ಪರೀಕ್ಷಾ ಆತಂಕ ಎದುರಿಸುವುದು ಹೇಗೆ ?
ಮೊದಮೊದಲು ನಾನು ನನ್ನ ವೃತ್ತಿಯನ್ನು ಪ್ರಾರಂಭಿಸಿದಾಗ ಹೆಚ್ಚಾಗಿ ಫೆಬ್ರವರಿ ಮಾರ್ಚ್ನಲ್ಲಿ ಮಕ್ಕಳು ಪರೀಕ್ಷಾ ಆತಂಕದಿಂದ ಬರುತ್ತಿದ್ದರು .ಈಗ ನಾನು ನೋಡುತ್ತಿರುವುದೇನೆಂದರೆ ಜುಲೈ ಆಗಸ್ಟ್ ತಿಂಗಳಿನಿಂದಲೇ ಪರೀಕ್ಷೆಯ ಹೆದರಿಕೆಗೆ ಮಕ್ಕಳು ಬರಲಾರಂಭಿಸಿದ್ದಾರೆ .ಕಾರಣ ಏನು ಎಂದು ಯೋಚಿಸುತ್ತಾ ಇದ್ದೆ ..ಅಪ್ಪ ಅಮ್ಮಂದಿರ ಮಹತ್ವಾಕಾಂಕ್ಷೆ ,ಮಕ್ಕಳು ಮಕ್ಕಳ ನಡುವೆ ಅತಿಯಾದ ಸ್ಪರ್ಧಾ ಮನೋಭಾವ ಇವೆರಡೂ ಸಾಲದೆಂಬಂತೆ ಶಾಲೆಯವರಿಂದ ಒತ್ತಡ ..
ನಿನ್ನೆ ಅವಿನಾಶ್ ಬಂದಿದ್ದ ಮೊದಲ ಪಿಯುಸಿ ವಿದ್ಯಾರ್ಥಿ ..ಈತ ಸಾಯನ್ಸ್ ಸ್ಟ್ರೀಮ್ ನಲ್ಲಿದ್ದಾನೆ ..ಎಂಬಿಬಿಎಸ್ ಮಾಡಲೇ ಬೇಕಂತೆ ..ಅದಕ್ಕೋಸ್ಕರ ಸಂಜೆ ಹೊತ್ತು ನೀಟ್ ಕೋಚಿಂಗ್ ಗೆ ಹೋಗುತ್ತಾನೆ ..ಬೆಳಗ್ಗಿನ ಹೊತ್ತು ಶಾಲೆ ..ಒಟ್ಟಾರೆ ದಿನಕ್ಕೆ ೧೦_೧೧ ಗಂಟೆ ಕ್ಲಾಸುಗಳನ್ನು ಅಟೆಂಡ್ ಮಾಡುತ್ತಾನೆ ..ಆಮೇಲೆ ಬಂದು ಸುಮಾರು ಮೂರು ರಿಂದ ನಾಲ್ಕು ಗಂಟೆ ಓದುತ್ತಾನೆ ..ಇನ್ನು ಒಂದೂವರೆ ವರ್ಷ ಕೇವಲ ನಾಲ್ಕರಿಂದ ಐದು ಗಂಟೆ ನಿದ್ದೆ ಮಾಡುತ್ತೇನೆ ಎಂದು ಶಪಥ ಮಾಡಿದ್ದಾನಂತೆ..comfort zone ನಲ್ಲಿ ಇದ್ದರೆ ಯಾವುದೇ ಮಹತ್ಕಾರ್ಯಗಳನ್ನು ಸಾಧಿಸಲು ಆಗುವುದಿಲ್ಲ ಸರ್ ನೆನಪಿರಲಿ ಎಂದು ಹೇಳಿದ್ದ ..ಈಗ ಬಂದಿರುವ ಉದ್ದೇಶ ಏನು ಕೇಳಿದೆ …ಸಾರ್ ನಾನು ಓದಿದ್ದೆಲ್ಲ ನನಗೆ ನೆನಪು ಉಳಿಯುತ್ತಿಲ್ಲ ನಿನ್ನೆ ನಮ್ಮ ಕೋಚಿಂಗ್ ಸೆಂಟರ್ ನಲ್ಲಿ ಎಕ್ಸಾಮ್ ಇತ್ತು ಎಷ್ಟೋ ವಿಷಯಗಳು ನನಗೆ ಗೊತ್ತಿದೆ ಆದರೆ ಅದನ್ನು ಬರೆಯಲು ಆಗಲಿಲ್ಲ ..ನಾನೇನು ಮಾಡಬೇಕು ತಿಳಿಸಿ ..ನಾನು ಕೋಚಿಂಗ್ ನಿಂದ ಬಂದ ಕೂಡಲೇ ನಾಲ್ಕು ಗಂಟೆ ಮಲಗಿಬಿಡುತ್ತೇನೆ ..ಮಧ್ಯ ರಾತ್ರಿ ಒಂದು ಗಂಟೆಯಿಂದ ಐದು ಗಂಟೆಯವರೆಗೆ ಓದುತ್ತೇನೆ ..ಆಗ ಎಲ್ಲ ನೆನಪಿರುತ್ತದೆ .ಪರೀಕ್ಷೆಯ ಹಾಲ್ಗೆ ಹೋದಾಗ ಮಾತ್ರ ಎಲ್ಲ ಮರೆತು ಬಿಡುತ್ತೇನೆ ..ಬಹಳ ಹೆದರಿಕೆಯಾಗುತ್ತಿದೆ ..ಇಷ್ಟೆಲ್ಲ ಓದಿ ಕಷ್ಟಪಟ್ಟು ಕೊನೆಗೆ ಮೊದಲ ನೂರು ರ್ಯಾಂಕ್ ನಲ್ಲಿ ಬಾರದೇ ಇದ್ದರೆ ಏನು ಪ್ರಯೋಜನ ?ಅಪ್ಪ ಅಮ್ಮ ನೋಡಿದರೆ ಯಾವಾಗಲೂ ನನ್ನನ್ನು ಪೀಡಿಸುತ್ತಾರೆ ಕನಿಷ್ಠ ಆರು ಗಂಟೆ ಮಲಗಬೇಕು ಅಂತ ..ಸರಿಯಾಗಿ ಮಲಗದೆ ಇರುವುದರಿಂದಲೇ ಮಾರ್ಕ್ ಬರುತ್ತಿಲ್ಲ ಅಂತ ನನಗೆ ಹೇಳುತ್ತಾರೆ ..ಓದುವ ಮಗುವನ್ನು discourage ಮಾಡುವ ಅಪ್ಪ ಅಮ್ಮನನ್ನು ನೀವು ನೋಡಿದ್ದೀರಾ ಸರ್ ..ನನ್ನ ಸುದ್ದಿಗೆ ಇವರು ಬರಲೇಬಾರದು ..ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಲು ಹೇಳಿ ಸರ್ ..
ಈ ಪರೀಕ್ಷೆ ಆತಂಕ ಎಲ್ಲಿಯವರೆಗೆ ಬರುತ್ತಿದೇ ನೋಡಿ ..ಮಕ್ಕಳು ತಮಗೆ ತಾವು ಕೆಲವು ಟಾರ್ಗೆಟ್ಗಳನ್ನು ಹಾಕಿಕೊಳ್ಳುತ್ತಿದ್ದಾರೆ ..ಬೇರೆಯವರ ಒಟ್ಟಿಗೆ ತಮ್ಮನ್ನು ಕಂಪೇರ್ ಮಾಡಿಕೊಳ್ಳುತ್ತಿದ್ದಾರೆ ..ತಾವೇ ಏನೇನೋ ಯೋಚನೆ ಮಾಡುತ್ತಿದ್ದಾರೆ ಅಷ್ಟು ಓದಬೇಕು ಎಷ್ಟು ಓದಬೇಕು ಅಷ್ಟು ಗಂಟೆ ಇಷ್ಟು ಗಂಟೆ ಅಂತ ..ಒಬ್ಬೊಬ್ಬರ ಸಾಮರ್ಥ್ಯ ಒಂದೊಂದು ರೀತಿ ಇರುತ್ತದೆ ..ಯಾರೋ ಒಬ್ಬರು ದಿನಕ್ಕೆ ಎಂಟು ಗಂಟೆ ಓದಿ ರ್ಯಾಂಕ್ ಬಂದರು ಅಂದರೆ ಇನ್ನೊಬ್ಬರು ಅಷ್ಟೇ ಓದಬೇಕು ಅಂತ ಇಲ್ಲ ..ಹಾಗೆಯೇ ಯಾರೋ ಒಬ್ಬರು ಒಂದು ಕೋಚಿಂಗ್ ಕ್ಲಾಸ್ಗೆ ಹೋಗಿ ನೀಟ್ ನಲ್ಲಿ ಸೀಟ್ ತೆಗೆದರು ಅಂದರೆ ಇನ್ನೊಬ್ಬರು ಹಾಗೆ ತೆಗೆಯಬೇಕು ಅಂತ ಇಲ್ಲ ..ಹಾಗೆಯೇ ಎಂಬಿಬಿಎಸ್ ಸೀಟ್ ತೆಗೆಯುವುದೇ ಜೀವನ ಮರಣದ ಪ್ರಶ್ನೆ ಕೂಡ ಅಲ್ಲ ..ಇದರ ಅರ್ಥ ಮಕ್ಕಳೇ,” ನೀವು ಓದಬೇಡಿ ಅಂತ ನಾನು ಹೇಳುತ್ತಿಲ್ಲ “..ವ್ಯವಸ್ಥಿತವಾಗಿ ಓದಿ ಆದರೆ ಅವೈಜ್ಞಾನಿಕವಾಗಿ ಬೇಡ ..ಪ್ರತಿ ದಿನವೂ ತಪ್ಪದೆ ಓದಿ ..ಇನ್ನೊಬ್ಬರೊಡನೆ ತುಲನೆ ಮಾಡಿ ಓದುವುದು ಬೇಡ ..ಆರು ಗಂಟೆ ನಿದ್ರೆ ಅತಿ ಅವಶ್ಯಕ ..ಶಾಲೆಯ ನಂತರ ಒಂದೆರಡು ಗಂಟೆ ನೀಟ್ ಪರೀಕ್ಷೆಗಾಗಿ ..ಮತ್ತು ಬೋರ್ಡ್ ಪರೀಕ್ಷೆಗಾಗಿ ಪ್ರತಿದಿನ ಓದುವುದು ಅತಿ ಅವಶ್ಯಕ ..ರಜೆಯ ದಿನಗಳಲ್ಲಿ ಆರರಿಂದ ಎಂಟು ಗಂಟೆ ಓದಬಹುದು ..ಹಿಂದಿನ ದಿನವೇ ಒಂದು ವೇಳಾಪಟ್ಟಿ ಮಾಡಿಕೊಳ್ಳಿ ..ನಿಮ್ಮ ಸಾಮರ್ಥ್ಯ ನಿಮಗೆ ಗೊತ್ತಿರುತ್ತದೆ ಅದನ್ನು ನೋಡಿ ನಿರ್ಧರಿಸಿ ..
ಕೆಲವೊಮ್ಮೆ ವಾರಗಟ್ಟಲೆ ಓದಲು ಆಗುತ್ತಿಲ್ಲ ,ಓದಲು ಅಲಾರಮ್ ಇಟ್ಟು ಹೇಳದೆ ಹೆಚ್ಚು ಮಲಗುತ್ತಿದ್ದೀರಿ,ಹೆದರಿಕೆ ಅನ್ನಿಸುತ್ತಿದೆ ,ನಿದ್ರೆ ಬರುವುದಿಲ್ಲ ,ಎದೆ ಬಡಿತ ಜಾಸ್ತಿಯಾಗುತ್ತಿದೆ ಅನ್ನಿಸುತ್ತಿದೆ ಇದರ ಅರ್ಥ ನೀವು ಒತ್ತಡಕ್ಕೊಳಗಾಗಿದ್ದಾರೆ ಅಂತ .ಮನೆಯಲ್ಲಿ ಅಥವಾ ಶಾಲೆಯಲ್ಲಿ ಯಾರಾದರೂ ಹಿರಿಯರೊಡನೆ ಮುಕ್ತವಾಗಿ ಮಾತನಾಡಿ .”.ಸಮಸ್ಯೆ ಹಂಚಿಕೊಂಡರೆ ಕಡಿಮೆಯಾಗುತ್ತದೆ, ಮನಸ್ಸಿನಲ್ಲಿ ಇಟ್ಟರೆ ಜಾಸ್ತಿಯಾಗುತ್ತದೆ “..ಆ ಹಿರಿಯರು ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಹಿರಿಯರಾದರೆ ಒಳ್ಳೆಯದು .ಹಿರಿಯರ ಅಲ್ಲದಿದ್ದರೆ ನಿಮ್ಮದೇ ಸೀನಿಯರ್ ಅಥವಾ ಸಹಪಾಠಿಯಾದರೂ ಆಗಬಹುದು ..ಅತಿಯಾದ ಒತ್ತಡವಿರುವ ಸಂದರ್ಭಗಳಲ್ಲಿ ಕೆಲವೊಮ್ಮೆ ಮನೋಶಾಸ್ತ್ರಜ್ಞರ ಸಹಾಯ ಪಡೆಯಬೇಕಾಗಬಹುದು ..ಮನಶಾಸ್ತ್ರಜ್ಞರು ನಿಮ್ಮೊಂದಿಗೆ ಚರ್ಚಿಸಿ ಮನಸ್ಸಿಗೆ ಆರಾಮ ನೀಡುವಂತಹ ಕೆಲವು ವ್ಯಾಯಾಮಗಳನ್ನು ಹೇಳಿಕೊಡಬಹುದು ..breathing exercises..jacobsons progressive muscle relaxation…mindfullness training..ಹೀಗೆ ಹಲವು ಬಗೆಯ ವ್ಯಾಯಾಮಗಳು ವೈಜ್ಞಾನಿಕವಾಗಿ ಹಲವಾರು ಜನರಲ್ಲಿ ಉಪಯೋಗಿಸಲು ಪಟ್ಟು ಆತಂಕ ಒತ್ತಡ ಕಡಿಮೆ ಮಾಡುತ್ತದೆ ಎನ್ನುವುದು ತಿಳಿದು ಬಂದಿದೆ .ಇಂತಹುದನ್ನು ನಿಮ್ಮ ಮನಶಾಸ್ತ್ರಜ್ಞರು ಹೇಳಿಕೊಡುತ್ತಾರೆ ..
ಕೆಲವೊಮ್ಮೆ ಈ ಮಕ್ಕಳು ಆತ್ಮಹತ್ಯೆ ಯೋಚನೆಯನ್ನು ಮಾಡುವುದು ,ಸಣ್ಣಪುಟ್ಟ ಟೆಸ್ಟ್ ಗಳಿಗೆ ಹೋಗದೆ ಮನೆಯಲ್ಲೇ ಇದ್ದು ಬಿಡುವುದು ,ಒಂದೇ ಸಮನೇ ಅಳುತ್ತಾ ಪದೇ ಪದೇ ಮನೆಯವರೊಂದಿಗೆ ಸಿಟ್ಟು ಮಾಡಿಕೊಳ್ಳುತ್ತಿರುವುದು ,ಸಹಪಾಠಿಗಳೊಂದಿಗೆ ಜಗಳ ಮಾಡಿಕೊಳ್ಳುವುದು ,ಮನೆ ಬಿಟ್ಟು ಎಲ್ಲಿಯೂ ಓಡಿ ಹೋಗುವುದು ಮುಂತಾದವುಗಳನ್ನು ಅತಿಯಾಗಿ ಮಾಡುತ್ತಿದ್ದರೆ ಇಂತಹ ಮಕ್ಕಳಿಗೆ ಮಾನಸಿಕ ತಜ್ಞರ ಚಿಕಿತ್ಸೆಯೂ ಬೇಕಾಗಬಹುದು ..ಕೆಲವರು ಎಲ್ಲ ಓದಿರುತ್ತಾರೆ ಪರೀಕ್ಷಾ ಸಂದರ್ಭದಲ್ಲಿ ಮನಸ್ಸು “ಬ್ಲ್ಯಾಂಕ್ “ಆಗಿ ಬಿಟ್ಟಿದೆ ಅನ್ನಲು ತೊಡಗುತ್ತಾರೆ ಇಂತಹ ಮಕ್ಕಳಿಗೆ ಆತಂಕ ನಿವಾರಕ ಹಾಗೂ ಕೈಕಾಲು ನಡುಕ ಹೃದಯ ಬಡಿತ ಮುಂತಾದ ಆತಂಕದ ದೈಹಿಕ ಚಿಹ್ನೆಗಳನ್ನು ಕಡಿಮೆ ಮಾಡುವ ಮಾತ್ರೆಗಳನ್ನು ಕೂಡ ಕೊಡುತ್ತಾರೆ ..ಈ ಮಾತ್ರೆಗಳನ್ನು ಪರೀಕ್ಷೆ ಮುಗಿದ ಕೂಡಲೇ ನಿಲ್ಲಿಸಬಹುದು ..
ಮಕ್ಕಳೇ ಒಂದಂತೂ ಗಮನಿಸಿ ..ಮೊಬೈಲ್ನಿಂದ ದೂರ ಇರುವುದೇ ಒಳ್ಳೆಯದು ..ನೀವು ಅತಿಯಾಗಿ ಮೊಬೈಲ್ ಉಪಯೋಗ ಮಾಡುತ್ತಿದ್ದೀರಿ ಎಂದಾದರೆ ಇದರಿಂದ ಓದಿನಲ್ಲಿ ಹಿನ್ನಡೆ ಬರುವುದು ಖಂಡಿತ .ಮೊಬೈಲ್ ಒಂದು ಅವಶ್ಯಕವಾದ ದೆವ್ವ ..ಕೆಲವೊಮ್ಮೆ ಇದರ ಉಪಯೋಗದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡರೆ ಸಮಯ ವ್ಯರ್ಥವಾಗುವುದು ಗೊತ್ತಾಗುವುದೇ ಇಲ್ಲ ..ಮೊಬೈಲ್ ಗೇಮ್ಸ್ ಗಳು, ಯೂಟ್ಯೂಬ್ ,ಸಿನಿಮಾಗಳ ನೆಟ್ ಫ್ಲಿಕ್ಸ್ , ವಾಟ್ಸಾಪ್ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ನಂತಹ ಸಾಮಾಜಿಕ ಜಾಲತಾಣಗಳು ಮನೋರಂಜನೆಯನ್ನು ಕೊಡುತ್ತವೆ ಆದರೆ ಅಷ್ಟೇ ಸಮಯವನ್ನು ಹಾಳು ಮಾಡುತ್ತದೆ ..ಹಾಗೆಯೇ ಮನೆಯಲ್ಲಿರುವ ಟಿವಿ ಕೂಡಾ ..ಕೊಠಡಿಯಲ್ಲಿರುವ ಲ್ಯಾಪ್ಟಾಪಿನ ಬಗ್ಗೆ ಕೂಡ ಎಚ್ಚರವಿರಲಿ .ಈ ಎಲ್ಲ ಆವಿಷ್ಕಾರಗಳು ಮನುಷ್ಯನ ಸಮಯ ಉಳಿಸುತ್ತದೆ ಅಂದುಕೊಂಡರೆ ಅದು ಬಹಳ ದೊಡ್ಡ ತಪ್ಪು ..ನಮ್ಮ ಸಮಯವನ್ನು ಹಾಳು ಮಾಡುವ ಅತ್ಯಂತ ದೊಡ್ಡ ಸಾಧನಗಳು ಇವು ..
ತಾಯಿ ತಂದೆಯರ ಕರ್ತವ್ಯಗಳು
-ದಯವಿಟ್ಟು ಮಕ್ಕಳ ಮೇಲೆ ಒತ್ತಡ ಹಾಕಬೇಡಿ
-ಮಕ್ಕಳಿಗೆ ಇಷ್ಟವಿಲ್ಲದಿದ್ದರೆ ಅವರಿಗೆ ಕೋಚಿಂಗ್ ಸೆಂಟರ್ಗಳಿಗೆ ಹಾಕಬೇಡಿ
-ಕನಿಷ್ಠ ಆರು ಗಂಟೆ ಮಲಗಲೇಬೇಕು ..
-ಮಕ್ಕಳ ಮಕ್ಕಳ ನಡುವೆ ತುಲನೆ ಬೇಡ
-ಮಕ್ಕಳು ಕೇಳಿದರೆ ಅವರನ್ನು ಮನಶಾಸ್ತ್ರಜ್ಞರು ಅಥವಾ ಮನೋವೈದ್ಯರ ಹತ್ತಿರ ಕರೆದುಕೊಂಡು ಹೋಗಿ
-ಆತ್ಮಹತ್ಯೆಯ ಬಗ್ಗೆ ಮಾತನಾಡುವ ಮಗು ,ಇತ್ತೀಚೆಗೆ ಬಹಳಷ್ಟು ಸಪ್ಪೆಯಾಗಿ ಕುಳಿತುಕೊಳ್ಳುವ ಮಗು ,ಸಣ್ಣ ಸಣ್ಣ ವಿಷಯಗಳಿಗೆ ಸಿಟ್ಟು ಮಾಡಿಕೊಳ್ಳುತ್ತಿರುವ ಮಗು ಇಂತಹ ಮಕ್ಕಳಿಗೆ ಮನೋವೈದ್ಯರ ಸಲಹೆ ಅಗತ್ಯ ..
-ಮಗು ವೈದ್ಯ ಆಗಲಿ ಎಂಜಿನಿಯರ್ ಆಗಲಿ ಇಲ್ಲವೇ ಅಕೌಂಟೆಂಟ್ ಆಗಲಿ..ಮೊದಲು ಮಾನವನಾಗಲಿ..ಇದನ್ನು ದಯವಿಟ್ಟು ನೆನಪಿನಲ್ಲಿ ಇಡಿ ..
ಈ ವರ್ಷಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಮಕ್ಕಳು ಬಹಳಷ್ಟು ನಿರ್ಲಕ್ಷ್ಯಮಾಡುತ್ತಾರೆ ಆದರೆ ಮಕ್ಕಳ ಒತ್ತಡ ಕಡಿಮೆ ಮಾಡಿಕೊಳ್ಳಲು ಪಠ್ಯೇತರ ಚಟುವಟಿಕೆಗಳು ಕೂಡ ಬಹಳ ಮುಖ್ಯ
ಶಿಕ್ಷಕರ ಕರ್ತವ್ಯಗಳು
-ಮಕ್ಕಳನ್ನು ಮೂದಲಿಸಿ ಮಾತನಾಡಬೇಡಿ
-ಮಕ್ಕಳ ಖಾಸಗಿ ಜೀವನದಲ್ಲಿ ಕೈಹಾಕಬೇಡಿ ಏನೋ ತಪ್ಪು ಮಾಡುತ್ತಿದ್ದಾರೆ ಎಂದು ಎನಿಸಿದರೆ ತಾಯಿ ತಂದೆಯರಿಗೆ ಕರೆದು ಹೇಳಿ ..ಅದು ಬಿಟ್ಟು ಇತರ ಮಕ್ಕಳೊಂದಿಗೆ ಆ ಬಗ್ಗೆ ಮಾತನಾಡುವುದು, ಅವರಿಗೆ ಬೈಯುವುದು ಸಲ್ಲದು ..
-ಮಕ್ಕಳ ಸಮಸ್ಯೆಗಳನ್ನು ಕೇಳುವ ಒಂದು ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ .ಕೆಲವೊಮ್ಮೆ ಮನೆಯ ಸಮಸ್ಯೆಯಿಂದಲೋ ಮನಸ್ಸಿನ ಸಮಸ್ಯೆಯಿಂದಲೋ ಈ ಮಕ್ಕಳು ಬಳಲುತ್ತಿರುತ್ತಾರೆ ಆದರೆ ಅದನ್ನು ಕೇಳುವ ಬಗ್ಗೆ ಯಾರೂ ಕೂಡ ಯೋಚನೆ ಮಾಡುವುದಿಲ್ಲ ..
-ಮಕ್ಕಳನ್ನು ತಾಯಿ ತಂದೆಯರು ಶಾಲೆಗೆ ಕಲಿಸಿಕೊಡುವುದು ಅವರನ್ನು “ಪರಿಪೂರ್ಣ “ಮನುಷ್ಯರನ್ನಾಗಿ ಮಾಡಲು ಮಾರ್ಕ್ಸ್ ತೆಗೆಯುವ ಯಂತ್ರಗಳನ್ನಾಗಿ ಮಾಡಲು ಅಲ್ಲ ನೆನಪಿರಲಿ ..
ಡಾ.ಪಿವಿ ಭಂಡಾರಿ ಮನೋವೈದ್ಯರು ಉಡುಪಿ