✍🏼 ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿಗಳು ಮತ್ತು ಆಪ್ತಸಮಾಲೋಚಕರು ಡಾ. ಎ.ವಿ. ಬಾಳಿಗಾ ಸ್ಮಾರಕ ಅಸ್ಪತ್ರೆ, ಉಡುಪಿ
ಇತ್ತೀಚೆಗಷ್ಟೇ ದಿನ ಪತ್ರಿಕೆಯೊಂದರಲ್ಲಿ ಮದ್ಯವ್ಯಸನಿ ಗಂಡನೋರ್ವನು ತನ್ನನ್ನು ಬಿಟ್ಟು, ಹೆಂಡತಿ ಮಕ್ಕಳು ಸಂಬಂಧಿಕರ ಮನೆಗೆ ಹೋಗಿ ವಾಸವಿದ್ದುದನ್ನು ಸಹಿಸದೆ, ಸಂಬಂಧಿಕರ ಮನೆಗೆ ಹೋಗಿ ರಾತ್ರಿ ಹೊತ್ತು ಎಲ್ಲರೂ ಗಾಢ ನಿದ್ರೆಯಲ್ಲಿದ್ದುದನ್ನು ಗಮನಿಸಿ ಇಡೀ ಮನೆಗೆ ಬೆಂಕಿಯಿಟ್ಟು, ಎಲ್ಲರನ್ನೂ ಸಜೀವ ದಹಿಸಿ ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಮ್ಮನೆಲ್ಲಾ ಬೆಚ್ಚಿ ಬೀಳಿಸಿತ್ತು.
ವೈವಾಹಿಕ ಜೀವನ ಎಲ್ಲರ ಜೀವನದಲ್ಲಿ ಆಗಮಿಸುವ ಪ್ರಮುಖ ಘಟ್ಟ. ವೈವಾಹಿಕ ಜೀವನದಲ್ಲಿ ಬಿರುಕು ಕಾಣಿಸಿಕೊಳ್ಳಲು ಮದ್ಯವ್ಯಸನ ಒಂದು ಪ್ರಮುಖ ಕಾರಣ.
ಗಂಡ ಹೆಂಡಿರ ಸಂಬಂಧ ಪ್ರಮುಖವಾಗಿ 4 ಅಂಶಗಳ ಮೇಲೆ ನಿರ್ಧಾರವಾಗುತ್ತದೆ.
1. ಭಾವನಾತ್ಮಕ ಸಂಬಂಧ
2. ಲೈಂಗಿಕ ಸಂಬಂಧ
3. ಹಣಕಾಸಿನ ಸಂಬಂಧ
4. ಮಕ್ಕಳ ಪೋಷಣೆ-ಪಾಲನೆ
ಗಂಡ-ಹೆಂಡತಿ ಎಷ್ಟೇ ಒಳ್ಳೆಯ ವ್ಯಕ್ತಿತ್ವ ಹೊಂದಿದವರಾಗಿದ್ದರೂ ಮದ್ಯವ್ಯಸನ ಖಂಡಿತ ಅವರಲ್ಲಿ ಹೊಂದಾಣಿಕೆಯ ಸಮಸ್ಯೆಯನ್ನು ಉಂಟುಮಾಡುತ್ತದೆ. ನಂಬಿಕೆಯ ಮೇಲೆ ನಿಂತಿರುವ ಈ ಸಂಬಂಧ ಯಾವಾಗಲೂ ಬಿರುಕು ಬಿಟ್ಟ ಗೋಡೆಯಂತಿರುತ್ತದೆ. ಯಾವಾಗ ಬೇಕಾದರೂ ಮುರಿದು ಬೀಳಬಹುದು ಅಥವಾ ಸಣ್ಣ ಸಣ್ಣ ರೀಪೇರಿಗಳೊಂದಿಗೆ ಮುಂದೆ ಸಾಗುತ್ತಿರುತ್ತದೆ ಅಷ್ಟೇ.
ಮೇಲ್ಕಂಡಂತಹ ಪ್ರಮುಖ 4 ವಿಷಯಗಳನ್ನು ಗಮನಿಸಿದಾಗ ಮೊದಲನೆಯದಾಗಿ ಭಾವನಾತ್ಮಕ ಸಂಬಂಧಗಳು : ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸ, ಒಬ್ಬರಿಗೊಬ್ಬರಿಗೆ ಅನುಕಂಪ, ತ್ಯಾಗ, ಹೊಂದಾಣಿಕೆ, ಖುಷಿ-ನೋವಿಗೆ ಪ್ರತಿ ಸ್ಪಂದನೆಯು ವೈವಾಹಿಕ ಜೀವನದ ಮೂಲಬೇರುಗಳಾಗಿರುತ್ತದೆ.
ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಸಂಗಾತಿಯ ವ್ಯಸನದಿಂದ ಗಂಡ-ಹೆಂಡಿರಲ್ಲಿ ಒಬ್ಬರಿಗೊಬ್ಬರ ಭಾವನೆಗಳು ಬರಿದಾಗಲು ತೊಡಗುತ್ತವೆ.
ಉದಾ: ಗಂಡನ ವ್ಯಸನದಿಂದ ಬೇಸತ್ತ ಹೆಂಡತಿ ಆತನ ಕುಡಿತ ನಿಲ್ಲಿಸಲು ಪಡುವ ಪ್ರಯತ್ನಗಳನ್ನು ನಿಧಾನವಾಗಿ ನಿಲ್ಲಿಸತೊಡಗುತ್ತಾಳೆ. ಮನೆಯ ಜವಾಬ್ದಾರಿಯನ್ನು ಸ್ವತಃ ತಾನೇ ನಿಭಾಯಿಸ ತೊಡಗುತ್ತಾಳೆ. ಉದಾ: ತನಗೆ ಕೆಲಸ ಹುಡುಕಿಕೊಳ್ಳುವುದು, ಮಕ್ಕಳ ಶಾಲೆಯ ಜವಾಬ್ದಾರಿ, ವ್ಯಾಪಾರ ವಹಿವಾಟು, ಸಂಬಂಧಗಳ ನಿರ್ವಹಣೆ ಎಲ್ಲದರಲ್ಲಿಯೂ ಯಜಮಾನಿಕೆಯ ಹೊಣೆ ತನ್ನದಾಗಿಸಿಕೊಳ್ಳತೊಡಗುತ್ತಾಳೆ. ಹೆಂಡತಿಯಲ್ಲಿ ಹೆಚ್ಚಿದ ಜವಾಬ್ದಾರಿಗಳು ಗಂಡನಿಗೆ ಕಿರಿಕಿರಿಯುಂಟುಮಾಡುತ್ತದೆ ಹಾಗೂ ಆತನಲ್ಲಿ ಕೀಳರಿಮೆ, ತಾನು ನಿರ್ಲಕ್ಷಿಸಲ್ಪಡುತ್ತಿದ್ದೇನೆ ಎಂಬ ಭಾವನೆ ಮೂಡತೊಡಗುತ್ತದೆ. ಇದರಿಂದ ಭಾವನಾತ್ಮಕ ಸಂಬಂಧಗಳಲ್ಲಿ ಬಿರುಕು ಹೆಚ್ಚಾಗತೊಡಗುತ್ತದೆ.
ಲೈಂಗಿಕ ಸಂಬಂಧ : ಮದ್ಯವ್ಯಸನಿಗಳಲ್ಲಿ ಹೆಚ್ಚಾಗಿ ಲೈಂಗಿಕ ಭಾವನೆಗಳು, ಆಸೆಗಳಿದ್ದರೂ ಲೈಂಗಿಕ ಸಂಭೋಗದಲ್ಲಿ ಸಂತೃಪ್ತಿ ಪಡೆಯಲು ವಿಫಲರಾಗುತ್ತಾರೆ. ಸಂಗಾತಿಯ ಲೈಂಗಿಕ ಕಾಮನೆಗಳನ್ನು ಈಡೇರಿಸುವಲ್ಲಿ ವಿಫಲರಾಗುತ್ತಾರೆ. ಇನ್ನೊಂದೆಡೆ ದಾಂಪತ್ಯದಲ್ಲಿ ಮೂಡುತ್ತಿದ್ದ ಭಾವನಾತ್ಮಕ ಸಂಬಂಧಗಳ ಹಳಸುವಿಕೆಯಿಂದಾಗಿ ಲೈಂಗಿಕವಾಗಿ ನಿರಾಸಕ್ತಿ ತೋರಿಸುತ್ತಾರೆ. ಹೆಂಡತಿಯ ಲೈಂಗಿಕ ಕ್ರಿಯೆಗೆ ನಿರಾಸಕ್ತಿ ಹಾಗೂ ತನ್ನಲ್ಲಿ ಮದ್ಯವ್ಯಸನದಿಂದ ಉಂಟಾದ ಲೈಂಗಿಕ ತೊಂದರೆಗಳಿಂದಾಗಿ ಗಂಡನಲ್ಲಿ ಇನ್ನೂ ಕೀಳರಿಮೆಯನ್ನು ಹೆಚ್ಚಿಸುತ್ತದೆ ಹಾಗೂ ಹೆಂಡತಿಯ ನಡವಳಿಕೆಯ ಮೇಲೆ ಶಂಕೆಗೆ ಕಾರಣವಾಗುತ್ತದೆ.
ಉದಾ: ನನ್ನ ಹೆಂಡತಿ ನನ್ನೊಂದಿಗೆ ಲೈಂಗಿಕ ಚಟುವಟಿಕೆಗೆಗೆ ಆಸಕ್ತಳಾಗಿಲ್ಲ, ಇತ್ತೀಚಿಗೆ ಹೊರಗಿನ ಸಂಪರ್ಕ ಜಾಸ್ತಿಯಾಗುತ್ತಿದೆ. ಹಲವು ಪುರುಷರೊಂದಿಗೆ ವ್ಯವಹಾರದಲ್ಲಿ ತೊಡಗಿರುತ್ತಾಳೆ. ಇವಳ ನಡವಳಿಕೆ ಸರಿಯಿಲ್ಲ.
ಇನ್ನು ಅನ್ಯವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರಬಹುದೆಂದು ಆತ ಮೊಬೈಲ್ ಕಾಲ್, ಮೆಸೆಜ್ಗಳನ್ನು ಚೆಕ್ ಮಾಡುವುದು, ಸಹದ್ಯೋಗಿಗಳಿಗೆ ಸಂಶಯದಿಂದ ಆಗಾಗ ಬೈಯುವುದು, ಬೆದರಿಕೆ ಹಾಕುವುದು.
ಅದೆ ರೀತಿ ಮದ್ಯವ್ಯಸನಿ ವ್ಯಕ್ತಿ ಕುಡಿದ ಮತ್ತಿನಲ್ಲಿ ಅಪಾಯಕಾರಿ ನಡವಳಿಕೆ, ಅಸುರಕ್ಷಿತ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವುದು ಮಾಡಬಹುದು.
ಈ ಮೂಲಕ ದಂಪತಿಯಿಬ್ಬರ ಲೈಂಗಿಕ ಜೀವನವು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಗಂಡ-ಹೆಂಡಿರಿಬ್ಬರಲ್ಲಿ ಯಾರಾದರೊಬ್ಬರೂ ಅನೈತಿಕ ಸಂಬಂಧಗಳನ್ನು ಹೊಂದಿದ್ದಲ್ಲಿ ಖಂಡಿತವಾಗಿ ಶೇ.100 ರಷ್ಟು ಸಂಬಂಧಗಳು ದುಃಖಾಂತ್ಯವನ್ನೇ ಹೊಂದುತ್ತದೆ ಎನ್ನುವುದು ಕಟು ಸತ್ಯ.
ಅದೇ ರೀತಿಯಲ್ಲಿ ಅತಿಯಾದ ಮದ್ಯವ್ಯಸನದಿಂದ ಪುರುಷರಲ್ಲಿ ಬಂಜೆತನ, ವೀರ್ಯಾಣು ನಾಶ ಕಾಣಬಹುದು. ಇದರಿಂದಾಗಿ ಲೈಂಗಿಕ ನಿರಾಸಕ್ತಿ, ಮಕ್ಕಳಾಗುವಿಕೆಯಲ್ಲಿ ತೊಂದರೆ ಅನುಭವಿಸುತ್ತಾರೆ
ಹಣಕಾಸಿನ ಸಂಬಂಧ : ಗಂಡನಾದವನು ತನ್ನ ಕುಡಿತ ಸ್ತಿಮಿತದಲ್ಲಿರದೆ ಹಲವರ ಬಳಿ ಸಾಲಗಳನ್ನು ಮಾಡಿಕೊಳ್ಳುವುದು, ಮನೆಯಲ್ಲಿರುವ ವಸ್ತುಗಳನ್ನು ಮಾರುವುದು, ಕದಿಯುವುದು, ಸುಳ್ಳು ಹೇಳಿ ಕೆಲಸಕ್ಕೆ ರಜೆ ಹಾಕುವುದು, ಸಂಬಳ ಕಡಿತಕ್ಕೊಳಗಾಗುವುದು ಕಾಣಬಹುದು. ಕುಡಿತದಿಂದ ಆಕಸ್ಮಿಕ ಆವಘಡಗಳಿಗೂ ಒಳಗಾಗಬಹುದು. ಅದೇ ರೀತಿ ಹೆಂಡತಿಯು ಗಂಡನ ನಡವಳಿಕೆಯಿಂದ ಬೇಸತ್ತು ಮನೆಯ ಜವಾಬ್ದಾರಿಯನ್ನೆಲ್ಲಾ ತನ್ನ ಹೆಗಲಿಗೇರಿಸಿಕೊಂಡು ತಾನು ತೆಗೆದುಕೊಳ್ಳುವ ನಿರ್ಧಾರಗಳೆ ಸರಿ ಎಂಬ ಅತಿಯಾದ ಆತ್ಮವಿಶ್ವಾಸಕ್ಕೆ ಒಳಗಾಗಿ, ಹಣಕಾಸಿನ ವ್ಯವಹಾರಗಳಲ್ಲಿ ಕೆಲವೊಮ್ಮೆ ದುಡುಕಿನ ನಿರ್ಧಾರಗಳಿಗೆ ಕೈ ಹಾಕುತ್ತಾಳೆ. ನಯವಂಚಕ ಮಾತುಗಳಿಗೆ ಒಳಗಾಗಿ ಕೆಲವೊಂದು ಚೈನ್ ಸಿಸ್ಟಮ್ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದು, ತನಗೆ ಜ್ಞಾನವೇ ಇಲ್ಲದ ಕೆಲವೊಂದು ವ್ಯಾಪಾರಗಳಿಗೆ ಹಣ ಹೂಡುವುದು, ತನ್ನ ಚಿನ್ನಾಭರಣ ಅಡವಿಟ್ಟು ಕೆಲವರನ್ನು ನಂಬಿ ಮೊಸ ಹೋಗುವುದು ಇಂತಹ ದುಡುಕುತನ ನಿರ್ಧಾರಗಳಿಂದ ತೊಂದರೆಗೊಳಗಾದಾಗ ತಾನು ಮುಗ್ಧೆ, ತನ್ನ ಗಂಡ ಮನೆಯ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ನನ್ನ ಈ ಪರಿಸ್ಥಿತಿಗೆ ಆತನೆ ಕಾರಣವೆಂದು ದೂರುವುದು ಮಾಡುತ್ತಾಳೆ.
ಅಗತ್ಯವಿರುವ ವಿಷಯಗಳಿಗೆ ಹೆಚ್ಚು ಒತ್ತುಕೊಡದೆ ಅನಗತ್ಯ ವಿಷಯಗಳಿಗೆ ಸಮಯ ವ್ಯರ್ಥ ಮಾಡುವುದನ್ನು ಕಾಣ ಬಹುದು.
ಮಕ್ಕಳ ಪೋಷಣೆ : ಗಂಡನ ವ್ಯಸನ ಹಾಗೂ ಹೆಂಡತಿಯ ಪೂರ್ವಾಗ್ರಹ ಪೀಡಿತ ನಡವಳಿಕೆಯಿಂದಾಗಿ ಅತೀ ತೊಂದರೆಗೆ ಒಳಗಾಗುವವರು ಅವರನ್ನು ಅವಲಂಬಿತ ಮಕ್ಕಳು. ಮದ್ಯವ್ಯಸನ ರಹಿತ ಮತ್ತು ಮದ್ಯವ್ಯಸನಿಗಳ ಕುಟುಂಬದ ಜೀವನ ಶೈಲಿಯಲ್ಲಿ ತುಂಬಾ ವ್ಯತ್ಯಾಸವಿರುತ್ತದೆ. ನಾನು ಈ ಮೊದಲೇ ನನ್ನ ಹಿಂದಿನ ಲೇಖನದಲ್ಲಿ ತಿಳಿಸಿರುವಂತೆ ಮದ್ಯವ್ಯಸನಿಗಳ ಮಕ್ಕಳ ಜೀವನದ ಸವಿನೆನಪುಗಳು ಅತಿ ವಿರಳವಾಗಿರುತ್ತದೆ.
ಎಲ್ಲಾ ಮಕ್ಕಳಿಗೆ ಮೊದಲ ಹಂತದಲ್ಲಿ ಮಾದರಿ ಪೋಷಕರೆ ಆಗಿರುತ್ತಾರೆ. ಸರಿಯಾದ ಮಾದರಿ ಮತ್ತು ಮಾರ್ಗದರ್ಶನ ಸಿಗದ ಮಕ್ಕಳು ಹಲವಾರು ರೀತಿಯಲ್ಲಿ ಸಾಮಾಜಿಕವಾಗಿ, ಭಾವನಾತ್ಮಕ, ನಡವಳಿಕಾ ಸಮಸ್ಯೆಗಳನ್ನು ಬೆಳೆಸಿಕೊಳ್ಳುತ್ತಾರೆ. ಯಾವಾಗಲೂ ತಂದೆ-ತಾಯಿಯರ ಜಗಳ ಅವಾಚ್ಯ ಶಬ್ದಗಳ ಬಳಕೆ, ಒಬ್ಬರಿಗೊಬ್ಬರ ಮೇಲಿರುವ ಸಂಶಯ, ಸಿಟ್ಟು, ಅಸಹನೆ ಮೊದಲಾದವುಗಳನ್ನು ನೋಡುತ್ತಾ ದಾಂಪತ್ಯವೆಂದರೆ ಇದೇನಾ ಎನ್ನುವ ಪ್ರಶ್ನೆ ಉಂಟುಮಾಡುತ್ತದೆ. ಸಂಬಂಧಗಳಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ. ಇತರರೊಂದಿಗೆ ಹೊಂದಾಣಿಕೆಯ ಜೀವನ ಕಷ್ಟಸಾಧ್ಯವಾಗುತ್ತದೆ. ಸಣ್ಣ ವಯಸ್ಸಿನಲ್ಲಿ ಸುಂದರ ಬಾಲ್ಯದ ಬದಲಿಗೆ ಸಿಗುವ ಜವಾಬ್ದಾರಿಗಳ ಹೊಣೆ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತದೆ. ಈ ರೀತಿ ಮದ್ಯವ್ಯಸನದಿಂದಾಗಿ ವ್ಯಕ್ತಿಯು ಜೀವನದಲ್ಲಿ ಸಂಗಾತಿಯೊಂದಿಗೆ ಅಸಂತೃಪ್ತಿಯ ಜೀವನ ನಡೆಸುತ್ತಾನೆ. ಹಾಗೂ ಹೆಂಡತಿಯೂ ಗಂಡನೊಂದಿಗೆ ಕೊರಗುತ್ತಾ ಜೀವನ ಮುಂದುವರೆಸುತ್ತಾಳೆ ಅಥವಾ ಗಟ್ಟಿ ನಿರ್ಧಾರದೊಂದಿಗೆ ಆತನಿಂದ ದೂರವಾಗುತ್ತಾಳೆ.