“ಮದ್ಯ ವ್ಯಸನಿಗಳ ಮಕ್ಕಳ ಸಪ್ತಾಹ”.
ಪ್ರತಿ ವರ್ಷ ಫೆಬ್ರವರಿ 11 ರಿಂದ 17ರವರೆಗೆ ಈ ಸಪ್ತಾಹವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ಆಚರಣೆ ತಾಯಿ ಅಥವಾ
ತಂದೆ ಮದ್ಯ ವ್ಯಸನದ ಅಭ್ಯಾಸಕ್ಕೆ ಬಲಿಯಾಗಿದ್ದರೆ ಆ ಮನೆಯಲ್ಲಿ ಬೆಳೆಯುವ ಮಕ್ಕಳ ಬಗ್ಗೆ ಸಮಾಜ ಯೋಚಿಸಬೇಕು ಮತ್ತು
ಅವರಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಅನ್ನುವ ಕಾರಣದಿಂದ ಈ ಸಪ್ತಾಹದ ಆಚರಣೆ ಮಾಡಲಾಗುತ್ತದೆ. ಇದು
ಪ್ರಪ್ರಥಮವಾಗಿ ಪ್ರಾರಂಭವಾದದ್ದು ಅಮೆರಿಕಾ ಮತ್ತು ಇಂಗ್ಲೆಂಡ್ ದೇಶದಲ್ಲಿ.
ಯೋಚನೆ ಮಾಡಿ ನೋಡಿ ಈ ಬಾಲ್ಯ ಅನ್ನೋದು ಮುಗ್ದತೆ ಅನ್ವೇಷಣೆ ಮತ್ತು ಬೇಷರತ್ತಾಗಿ ಪ್ರೀತಿ ಪಡೆದುಕೊಂಡು ಖುಷಿ ಖುಷಿ
ಯಾಗಿ ಇರಬೇಕಾದ ಈ ಸಮಯದಲ್ಲಿ ಮಕ್ಕಳು ತಾಯಿ ತಂದೆಯರ ಈ ವ್ಯಸನದ ಕಾರಣದಿಂದ ಎಷ್ಟು ಕಷ್ಟಕಾರ್ಪಣ್ಯಗಳನ್ನು
ಅನುಭವಿಸಬೇಕಾಗುತ್ತದೆ. ತಾಯಿ ತಂದೆಯರ ಈ ಅಭ್ಯಾಸಗಳು ಮಗುವಿನ ಮೇಲೆ ಬಹುಮುಖ ಪರಿಣಾಮಗಳನ್ನು
ಉಂಟುಮಾಡುತ್ತವೆ. ಈ ಮಕ್ಕಳು ತಮ್ಮ ಪೋಷಕರ ಅನಿಯಮಿತ ನಡವಳಿಕೆಗಳನ್ನು ಸಹಿಸಿಕೊಂಡು ಭಯ ಆತಂಕ ಮತ್ತು
ಗೊಂದಲಗಳನ್ನು ಅನುಭವಿಸುತ್ತಾರೆ. ಯಾವಾಗಲೂ ಒಂದು ಅಸುರಕ್ಷತೆಯ ವಾತಾವರಣದಲ್ಲಿ ಬೆಳೆಯುವ ಈ ಮಕ್ಕಳು
ಸ್ವಾಭಿಮಾನದ ಕೊರತೆ ಮತ್ತು ಖಿನ್ನತೆಯಿಂದ ಬಳಲುತ್ತಾರೆ. ಮನೆಯಲ್ಲಿರುವ ಒತ್ತಡ ಮತ್ತು ಅಸ್ಥಿರತೆಯ ಕಾರಣದಿಂದಾಗಿ ಅವರ
ಶೈಕ್ಷಣಿಕ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ ಹಾಗೂ ಸಾಮಾಜಿಕ ಅಭಿವೃದ್ಧಿ ಕೂಡ ಕಡಿಮೆಯಾಗುತ್ತದೆ. ಈ ಮಕ್ಕಳಲ್ಲಿ
ಖಿನ್ನತೆ,ಆತಂಕಮನೋಬೇನೆ,ಕಲಿಕಾಸಮಸ್ಯೆಗಳು ಮುಂತಾದ ಮನೋಸಾಮಾಜಿಕಸಮಸ್ಯೆಗಳು ಹಾಗೆಯೇ ದೈಹಿಕ ಮಾನಸಿಕ
ಮತ್ತು ಲೈಂಗಿಕದೌರ್ಜನ್ಯಗಳು ಬಹಳಷ್ಟು ನಡೆಯುತ್ತದೆ ಎಂದು ಹಲವಾರು ಸಂಶೋಧನೆಗಳು ತಿಳಿಸುತ್ತದೆ.
ಎಲ್ಲಾ ಮಕ್ಕಳು ಒಂದೇ ರೀತಿಯ ಸವಾಲುಗಳನ್ನು ಅನುಭವಿಸುವುದಿಲ್ಲ. ತಾಯಿ ತಂದೆಯರ ಕುಡಿತದ ತೀವ್ರತೆ, ಮಗುವಿನ
ವಯಸ್ಸು, ಮಕ್ಕಳ ಮನೋಧರ್ಮ, ಇತರರಿಂದ ಅವರಿಗೆ ದೊರೆಯುವ ಪ್ರೀತಿ ಮತ್ತು ಬೆಂಬಲ ಇವುಗಳ ಮೇಲೆ ಈ ಸವಾಲುಗಳು
ನಿರ್ಭರವಾಗಿದೆ. ಈ ಮಕ್ಕಳ ಸಮಸ್ಯೆಗಳಿಗೆ ಬಹಳ ವಿಚಿತ್ರವಾಗಿರುತ್ತದೆ. ಈ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು
ವೈದ್ಯರುಗಳಿಗೆ ಆಪ್ತ ಸಲಹಾಕಾರರಿಗೆ ಮನಶಾಸ್ತ್ರಜ್ಞರಿಗೆ ಕೂಡ ಕಷ್ಟಕರ. ವಿದೇಶಗಳಲ್ಲಿ ಇದೇ ಸಮಸ್ಯೆಯಿಂದ ಬಳಲುತ್ತಿದ್ದ
ಹಲವು ಪ್ರೌಢಾವಸ್ಥೆಗೆ ಬಂದ ಮದ್ಯ ವ್ಯಸನಿಗಳ ಮಕ್ಕಳು ಮುಂದೆ ಆಪ್ತ ಸಲಹಾಕಾರರಾಗಿ ಮಾರ್ಪಟ್ಟು ಈ ಮಕ್ಕಳಿಗೆ
ಭಾವನಾತ್ಮಕ ಬೆಂಬಲವನ್ನು ನೀಡುವುದು ಒಂದು ವಿಶೇಷವಾಗಿದೆ. ಅಂತಹ ಒಂದು ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿರುವ ಸಂಸ್ಥೆಯೇ
“ನ್ಯಾಷನಲ್ ಚಿಲ್ಡ್ರನ್ ಆಫ್ ಆಲ್ಕೋಹಾಲಿಕ್ಸ್”. ನಮ್ಮ ದೇಶದಲ್ಲಿ ಅಂತಹ ಸಂಸ್ಥೆಯ ಕೊರತೆ ಇದೆ. ಈ ಮಕ್ಕಳ ಬಗ್ಗೆ ಸಮಾಜದ
ಗಮನ ಸೆಳೆದು ಈ ಮಕ್ಕಳ ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡುವ ಅಗತ್ಯತೆ ಬಹಳಷ್ಟು ಇದೆ.
ವೈದ್ಯಕೀಯ ಚಿಕಿತ್ಸೆ ಗಿಂತ ಅಗತ್ಯವಾಗಿ ಈ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವುದು, ಅವರಿಗೆ ಅಗತ್ಯವಾಗಿರುವಂತಹ ಪ್ರೀತಿ,
ಸಹನುಭೂತಿ ಮುಂತಾದವುಗಳನ್ನು ಅವರ ಕುಟುಂಬದಲ್ಲೇ ಕಂಡುಕೊಳ್ಳಲು ಹಾಗೂ ಕುಟುಂಬದಲ್ಲಿ ಅವರಿಗಾಗಿ ಬೆಂಬಲವನ್ನು
ಹೆಚ್ಚಿಸಲು ಪ್ರಯತ್ನಗಳನ್ನು ವೃತ್ತಿಪರರು ಹಾಗೂ ನಾಗರಿಕ ಸಮಾಜ ಸೇರಿಕೊಂಡು ಮಾಡಬೇಕಾಗಿದೆ.
ಈ ಮಕ್ಕಳು ಕೂಡ ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮೌನ ಮುರಿಯುವ ಅಗತ್ಯತೆ ಬಹಳಷ್ಟು ಇದೆ. ತಮಗೆ
ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಚರ್ಚಿಸಲು ವಾತಾವರಣವನ್ನು ಕಲ್ಪಿಸಿ ಕೊಡುವುದು ನ್ಯಾಷನಲ್ ಚಿಲ್ಡ್ರನ್
ಆಫ್ ಆಲ್ಕೋಹಾಲಿಕ್ಸ್” ನಂತಹ ಸಂಸ್ಥೆ. ನಾಗರಿಕ ಸಮಾಜವು ಕೂಡ ಈ ಮಕ್ಕಳ ಸಮಸ್ಯೆಗಳನ್ನು ಕಡೆಗಣಿಸುತ್ತಿರುವಾಗ
ಇಂತಹ ಒಂದು ಸಂಸ್ಥೆ ಅಗತ್ಯವಾಗಿ ಬೇಕಾಗಿದೆ. ಇಲ್ಲಿ ಈ ಸಮಸ್ಯೆ ಇರುವ ಸಮಾನ ಮನಸ್ಕರು ಕುಳಿತುಕೊಂಡು
ಪ್ರಾಮಾಣಿಕವಾಗಿ ತಮಗೆ ಉಂಟಾಗುತ್ತಿರುವ ಸಮಸ್ಯೆಗಳು ಅದರ ನಿವಾರಣೆ ಹಾಗೂ ಈ ಬಗ್ಗೆ ಸಮುದಾಯದಲ್ಲಿ ಹೆಚ್ಚಿನ
ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡಬಹುದು. ಇಂತಹದೇ ಇನ್ನೊಂದು ಸಂಸ್ಥೆ ಎಂದರೆ ಅನಾಮಿಕ ಅಮಲಿಗಳು ನಡೆಸುವ
“ಆಲ್ ಟೀನ್ “ಎಂಬ ಸಂಸ್ಥೆ. ಇದು ಅನಾಮಿಕ ಅಮಲಿಗಳು ನಡೆಸುವ ಮೀಟಿಂಗ್ ಗಳಂತೆ ವ್ಯವಸ್ಥಿತವಾಗಿ ಮದ್ಯ ವ್ಯಸನದಿಂದ
ಬಳಲುತ್ತಿರುವ ತಾಯಿ ತಂದೆಯರ ಮಕ್ಕಳಿಗೆ ಸಹಾಯ ಮಾಡುವ ಸಂಸ್ಥೆ. ಇಂಥದೇ ಸಮಸ್ಯೆಯನ್ನು ಅನುಭವಿಸಿದ
ಹದಿಹರೆಯದವರು ತಾವು ಅದನ್ನು ಹೇಗೆ ಎದುರಿಸಿದರು ಎಂಬ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಿ ತಾವು ಬಳಸಿದ
ತಂತ್ರಗಳ ಬಗ್ಗೆ ಚರ್ಚಿಸುವುದು, ವೃತ್ತಿಪರರ ಸೇವೆಯನ್ನು ಪಡೆದುಕೊಳ್ಳುವ ಅಗತ್ಯವಿದ್ದಲ್ಲಿ ಅದರ ಬಗ್ಗೆ ಮಾಹಿತಿ ನೀಡುವುದು
ಮುಂತಾದವುಗಳನ್ನು ಮಾಡುತ್ತಾರೆ.
ಮದ್ಯ ಪಾನದ ಸಮಸ್ಯೆಯ ಚಿಕಿತ್ಸಾ ಕೇಂದ್ರಗಳಲ್ಲಿ ಈ ಮಕ್ಕಳ ಬಗ್ಗೆ ಅವರ ಸಮಸ್ಯೆಗಳ ಬಗ್ಗೆ ಕುಲಂಕುಶವಾಗಿ ಅಧ್ಯಯನ ಮಾಡಿ
ಅವರಲ್ಲಿರುವ ಸಾಮರ್ಥ್ಯಗಳನ್ನು ಪ್ರತಿಭೆಯನ್ನು ಗುರುತಿಸಿ ಅವರ ಆತ್ಮವಿಶ್ವಾಸ ಸ್ವಾಭಿಮಾನ ಬೆಳೆಸುವ ಚಟುವಟಿಕೆಗಳನ್ನು
ಚಿಕಿತ್ಸೆಯಲ್ಲಿ ಅಳವಡಿಸಿಕೊಂಡು ವೃತ್ತಿಪರರು ಕೆಲಸ ಮಾಡುವ ಅಗತ್ಯತೆ ಇದೆ.
ಈ ಸಂಸ್ಥೆಗಳಲ್ಲಿ ಇಂತಹ ಮಕ್ಕಳೊಂದಿಗೆ ಕೆಲಸ ಮಾಡುವ ಪರಿಣತಿ ಹೊಂದಿರುವ ಚಿಕಿತ್ಸಕರು ಅಥವಾ ವೃತ್ತಿಪರ
ಆಪ್ತಸಲಹೆಗಾರರ ಅಗತ್ಯತೆ ಬಹಳಷ್ಟು ಇದೆ. ಚಿಕಿತ್ಸೆಯು ಮಗುವಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಸಮಸ್ಯೆಗಳನ್ನು
ಅರಿತುಕೊಂಡು ಅವುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ತಂತ್ರಗಳನ್ನು ಕಲಿಯಲು ತಿಳಿಸಿಕೊಡುವ ಚಿಕಿತ್ಸೆಗಳ
ಕೊರತೆ ಇದೆ. ಮಕ್ಕಳ ತಾಯಿ ತಂದೆಯರು ತಮ್ಮ ಮದ್ಯಪಾನ ದ ಅಭ್ಯಾಸಕ್ಕೆ ಚಿಕಿತ್ಸೆಗೆ ಬಂದಾಗ ಅದೇ ಸಮಯದಲ್ಲಿ ಈ
ಮಕ್ಕಳನ್ನು ಗುರುತಿಸಿ ಅವರಲ್ಲಿ ಇರುವಂತಹ ಮಾನಸಿಕ, ಭಾವನಾತ್ಮಕ ಮತ್ತು ಕಲಿಕಾ ತೊಂದರೆಗಳನ್ನು ಗುರುತಿಸುವುದು
ಮತ್ತು ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ನೀಡುವುದು ಅತಿ ಅಗತ್ಯವಾಗಿರುತ್ತದೆ. ಈ ಮಕ್ಕಳಲ್ಲಿ ಹಲವಾರು ವ್ಯಕ್ತಿತ್ವದ
ಸಮಸ್ಯೆಗಳು ಕೂಡ ಗುರುತಿಸುವುದು, ಮತ್ತು ಅದಕ್ಕೆ ಸರಿಯಾದ ಚಿಕಿತ್ಸೆ ನೀಡುವುದು ಅಗತ್ಯವಾಗಿರುತ್ತದೆ.
ಇತ್ತೀಚೆಗೆ ಉಡುಪಿಯಲ್ಲಿ ನನ್ನ ಸಹ ಉದ್ಯೋಗಿ ಮಿತ್ರ ವಿರೂಪಾಕ್ಷ ದೇವರಮನೆ ಅವರ ಒಂದು ಪ್ರಯತ್ನದಿಂದ ಈ ಮಕ್ಕಳ ಬಗ್ಗೆ
ನಿರಂತರ ಸಮುದಾಯ ಕಾರ್ಯಕ್ರಮಗಳು ನಡೆಯುತ್ತಿದ್ದು ಇದೀಗ ಇಂತಹುದೇ ಕಾರ್ಯಕ್ರಮಗಳು ಬೆಳಗಾಂ ಶಿವಮೊಗ್ಗ
ಚಿತ್ರದುರ್ಗ ಮುಂತಾದ ಸ್ಥಳಗಳಲ್ಲಿ ಇತರಮನೋವೈದ್ಯರು ಪ್ರಾರಂಭಿಸಿದ್ದು ಆಶಾದಾಯಕ ಬೆಳೆವಣಿಗೆಯಾಗಿದೆ.