದೆ ಇರುವುದು ಹಾಗೂ ಅದರಿಂದ ಸಮಸ್ಯೆ ಉಲ್ಬಣಗೊಳ್ಳುವುದು ವೈದ್ಯನಾಗಿ ನೋಡುತ್ತಿದ್ದೇನೆ.
ಇಂತಹ ಸಮಸ್ಯೆಗಳು ಇರುವವರಲ್ಲಿ ಅನೇಕರು ಖಿನ್ನತೆ, ಗೀಳು ಮನೋರೋಗ, ಆತಂಕ ಮನೋಬೇನೆ ಮುಂತಾದ
ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಆದರೆ ಅದಕ್ಕೆ ಅಗತ್ಯ ಚಿಕಿತ್ಸೆಯನ್ನು ಪಡೆಯಲು ಅವರುಗಳು ಒಪ್ಪುವುದಿಲ್ಲ. ಅಥವಾ ಚಿಕಿತ್ಸೆ
ಪಡೆಯುವ ಸಂದರ್ಭದಲ್ಲಿ ಆ ಚಿಕಿತ್ಸೆಗೆ ಕೊಡುವ ಮಾತ್ರೆಗಳ ಬಗ್ಗೆ ಓದಿಕೊಂಡು ಅದರಲ್ಲಿ ಉಂಟಾಗುವ ಅಡ್ಡ ಪರಿಣಾಮಗಳು
ತಮಗೆ ಸಂಭವಿಸಿದೆ ಅಥವಾ ತಮಗೆ ಸಂಭವಿಸಬಹುದು ಎಂದು ಅಂದುಕೊಳ್ಳುವುದು ಹಾಗೂ ಇದನ್ನು ಮನೆಯವರೊಂದಿಗೆ
ವೈದ್ಯರೊಂದಿಗೆ ಚರ್ಚೆ ಮಾಡಲು ಮುಜುಗರ ಪಡುವುದು ಸರ್ವೆ ಸಾಮಾನ್ಯ. ಅದರಲ್ಲಿಯೂ ಲೈಂಗಿಕ ಅಡ್ಡ ಪರಿಣಾಮಗಳ ಬಗ್ಗೆ
ಅಂತೂ ಯಾರೊಂದಿಗೂ ಇವರು ಚರ್ಚಿಸುವುದೇ ಇಲ್ಲ. ವೈದ್ಯಕೀಯ ಚಿಕಿತ್ಸೆಯಲ್ಲಿ ಪರಿಣಾಮಗಳು ಇರುವಾಗ ಅಡ್ಡ
ಪರಿಣಾಮಗಳು ಕೂಡ ಇರುತ್ತವೆ. ಆದರೆ ಅಡ್ಡ ಪರಿಣಾಮಗಳು ಎಲ್ಲರಲ್ಲಿಯೂ ಉಂಟಾಗುವುದಿಲ್ಲ. ಯಾವುದೇ ವೈದ್ಯಕೀಯ ಚಿಕಿತ್ಸೆ

ಅಡ್ಡ ಪರಿಣಾಮ ಇಲ್ಲಾ ಎಂದು ಘೋಷಿಸಿದರೆ ಅಲ್ಲಿ ಪರಿಣಾಮಗಳು ಇರುವುದು ಕೂಡ ಇದನ್ನು ಜನಸಾಮಾನ್ಯರು
ತಿಳಿದುಕೊಳ್ಳಬೇಕು.ಕೆಲವರಿಗೆ ಅವರ ಮೂಲಭೂತ ಸಮಸ್ಯೆ ಖಿನ್ನತೆ ಅಥವಾ ಆತಂಕ ಇದ್ದರೆ ಅಡ್ಡ ಪರಿಣಾಮಗಳ ಬಗ್ಗೆಯೂ
ಕೂಡ ಈ ಸಮಸ್ಯೆಯು ಸ್ವಲ್ಪಮಟ್ಟಿಗೆ ತನ್ನ ಹಸ್ತಕ್ಷೇಪ ಮಾಡುತ್ತದೆ. ಖಿನ್ನತೆ ಇರುವವರು ಎಲ್ಲಾ ತರದ ಅಡ್ಡ ಪರಿಣಾಮಗಳು
ತನಗೆ ಉಂಟಾಗುತ್ತದೆ ಎಂದು ನಂಬಬಹುದು. ಆತಂಕವಿರುವವರು ತನಗೆ ಈ ಅಡ್ಡ ಪರಿಣಾಮ ಉಂಟಾಗಿ ಬಿಟ್ಟರೆ ಎಂದು
ಹೆದರಬಹುದು. ಗೀಳು ಮನೋರೋಗ ಇರುವವರು ಕೇವಲ ಅಡ್ಡ ಪರಿಣಾಮಗಳ ಬಗ್ಗೆ ಅತಿಯಾಗಿ ಯೋಚನೆ ಮಾಡಿ ತಮಗೆ ಆ
ಸಮಸ್ಯೆ ಇರಬಹುದು ಎಂದು ಪದೇಪದೇ ಯೋಚಿಸಬಹುದು. ಇದಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಹಲವು ಅನಧಿಕೃತ
ವೆಬ್ಸೈಟ್ಗಳು ವೈದ್ಯರಲ್ಲದ ವೃತ್ತಿಪರರಲ್ಲದ ವ್ಯಕ್ತಿಗಳ ಅನುಭವಗಳನ್ನು ಆಧರಿಸಿ ಬರೆದಿರುವ ವಿಷಯಗಳನ್ನು ಓದಿಕೊಂಡು ಅಧಿಕೃತ
ಮಾಹಿತಿಯನ್ನು ತಿರಸ್ಕರಿಸಿ ಗೊಂದಲಕ್ಕೆ ಒಳಗಾಗುತ್ತಾರೆ. ಇಂದು ಇಂಟರ್ನೆಟ್ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಅತಿಯಾದ
ಮಾಹಿತಿಗಳು , ಪರಿಷ್ಕೃತವಲ್ಲದ ಮಾಹಿತಿಗಳು ಕೂಡ ಜನರಿಗೆ ಸಮಸ್ಯೆಯನ್ನು ಉಂಟು ಮಾಡಬಹುದು. ಇದರಿಂದ ಜನರಿಗೆ
ಅಗತ್ಯವಾದ ಚಿಕಿತ್ಸೆ ಸರಿಯಾಗಿ ಸಿಗದೇ ಇರಬಹುದು. ಅದೇ ರೀತಿ ಅವೈಜ್ಞಾನಿಕ ಚಿಕಿತ್ಸೆಗಳು ಅಥವಾ ಅವರ ಕಾಯಿಲೆಗೆ
ಸಂಬಂಧ ಪಡದ ಚಿಕಿತ್ಸೆಗಳನ್ನು ಇಂಟರ್ನೆಟ್ ನಲ್ಲಿ ಓದಿಕೊಂಡು ವೈದ್ಯರು ಕೊಡಬೇಕೆಂಬ ಬೇಡಿಕೆಗಳು ಇಟ್ಟುಕೊಂಡು
ರೋಗಿಗಳು ಬಂದದ್ದನ್ನು ನೋಡಿದ್ದೇನೆ. ಹಾಗೆಯೇ ಅನಗತ್ಯ ಟೆಸ್ಟ್ ಗಳು ಸ್ಕ್ಯಾನ್ ಗಳು ವೈದ್ಯಕೀಯ ತನಿಖೆಗಳು ಮಾಡಿಸಿ
ಎಂದು ಕೇಳುವ ರೋಗಿಗಳನ್ನು ನೋಡಿದ್ದೇನೆ. ಇದರಿಂದ ಅನಗತ್ಯ ಹಣ ಖರ್ಚು, ಹಾಗೆಯೇ ಕೆಲವೊಮ್ಮೆ ರೋಗಿಯ ಮತ್ತು
ವೈದ್ಯರ ಸಮಯ ಕೂಡ ಹಾಳು.
ಇಂತಹ ಇಂಟರ್ನೆಟ್ ನ ಓದಿನಿಂದ ಉಂಟಾಗುವ ಸಮಸ್ಯೆಯನ್ನು “ಸೈಬರ್ ಕೊಂಡ್ರಿಯ”
ಎಂದು ಕೂಡ ಕರೆಯುತ್ತಾರೆ. ಜನಸಾಮಾನ್ಯರು ತಿಳಿಯಬೇಕಾದ ವಿಷಯವೆಂದರೆ ಅವರಿಗೆ ವೈದ್ಯರ ಚಿಕಿತ್ಸೆಯ ಬಗ್ಗೆ ಏನಾದರೂ
ಸಂಶಯಗಳಿದ್ದಲ್ಲಿ ಮೊದಲು ವೈದ್ಯರಲ್ಲೇ ಮಾತನಾಡಿ ಇಲ್ಲವೇ ಅವರ ಅಭಿಪ್ರಾಯ ಪಡೆದು ಸಮಾಧಾನವಾಗದಿದ್ದಲ್ಲಿ ಅವರದೇ
ವಿಷಯದಲ್ಲಿ ನುರಿತ ಬೇರೆ ಇನ್ನೋರ್ವ ತಜ್ಞರನ್ನು ಸಂಪರ್ಕಿಸಿ. ವೈದ್ಯರಿಂದ ವೈದ್ಯರಿಗೆ ಭೇಟಿಕೊಡುತ್ತಾ ಹೋಗಿ ಏನು
ಪ್ರಯೋಜನವಿಲ್ಲ.ಹಾಗೆಯೇ ಇಂಟರ್ನೆಟ್ ಬಳಸುವಾಗ ಅಧಿಕೃತ ಆರೋಗ್ಯ ಮಾಹಿತಿ ಇರುವ ವೆಬ್ಸೈಟ್ ಗಳನ್ನೇ ಆಧರಿಸಿ
ನಿರ್ಧರಿಸಿ. ಇದರಿಂದ ನಿಮಗೆ ಅಗತ್ಯ ಸಮಯದಲ್ಲಿ ಸಿಗಬೇಕಾದ ಚಿಕಿತ್ಸೆ ಸಿಗುವಂತಾಗಲಿ.