Select Page

ಅಶ್ಲೀಲತೆಯ ಚಟ..ಇದು ಇಂದು ಹಲವರನ್ನು ಕಾಡುತ್ತಾ ಇರುವ ಸಮಸ್ಯೆ. ಅಶ್ಲೀಲ ಚಿತ್ರಗಳು,ಬರವಣಿಗೆಗಳು, ಪುಸ್ತಕಗಳನ್ನು
ಅತಿಯಾಗಿ ನೋಡುವುದು,ಅದರಲ್ಲೇ ಕಾಲ ಕಳೆಯುವುದು ಮತ್ತು ಈ ಚಟದ ಕಾರಣದಿಂದ ತಮ್ಮ ಕೆಲಸ,ಸಾಮಾಜಿಕ
ಚಟುವಟಿಕೆಗಳು ಎಲ್ಲದರಲ್ಲೂ ಸಮಸ್ಯೆ ಮಾಡಿಕೊಂಡು ಮದ್ಯಮಾದಕದ್ರವ್ಯ ಚಟ ಇರುವವರು ಪರದಾಡುವ ಹಾಗೆ ಇವರು ಕೂಡ ಈ ಚಟವನ್ನು ಬಿಡಲು ಕಷ್ಟ ಪಡುತ್ತಾರೆ. ಮನೋವೈದ್ಯರ ಪ್ರಕಾರ ಇದು ಕೂಡ ಒಂದು ನಡವಳಿಕೆಯ ವ್ಯಸನ.
ಈ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವಾಗ ಅದರಲ್ಲಿ ಇರುವ ತೀವ್ರವಾದ ದೃಶ್ಯ ಮತ್ತು ಭಾವನಾತ್ಮಕ ಪ್ರಚೋದನೆಗಳಿಂದಾಗಿ
ಮೆದುಳಿನಲ್ಲಿ ಡೋಪಮಿನ್ ಎಂಬ ನರವಾಹಕಗಳು ಹೊರಹೊಮ್ಮಿ ಮನಸ್ಸಿಗೆ ಒಂದು ಬಗೆಯ ಖುಷಿಯನ್ನು ಕೊಡುತ್ತದೆ. ಆ
ಕಾರಣದಿಂದ ವ್ಯಕ್ತಿ ಪದೇಪದೇ ಈ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಲು ಹೋಗುತ್ತಾನೆ. ಅಥವಾ ಅಶ್ಲೀಲ ವಿಷಯಗಳ ಬಗ್ಗೆ
ಓದುತ್ತಾನೆ. ಮನಸ್ಸಿಗೆ ಬಂದಿದ್ದ ಖುಷಿಯನ್ನು ಮತ್ತೊಮ್ಮೆ ಪಡೆದುಕೊಳ್ಳಲು ಇನ್ನು ಹೆಚ್ಚು ಹೆಚ್ಚು ಈ ವಿಷಯಗಳತ್ತ ಮನುಷ್ಯನ
ಮನಸ್ಸು ವಾಲುತ್ತದೆ. ಮುಂದೆ ಇದೊಂದು ಚಟವಾಗಿ ಪರಿಣಮಿಸುತ್ತದೆ.
ಅಶ್ಲೀಲತೆ ಚಟಕ್ಕೆ ಹಲವಾರು ಮಾನಸಿಕ ಅಂಶಗಳನ್ನು ಮನೋವೈದ್ಯರು ಗುರುತಿಸಿದ್ದಾರೆ.
೧) ಹಲವರಿಗೆ ಇದು ಒತ್ತಡ ಮತ್ತು ಆತಂಕವನ್ನು ನಿಭಾಯಿಸುವ ಒಂದು ಕಾರ್ಯವಿಧಾನ. ಮನಸ್ಸಿಗೆ ಏನಾದರೂ ಒತ್ತಡ
ಉಂಟಾಗಿದ್ದರೆ ಇಂತಹ ವೀಕ್ಷಣೆಯು ತಾತ್ಕಾಲಿಕವಾಗಿ ಆ ಒತ್ತಡದಿಂದ ಮನುಷ್ಯನನ್ನು ಪಾರು ಮಾಡುತ್ತದೆ. ಒತ್ತಡದ ಬದುಕಿನಲ್ಲಿ ಕೆಲವರು ಈ ಅಭ್ಯಾಸಕ್ಕೆ ಬಲಿಯಾಗುತ್ತಾರೆ.
೨) ಒಂಟಿತನವನ್ನು ಎದುರಿಸುವ ಒಂದು ಕಾರ್ಯವಿಧಾನ. ಕುಟುಂಬದಿಂದ ಹೊರಗೆ ಇದ್ದು ಪರದೇಶದಲ್ಲಿ ಜೀವನ ನಡೆಸುತ್ತಾ
ಇರುವವರು ಅಥವಾ ದೂರದ ಊರುಗಳಲ್ಲಿ ಇರುವವರು ಲೈಂಗಿಕ ಕಾಮನೆಗಳನ್ನು ಈ ವೀಕ್ಷಣೆಯ ಮೂಲಕ ತೀರಿಸಿಕೊಂಡು
ಅದೇ ಸಂದರ್ಭದಲ್ಲಿ ಹಸ್ತ ಮೈಥುನ ಮುಂತಾದ ಪ್ರಕ್ರಿಯೆಗಳಿಂದ ಮನಸ್ಸಿಗೆ ಖುಷಿ ತಂದುಕೊಂಡು ಒಂಟಿತನವನ್ನು
ಮರೆಯುವಾಗ ಮುಂದೆ ಅದು ಅತಿಯಾಗಿ ಚಟವಾಗಿ ಪರಿಣಮಿಸಬಹುದು.
೩) ಈ ಹಿಂದೆ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದವರು ಹಿಂದಿನ ಅಘಾತಕಾರಿ ಅನುಭವವನ್ನು ಪದೇಪದೇ ಮರು ಸೃಷ್ಟಿಸಿಕೊಂಡು ಈ
ಅಭ್ಯಾಸವನ್ನು ಮುಂದುವರಿಸುವುದು ಮತ್ತು ಹಿಂದೆ ಉಂಟಾದ ಭಾವನಾತ್ಮಕ ನೋವನ್ನು ನಿಶ್ಚೇಷ್ಟಿತಗೊಳಿಸಲು
ಪ್ರಯತ್ನಿಸುವುದು ಸಾಮಾನ್ಯವಾಗಿ ಮನೋವೈದ್ಯರು ನೋಡುತ್ತಾರೆ.
೪) ಕೆಲವು ವ್ಯಕ್ತಿತ್ವಗಳು ಈ ರೀತಿಯ ವ್ಯಸನ ಕಾರಿ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಅಂದರೆ ಒಂದೇ ವ್ಯಕ್ತಿಯಲ್ಲಿ ಮದ್ಯ
ಮಾದಕ ದ್ರವ್ಯ ವ್ಯಸನ, ಜೂಜಾಡುವುದು ಚಟ ಮುಂತಾದವುಗಳೊಂದಿಗೆ ಈ ಚಟವು ಉಂಟಾಗುವುದು ಕಂಡುಬಂದಿದೆ.
ಅಶ್ಲೀಲತೆ ಚಟದ ಕಾರಣದಿಂದಾಗಿ ಮನೆಯವರೊಂದಿಗೆ ಸಂಬಂಧಿಕರೊಂದಿಗೆ ಮತ್ತು ಸ್ನೇಹಿತರೊಂದಿಗೆ ಹಲವಾರು ಸಂಭಂದ ದ ಸಮಸ್ಯೆಗಳು ಸಂಭವಿಸಬಹುದು.
ಸಂಗಾತಿಯೊಂದಿಗೆ ಲೈಂಗಿಕ ಸಂಬಂಧಗಳಲ್ಲಿ ಸಮಸ್ಯೆಗಳು ಅಶ್ಲೀಲತೆಯು ಲೈಂಗಿಕತೆಯ ಬಗ್ಗೆ ಅವಾಸ್ತವಿಕ ನಿರೀಕ್ಷೆಗಳಿಗೆ
ಕಾರಣವಾಗಬಹುದು ಹಾಗೂ ನೈಜ ಜೀವನದ ಸಂಬಂಧಗಳಲ್ಲಿ ನಿಕಟತೆಯಲ್ಲಿ ಮತ್ತು ಲೈಂಗಿಕ ಕ್ರಿಯೆ ಸಂದರ್ಭದಲ್ಲಿ
ತೊಂದರೆಗಳನ್ನು ಉಂಟುಮಾಡಬಹುದು. ಹಲವು ಲೈಂಗಿಕ ಅಪರಾಧಗಳನ್ನು ಮಾಡುವವರು ಈ ಅಶ್ಲೀಲತೆಯಚಟದಿಂದ ಉತ್ತೇಜನಗೊಂಡು ಈ ಲೈಂಗಿಕ ಅಪರಾಧಗಳನ್ನು ಮಾಡುತ್ತಾರೆ ಎಂದು ಸಂಶೋಧನೆಗಳು ತಿಳಿಸುತ್ತವೆ. 

ಅಶ್ಲೀಲತೆಯ ಚಟದ ಕಾರಣದಿಂದ ಹಲವರಲ್ಲಿ ಆತಂಕ ಖಿನ್ನತೆ ಅವಮಾನ ಮತ್ತು ತಪ್ಪಿತಸ್ಥ ಮನೋಭಾವ ಉಲ್ಬಣ
ಗೊಳ್ಳಬಹುದು. ಯಾರಾದರೂ ಈ ಸಮಸ್ಯೆಯಿಂದ ಬಳಲುತ್ತಾ ಇದ್ದಲ್ಲಿ ಇಂಥವರು ಮನೋವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಒಳ್ಳೆಯದು. ಮನೋವೈದ್ಯಕೀಯ ವೃತ್ತಿಪರರು ಇವರೊಂದಿಗೆ ದೀರ್ಘಕಾಲಿನ ಸಮಾಲೋಚನೆಯನ್ನು ಮಾಡಿ ಈ ಸಮಸ್ಯೆಯನ್ನು ನಿವಾರಿಸಲು ವೈದ್ಯಕೀಯ ಸಲಹೆಗಳು ಹಾಗೂ ಅಗತ್ಯವಿದ್ದಲ್ಲಿ ಆತಂಕ ಖಿನ್ನತೆ ನಿವಾರಕ ಮಾತ್ರೆ ಚಿಕಿತ್ಸೆ ಹಾಗೂ ಮನೋಸಾಮಾಜಿಕ ಚಿಕಿತ್ಸೆಗಳ ಬಗ್ಗೆ ತಿಳಿಸಬಹುದು. ಮುಖ್ಯವಾಗಿ ಈ ಸಮಸ್ಯೆಯಲ್ಲಿ ಹಲವಾರು ನಕಾರಾತ್ಮಕ ಆಲೋಚನಾ ಲಹರಿಗಳು ವ್ಯಕ್ತಿಯಲ್ಲಿ ಇರುತ್ತದೆ. ಅವುಗಳನ್ನು ತಿದ್ದಿಕೊಳ್ಳಲು ಕೊಗ್ನಿಟಿವ ಬಿಹೇವಿಯರ್ ತೆರಪಿ (cbt)ಎಂಬ ಅರಿವು ಮತ್ತು ವರ್ತನೆಗಳನ್ನು ತಿದ್ದಿಕೊಳ್ಳುವ ಚಿಕಿತ್ಸೆ ಈ ಬಗ್ಗೆ ತಿಳಿಸಬಹುದು. ಈ ವ್ಯಸನಕ್ಕೆ ಕಾರಣವಾಗುವ ಪ್ರಚೋದಕಗಳು ಮತ್ತು ಕಡುಬಯಕೆಗಳನ್ನು ನಿರ್ವಹಿಸಲು ಏನು ಮಾಡಬಹುದು ಎಂಬುದನ್ನು ಈ ಚಿಕಿತ್ಸೆ ನೀಡುವ ತಜ್ಞರು ತಿಳಿಸುತ್ತಾರೆ.
ಇದು ಹೆಚ್ಚಾಗಿ ಇಂಟರ್ನೆಟ್ ಬಳಕೆಯ ವ್ಯಸನವಾಗಿರುವುದರಿಂದ ಇಂತಹ ಸಮಸ್ಯೆ ಇರುವವರು ಸ್ವಸಹಾಯ ಪಡೆಯಲು ಅವರೇ
ನಿರ್ಧರಿಸಿಕೊಂಡು ಇಂಟರ್ನೆಟ್ ನಲ್ಲೇ ಆನ್ಲೈನ ಸ್ವಸಹಾಯ ಬೆಂಬಲ ಗುಂಪುಗಳು,ಅದನ್ನು ಸೇರಿಕೊಳ್ಳಬಹುದು(ಸಪೋರ್ಟ್
ಗ್ರೌಪ್ಸ್). ಇಲ್ಲಿ ಅಶ್ಲೀಲತೆಯ ವ್ಯಸನದ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಇತರ ವ್ಯಕ್ತಿಗಳೊಂದಿಗೆ ಸಂಪರ್ಕ ಮಾಡುವುದು
ಮತ್ತು ಅವರು ಈ ಸಮಸ್ಯೆಯಿಂದ ಹೇಗೆ ಹೊರಗೆ ಬಂದರು ಎಂದುತಿಳಿದುಕೊಂಡು ಅವರಿಂದ ಬೆಂಬಲ ಪಡೆಯುವುದು
ಸಹಾಯಕವಾಗುತ್ತದೆ ಇಂತಹದೇ ಸಮಸ್ಯೆ ಇರುವ ಹಲವರ ಸ್ವ ಸಹಾಯ ಗುಂಪುಗಳು ಇವೇ ಇವುಗಳ ಬಗ್ಗೆ ಮಾಹಿತಿಯನ್ನು
ಕೂಡ ಪಡೆಯುವುದು ಅಗತ್ಯ.
ಈ ಅಶ್ಲೀಲತೆಯ ಚಟ ಎಷ್ಟರಮಟ್ಟಿಗೆ ಸಮಸ್ಯೆ ಒಡ್ಡುತ್ತದೆ ಎಂದರೆ ಎಷ್ಟೇ ಗಟ್ಟಿ ನಿರ್ಧಾರ ಮಾಡಿದರು ಅದನ್ನು ಬಿಡುವ
ಲಕ್ಷಣಗಳೇ ತೋರುವುದಿಲ್ಲ. ಅಂತಹ ಸಂದರ್ಭದಲ್ಲಿ ಇಂಟರ್ನೆಟ್ ಬಳಕೆಯಲ್ಲಿ ಕಡಿವಾಣ ಹಾಕುವುದು, ಕೀಪ್ಯಾಡ್ ಮೊಬೈಲ್
ಅನ್ನು ಬಳಸುವುದು, ಸಣ್ಣ ಮಕ್ಕಳಿಗೆ ಉಪಯೋಗಿಸುವ ಪೇರೆಂಟ್ ಕಂಟ್ರೋಲ್ಡ್ ಆಪ್ಷನ್ ಇರುವ ಇಂಟರ್ನೆಟ್ ಬಳಕೆ
ಮುಂತಾದವುಗಳನ್ನು ನಿಮ್ಮ ವೈದ್ಯರು ಅಥವಾ ಮನೋ ಸಾಮಾಜಿಕ ಕಾರ್ಯಕರ್ತರು ತಿಳಿಸಬಹುದು. ಇಂದು ದೊಡ್ಡ ದೊಡ್ಡ ನಗರಗಳಲ್ಲಿ ಈ ಚಟವನ್ನು ಕಡಿವಾಣ ಹಾಕಲು service for healthy use of technology ಕ್ಲಿನಿಕ್ ಗಳು ಪ್ರಾರಂಭವಾಗಿದೆ. ಬೆಂಗಳೂರು ನಗರದಲ್ಲಿ ನಿಮಾನ್ಸ್ ಸಂಸ್ಥೆಯು ಕ್ಲಿನಿಕಲ್ ಮನೋವೈದ್ಯಕೀಯ ತಜ್ಞರ ನೇತೃತ್ವದಲ್ಲಿ ಈ ರೀತಿಯ ಒಂದು ಕ್ಲಿನಿಕ್ ಅನ್ನು ಪ್ರಾರಂಭಿಸಿದೆ. ಇಲ್ಲಿ ಇಂಟರ್ನೆಟ್ ವ್ಯಸನದಿಂದ ಉಂಟಾಗುವ ಹಲವು ಮಾನಸಿಕ ಸಮಸ್ಯೆಗಳು ಅಂದರೆ ಇಂಟರ್ನೆಟ್ ಜೂಜಾಟ ,ಅಶ್ಲೀಲತೆಯ ಚಟ, ವಿಡಿಯೋ ಗೆಮ್ ಆಡುವ ಚಟ, ಸಾಮಾಜಿಕ ಜಾಲತಾಣಗಳ ಅತಿಯಾದ ಉಪಯೋಗ ಮುಂತಾದವುಗಳಿಗೆ ಚಿಕಿತ್ಸೆ ನೀಡುವ ಕ್ಲಿನಿಕ್ ಗಳು ಪ್ರಾರಂಭವಾಗಿದೆ. ಇಲ್ಲಿ ವೈಜ್ಞಾನಿಕ ಮತ್ತು ವ್ಯವಸ್ಥಿತ ರೀತಿಯಲ್ಲಿ
ಈ ಸಮಸ್ಯೆಗೆ ಚಿಕಿತ್ಸೆ ಕೊಡಲಾಗುವುದು. ಈ ಸಮಸ್ಯೆಯಿಂದ ಬಳಲುತ್ತಾ ಇರುವವರು ನಿಮ್ಮ ಊರಿನ ವೈದ್ಯಕೀಯ
ವಿದ್ಯಾನಿಲಯಗಳಲ್ಲಿ ಮಾನಸಿಕ ಆರೋಗ್ಯ ವಿಭಾಗದಲ್ಲಿ ಕೂಡ ಚಿಕಿತ್ಸೆ ಪಡೆಯಬಹುದು.