✍🏼 ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿಗಳು ಮತ್ತು ಆಪ್ತಸಮಾಲೋಚಕರು ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ
೨೮ ವರ್ಷದ ಮಹಿಳೆ ತಾಯಿ ತಂದೆ ಮತ್ತು ಗಂಡನೊಂದಿಗೆ ಆಸ್ಪತ್ರೆಗೆ ವೈವಾಹಿಕ ಅಪ್ತಸಮಾಲೋಚನೆಗೆ ಆಗಮಿಸುತ್ತಾಳೆ, ೨ ವರ್ಷದ ಹಿಂದೆ ಮದುವೆ ಮಾಡಿ ಎಂಜಿನಿಯರ್ ಗಂಡನೊಂದಿಗೆ ಬೆಂಗಳೂರಿಗೆ ಹೋಗಿರುತಾಳೆ. ಕಂಪ್ಯೂಟರ್ ಸಾಯನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಈಕೆ ಮದುವೆಯ ೬ ತಿಂಗಳಲ್ಲೇ ತಾಯಿ ಮನೆಗೆ ವಾಪಾಸಾಗಿದ್ದಾಳೆ. ಕಾರಣ ತಾಯಿ ತನ್ನೊಂದಿಗೆ ಬೆಂಗಳೂರಿಗೆ ಆಗಮಿಸಿದರೆ ನಾನು ಹೋಗುತ್ತೇನೆ ಯಾಕೆಂದರೆ ಇಷ್ಟೊಂದು ಓದಿರುವ ನಾನು ಬೆಂಗಳೂರಿನಂತಹ ನಗರದಲ್ಲಿ ಉದ್ಯೋಗ ಮಾಡದೇ ಇರುವುದು ನನ್ನ ಸ್ವಾಭಿಮಾನ ಕ್ಕೇ ಧಕ್ಕೆ. ಆದರೆ ಮನೆ ಮತ್ತು ಉದ್ಯೋಗ ಎರಡು ಒಟ್ಟಿಗೆ ಕಷ್ಟ ಸಾದ್ಯ. ಅಮ್ಮ ನಾನು ಬೆಂಗಳೂರಿನಲ್ಲಿ ಗಂಡನೊಂದಿಗೆ ಇರಬೇಕೆಂದರೆ ನೀನು ನನ್ನೊಂದಿಗೆ ಬರುವುದೊಂದೆ ದಾರಿ ಎಂದು ಹಠಬಿದ್ದು ಕೂತಿದ್ದಾಳೆ. ಕೃಷಿ ತೋಟ ಹಸುರಿನ ಮದ್ಯೆ ಹೊಂದಿರುವ ದಂಪತಿಗಳು ಮಗಳ ಈ ಹಠದಿಂದ ಕಂಗಾಲಾಗಿ ಬುದ್ದಿ ಹೇಳುವಂತೆ ಆಸ್ಪತ್ರೆಗೆ ಕರೆ ತಂದಿದ್ದಾರೆ.
೩೫ ವರ್ಷದ ಯುವಕ ಗಂಡ ಹೆಂಡತಿ ವಿವಾಹ ವಿಚ್ಛೇದನಕ್ಕೆ ಮೊರೆ ಹೋದಾಗ ನ್ಯಾಯಾಲಯ ವಿಚ್ಛೇದನದ ಬದಲು ಅಪ್ತಸಮಾಲೋಚನೆ ಮೂಲಕ ತಿಳಿ ಹೇಳಿ ಸಂದಾನ ನಡೆಸಬಹುದೇನೋ ಎಂದು ನಮ್ಮಲ್ಲಿ ಕಳುಹಿಸಿದೆ. ಮಾತನಾಡುವಾಗ ಹೆಂಡತಿಯ ಗೊಳೆಂದರೆ ಮದುವೆಯಾದ ೫ ವರ್ಷದಲ್ಲಿ ಸುಮಾರು ೮ ಕೆಲಸ ಬದಲಿಸುತ್ತಾರೆ.. MBA ಪದವಿ ಹೊಂದಿರುವ ಇವರು ತುಂಬಾ ತೀಕ್ಷ್ಣ ಮತಿಯವರು. ಕೆಲಸದ ಪ್ರಾರಂಭದಲ್ಲಿ ಎಲ್ಲರಿಂದಲೂ ಶಹಬ್ಬಾಸ್ ಎನಿಸಿಕೊಳ್ಳುವ ಇವರು ಯಾರಾದರೂ ಇವರ ಕೆಲಸದಲ್ಲಿ ಸಣ್ಣ ತಪ್ಪನ್ನು ತೋರಿಸಿಕೊಟ್ಟರೂ ಸಹಿಸಲಾಗುವುದಿಲ್ಲ. ಸಣ್ಣ ಟೀಕೆಗೂ ತುಂಬಾ ವಿಚಲಿತರಾಗಿ ಬಿಡುತ್ತಾರೆ. ತನ್ನ ಬಗ್ಗೆ ಒಂದೇ ಒಂದು ಟೀಕೆಯನ್ನು ತಡೆಯಲಾಗದೆ ಎಷ್ಟೇ ಒಳ್ಳೆಯ ಕೆಲಸವಾದರೂ ಕ್ಷಣಾರ್ಧದಲ್ಲಿ ರಾಜೀನಾಮೆ ಕೊಟ್ಟು ಬಂದಿರುತ್ತಾರೆ. ಇಂತಹ ವ್ಯಕ್ತಿಯೊಂದಿಗೆ ಜೀವನ ನಡೆಸುವುದಾದರೂ ಏನು? ಈ 2 ಘಟನೆಗಳು ನಮಗೆ ನಮ್ಮ ಇಂದಿನ ಮಕ್ಕಳ ಪೋಷಣೆಯ ಬಗ್ಗೆ ಮರುಚಿಂತನೆಯತ್ತ ಒಲವು ತೋರಿಸುತ್ತಿವೆ. ಮಕ್ಕಳ ಬೆಳವಣಿಗೆಯಲ್ಲಿ ಕಷ್ಟ ಕಾರ್ಪಣ್ಯದಿಂದ ಬೆಳೆದು ಬಂದ ತಂದೆ-ತಾಯಿಯರು ತಮ್ಮ ಮಕ್ಕಳು ಜೀವನದಲ್ಲಿ ತಾವು ಪಟ್ಟಂತಹ ಕಷ್ಟ ಕಾರ್ಪಣ್ಯಗಳು ತಮ್ಮ ಮಕ್ಕಳಿಗೆ ಬರಬಾರದೆಂದು ಮಕ್ಕಳ ಎಳೆಯ ಮನಸ್ಸಿನಲ್ಲಿಂತಯೇ ಕಷ್ಟವೆಂದರೆ ಬಡತನ. ಬಡತನದಿಂದ ದೂರವಿರಬೇಕೆಂದರೆ ನೀವು ಚೆನ್ನಾಗಿ ಓದು. ಓದಿ ಒಳ್ಳೆಯ ಉದ್ಯೋಗ ಪಡೆದಲ್ಲಿ ನಿಮ್ಮ ಜೀವನದಲ್ಲಿ ಹಣ ಸಂಪತ್ತು, ಯಶಸ್ಸು ಎಲ್ಲವು ದೊರೆಯುತ್ತದೆ. ದುಡ್ಡಿದ್ದಲ್ಲಿ ಎಲ್ಲವನ್ನು ಸಂಪಾದಿಸಬಹುದು ಎನ್ನುವ ಮಾತು ಪ್ರತಿಬಾರಿ ಹೇಳುತ್ತಿರುತ್ತಾರೆ. ನೀವು ಓದಿ ಒಳ್ಳೆಯ ಅಂಕಗಳಿಸಿದರೆ ಸಾಕು ನೀವು ಏನು ಮನೆಗೆಲಸ ಮಾಡುವುದು ಬೇಡ. ನೀವು ಯಾವುದೇ ಸಮಾರಂಭಗಳಿಗೆ ಹೋಗುವುದು ಮುಖ್ಯವಲ್ಲ. ನಿಮ್ಮ ಮಕ್ಕಳೊಂದಿಗೆ ಆಟವಾಡುವುದು, ಬೆರೆಯುವುದು ಎಲ್ಲವೂ ಕಾಲಹರಣ. ನೀನು ಚೆನ್ನಾಗಿ ಓದು ದೊಡ್ಡ ಜನವಾಗು. ತಂದೆತಾಯಿಯ ಈ ನಿಲುವಿನಿಂದಾಗಿ ಜೀವನದಲ್ಲಿ ಓದು ಮತ್ತು ಒಂದು ಒಳ್ಳೆಯ ಹುದ್ದೆಯ ಅಲಂಕಾರವೇ ಜೀವನದ ಗುರಿ ಎಂದು ಹೊರಟ ಮಕ್ಕಳು ಪುಸ್ತಕದ ಹುಳುವಿನಂತಾಗಿ ಬಿಡುತ್ತಾರೆ. ಹೊರಜಗತ್ತಿನ ಪರಿಚಯವೇ ಇರುವುದಿಲ್ಲ. ಅವರ ಸುತ್ತ ಮುತ್ತ ಸಮಾಜದಲ್ಲಿ ಹಣದ ಪ್ರಬಲತೆಯಿಂದ ಜನರ ನಡವಳಿಕೆ ಗಮನಿಸಿ ಮಕ್ಕಳಿಗೂ ತಂದೆತಾಯಿಯರವಾದ ಸರಿಯೆನಿಸುತ್ತದೆ.
ಓದಿ ಹುದ್ದೆ ಅಥವಾ ಒಂದು ಹಂತಕ್ಕೆ ಬೆಳೆದ ಮಕ್ಕಳು ತದ ನಂತರ ಹಂತಹಂತವಾಗಿ ಕಷ್ಟಪಡುವುದು ನಮ್ಮ ಗಮನಕ್ಕೆ ಬರುತ್ತದೆ. ಉನ್ನತ ವಿದ್ಯೆಗಾಗಿ ಹಾಸ್ಟೆಲ್ ಜೀವನಕ್ಕೆ ಹೋಗಿ ಹೊಂದಾಣಿಕೆಯಾಗದೆ ಕಷ್ಟಪಡುವುದು. ಯಾವಾಗಲೂ ಬಂಧಿಯಾಗಿದ್ದ ಮಗು ಮನೆಯಿಂದ ಹೊರಬಂದಕೂಡಲೇ ಸ್ವೇಚ್ಛಾಚಾರ ಜೀವನದತ್ತ ಮುಖಮಾಡುವುದು. ಸ್ನೇಹಿತರು, ಪಾರ್ಟಿ ಕ್ಲಬ್, ಮಧ್ಯ,ಗಾಂಜಾ ಸೇವನೆಯತ್ತ ಒಲವು ತೋರಿಸುವುದು. ಸಾಮಾಜಿಕ ಜಾಲತಾಣ, ಆನ್ಲೈನ್ ಗೆಮ್ಸ್, ಕಾಲಹರಣ ಮಾಡಿ ತಮ್ಮ ಗುರಿ ತಲುಪುವ ಮೊದಲೇ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುವುದು.
ಇನ್ನೊಂದೆಡೆ ಕೆಲವರು ವಿದ್ಯಾಭ್ಯಾಸವನ್ನೆನೋ ಮುಗಿಸಿ ಉದ್ಯೋಗವನ್ನೇನೋ ಪಡೆಯುತ್ತಾರೆ ಆದರೆ ಕೆಲಸದಲ್ಲಿ ಹೊಂದಾಣಿಕೆ ಸಮಸ್ಯೆ, ಕೆಲಸದಲ್ಲಿಯ ಟಾರ್ಗೆಟ್ ತಲುಪದೆ ಅತಿಯಾದ ಒತ್ತಡಕ್ಕೆ ಸಿಲುಕುವುದು. ಮದುವೆ ಸಂಗಾತಿಯೊಂದಿಗೆ ಹೊಂದಾಣಿಕೆ ಸಮಸ್ಯೆ. ಸಣ್ಣ ಸಣ್ಣ ಟೀಕೆಗಳಿಗೂ ವಿಚಲಿತರಾಗುವುದು. ಈ ಎಲ್ಲಾ ಸಮಸ್ಯೆಗಳ ಮೂಲಗಳನ್ನು ಗಮನಿಸುತ್ತಾ ಹೋದರೆ ನಾವು ಮಕ್ಕಳ ಪೋಷಣೆಯಲ್ಲಿ ಎಡವಿರುವುದು ಗಮನಕ್ಕೆ ಬರುತ್ತದೆ.
ಜೀವನದಲ್ಲಿ ಉದ್ಯೋಗ ಸ್ಥಾನಮಾನ ಹಾಗೂ ಹಣವೇ ಎಲ್ಲವನ್ನು ನೀಡುತ್ತದೆ ಎಂಬುದು ಸುಳ್ಳು. ಮನುಜನಿಗೆ ಬೇಕಾಗಿರುವುದು ನೆಮ್ಮದಿಯ ಬದುಕು ಇನ್ನೊಬ್ಬೊರೊಂದಿಗೆ ತನ್ನನ್ನು ಹೋಲಿಸಿಕೊಳ್ಳದಿರುವುದು, ಇದ್ದುದರಲ್ಲಿ ಖುಷಿಯಿಂದಿರುವುದು, ಸಣ್ಣಪುಟ್ಟ ತ್ಯಾಗಗಳ ಮೂಲಕ ಖುಷಿ ಪಡೆಯುವುದು. ಜೀವನಕ್ಕೆ ಹೆಚ್ಚು ಮೌಲ್ಯ ನೀಡುತ್ತದೆ.