Select Page

ಟೈಪ್ A ವ್ಯಕ್ತಿತ್ವ ಏನಿದು?
ವೈದ್ಯಕೀಯ ಮತ್ತು ಮನೋವೈದ್ಯಕೀಯ ವೃತ್ತಗಳಲ್ಲಿ ಆಗಾಗ ಕೇಳಿ ಬರುವ ಒಂದು ವಿಷಯ ಎಂದರೆ ಈ ಟೈಪ್A ವ್ಯಕ್ತಿತ್ವ.
ಸಮಾಜದಲ್ಲಿ ನಮ್ಮ ನಿಮ್ಮ ನಡುವೆ ಇರುವ ಸಾಧಕರಲ್ಲಿ ಹಲವಾರು ಜನ ಈ ವ್ಯಕ್ತಿತ್ವದ ನಡವಳಿಕೆಗಳನ್ನು ಹೊಂದಿರುತ್ತಾರೆ.
ಈ ವ್ಯಕ್ತಿತ್ವದ ವ್ಯಕ್ತಿಗಳಲ್ಲಿ ಕಂಡುಬರುವ ಪ್ರಮುಖ ಗುಣಲಕ್ಷಣಗಳೆಂದರೆ
ಯಾವಾಗಲೂ ಏನಾದರೂ ಸಾಧಿಸಬೇಕು ಎಂಬ ಛಲ, ದೀರ್ಘಕಾಲದ ಸ್ಪರ್ಧಾತ್ಮಕತೆ ಮತ್ತು ಪೈಪೋಟಿಯ ಮನೋಭಾವ
ಮತ್ತು ಸುತ್ತ ಮುತ್ತಲಿನವರ ಸಣ್ಣ ಸಣ್ಣ ತಪ್ಪುಗಳಿಗೆ ಅಸಹನೆ , ಬಹಳ ಬೇಗ ಸಿಟ್ಟು ಮಾಡಿಕೊಳ್ಳುವುದು ಮತ್ತು ಕೆಲವೊಮ್ಮೆ ಮಿತಿ
ಮೀರಿ ದ್ವೇಷ ಸಾಧಿಸುವುದು.
“ಟೈಪ್A ಬಿಹೇವಿಯರ್ ಪ್ಯಾಟರ್ನ್” (TABP) ಅಂದರೆ ಈ ವ್ಯಕ್ತಿತ್ವದವರು ನಡೆದುಕೊಳ್ಳುವ ವಿಧಾನಗಳನ್ನು 1950 ರ ದಶಕದಲ್ಲಿ
ಹೃದ್ರೋಗಶಾಸ್ತ್ರಜ್ಞರಾದ ಮೆಯೆರ್ ಫ್ರೀಡ್‌ಮನ್ ಮತ್ತು ರೇ ರೋಸೆನ್‌ಮ್ಯಾನ್ ಮೊದಲ ಬಾರಿಗೆ ವಿವರಿಸಿದರು, ಅವರು ಈ
TABP ಪರಿಧಮನಿಯ ಹೃದಯ ಕಾಯಿಲೆಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ ಎಂದು ವಿವರಿಸಿದರು. ಅವರು ಈ
ವಿಷಯಗಳನ್ನು ಹೇಳಿ 70 ವರ್ಷ ಕಳೆದಿದ್ದರೂ ಮುಂದೆ ನಡೆದ ಸಂಶೋಧನೆಗಳು ಟೈಪ್A ವ್ಯಕ್ತಿತ್ವ ಮತ್ತು ಹೃದಯ ರೋಗ
ಕಾಯಿಲೆ ಅನ್ನುವ ವಿಷಯದಲ್ಲಿ ಬಲವಾದ ಯಾವುದೇ ಪುರಾವೆಗಳನ್ನು ಒದಗಿಸದಿದ್ದರೂ ಈ ಪರಿಧಮನಿಯ ಹೃದಯ
ಕಾಯಿಲೆಗಳಲ್ಲಿ ಒತ್ತಡ ದ ಪಾತ್ರ ಬಹಳಷ್ಟು ಇದೆ ಎಂದು ಮಾತ್ರ ಅನೇಕ ಸಂಶೋಧನೆಗಳು ತಿಳಿಸುತ್ತದೆ. ಈ ವ್ಯಕ್ತಿತ್ವದ ಬಗ್ಗೆ
ಜನಸಾಮಾನ್ಯರಿಗೆ ಮಾಹಿತಿ ನೀಡಲು ಪ್ರಮುಖ ಕಾರಣ ಎಂದರೆ ಹಲವು ದೈಹಿಕ ಕಾಯಿಲೆಗಳು ಒತ್ತಡದ ಬೇನೆಗಳು ಎಂದು
ಜನಸಾಮಾನ್ಯರು ತಿಳಿದುಕೊಳ್ಳಬೇಕು. ಒತ್ತಡ ನಮ್ಮ ಹಲವು ಕಾಯಿಲೆಗಳನ್ನು ಉಲ್ಬಣಗೊಳಿಸುತ್ತದೆ. ಆದರೆ ಅದೇ ರೀತಿ ಒತ್ತಡ
ಹಲವೊಮ್ಮೆ ಜೀವನದಲ್ಲಿ ಸಾಧನೆಗಳಿಗೂ ಕಾರಣವಾಗುತ್ತದೆ.
ಟೈಪ್ ವ್ಯಕ್ತಿತ್ವದ ಏಳು ಪ್ರಮುಖ ಗುಣಲಕ್ಷಣಗಳು
೧) ತಾಳ್ಮೆ ಕಳೆದುಕೊಳ್ಳುವುದು ಟೈಪ್ A ವ್ಯಕ್ತಿತ್ವದವರು ಸಣ್ಣ ಸಣ್ಣ ವಿಷಯಗಳಿಗೆ ತಾಳ್ಮೆ ಕಳೆದುಕೊಳ್ಳುತ್ತಾರೆ ಹಾಗೂ
ಬದಲಾವಣೆಗಳನ್ನು ಹೆಚ್ಚು ಇಷ್ಟಪಡುವುದಿಲ್ಲ ಆದರೂ ಬದಲಾವಣೆಗಳು ಆದರೆ ಬದಲಾವಣೆಗೆ ಬಹಳ ಚೆನ್ನಾಗಿ
ಹೊಂದಿಕೊಳ್ಳುತ್ತಾರೆ. ಬದಲಾವಣೆಗಳನ್ನು ಮಾಡಲು ಹಾತೊರೆಯುತ್ತಾರೆ ಮತ್ತು ಅವರು ಬಯಸಿದ ಬದಲಾವಣೆಗಳು ವೇಗವಾಗಿ
ಸಂಭವಿಸಬೇಕು ಎಂದು ನಿರೀಕ್ಷಿಸುತ್ತಾರೆ.
೨) ತಮ್ಮದೇ ವೇಗದಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಇಷ್ಟಪಡುವುದು. ಈ ಕಾರಣದಿಂದ ಅವರು ನಾಯಕತ್ವದ ಸ್ಥಾನದಲ್ಲಿದ್ದರೆ
ಇತರರೊಂದಿಗೆ ಉತ್ತಮವಾಗಿ ಕೆಲಸ ಮಾಡುತ್ತಾರೆ, ನಾಯಕತ್ವದ ಸ್ಥಾನದಲ್ಲಿ ಇಲ್ಲದೇ ಇದ್ದಲ್ಲಿ ಮಾತ್ರ ಕೊರಗಿ ವ್ಯವಸ್ಥೆಯನ್ನು
ದೋಷಿಸುತ್ತ ಕುಳಿತುಕೊಳ್ಳುತ್ತಾರೆ. ಯಾವುದೇ ಕೆಲಸವನ್ನು ಮಾಡುವಾಗಲೂ” ಸಮಯದ ತುರ್ತು ಪ್ರಜ್ಞೆ” ಈ ಕೆಲಸವು
ಬಹುಬೇಗನೆ ಆಗಬೇಕು ಎಂಬ ಮಾತುಗಳನ್ನು ಪದೇಪದೇ ಹೇಳುತ್ತಿರುತ್ತಾರೆ.
೩) ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡುವುದು ವ್ಯಕ್ತಿತ್ವದ ಪ್ರಮುಖ ಗುಣಲಕ್ಷಣ. ಅವಶ್ಯಕತೆ ಬಿದ್ದಾಗ ಎಷ್ಟೇ ಒತ್ತಡವಿದ್ದರೂ ಹಿಡಿದ
ಕೆಲಸವನ್ನು ಮಾಡದೆ ಬಿಡುವುದಿಲ್ಲ. ತಾವು ನಿರ್ಧರಿಸಿದ ವಿಷಯಗಳ ಬಗ್ಗೆ ಬದ್ಧತೆಯನ್ನು ಕೊನೆಯವರೆಗೆ ಇಟ್ಟುಕೊಳ್ಳುತ್ತಾರೆ.

೪) ಕೆಲವೊಮ್ಮೆ ಆಕ್ರಮಣಕಾರಿಗಳಾಗಿ ಬಿಡುತ್ತಾರೆ. ತಾವು ಹೇಳಿದ್ದನ್ನು ಇತರರು ಕೇಳದೆ ಇದ್ದಲ್ಲಿ ,ತಮಗೆ ಅನ್ನಿಸಿದ್ದನ್ನು ನೇರವಾಗಿ
ಹೇಳಿ ಬಿಡುವುದು ,ತಾವು ಹೇಳಿದ್ದೆ ಸರಿ ಎಂದು ವಾದಿಸುವುದು ತಾವು ಪ್ರತಿಪಾದಿಸಿದ ವಿಷಯವನ್ನು ತಾವು ನಿರ್ಧರಿಸಿದಂತೆ
ಮುಂದುವರಿಸಿಕೊಂಡು ಹೋಗುವುದು ಇವರ ಸ್ವಭಾವ.
೫) ಸಾಧನೆಯ ಹಾದಿಯಲ್ಲಿ ಯಾವುದೇ ಗಡಿ ದಾಟಲು ಅವರು ಹೆದರುವುದಿಲ್ಲ. ನಾಯಕತ್ವದ ಸ್ಥಾನದಲ್ಲಿರುವ ಟೈಪ್ A
ವ್ಯಕ್ತಿತ್ವದವರಂತೂ ತಮ್ಮ ಕಂಫರ್ಟ್ ಜೋನ್ ನಿಂದ ಹೊರಗೆ ಬಂದು ಕೆಲಸ ಮಾಡುತ್ತಾ ಇತರರನ್ನು ಪ್ರೋತ್ಸಾಹಿಸಿ ಕೆಲಸ
ಮಾಡಿಸುತ್ತಾರೆ.
೬) ಉನ್ನತೋನ್ನತಿಯ ದಾಹ ಅವರಿಗೆ ಸಾಧಿಸಬೇಕಾದ ವಿಷಯಗಳ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಕೊಡುತ್ತದೆ. ತನಗೆ ತೋಚಿದ್ದನ್ನು
ಮಾಡಲೇಬೇಕು ಬಹಳಷ್ಟು ಜನರೊಂದಿಗೆ ಕೇಳುವ ಅಗತ್ಯತೆ ಇಲ್ಲ ಹಾಗೆ ಕೇಳುತ್ತಾ ಹೋದರೆ ಸಮಯ ವ್ಯರ್ಥ ಎಂಬ ಭಾವನೆ
ಆಗಾಗ ವ್ಯಕ್ತಪಡಿಸುತ್ತಾರೆ.
೭) ಇತರರಿಗೆ ಪ್ರೇರಕರು ಆಗುತ್ತಾರೆ. ಜೀವನದಲ್ಲಿ ನೂಕು ನೂಕಲು ಅಗತ್ಯವಿರುವ ಸಮಯದಲ್ಲಿ ತಮ್ಮ ಸ್ಪೂರ್ತಿದಾಯಕ
ಮಾತುಗಳು ಮತ್ತು ಕೆಲಸಗಳಿಂದ ಇತರರನ್ನು ಪ್ರೇರೇಪಿಸಿ ತಮ್ಮ ಗುರಿಗಳನ್ನು ತಲುಪಲು ಸಹಾಯಕರಾಗುತ್ತಾರೆ. ಅವರೊಂದಿಗೆ
ಕೆಲಸ ಮಾಡುವ ಸಹಾಯಕರಿಗೆ ಅವರೊಂದಿಗೆ ಇದ್ದ ಪ್ರತಿ ಕ್ಷಣ ರೋಮಾಂಚನಕಾರಿ, ಹೆಚ್ಚು ಉತ್ತೇಜಕ ಮತ್ತು
ಸ್ಪೂರ್ತಿದಾಯಕ.
ಟೈಪ್ A ವ್ಯಕ್ತಿತ್ವವನ್ನು ಅರಿತುಕೊಂಡು ಅದನ್ನು ಬದಲಾಯಿಸಲು ಪ್ರಯತ್ನ ಮಾಡುವುದು ಹೃದಯದ ಕಾಯಿಲೆಯ ಬಗ್ಗೆ
ಯೋಚಿಸುವಾಗ ಅತಿ ಅಗತ್ಯ. ಈ ವ್ಯಕ್ತಿತ್ವ ಬದಲಾಯಿಸಿಕೊಳ್ಳಲು ಏನು ಮಾಡಬಹುದು ಅಂದರೆ
೧) ಸಣ್ಣ ಸಣ್ಣ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಕಡಿಮೆ ಮಾಡಬೇಕು. ಸಣ್ಣ ಸಣ್ಣ ಪರಿಸ್ಥಿತಿಗಳು ಇಂಥವರ ದಿನವನ್ನು ಕಹಿ
ಮಾಡಿಬಿಡಬಹುದು. ಅವುಗಳನ್ನು ಗಮನಿಸಿ ಈ ವಿಷಯಗಳಿಗೆ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದರೆ ಅದರಿಂದ ಉಂಟಾಗುವ
ಸಮಸ್ಯೆಗಳನ್ನು ತಪ್ಪಿಸಬಹುದು.
೨) ಆತ್ಮವಲೋಕನ ಮತ್ತು ಸ್ವಯಂ ಶೋಧನೆ ಇಂಥವರಿಗೆ ಬಹಳ ಸಹಾಯ ಮಾಡುತ್ತದೆ. ಇಂತಹ ವ್ಯಕ್ತಿಗಳ ಆಂತರಿಕ
ಪ್ರೇರಣೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಆ ಪ್ರೇರಣೆಗಳತ್ತ ಕೆಲಸ ಮಾಡಲು ಈ ಆತ್ಮ ಶೋಧನೆ ಸಾಕಷ್ಟು ಸಹಾಯ
ಮಾಡುತ್ತದೆ. ಅನುದಿನ ಜರ್ನಲಿಂಗ್ ಮಾಡುವುದು ಅಥವಾ ತಮಗಿಂತ ಅನುಭವ ಇರುವ ವ್ಯಕ್ತಿಯೊಂದಿಗೆ ಮಾತನಾಡುವುದು ಈ
ಆತ್ಮ ಶೋಧನೆಗೆ ಸಹಾಯಕವಾಗಬಹುದು.
೩) ತಮ್ಮ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಇದು ಬಹಳ ಅಗತ್ಯವಾಗಿರುತ್ತದೆ .ಈ ವ್ಯಕ್ತಿತ್ವದವರು ವಿಶ್ರಾಂತಿಗೆ ಆದ್ಯತೆ
ನೀಡದೆ ಕಷ್ಟಪಟ್ಟು ಕೆಲಸ ಮಾಡುತ್ತಿರುತ್ತಾರೆ. ಸ್ವಯಂ ಆರೈಕೆ, ಗುಣಮಟ್ಟದ ನಿದ್ರೆ ,ಹವ್ಯಾಸಗಳನ್ನು ಬೆಳೆಸುವುದು ಮನಸ್ಸಿಗೆ
ಆರಾಮ ತರುವ ವ್ಯಾಯಾಮಗಳು ಇವುಗಳತ್ತ ಗಮನಹರಿಸುವುದು ಆದ್ಯತೆಯಾಗಬೇಕು.
೪) ಗುರಿಯಾಧಾರಿತವಾಗಿ ಕೆಲಸಗಳನ್ನು ಮಾಡುತ್ತಿರುವಾಗ ವಿರಾಮ ತೆಗೆದುಕೊಳ್ಳುವುದು ಸಮಯ ವ್ಯರ್ಥ ಎಂಬ ಭಾವನೆ
ಇವರಲ್ಲಿ ಬಹಳಷ್ಟು ಇರುತ್ತದೆ. ದಿನಾಪೂರ್ತಿ ಕೆಲಸದಲ್ಲಿ ಕಳೆಯುವಾಗ ಯೋಜನೆಗಲ್ಲಿ ಮುಳುಗಿರುವಾಗ ಒತ್ತಡ ಕಡಿಮೆ
ಮಾಡಿಕೊಳ್ಳಲು ವಿರಾಮ ಅತಿ ಅಗತ್ಯ. ಈ ವ್ಯಕ್ತಿತ್ವದವರು ವಿರಾಮದ ಕಡೆ ಜಾಸ್ತಿ ಗಮನ ಕೊಡಬೇಕು. ಅದು ಅವರಿಗೆ
ಆರೋಗ್ಯದಾಯಕ.

ಪರಿಧಮನಿಯ ಹೃದಯ ಕಾಯಿಲೆಗಳಿಗೆ ಪ್ರಮುಖ ಕಾರಣ ಈ ವ್ಯಕ್ತಿತ್ವ ಎಂಬುದು ಪ್ರಚಲಿತವಾಗಿ ವೈದ್ಯಕೀಯ ವೃತ್ತಗಳಲ್ಲಿ ಚರ್ಚೆ
ಆಗುತ್ತಾ ಇದ್ದರು ಈ ವ್ಯಕ್ತಿತ್ವದವರಿಂದ ಸಮಾಜದಲ್ಲಿ ಹಲವಾರು ಬದಲಾವಣೆಗಳು ಸಾಧ್ಯವಿದೆ. ಈ ವಿಷಯವನ್ನು ನಾನು
ವಿದ್ಯಾರ್ಥಿಯಾಗಿದ್ದಾಗಲಿಂದಲೂ ಪ್ರತಿಪಾದಿಸುತ್ತಾ ಬಂದಿದ್ದೇನೆ. ಈ ವ್ಯಕ್ತಿತ್ವ ಇದೆ ಎಂದು ಪರಿತಪಿಸಬೇಕಾಗಿಲ್ಲ. ಈ ವ್ಯಕ್ತಿತ್ವದಿಂದ
ಹಲವು ಸಾಧನೆಗಳು ಸಾಧ್ಯ . ಆದರೆ ಈ ವ್ಯಕ್ತಿತ್ವದಿಂದ ತಮಗೂ ಸುತ್ತಮುತ್ತಲಿನವರಿಗೂ ತೊಂದರೆ ಆಗುತ್ತಿದೆ ಎಂದಾದರೆ ಈ
ಬಗ್ಗೆ ಆತ್ಮಾವಲೋಕನ ಅತಿ ಅಗತ್ಯ.