Select Page

ವೃದ್ಧಾಪ್ಯದ ಅರಳು ಮರಳು ( ಡಿಮೆನ್ಶಿಯಾ)
ಈ ಸಮಸ್ಯೆಯು ವಯಸ್ಸಾಗುತ್ತಿದ್ದಂತೆ ಮೆದುಳಿನ ಜೀವಕೋಶಗಳು ನಶಿಸಿ ಹೋದಂತೆ ಉಂಟಾಗುವ ಸಮಸ್ಯೆ. ಈ ಸಮಸ್ಯೆ
ಬಂದರೆ ಏನು ಮಾಡಲು ಆಗುವುದಿಲ್ಲ ಎಂಬ ಒಂದು ಭಾವನೆ ಬಹಳಷ್ಟು ಜನರಲ್ಲಿ ಇದೆ . ಹಲವಾರು ವೈದ್ಯರಲ್ಲಿಯೂ ಕೂಡ ಇದೇ
ರೀತಿಯ ನಂಬಿಕೆ ಇದೆ.ಆದರೆ ಮನೋ ವೈದ್ಯನಾಗಿ ನಾನು ನೋಡಿರುವುದೇನೆಂದರೆ, ಇದನ್ನು ಬೇಗ ಗುರುತಿಸಿದರೆ ಸರಿಯಾದ
ಚಿಕಿತ್ಸೆಯಿಂದ ಈ ರೋಗಿಗಳ ಜೀವನ ಮಟ್ಟದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದು.ಇದರಲ್ಲಿ ಮನೆಯವರ
ಆರೈಕೆದಾರರ ಪಾತ್ರ ಬಹಳಷ್ಟು ಇದೆ.ಮೆದುಳಿನ ಜೀವಕೋಶಗಳು ನಶಿಸಿ ಹೋಗಲು ಪ್ರಮುಖ ಕಾರಣ ವಯಸ್ಸು. ಆದರೆ
ಇತ್ತೀಚೆಗೆ 55 ರ ವಯಸ್ಸಿನಲ್ಲಿ ಕೂಡ ಈ ಡಿಮೆನ್ಶಿಯಾ ಸಮಸ್ಯೆಯನ್ನು ನೋಡುತ್ತಿದ್ದೇವೆ. ಅದು ಅಲ್ಲದೆ ಡಿಮೆನ್ಶಿಯಾ ಸಮಸ್ಯೆ
ವೃದ್ಧಾಪ್ಯದಲ್ಲಿ ಕಾಣಿಸಿಕೊಳ್ಳುವುದು ನಾವು 40 ರಿಂದ 60ರವರೆಗೆ ನಡೆಸುವ ಜೀವನ ಶೈಲಿಯಿಂದ ಎಂಬುದರ ಬಗ್ಗೆ ಈ ಹಿಂದೆ
ಬರೆದಿದ್ದೇನೆ. ಬಿಪಿ ಕಾಯಿಲೆ, ಸಕ್ಕರೆ ಕಾಯಿಲೆ, ತಂಬಾಕು, ಕುಡಿತ, ಅತಿಯಾದ ಕಾರ್ಬೋಹೈಡ್ರೇಟ್ಸ್ ಸೇವನೆ, ಸಕ್ಕರೆ ಅಂಶ
,ಬೊಜ್ಜು ಬೆಳೆಸುವ ಜೀವನ ಶೈಲಿ ಇವೆಲ್ಲವೂ ಡಿಮನ್ಸಿಯ ಕಾಯಿಲೆಗೆ ಪೂರಕ. ಹಾಗೆಯೇ ವೈಟಮಿನ್ ಪೌಷ್ಟಿಕಾಂಶಗಳ ಕೊರತೆ
ಅದರಲ್ಲಿಯೂ ವಿಟಮಿನ್ ಬಿ12, ಫೋಲಿಕ್ ಆಸಿಡ್ , ವಿಟಮಿನ್ ಡಿ ಕೊರತೆಯು ಜೀವಕಣಗಳ ನಶಿಸುವಿಕೆಯನ್ನು ಹೆಚ್ಚು
ಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಥೈರಾಯ್ಡ್ ಗ್ರಂಥಿಯ ಥಾಯ್ ರೊಕ್ಸಿನ್ ಶೇಖರಣೆಯ ಕೊರತೆಯು ಜೀವ
ಕಣಗಳ ನಶಿಸುವಿಕೆಗೆ ಕಾರಣವಾಗಬಹುದು. ಖಿನ್ನತೆ ಎಂಬ ಮನೋರೋಗವು ಕೂಡ ಕೆಲವೊಮ್ಮೆ ಡಿಮೆನ್ಶಿಯಾ ಕಾಯಿಲೆಗೆ
ಕಾರಣವಾಗಬಹುದು.
ನಮ್ಮ ನಿಮ್ಮ ಮನೆಯ ವೃದ್ಧರು ಇದ್ದಕ್ಕಿದ್ದಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನೆನಪಿನ ಶಕ್ತಿಯ ಸಮಸ್ಯೆಗಳನ್ನು
ಅನುಭವಿಸುತ್ತಿದ್ದರೆ ಅಂದರೆ ಬೆಳಿಗ್ಗೆ ತಿಂಡಿ ತಿಂದಿದ್ದರು ,ತಿಂದಿಲ್ಲ ಅನ್ನುವುದು ಅಥವಾ ಮನೆಗೆ ಬಂದ ಸಂಬಂಧಿಕರು ಅವರು
ಬಂದು ಹೋದ ಮೇಲೆ ಅವರ ಬಗ್ಗೆ ನೆನಪಿಸಿಕೊಳ್ಳದೆ ಇರುವುದು, ತಾವು ಯಾವಾಗಲೂ ಉಪಯೋಗಿಸುವ ವಸ್ತುಗಳನ್ನು
ಕಳೆದುಹೋಗಿದೆ ಎಂದು ಪದೇಪದೇ ಹುಡುಕುವುದು ಹಾಗೆಯೆ ಈ ವಸ್ತುಗಳನ್ನು ಅಸ್ವಾಭಾವಿಕ ಸ್ಥಳಗಳಲ್ಲಿ ಇಟ್ಟು ಬಿಡುವುದು
ಉದಾಹರಣೆಗೆ ಕನ್ನಡಕವನ್ನು ಫ್ರಿಡ್ಜ್ ನಲ್ಲಿ ಇಟ್ಟು ಬಿಡುವುದು.. ಮತ್ತು ಅದನ್ನು ಹುಡುಕುವುದು ಇವೆಲ್ಲವೂ ಡಿಮೆನ್ಶಿಯಾ
ಕಾಯಿಲೆಯ ಲಕ್ಷಣಗಳು.. ಬರ ಬರುತ್ತಾ ನಿದ್ರಾ ಹೀನತೆ, ಸಂಶಯ ಸ್ವಭಾವ, ಮನೆಯವರೊಂದಿಗೆ ಜಗಳ, ಮನೆಯಲ್ಲಿಯೇ
ಯಾವ ಯಾವ ಸ್ಥಳದಲ್ಲಿ ಏನು ಮಾಡಬೇಕು ಗೊತ್ತಾಗದೆ ಇರುವುದು, ಮನೆಯಿಂದ ಹೊರಗೆ ಹೋದರೆ ಮನೆಗೆ ವಾಪಸ್ ಬರಲು
ಗೊತ್ತಾಗದೆ ಇರುವುದು, ಹೀಗೆ ಮುಂದುವರದಲ್ಲಿ ಬಟ್ಟೆಗಳಲ್ಲಿ ಮಲಮೂತ್ರ ಮಾಡುವುದು, ಕೊನೆ ಕೊನೆಗೆ ಬಟ್ಟೆ ಉಡಲು ಆಗದೆ,
ಹೊರಗೆ ಬರಲು ಆಗದೆ ಹಾಸಿಗೆ ಹಿಡಿಯುವುದು , ದೈನಂದಿನ ಚಟುವಟಿಕೆಗಳಲ್ಲಿ ಇನ್ನೊಬ್ಬರ ಮೇಲೆ ಸಂಪೂರ್ಣವಾಗಿ ನಿರ್ಭರ
ಆಗುವುದು ಈ ಕಾಯಿಲೆಯ ಗುಣಲಕ್ಷಣಗಳು.
ವೈಜ್ಞಾನಿಕ ಸಂಶೋಧನೆಗಳು ಮುಂದುವರೆದಿದ್ದರೂ ಕೂಡ ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಆಗುವುದಿಲ್ಲ.
ಹಾಗೆಯೇ ಕೆಲವೊಮ್ಮೆ ಜೀವಕೋಶಗಳ ನಶಿಸುವಿಕೆ ಸರಿಪಡಿಸಬಹುದಾದ ಕೆಲವು ಕಾರಣಗಳಿಂದ ಡಿಮೆನ್ಶಿಯಾ
ಉಂಟಾಗುತ್ತಿದ್ದರೆ ಅದನ್ನು ಸರಿಪಡಿಸಬಹುದು. ಸರಿಪಡಿಸಬಹುದಾದಂತಹ ಸಮಸ್ಯೆಗಳು ಎಂದರೆ ರಕ್ತದ ಕೊರತೆ, ವಿಟಮಿನ್
ಗಳ ಕೊರತೆ, ತಲೆಯಲ್ಲಿ ರಕ್ತಸ್ರಾವಾಗಿದ್ದರೆ, ಥೈರಾಯ್ಡ್ ನ ಕೊರತೆ, ದೇಹದಲ್ಲಿ ಉಪ್ಪಿನಾಂಶದ ಕೊರತೆ ಇದರಿಂದಾಗಿ
ಉಂಟಾಗುವ ಸೋಡಿಯಂ, ಪೊಟ್ಯಾಶಿಯಂ ಕೊರತೆಗಳು ಇವುಗಳು ಕೂಡ ಡಿಮೆನ್ಶಿಯಾ ದಂತೆ ತೋರಬಹುದು. ಇವುಗಳನ್ನು

ಪತ್ತೆ ಹಚ್ಚಿ ಸರಿಪಡಿಸಲಾಗುತ್ತದೆ. ಆದ್ದರಿಂದ ಡಿಮೆನ್ಶಿಯಾ ಸಮಸ್ಯೆಯನ್ನು ವೈದ್ಯರು ಗುರುತಿಸಿದರೆ ಈ ಬಗ್ಗೆ ಕೆಲವು ರಕ್ತದ ಟೆಸ್ಟ್
ಗಳನ್ನು ಹೇಳಬಹುದು. ಇದನ್ನು” ಡಿಮೆನ್ಶಿಯಾ ವರ್ಕಪ್” ಎಂದು ಹೇಳುತ್ತಾರೆ. ಇದರ ಜೊತೆಗೆ ತಲೆಯ ಸಿಟಿ ಸ್ಕ್ಯಾನ್ ಮತ್ತು ಎಂ
ಆರ್ ಐ ಸ್ಕ್ಯಾನ್ ಬಗ್ಗೆ ವೈದ್ಯರು ತಿಳಿಸಬಹುದು. ಮೇಲೆ ತಿಳಿಸಿದ ಗುಣಲಕ್ಷಣಗಳು ಹಾಗೂ ರಕ್ತದಲ್ಲಿ ಏನಾದರೂ ಕೊರತೆಗಳು
ಕಂಡು ಬಂದಲ್ಲಿ ಅವುಗಳನ್ನು ಸರಿಪಡಿಸಿದರೆ ಕೆಲವೊಮ್ಮೆ ಡಿಮೆನ್ಶಿಯಾ ಗುಣಲಕ್ಷಣಗಳು ಕಡಿಮೆಯಾಗಬಹುದು. ಹಾಗೆಯೇ ನನ್ನ
ವೈದ್ಯಕೀಯ ಅನುಭವದಲ್ಲಿ ನೋಡಿದ ಹಾಗೆ ಈ ಮೆದುಳಿನ ನರಕೋಶಗಳ ನಶಿಸುವಿಕೆಯನ್ನು ತಡೆಗಟ್ಟಲು ಸಾಧ್ಯವಿಲ್ಲದಿದ್ದರು
ಕೂಡ ಆ ನಶಿಸುವಿಕೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಅಥವಾ ನಶಿಸುವಿಕೆಯ ವೇಗವನ್ನು ಕಡಿಮೆ ಮಾಡಲು ಆಧುನಿಕ ವೈದ್ಯಕೀಯ
ವಿಜ್ಞಾನದ ಕೆಲವು ಮಾತ್ರೆಗಳು ಸಹಾಯ ಮಾಡುತ್ತವೆ. ಮೆದುಳಿನ ನರಕೋಶಗಳದ ಎಸಿಟೈಲ್ ಕೋಲಿನ್ ಗ್ಲೂಟಮೇಟ್,
ಡೋಪಮಿನ್ ಸರೋಟೋನಿನ್ ಮುಂತಾದ ನರವಾಹಕಗಳ ಅಸಮತೋಲನವನ್ನು ಈ ಮಾತ್ರೆಗಳು ಸರಿಪಡಿಸಿ ಡಿಮೆನ್ಶಿಯಾ
ಕಾಯಿಲೆಯ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತವೆ.ಈ ಬಗ್ಗೆ ನಾನು ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ರೋಗಿಗಳನ್ನು
ನೋಡಿದ್ದೇನೆ ಹಾಗೆಯೇ ಸಂಶೋಧನೆಗಳು ಕೂಡ ಅದನ್ನು ಪುರಸ್ಕರಿಸುತ್ತವೆ. ರೋಗಿಗಳ ಜೀವನ ಮಟ್ಟದಲ್ಲಿ ಬದಲಾವಣೆಗಳನ್ನು
ಖಂಡಿತ ಈ ಮಾತ್ರೆಗಳು ತರುತ್ತವೆ. ಹಾಗೆಯೇ ಅವರಲ್ಲಿ ನಿದ್ರಾಹೀನತೆ, ಸಿಟ್ಟು ,ಅಕ್ರಮಣಕಾರಿ ವರ್ತನೆಗಳನ್ನು ಕಡಿಮೆ
ಮಾಡಲು ಮಾತ್ರೆಗಳನ್ನು ಕೊಡಬಹುದು. ಹಾಗೆಯೇ ರೋಗಿಗಳು ಮನೆಯವರ ಮೇಲೆ ಸಂಶಯ ಪಡುವುದು, ಅವರಿಗೆ
ಹೊಡೆಯಲು ಹೋಗುವುದು ಇಂತಹ ವರ್ತನೆ ಗುರುತಿಸಿ ಅದಕ್ಕೆ ಚಿಕಿತ್ಸೆ ನೀಡಿ ಕಡಿಮೆ ಮಾಡಬಹುದು.
ಕೆಲವೊಮ್ಮೆ ಖಿನ್ನತೆಯ ಕಾರಣದಿಂದ ಕೂಡ ಡಿಮೆನ್ಶಿಯಾ ಗುಣಲಕ್ಷಣಗಳು ಹೆಚ್ಚಾಗಬಹುದು. ಅಂತ ಸಂದರ್ಭದಲ್ಲಿ ಖಿನ್ನತೆ
ನಿವಾರಕ ಮಾತ್ರೆಗಳು ಕೂಡ ರೋಗಿಯ ಗುಣಲಕ್ಷಣಗಳಲ್ಲಿ ಗಣನೀಯ ಬದಲಾವಣೆಗಳನ್ನು ತರಬಹುದು.
ಇಂತಹ ಸಮಸ್ಯೆಗಳು ಬಂದಾಗ ಆರೈಕೆದಾರರ ಮಾನಸಿಕ ಆರೋಗ್ಯ ಕೂಡ ಬಹಳ ಮುಖ್ಯ. ಅವರುಗಳಿಗೆ ಈ ರೋಗಿಗಳನ್ನು
ನೋಡಿಕೊಂಡು ಮನಸ್ಸಿಗೆ ಬೇಸರ, ಅಸಹಾಯಕತೆ, ಜೀವನದಲ್ಲಿ ನಿರಾಸಕ್ತಿ ಮುಂತಾದವುಗಳು ಉಂಟಾಗಬಹುದು.
ಆರೈಕೆದಾರರಿಗೆ ಕೂಡ ಕೆಲವೊಮ್ಮೆ ಖಿನ್ನತೆ ಆತಂಕ ಮುಂತಾದ ಸಮಸ್ಯೆಗಳಿದ್ದು ಅದನ್ನು ವೈದ್ಯರು ಗುರುತಿಸಿ ಚಿಕಿತ್ಸೆ
ಕೊಡಬೇಕಾಗುತ್ತದೆ. ಹಾಗೆಯೇ ಆರೈಕೆದಾರರು ರೋಗಿಗಳೊಂದಿಗೆ ಹೇಗೆ ವರ್ತಿಸ ಬೇಕು ಎಂಬುದರ ಬಗ್ಗೆ ಕೂಡ ಮಾಹಿತಿ
ನೀಡಬೇಕಾಗುತ್ತದೆ. ಒಟ್ಟಿನಲ್ಲಿ ಅರಳು ಮರಳು ವಯೋ ಸಹಜವಾದದ್ದು ಎಂದು ನಿರ್ಲಕ್ಷ ಮಾಡಬೇಡಿ.. ವೈಜ್ಞಾನಿಕ ಚಿಕಿತ್ಸೆ
ಪಡೆಯಿರಿ.