ಮನುಷ್ಯರನ್ನು ಕಾಡುವ ಪ್ರಮುಖ ಮಾನಸಿಕ ಕಾಯಿಲೆಗಳಲ್ಲಿ ಫೋಬಿಯ ಕೂಡ ಒಂದು. ಫೋಬಿಯ ಅನ್ನುವುದು ಯಾವುದಾದರೂ
ಒಂದು ವಸ್ತು ಅಥವಾ ಸ್ಥಳದ ಬಗ್ಗೆ ಅತೀವವಾದ ಮತ್ತು ಅರ್ಥಹೀನವಾದ ಹೆದರಿಕೆ ಮತ್ತು ಆ ಕಾರಣದಿಂದಾಗಿ ಆ ವಸ್ತು ಅಥವಾ
ಸ್ಥಳವನ್ನು ಫೋಬಿಯದಿಂದ ಬಳಲುತ್ತಾ ಇರುವವರು ತಿರಸ್ಕರಿಸುತ್ತಾರೆ. ಈ ವಸ್ತು ಅಥವಾ ಸ್ಥಳದ ಬಗ್ಗೆ ಸ್ವಲ್ಪ ಯೋಚಿಸಿದರು
ಅವರಲ್ಲಿ ಹೆದರಿಕೆ ,ಎದೆ ಬಡಿತ ,ಮನಸ್ಸಿಗೆ ಟೆನ್ಶನ್ ಪ್ರಾರಂಭವಾಗುತ್ತದೆ. ಈ ಬಗ್ಗೆ ನಾವೆಲ್ಲ ಸಮುದಾಯದಲ್ಲಿ ಬಹಳಷ್ಟು
ಜನರನ್ನು ನೋಡುತ್ತೇವೆ. ಸಾಮಾನ್ಯವಾಗಿ ನೋಡುವ ಫೋಬಿಯಗಳು ಎಂದರೆ ಎತ್ತರದ ಹೆದರಿಕೆ, ಹಾರುವ ಹೆದರಿಕೆ,
ಸುತ್ತುವರಿದ ಸ್ಥಳಗಳ ಹೆದರಿಕೆ, ಜೇಡ ಜಿರಳೆ ಗಳ ಹೆದರಿಕೆ, ಇಲಿ ನಾಯಿ ಮುಂತಾದ ಪ್ರಾಣಿಗಳ ಹೆದರಿಕೆ ಮುಂತಾದವುಗಳು.
ಫೋಬಿಯ ದ ಕಾರಣಗಳೇನು ಎಂಬುದರ ಬಗ್ಗೆ ಇವತ್ತಿಗೂ ಸರಿಯಾದ ಮಾಹಿತಿಗಳಿಲ್ಲ. ಕೆಲವರಿಗೆ ಅನುವಂಶಿಕವಾಗಿ ಫೋಬಿಯ
ಬಂದರೆ ಇನ್ನು ಕೆಲವರಿಗೆ ಪರಿಸರದ ಕಾರಣಗಳಿಂದ ಫೋಬಿಯ ಉಂಟಾಗಬಹುದು. ಮನುಷ್ಯನ ಬೆಳವಣಿಗೆ ಹಂತದಲ್ಲಿ ಕೆಲವು
ಅನುಭವಗಳಿಂದಲೂ ಕೂಡ ಫೋಬಿಯ ಉಂಟಾಗಬಹುದು. ಉದಾಹರಣೆಗೆ ಸಣ್ಣವರಿದ್ದಾಗ ನಾಯಿ ನಮ್ಮನ್ನು ಕಚ್ಚಲು
ಬಂದಿದ್ದರೆ,ನಾವು ತಪ್ಪಿಸಿಕೊಂಡು ಹೋಗಿದ್ದರು ಕೂಡ ಸನ್ನಿವೇಶವನ್ನು ನೆನಪಿಸಿಕೊಂಡು ಹೆದರಿರಬಹುದು. ಈ ಕಾರಣದಿಂದ ಕಟ್ಟಿ
ಹಾಕಿರುವ ನಾಯಿ ಇದ್ದರೂ ಕೂಡ ನಾವು ಹೆದರಿಕೊಳ್ಳಬಹುದು. ನಾಯಿಯ ಬಗ್ಗೆ ಸ್ವಲ್ಪ ಯೋಚಿಸಿದರು ಹೆದರಿಕೆ
ಬಂದುಬಿಡಬಹುದು. ಹಾಗೆಯೇ ಎಂದಾದರೂ ಒಂದು ದಿನ ಸಣ್ಣವರಿದ್ದಾಗ ಮನೆಯವರು ಅರಿವಿಲ್ಲದೆಯೇ ನಮ್ಮನ್ನು
ಯಾವುದಾದರೂ ಕೊಠಡಿಯಲ್ಲಿ ಕೂಡು ಹಾಕಿ ಹೋಗಿದ್ದರೆ, ಆ ಸಮಯದಲ್ಲಿ ಹೆದರಿ ಮುಂದೆ ಸುತ್ತುವರಿದ ಸ್ಥಳಗಳ ಬಗ್ಗೆ
ಅತೀವವಾದ ಹೆದರಿಕೆ ಉಂಟುಮಾಡಬಹುದು. ಇನ್ನು ಕೆಲವೊಮ್ಮೆ ಇತರರು ತಮ್ಮ ಅನುಭವಗಳನ್ನು ಹೇಳಿದಾಗ ಅದನ್ನು ಕೇಳಿ
ನಾವು ಹೆದರಿಕೆಗಳನ್ನು ಬೆಳೆಸಿಕೊಳ್ಳಬಹುದು. ಸಮಾಜದಲ್ಲಿ ಜನರ ಮುಂದೆ ಮಾತನಾಡುವುದು ಅಥವಾ ಅಧಿಕಾರಿಗಳೊಂದಿಗೆ
ಮಾತನಾಡುವುದು ಇದರ ಬಗ್ಗೆ ಹೆದರಿಕೆಯನ್ನು ಸೋಶಿಯಲ್ ಫೋಬಿಯ ಎಂದು ಕರೆಯುತ್ತೇವೆ. ಈ ಬಗ್ಗೆ ಈ ಹಿಂದೆಯೇ ಒಂದು
ಲೇಖನ ಬರೆಯಲಾಗಿದೆ ಆದ್ದರಿಂದ ಇದರ ಬಗ್ಗೆ ಚರ್ಚಿಸುವುದಿಲ್ಲ.
ಕೆಲವೊಮ್ಮೆ ನಮಗೆ ಅರಿವಿಲ್ಲದಂತೆಯೆ ಫೋಬಿಯ ಇದ್ದರೂ ಕೂಡ ನಾವು ಆ ವಸ್ತು ಅಥವಾ ಸನ್ನಿವೇಶವನ್ನು ದೂರ ವಿಟ್ಟು ನಮ್ಮ
ಜೀವನವನ್ನು ಸಾಮಾನ್ಯವಾಗಿ ನಡೆಸಬಲ್ಲವು. ಆದರೆ ಈ ವಸ್ತು ಅಥವಾ ಸನ್ನಿವೇಶದೊಂದಿಗೆ ಬದುಕುವುದು ಅನಿವಾರ್ಯವಾದಾಗ
ಫೋಬಿಯ ಒಂದು ದೊಡ್ಡ ಸಮಸ್ಯೆಯಾಗಿ ತೋರಿ ಬರುತ್ತದೆ. ಇದನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ, ಮನಸ್ಸಿನಲ್ಲಿ
ಇಟ್ಟುಕೊಂಡು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುವವರು ಇದ್ದಾರೆ. ಬರ ಬರುತ್ತಾ ಖಿನ್ನತೆ ,ನಿದ್ರಾಹೀನತೆ, ಆತ್ಮಹತ್ಯೆ
ಯೋಚನೆ ಮುಂತಾದ ಸಮಸ್ಯೆಗಳು ಕೂಡ ಇದರೊಂದಿಗೆ ಸೇರಿ ಬಿಡುತ್ತವೆ.
ಫೋಬಿಯ ಅನ್ನುವುದು ಸಾಮಾನ್ಯ ಮಾನಸಿಕ ಕಾಯಿಲೆಗಳಲ್ಲಿ ಒಂದು. ಇದರ ಬಗ್ಗೆ ವೈಜ್ಞಾನಿಕ ದೃಷ್ಟಿಕೋನ ಇಟ್ಟುಕೊಳ್ಳುವುದು
ಅತಿ ಅಗತ್ಯ. ಫೋಬಿಯ ಸರಿಪಡಿಸುವುದರಲ್ಲಿ ಮಾನಸಿಕ ತಜ್ಞರ ಅಥವಾ ಮನಶಾಸ್ತ್ರಜ್ಞರ ಸಹಾಯ ಪಡೆಯುವುದು ಬಹಳ
ಅಗತ್ಯ.
ಮಾನಸಿಕ ತಜ್ಞರು ನಿಮ್ಮೊಂದಿಗೆ ಮಾತನಾಡಿ ಈ ಫೋಬಿಯ ಉಂಟಾಗಲು ಕಾರಣಗಳೇನು ಎನ್ನುವುದನ್ನು ಹಾಗೂ ಇದರಿಂದ
ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ನಿಮ್ಮೊಂದಿಗೆ ಚರ್ಚಿಸುತ್ತಾರೆ. ಆತಂಕದಿಂದಾಗಿ ಮನಸ್ಸಿನ ಹಾಗೂ ದೇಹದ ಮೇಲೆ
ಉಂಟಾಗುತ್ತಿರುವ ಪರಿಣಾಮಗಳನ್ನು ಗುರುತಿಸಿ ಅದಕ್ಕೆ ಅಗತ್ಯ ಚಿಕಿತ್ಸೆ ನೀಡುತ್ತಾರೆ. ಪ್ರಾಥಮಿಕವಾಗಿ ಆತಂಕವು ಅತಿ
ಹೆಚ್ಚಾಗಿದ್ದಲ್ಲಿ ಆತಂಕ ನಿವಾರಕ ಮಾತ್ರೆಗಳು ಕೆಲವೊಮ್ಮೆ ಖಿನ್ನತೆ ನಿವಾರಕ ಮಾತ್ರೆಗಳನ್ನು ಕೂಡ ನಿಮಗೆ ಬರೆದು
ಕೊಡಬಹುದು. ಇದರೊಂದಿಗೆ ನಿಮಗೆ ಮನಶಾಸ್ತ್ರಜ್ಞರಲ್ಲಿ ಚಿಕಿತ್ಸೆಗೆ ಹೋಗಲು ತಿಳಿಸಬಹುದು. ಮನಶಾಸ್ತ್ರಜ್ಞರು “ಕಾಗ್ನಿಟಿವ್
ಬಿಹೇವಿಯರ್ ತೆರಪಿ “ಅಂದರೆ ಈ ಸಮಸ್ಯೆಯಿಂದಾಗಿ ನಿಮ್ಮಲ್ಲಿ ಉಂಟಾಗುತ್ತಿರುವ ಯೋಚನೆಗಳು ನಡುವಳಿಕೆಗಳನ್ನು ಗಮನಿಸಿ
ನೀವು ಯಾವ ಸನ್ನಿವೇಶಗಳನ್ನು ವಸ್ತುಗಳನ್ನು ತಿರಸ್ಕರಿಸುತ್ತಿದ್ದರೋ ಅವುಗಳನ್ನು ಹಂತ ಹಂತವಾಗಿ ಯೋಚಿಸಿ ಆ
ತಿರಸ್ಕಾರದಿಂದ ಹೊರಗೆ ಬಂದು ಆ ವಸ್ತು ಅಥವಾ ಸನ್ನಿವೇಶಗಳನ್ನು ಉಪಯೋಗಿಸುವಂತೆ ಮಾಡುವುದು ಅಥವಾ
ಎದುರಿಸುವಂತೆ ಮಾಡುವುದು ಈ ಚಿಕಿತ್ಸೆಯ ಮೂಲ ಉದ್ದೇಶ. ಮೊದಮೊದಲು ನಿಮಗೆ ಈ ಸನ್ನಿವೇಶಗಳನ್ನು ಯೋಚಿಸುವಂತೆ
ಮಾಡಿ ಮುಂದೆ ಆ ಸನ್ನಿವೇಶಗಳಲ್ಲಿ ನೀವು ಇದ್ದುಕೊಂಡು ಎದುರಿಸುವ ಧೈರ್ಯವನ್ನು ಉಂಟುಮಾಡುವುದು ಈ ಚಿಕಿತ್ಸೆಯ
ಉದ್ದೇಶ. ಇದನ್ನು ಎಕ್ಸ್ಪೋಶರ್ ಥೆರಪಿ ಎಂದು ಕರೆಯುತ್ತಾರೆ. ಈ ಸಮಸ್ಯೆಯನ್ನು ಎದುರಿಸುವ ಸಂದರ್ಭದಲ್ಲಿ ಉಂಟಾಗುವ
ಹೆದರಿಕೆಯನ್ನು ಕಡಿಮೆ ಮಾಡಲು ರಿಲ್ಯಾಕ್ಸೇಶನ್ ಎಕ್ಸರ್ಸೈಜ್ ಗಳನ್ನು ಕೂಡ ತಿಳಿಸಬಹುದು. ಮಾನಸಿಕ ತಜ್ಞರು ಈ ಚಿಕಿತ್ಸೆಯಲ್ಲಿ
ಗುರುತಿಸುವ ಇನ್ನೊಂದು ವಿಷಯವೆಂದರೆ ಫೋಬಿಯ ಗಳೊಂದಿಗೆ ಇತರ ಮಾನಸಿಕ ಸಮಸ್ಯೆಗಳು ಅಂದರೆ ಸಾಮಾನ್ಯ ಆತಂಕ
ಮನೋಬೇನೆ, ಖಿನ್ನತೆ, ಮದ್ಯ ಮಾದಕ ದ್ರವ್ಯ ಸೇವನೆ, ಗೀಳು ಮನೋರೋಗ ಮುಂತಾದ ಮಾನಸಿಕ ಕಾಯಿಲೆಗಳು ಕೂಡ
ಅದೇ ವ್ಯಕ್ತಿಯಲ್ಲಿ ಉಂಟಾಗಬಹುದು. ಮದ್ಯ ಮಾದಕ ದ್ರವ್ಯ ವ್ಯಸನ ಈ ಫೋಬಿಯ ಸನ್ನಿವೇಶಗಳನ್ನು ಎದುರಿಸುವ ಕಾರಣಕ್ಕಾಗಿ
ಪ್ರಾರಂಭವಾಗುವುದು ನೋಡಿದ್ದೇವೆ. ಈ ಪದಾರ್ಥಗಳನ್ನು ಸೇವಿಸಿದಾಗ ಹೆದರಿಕೆ ಕಡಿಮೆಯಾಗಿ ಹೋಗುತ್ತದೆ. ಆ ಕಾರಣದಿಂದ
ಈ ಅಭ್ಯಾಸವು ಹೆಚ್ಚಾಗುತ್ತಾ ಹೋಗುತ್ತದೆ. ನಂತರ ಇದು ಪ್ರಮುಖ ಸಮಸ್ಯೆ ಹಾಗೆ ತೋರುತ್ತದೆ ಹಾಗೂ ಫೋಬಿಯ ಬಗ್ಗೆ ಗಮನ
ಹಿಂದೆ ಹೋಗಿಬಿಡುತ್ತದೆ. ಹಾಗೆಯೇ ಕೆಲವು ವ್ಯಕ್ತಿತ್ವ ದೋಷಗಳು ಕೂಡ ಫೋಬಿಯ ಸಮಸ್ಯೆಯೊಂದಿಗೆ ಆ ವ್ಯಕ್ತಿಯಲ್ಲಿ ಇದ್ದಿರಲು
ಬಹುದು. ಆತಂಕದ ವ್ಯಕ್ತಿತ್ವ, ಯಾವಾಗಲೂ ಇತರ ಸಹಾಯದಲ್ಲಿ ಇರಬಯಸುವ ವ್ಯಕ್ತಿತ್ವ, ಗೀಳು ವ್ಯಕ್ತಿತ್ವ ಮುಂತಾದ ವ್ಯಕ್ತಿತ್ವ
ದೋಷಗಳು ಕೂಡ ಫೋಬಿಯ ಜಾಸ್ತಿ ಮಾಡಬಹುದು. ಮಾನಸಿಕ ವೃತ್ತಿಪರ ತಜ್ಞರು ಈ ಫೋಬಿಯ ಉಂಟಾಗಲು ಹಿನ್ನೆಲೆ,
ಹಾಗೆಯೇ ಫೋಬಿಯದೊಂದಿಗೆ ಇರುವ ಇತರ ಮಾನಸಿಕ ಕಾಯಿಲೆಗಳು ವ್ಯಕ್ತಿತ್ವ ದೋಷಗಳು ಇವುಗಳ ಬಗ್ಗೆ ಸಮರ್ಪಕ
ಅಧ್ಯಯನ ನಡೆಸಿ ಚಿಕಿತ್ಸೆ ನೀಡಬೇಕಾಗುತ್ತದೆ.
ಒಟ್ಟಿನಲ್ಲಿ ಫೋಬಿಯ ಚಿಕಿತ್ಸೆಯಲ್ಲಿ ಮನೋವೈದ್ಯರು ಮಾನಸಿಕ ವೃತ್ತಿಪರ ತಜ್ಞರು ಇವರ ಸಹಾಯ ಬಹಳ ಅಗತ್ಯ. ಈ
ಸಮಸ್ಯೆಯಿಂದ ಬಳಲುವ ನಿಮ್ಮ ಸ್ನೇಹಿತರು ಯಾರಾದರೂ ಇದ್ದಲ್ಲಿ ಅವರಿಗೆ ವೃತ್ತಿಪರ ಸಹಾಯವನ್ನು ಪಡೆಯಲು ತಿಳಿಸಿ.