Select Page
ಹದಿಹರೆಯದ ಮಕ್ಕಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಮನೋವೈದ್ಯನಾಗಿ ನಾನು ನೋಡುತ್ತಿರುವುದೇನೆಂದರೆ ಮಾರ್ಚ್
ತಿಂಗಳಿನಿಂದ ಜುಲೈವರೆಗೆ ಹದಿಹರೆಯದ ಮಕ್ಕಳು ಮನೋವೈದ್ಯರ ಬಳಿ ಬರುವುದು ಕೂಡ ಹೆಚ್ಚುತ್ತಾ ಇದೆ. ಭಾರತದಲ್ಲಿ ನೂರು
ಆತ್ಮಹತ್ಯೆ ಪ್ರಕರಣಗಳು ಸಂಭವಿಸಿದರೆ ಅದರಲ್ಲಿ 30ಕ್ಕೂ ಹೆಚ್ಚು ಈ ಹದಿಹರೆಯದ ವಯಸ್ಸಿನವರದು.
ಹದಿಹರೆಯದ ಪ್ರಾಯದಲ್ಲಿ ಆತ್ಮಹತ್ಯೆಗಳು ಹೆಚ್ಚಾಗಲು ಕಾರಣಗಳೇನು?
ಹೆಚ್ಚಿನ ಪ್ರಕರಣಗಳು ಹಠಾತ್ ನಿರ್ಣಯಗಳು. ಶಾಲೆಯಲ್ಲಿ ಎಲ್ಲರ ಮುಂದೆ ಅವಮಾನ ಆಯಿತು ಅಥವಾ ಮನೆಯವರು ಏನೋ
ಬುದ್ಧಿವಾದ ಹೇಳಿದರು ಅಥವಾ ಸ್ನೇಹಿತರು ದೂರ ಮಾಡಿದರು ಹೀಗೆ ಎಷ್ಟೇ ಯೋಚನೆ ಮಾಡಿದರು ನಮಗೆ ಅರ್ಥವಾಗದಂತಹ
ವಿಷಯಗಳಿಗೆ ಹದಿಹರೆಯದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮನೆಯವರಾಗಲಿ ಶಾಲೆ ಯವರಾಗಲಿ ಮಾತನಾಡುವಾಗ
ಎಷ್ಟೇ ಜಾಗೃತೆ ಮಾಡಿದರೂ ಸಾಲದು.
ಪರೀಕ್ಷೆಯ ಆತಂಕದಿಂದ ಕೆಲವರು ಆತ್ಮಹತ್ಯೆ ಪ್ರಯತ್ನ ಮಾಡುತ್ತಾರೆ, ಇನ್ನು ಕೆಲವರು ಪರೀಕ್ಷೆ ಮುಗಿದ ಕೂಡಲೇ ನಿರೀಕ್ಷಿತನಿರ್ವಹಣೆ ಸಾಧ್ಯವಾಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವವರು ಇದ್ದಾರೆ ಹಾಗೆಯೇ ಪರೀಕ್ಷೆ ರಿಸಲ್ಟ್ ಬಂದ ಮೇಲೆ
ಆತ್ಮಹತ್ಯೆ ಮಾಡಿಕೊಳ್ಳುವವರು ಇದ್ದಾರೆ. ತಮ್ಮನ್ನು ಇತರರೊಂದಿಗೆ ತುಲನೆ ಮಾಡಿಕೊಳ್ಳುವುದು, ಇಲ್ಲವೇ ಮನೆಯವರ
ನಿರೀಕ್ಷೆಗೆ ತಕ್ಕಂತೆ ಮಾರ್ಕ್ಸ್ ಬರಲಿಲ್ಲ ಎಂಬ ಬೇಸರ, ಬಂದ ಮಾರ್ಕ್ಸ್ ನಿಂದ ಸಮಾಜವನ್ನು ಹೇಗೆ ಎದುರಿಸುವುದು ಎಂಬ
ಅಂಜಿಕೆ ಇವು ಆತ್ಮಹತ್ಯೆಯ ಪ್ರಯತ್ನಗಳಿಗೆ ಕಾರಣವಾಗಬಹುದು.
ಭಾವನಾತ್ಮಕ ಸಂಬಂಧಗಳಲ್ಲಿ ಬಿರುಕು ಇದು ಹದಿಹರೆಯದ ಪ್ರಾಯದಲ್ಲಿ ಆತ್ಮಹತ್ಯೆ ಪ್ರಯತ್ನ ಮಾಡಲು ಒಂದು ಪ್ರಮುಖ
ಕಾರಣ. ತುಂಬಾ ಇಷ್ಟಪಡುತ್ತಿದ್ದ ಮಿತ್ರನೊಬ್ಬ ದೂರ ಮಾಡಿದ ಅಥವಾ ಪ್ರೀತಿಸುತ್ತಿದ್ದ ಹುಡುಗಿ ಈಗ ಮಾತನಾಡುವುದು
ಬಿಟ್ಟಿದ್ದಾಳೆ ,ತನ್ನನ್ನು ವಾಟ್ಸಾಪ್ನಲ್ಲಿ ಬ್ಲಾಕ್ ಮಾಡಿದ್ದಾಳೆ ,ಕಾರಣ ಹೇಳುತ್ತಿಲ್ಲ ಇದು ಆತ್ಮಹತ್ಯೆಯ ಪ್ರಯತ್ನಕ್ಕೆ
ಕಾರಣವಾಗಬಹುದು.
ಮದ್ಯ ಮಾದಕ ದ್ರವ್ಯ ವ್ಯಸನ ದಿಂದ ಬಳಲುತ್ತಿರುವ ಹದಿಹರೆಯದವರು ಆತ್ಮಹತ್ಯೆಯ ಪ್ರಯತ್ನಗಳನ್ನು ಮಾಡುವುದು ಜಾಸ್ತಿ ದೀರ್ಘಕಾಲಿನ ಸಮಸ್ಯೆಗಳಿಂದ ಬಳಲುತ್ತಿರುವ ಹದಿಹರೆಯದವರು ಅಂದರೆ ಮನೆಯಲ್ಲಿ ಅಪ್ಪ ಅಮ್ಮ ಜಗಳಗಳನ್ನು
ಮಾಡುತ್ತಿರುವುದು ಅಥವಾ ಸಾಲದಿಂದ ಸಮಸ್ಯೆ ಅನುಭವಿಸುತ್ತಿರುವುದು ಅಥವಾ ಮನೆಯ ಯಾರಾದರೂ ತೀವ್ರ ಬಗ್ಗೆಯ
ಕಾಯಿಲೆಗಳಿಂದ ಬಳಲುತ್ತಿದ್ದು ಇದರಿಂದ ಹದಿ ಹರೆಯದವರ ಮೇಲೆ ಒತ್ತಡ ಉಂಟಾಗಿದ್ದರೆ ಅಂತವರು ಆತ್ಮಹತ್ಯೆ
ಪ್ರಯತ್ನಗಳನ್ನು ಮಾಡಬಹುದು.
ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವ ಹದಿಹರೆಯದವರು ಆತ್ಮಹತ್ಯೆಯ ಪ್ರಯತ್ನಗಳನ್ನು ಮಾಡುತ್ತಾರೆ. ಹೆಚ್ಚಿನ ಮಾನಸಿಕ ಸಮಸ್ಯೆಗಳು ಪ್ರಾರಂಭವಾಗುವುದೇ ಈ ವಯಸ್ಸಿನಲ್ಲಿ. ಖಿನ್ನತೆ ,ಇಚ್ಚಿತ ಚಿತ್ತ ವಿಕಲತೆ, ಬೈ ಪೋಲಾರ್ ಅಸ್ವಸ್ಥತೆ ಇವುಗಳು ಪ್ರಾರಂಭವಾಗುವುದು ಈ ವಯಸ್ಸಿನಲ್ಲಿ. ಈ ಕಾಯಿಲೆಗಳಿಗೆ ಚಿಕಿತ್ಸೆ ಸಿಗದೇ ಅಥವಾ ಚಿಕಿತ್ಸೆ ಸಿಕ್ಕಿ ಗುಣಮುಖರಾದಾಗ "ತಾನು ಬೇರೆಯವರಂತೆ ಇಲ್ಲ"ಎಂಬ ಅಭಿಪ್ರಾಯಕ್ಕೆ ಬಂದು ಆತ್ಮಹತ್ಯೆ ಪ್ರಯತ್ನ ಮಾಡುವವರು ಇದ್ದಾರೆ.
ಆತ್ಮಹತ್ಯೆ ಪ್ರಯತ್ನ ಮಾಡಲು ಇಚ್ಛಿಸುವ ಹದಿಹರೆದವರು ಅದಕ್ಕೆ ಬೇಕಾದ ಪರಿಕರಗಳು ಸುಲಭವಾಗಿ ಸಿಕ್ಕಲ್ಲಿ ಆತ್ಮಹತ್ಯೆಯ
ಸಾಧ್ಯತೆಗಳು ಜಾಸ್ತಿ. ತಮ್ಮನ್ನು ತಾವೇ ಶೂಟ್ ಮಾಡಿಕೊಳ್ಳುವ ಯೋಜನೆ ಇರುವವರಿಗೆ ಗನ್ ಸಿಕ್ಕಿದಲ್ಲಿ ಅದು ಯೋಚನೆ ಇದ್ದದ್ದು ಆತ್ಮಹತ್ಯೆಯಾಗಿ ಪರಿವರ್ತನೆಗೊಳ್ಳುತ್ತದೆ. ಹಾಗೆಯೇ ಗಿಡಕ್ಕೆ ಸಿಂಪಡಿಸುವ ಕೀಟನಾಶಕಗಳು ಸುಲಭವಾಗಿ ದೊರೆತರೆ, ಅಥವಾ ನಿದ್ರಾ ಮಾತ್ರೆಗಳು ಸುಲಭವಾಗಿ ಲಭ್ಯವಾದರೆ ಅದನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವವರು ಜಾಸ್ತಿ.ಹದಿ ಹರೆಯದವರ ಆತ್ಮಹತ್ಯೆ ತಡೆಗಟ್ಟಲು ನಾವು ನೀವು ಏನು ಮಾಡಬಹುದು?
ಹದಿ ಹರೆಯದವರು ಮುಕ್ತವಾಗಿ ಮಾತನಾಡಲು ಮನೆಯವರು ಮತ್ತು ಶಿಕ್ಷಕರು ಅವಕಾಶ ಮಾಡಿಕೊಡಬೇಕಾಗಿದೆ.
ಹದಿ ಹರೆಯದವರ ಮೇಲೆ ಅತಿಯಾದ ಒತ್ತಡ ಹಾಕುವುದು ಕಡಿಮೆ ಮಾಡಬೇಕಾಗಿದೆ.
ಹದಿ ಹರೆಯದವರ ಒತ್ತಡ ಕಡಿಮೆ ಮಾಡಲು ಅವರಿಗೆ ಆಟ ಓಟ ನಾಟಕ ನೃತ್ಯ ಹಾಡು ಮುಂತಾದ ಹವ್ಯಾಸಗಳನ್ನು
ಬೆಳೆಸಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗಿದೆ.
ಹದಿಹರೆಯದ ಮಕ್ಕಳಲ್ಲಿ ಕೆಲವು ಜೀವನ ಕೌಶಲ್ಯಗಳನ್ನು ಅಗತ್ಯವಾಗಿ ಬೆಳೆಸುವ ಪ್ರಯತ್ನ ನಡೆಯಬೇಕು. ಮುಖ್ಯವಾಗಿ ತಾವು
ಅಂದುಕೊಂಡಂತೆ ವಿಷಯಗಳು ಸಂಭವಿಸದೆ ಇದ್ದಾಗ ಅದನ್ನು ಎದುರಿಸಲು ಅವರಿಗೆ ದಾರಿ ತೋರಿಸಬೇಕಾಗಿದೆ. ಸಣ್ಣ ಸಣ್ಣ
ಸೋಲುಗಳನ್ನು ಕೂಡ ಎದುರಿಸಲಾಗದೆ ಆತ್ಮಹತ್ಯೆ ಪ್ರಯತ್ನ ಮಾಡುವವರನ್ನು ನೋಡುತ್ತಿದ್ದೇವೆ. ಶಾಲಾ ಕಾಲೇಜುಗಳಲ್ಲಿ
ಇಂತಹ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಬೇಕು. ಸೋಲನ್ನು ಎದುರಿಸುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳೊಂದಿಗೆ
ಚರ್ಚೆ ನಡೆದಲ್ಲಿ ಅಂತಹ ಜೀವನ ಸನ್ನಿವೇಶಗಳನ್ನು ಅವರು ಎದುರಿಸಲು ಸುಲಭವಾಗುತ್ತದೆ. ನಿರೀಕ್ಷೆ ಮಾಡಿದ ಫಲಿತಾಂಶ
ಬರಲಿಲ್ಲ , ಸ್ನೇಹಿತ ದೂರ ಮಾಡಿದ ಇತ್ಯಾದಿ ಸನ್ನಿವೇಶಗಳು ಎದುರಿಸುವುದು ಹೇಗೆ ಎಂಬುದು ಮಕ್ಕಳಿಗೆ ಗೊತ್ತಿರಬೇಕು. ಕ್ರೀಡೆ
ಕ್ರೀಡಾ ಮನೋಭಾವವನ್ನು ಹೆಚ್ಚಿಸುತ್ತದೆ. ಆಟದಲ್ಲಿ ಸೋಲು ಸರ್ವೇಸಾಮಾನ್ಯ. ಆದರೆ ಇಂದು ಆಟವೇ ಆಡದ ಮಕ್ಕಳು
ಸೋಲಿನ ಬಗ್ಗೆ ತಿಳಿಯುವುದು ಹೇಗೆ?
ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಅದರ ಚಿಹ್ನೆಗಳನ್ನು ಆರಂಭಿಕವಾಗಿ ಗುರುತಿಸಿ, ಚಿಕಿತ್ಸೆಗೆ ಹೋದಲ್ಲಿ
ಚಿಕಿತ್ಸೆಯೂ ಸುಲಭ ಹಾಗೆ ಆತ್ಮಹತ್ಯೆ ಯತ್ನಗಳು ಕೆಲವೊಮ್ಮೆ ಈ ಕಾಯಿಲೆಯ ಲಕ್ಷಣಗಳಾಗಿರುತ್ತವೆ. ಹೆಚ್ಚಿನ ಮಾನಸಿಕ
ಕಾಯಿಲೆಗಳಿಗೆ ವೈಜ್ಞಾನಿಕ ಚಿಕಿತ್ಸೆ ಲಭ್ಯವಿದೆ. ಮಾಟ ,ಮಂತ್ರ ,ಜಾತಕ ದೋಷ ಎಂದು ಸಮಯ ವ್ಯರ್ಥ ಮಾಡದೆ ಆ ಕೂಡಲೇ
ಮಕ್ಕಳಿಗೆ ಮಾನಸಿಕ ಸಮಸ್ಯೆಗಳ ಚಿಹ್ನೆಗಳು ಇರುವಾಗ ಚಿಕಿತ್ಸೆ ನಡೆಯಬೇಕಾಗಿದೆ.
ಇತ್ತೀಚೆಗೆ ರಾಜಸ್ಥಾನದ ಕೋಟದಲ್ಲಿ ನಡೆದ ವಿದ್ಯಮಾನಗಳನ್ನು ಗಮನಿಸಿದರೆ ಗೊತ್ತಾಗುವುದೇನೆಂದರೆ ಮಕ್ಕಳ ಮೇಲೆ
ತೀವ್ರವಾದ ಒತ್ತಡ, ಮಕ್ಕಳಲ್ಲಿ ಹೆಚ್ಚುತ್ತಿರುವ ಪೈಪೋಟಿ ಮನೋಭಾವ, ಓದಿ ಮಾರ್ಕ್ಸ್ ತೆಗೆಯುವುದು ಒಂದೇ ಜೀವನದಲ್ಲಿ ದಾರಿ
ಎಂಬಂತೆ ಅವರಲ್ಲಿ ಹಾಗೂ ಅವರ ಪೋಷಕರಲ್ಲಿ ಇರುವ ಧೋರಣೆ ಇದು ಕೇವಲ ರಾಜಸ್ಥಾನದ ಕೋಟದ ಕಥೆಯಲ್ಲ. ಜಿಲ್ಲೆ
ಜಿಲ್ಲೆಗಳಲ್ಲಿ ಇಂತಹ ಸಂಸ್ಥೆಗಳು ಎದ್ದು ಕಾಣುತ್ತಿವೆ. ಇಂತಹ ಸಂಸ್ಥೆಗಳಲ್ಲಿ ಶಿಕ್ಷಣ ಸ್ವರೂಪವನ್ನು ಈ ಕೂಡಲೇ ಬದಲಿಸದಿದ್ದರೆ
ಜಿಲ್ಲೆಗಳಲ್ಲಿ ಕೂಡ ಇಂತಹ ಸಮಸ್ಯೆಗಳು ಜಾಸ್ತಿ ಆಗುತ್ತದೆ. ಈ ಬಗ್ಗೆ ಶಿಕ್ಷಣ ತಜ್ಞರು ಸರ್ಕಾರ ಎಚ್ಚೆತ್ತುಕೊಳ್ಳಬೇಕು.
ಒಟ್ಟಿನಲ್ಲಿ ಹದಿಹರೆಯದ ಆತ್ಮಹತ್ಯೆಗಳ ಬಗ್ಗೆ ಸಮಾಜ ಎಚ್ಚೆತ್ತುಕೊಂಡು ಬದಲಾವಣೆಗಳನ್ನು ತರುವುದು ಅತಿ ಅಗತ್ಯ.