Select Page
ಆತ್ಮಹತ್ಯೆ ತಡೆ ದಿನಾಚರಣೆ world suicide  prevention day (WSPD), ವಾರ್ಷಿಕವಾಗಿ ಸೆಪ್ಟೆಂಬರ್ 10 ರಂದು ಆಚರಿಸಲಾಗುತ್ತದೆ, ಇದನ್ನು ಆತ್ಮಹತ್ಯೆ ತಡೆಗಟ್ಟುವಿಕೆಗಾಗಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಸುಯಿಸೈಡ್ ಪ್ರಿವೆಂಷನ್ (IASP) ಆಯೋಜಿಸುತ್ತದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಈ ದಿನಚರಣೆ ಆಚರಣೆಯನ್ನು ಅನುಮೋದಿಸಿದೆ. ಈ ದಿನಾಚರಣೆ ಆತ್ಮಹತ್ಯೆ ತಡೆಗಟ್ಟುವಿಕೆಯ ಮೇಲೆ ಗಮನ ಕೇಂದ್ರೀಕರಿಸುವ ಜಾಗತಿಕ ಬದ್ಧತೆಯನ್ನು ಪ್ರತಿನಿಧಿಸುತ್ತದೆ. WSPD 2023 ರ ಧ್ಯೇಯ ವಾಕ್ಯ, “ನಮ್ಮ ಕೆಲಸಗಳ ಮೂಲಕ  ಭರವಸೆಯನ್ನು ಸೃಷ್ಟಿಸುವುದು” ಈ ತುರ್ತು ಸಾರ್ವಜನಿಕ ಆರೋಗ್ಯ ಸಮಸ್ಯೆಯನ್ನು ಪರಿಹರಿಸಲು ಸಾಮೂಹಿಕ ಕ್ರಮದ ಅಗತ್ಯವನ್ನು ಪ್ರತಿಬಿಂಬಿಸುತ್ತದೆ. ನಾವೆಲ್ಲರೂ- ಕುಟುಂಬದ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳು, ಸಮುದಾಯದ ಸದಸ್ಯರು, ಶಿಕ್ಷಣತಜ್ಞರು, ಧಾರ್ಮಿಕ ಮುಖಂಡರು, ಆರೋಗ್ಯ ವೃತ್ತಿಪರರು, ಅಧಿಕಾರಿಗಳು,ರಾಜಕೀಯ ನಾಯಕರು, ಮತ್ತು ಸರ್ಕಾರಗಳು- ನಮ್ಮ ನಮ್ಮ ಪ್ರದೇಶಗಳಲ್ಲಿ ಆತ್ಮಹತ್ಯೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬಹುದು.
ಈ ನಿಟ್ಟಿನಲ್ಲಿ ಈ ಬಾರಿ ಲೇಖನ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾವೇನು ಮಾಡುತ್ತಿದ್ದೇವೆ ಅನ್ನುವುದರ ಬಗ್ಗೆ. ಮೂಡಬಿದ್ರೆಯ ಆಳ್ವಾಸ್ ವಿದ್ಯಾ ಸಂಸ್ಥೆಗಳು ಹಾಗೆ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಉಡುಪಿಯ ಸುತ್ತಮುತ್ತಲಿನ ಆಯ್ದ ಪಿಯುಸಿ ಕಾಲೇಜ್ ಗಳಲ್ಲಿ “ಪೀಯರ್ ಕೌನ್ಸಿಲರ್” ಗಳು ಅಂದರೆ ಕೆಲವು ವಿದ್ಯಾರ್ಥಿ ನಾಯಕರು ಅಥವಾ ಆಪ್ತ ಸಲಹೆ ನೀಡಲು ಆಸಕ್ತಿ ತೋರುವ ಕೆಲವು ಯುವಕರುಗಳ ತರಬೇತಿ ಕಾರ್ಯಕ್ರಮಗಳು ಆಯೋಜನೆ ಮಾಡುತ್ತಾ ಇದ್ದೇವೆ. ಹದಿ ಹರೆಯದವರಲ್ಲಿ ಆತ್ಮಹತ್ಯೆ ಯತ್ನ ಪ್ರಯತ್ನ ಮಾಡಲು ಕಾರಣಗಳು ಏನು? ಚೆನ್ನಾಗಿ ಮಾರ್ಕ್ಸ್ ಬರದೇ ಇರುವುದು, ಪರೀಕ್ಷೆಗೆ ತಯಾರಿ ಸರಿಯಾಗಿ ನಡೆಯದೆ ಇರುವುದು, ಲವ್ ಫೇಲ್ಯೂರ್, ತಾಯಿ ತಂದೆಯರ ಮೂದಲಿಕೆಯ ಮಾತುಗಳು, ಶಾಲೆಯಲ್ಲೋ ಆಟದಲ್ಲೋ ಎಲ್ಲರ ಮುಂದೆ ಆದ ಅವಮಾನಗಳು, ಸಮಾಜದಲ್ಲಿ ಅಥವಾ ಮನೆಯಲ್ಲಿ ಪ್ರತಿಕೂಲ ಪರಿಸ್ಥಿತಿಗಳು, ಕೆಲವೊಮ್ಮೆ ಕೆಲವು ಮಾನಸಿಕ ರೋಗಗಳು.
ಈ ಸಮಸ್ಯೆಗಳನ್ನು ಗಮನಿಸಿದರೆ ಹದಿಹರೆಯದವರು ಮನಸ್ಸಿಗೆ ಉಂಟಾದ ಬೇಸರವನ್ನು ಯಾರೊಂದಿಗಾದರೂ ಹಂಚಿಕೊಂಡರೆ ಎಷ್ಟೊಂದು ಸಮಸ್ಯೆಗಳನ್ನು ಮೊಳಕೆಯಲ್ಲಿ ಗುರುತಿಸಿ ಸರಿಪಡಿಸಲು ಪ್ರಯತ್ನಿಸಬಹುದು. ಆದರೆ ಹೆಚ್ಚಿನವರು ಇಂತಹ ಸಮಸ್ಯೆಗಳನ್ನು ಗುರುಗಳೊಂದಿಗೆ ಅಥವಾ ಹಿರಿಯರೊಂದಿಗೆ ಚರ್ಚಿಸಲು ಇಷ್ಟಪಡುವುದಿಲ್ಲ ಹಾಗೆಯೇ ಮಾನಸಿಕ ಆರೋಗ್ಯ ವೃತ್ತಿಪರರು ಎಷ್ಟು ಕಡಿಮೆ ಇದ್ದಾರೆ ಎಂದರೆ ಅವರ ಹತ್ತಿರ ಹೋಗುವುದಂತೂ ಸಣ್ಣ ಸಣ್ಣ ಊರುಗಳಲ್ಲಿ ಸಾಧ್ಯವಿಲ್ಲದ ಮಾತು. ಈ ದಿಶೆಯಲ್ಲಿ ಅವರದೇ ವಯಸ್ಸಿನ  ನಾಯಕತ್ವ ಗುಣ ಹಾಗೂ ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂಬ ಹಪಾಹಪಿ ಇರುವ ಹದಿ ಹರೆಯದ ಯುವಕರನ್ನು ಆಪ್ತ ಸಲಹೆ ನೀಡುವಂತೆ ತಯಾರು ಮಾಡುವುದು ಈ “ಪೀಯರ್ ಕೌನ್ಸಿಲಿಂಗ್ “ತರಬೇತಿಗಳ ಉದ್ದೇಶ.
ಈ ತರಬೇತಿಗಳಲ್ಲಿ ಮುಖ್ಯವಾಗಿ ಹದಿಹರೆಯದ ಮಕ್ಕಳಲ್ಲಿ ಉಂಟಾಗುವ ಮಾನಸಿಕ ಬದಲಾವಣೆಗಳು, ಹಾಗೆಯೇ ಆತ್ಮಹತ್ಯಾ ಯೋಚನೆ ಇರುವ ಮಕ್ಕಳ ನಡವಳಿಕೆಗಳು, ಮತ್ತು ಅದರಲ್ಲಿ ಉಂಟಾಗುವ ಬದಲಾವಣೆಗಳು, ಹಾಗೆಯೇ ಮಿತ್ರರು ಎಲ್ಲಿಯಾದರೂ ಆತ್ಮಹತ್ಯ ಯೋಚನೆಗಳನ್ನು ಪ್ರಕಟಪಡಿಸಿದರೆ ಆಗ ಈ ವಿದ್ಯಾರ್ಥಿಗಳು ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬ ವಿಚಾರಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಗುತ್ತದೆ. ಹಾಗೆಯೇ ಆತ್ಮಹತ್ಯ ಪ್ರಯತ್ನಗಳನ್ನು ಮಾಡಿದ್ದು ಗಮನಕ್ಕೆ ಬಂದರೆ ಆಗ ಯಾವ ರೀತಿ ಪ್ರತಿಕ್ರಿಯಿಸಬೇಕು ಮತ್ತು ಯಾರ ಸಹಾಯವನ್ನು ಪಡೆಯಬೇಕು ಹಾಗೂ ಆತ್ಮಹತ್ಯೆಯ ತಡೆಯ ಸಹಾಯವಾಣಿಗಳ ಬಗ್ಗೆ ಮಾಹಿತಿಯನ್ನು ಈ ಮಕ್ಕಳಿಗೆ ನೀಡಲಾಗುತ್ತದೆ. ಹಲವಾರು ಸಮಸ್ಯೆಗಳನ್ನು ಅವರು ಬದಲಿಸಲು ಸಾಧ್ಯವಿಲ್ಲ ಅಂತಹ ಸಮಸ್ಯೆಗಳನ್ನು ಗೌಪ್ಯತೆಯನ್ನು ಮುರಿಯದೆ ಶಾಲೆಯ ಅಧಿಕಾರಿಗಳ ಗಮನಕ್ಕೆ ತರುವುದು ಹೇಗೆ, ಅಥವಾ ಮನೋವೈದ್ಯರ ಗಮನಕ್ಕೆ ತರಲು ಏನಾದರೂ ವ್ಯವಸ್ಥೆಗಳು ಇದೆಯೇ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
ಪೀಯರ್ ಕೌನ್ಸಿಲರ್ ಗಳ ಅಗತ್ಯತೆ ಯಾಕೆ?
ಹಲವಾರು ಮಾನಸಿಕ ತುಮುಲಗಳನ್ನು ಹದಿಹರೆಯದ ಮಕ್ಕಳು ಬೇರೆಯವರೊಂದಿಗೆ ಹಂಚಿಕೊಳ್ಳಲು ಆಗುವುದಿಲ್ಲ. ಹಂಚಿಕೊಂಡರೂ ಅದರ ಬಗ್ಗೆ ಗುರು ಹಿರಿಯರು ಅರ್ಥಮಾಡಿಕೊಳ್ಳಲಿಕ್ಕಿಲ್ಲ ಅಥವಾ ಸರಿ ತಪ್ಪು ಎಂಬ ತೀರ್ಪು ಆ ಕೂಡಲೇ ಮಾಡಿಬಿಡುತ್ತಾರೆ ಇಲ್ಲವೇ ಅವರನ್ನು ಬೈಯುವುದು, ವ್ಯಂಗ್ಯವಾಗಿ ಮಾತನಾಡುವುದು ಮಾಡುತ್ತಾರೆ ಎಂಬ ಭಯ ಇರುತ್ತದೆ. ಇಂತಹ ಸಂದರ್ಭದಲ್ಲಿ ತಮ್ಮನ್ನು ಅರ್ಥ ಮಾಡಿಕೊಳ್ಳುವ ತಮ್ಮದೇ ವಯಸ್ಸಿನ ಸ್ನೇಹಿತರು ತೀರ್ಪು ರಹಿತವಾಗಿ ತಮ್ಮ ಸಮಸ್ಯೆಗಳಿಗೆ ಸ್ಪಂದಿಸಬಹುದು ಎಂಬ ಒಂದು ಭಾವನೆಯಿಂದ ತಮ್ಮ ಮನಸ್ಸಿನಲ್ಲಿರುವ ದುಗುಡಗಳನ್ನು  ಮುಕ್ತವಾಗಿ ಹೆದರಿಕೆ ಇಲ್ಲದೆ ಹಂಚಿಕೊಳ್ಳಬಹುದು.
ಪೀಯರ್ ಕೌನ್ಸಿಲರ್ಗಳ ಹತ್ತಿರ ಹೋದರೆ ಅವರು ತರಬೇತಿ ಪಡೆದವರಾಗಿರುವುದರಿಂದ ಅನುಭೂತಿ ಮತ್ತು ತಿಳುವಳಿಕೆಯನ್ನು ಹೊಂದಿರುತ್ತಾರೆ ಹಾಗೂ ಮಿತ್ರರ ಸಮಸ್ಯೆಗಳನ್ನು ಸರಿಯಾಗಿ ತಿಳಿದುಕೊಂಡು ಅವುಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ನೀಡುತ್ತಾರೆ . ಸರಿಯಾದ ಮಾಹಿತಿ ಪಡೆದುಕೊಂಡಿರುವ ಯುವಕರು ಎಚ್ಚರಿಕೆಯ ಚಿಹ್ನೆಗಳನ್ನು ತಮ್ಮ ಮಿತ್ರರಲ್ಲಿ ಮೊದಲೇ ಗಮನಿಸಿ ಅವರ ಮಾನಸಿಕ ಬಿಕ್ಕಟ್ಟು ಉಲ್ಬಣಗೊಳ್ಳುವ  ಮೊದಲೇ ಅದನ್ನು ತಡೆಯಬಹುದು. ಹಾಗೆಯೇ ಇಂತಹ ಸಮಸ್ಯೆಗಳಿಗೆ ತುರ್ತಾಗಿ ವೃತ್ತಿಪರ ಸಹಾಯ ಸಿಗಲು ಮಾಹಿತಿ ಉಳ್ಳವರಾಗಿರುತ್ತಾರೆ ಮತ್ತು ಅವರ ಗೆಳೆಯರಿಗೆ ಆ ಕೂಡಲೇ ಚಿಕಿತ್ಸೆ ಸಿಗುವ ಹಾಗೆ ಸಹಾಯ ಮಾಡುತ್ತಾರೆ.
ಈ ಪೀಯರ್ ಕೌನ್ಸಿಲರ್ಗಳು ತರಬೇತಿ ಪಡೆದು ತಮ್ಮ ತಮ್ಮ ವಿದ್ಯಾಲಯಗಳಲ್ಲಿ ಮಾನಸಿಕ ಸಮಸ್ಯೆಗಳ ಬಗ್ಗೆ, ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವ ಬಗ್ಗೆ, ಮನಸ್ಸಿನ ಸಮಸ್ಯೆಗಳನ್ನು ಇನ್ನೊಬ್ಬರೊಂದಿಗೆ ಮುಕ್ತವಾಗಿ ಚರ್ಚಿಸುವ ಬಗ್ಗೆ, ಮದ್ಯ ಮಾದಕ ದ್ರವ್ಯಗಳ ವಿರೋಧಿ ಚಟುವಟಿಕೆಗಳ ಬಗ್ಗೆ ಹೀಗೆ ಹಲವಾರು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದರೆ ಆ ಶಾಲೆಯ ಹಲವಾರು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ  ,ಆತ್ಮಹತ್ಯೆ ತಡೆ  ಬಗ್ಗೆ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳುವ ಒಂದು ಅವಕಾಶವನ್ನು ಮಾಡಿಕೊಡಬಹುದು. ಮಾನಸಿಕ ಸಮಸ್ಯೆಗಳಿದ್ದು ಪ್ರತ್ಯೇಕತೆಯನ್ನು ಅನುಭವಿಸುತ್ತಿರುವ ಹಲವರ ಸಮಸ್ಯೆಗಳಿಗೆ ಪರಿಹಾರ ನೀಡುವ ಇಲ್ಲವೇ ಪರಿಹಾರವನ್ನು ಹುಡುಕಲು ಸಹಾಯ ಮಾಡುವ ಮಾರ್ಗದರ್ಶಕರಾಗಿ ಕೆಲಸ ಮಾಡಬಹುದು.
ಇಂತಹ ಕಾರ್ಯಕ್ರಮಗಳ ಬಗ್ಗೆ ಪ್ರತಿಯೊಂದು ಶಾಲೆಯು ಯೋಚನೆ ಮಾಡಲೇಬೇಕಾಗಿದೆ. ಈ ಕಾರ್ಯಕ್ರಮಗಳಿಂದ ಮಾನಸಿಕ ಆರೋಗ್ಯದ ಬಗ್ಗೆ ಕಳಂಕ ಭಾವನೆ ಕಡಿಮೆಯಾಗುತ್ತದೆ ಹಾಗೆಯೇ ಆತ್ಮಹತ್ಯೆಯ ಯೋಚನೆಯಂತಹ ಸೂಕ್ಷ್ಮ ವಿಷಯಗಳನ್ನು ಹದಿ ಹರೆಯದ ಮಕ್ಕಳು ಮುಕ್ತವಾಗಿ ಚರ್ಚಿಸಲು ಇದು ಸಹಾಯಕಾರಿಯಾಗುತ್ತದೆ.