ಈ ಹಿಂದೆಯೂ ಕೂಡ ಈ ಬಗ್ಗೆ ಲೇಖನಗಳನ್ನು ಬರೆದಿದ್ದೇನೆ. ಆದರೆ ಇಂದು ಈ ಲೇಖನ ಬರೆಯಲು ಮುಖ್ಯ ಕಾರಣ ಈ ಹಿಂದೆ
ಪ್ರತಿದಿನ ಒಂದು ಪೆಗ್ ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಿದ್ದ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ 2025
ರಲ್ಲಿ ತನ್ನ ನಿಲುವು ಬದಲಿಸಿರುವುದನ್ನು ಜನಸಾಮಾನ್ಯರಿಗೆ ತಿಳಿಸಲು. ಹೌದು ಬಹಳಷ್ಟು ವರ್ಷಗಳಿಂದ Peg a day keeps heart
attacks away ಎಂಬ ಮಾತು ಹಲವು ವೈದ್ಯರು ಸೇರಿ ಜನಸಾಮಾನ್ಯರಿಗೆ ತಿಳಿಸುತ್ತಿದ್ದರು. ಈಗ ಸಂಶೋಧನೆಗಳು ಬೇರೆಯೇ
ಹೇಳುತ್ತಿವೆ.
New 2025 update “No Amount of Alcohol(wine)benefits the heart .. alcohol use and cardiovascular disease: a
scientific statement from the American heart association ಇದು ಅಮೆರಿಕದಿಂದ ಬಂದಿರುವುದು.. ಶಂಖದಿಂದ ಬಂದರೆ ಮಾತ್ರ
ತೀರ್ಥ ಅಲ್ಲವೇ!!
ಈ ಲೇಖನದ ಪ್ರಕಾರ ಮದ್ಯಪಾನ ರಕ್ತದ ಒತ್ತಡವನ್ನು ಹೆಚ್ಚಿಸಬಹುದು ಹಾಗೂ ಇದರಿಂದಾಗಿ ಹೃದಯದ ಮೇಲೆ ಹೆಚ್ಚುವರಿ
ಒತ್ತಡ ಉಂಟಾಗುತ್ತದೆ.ಮದ್ಯಪಾನ ಹೃದಯ ಬಡಿತದ ಅಸಮಾನತೆಯನ್ನು ಉಂಟುಮಾಡುತ್ತದೆ. ಇದನ್ನು ವೈದ್ಯಕೀಯ
ಭಾಷೆಯಲ್ಲಿ arrhythmia ಎಂದು ಕರೆಯುತ್ತಾರೆ. ಹೃದಯಬಡಿತದಲ್ಲಿ ಅಸಮಾನತೆ ಉಂಟಾದಾಗ ಹೃದಯಾಘಾತ ಅಥವಾ
ಸ್ಟ್ರೋಕ್ ಉಂಟಾಗಬಹುದು.
ಹೆಚ್ಚಿನವರು ಪ್ರಾರಂಭಿಸುವಾಗ ಒಂದು ಪೆಗ್ ಎಂದು ಪ್ರಾರಂಭಿಸಿ ಒಂದು “ಪೆಗ್” ನಲ್ಲಿ ಕುಡಿತ ಅವರಿಗೆ ನಿಲ್ಲಿಸಲು ಆಗುವುದಿಲ್ಲ.
ಪ್ರತಿ ದಿನ ಮದ್ಯಪಾನ ಮಾಡಲು ತೊಡಗುತ್ತಾರೆ. ನಿರಂತರ ಮದ್ಯಪಾನವೂ ಹೃದಯದ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.
ಹೃದಯ ಒಂದು “ಪಂಪ್ “ಇದ್ದ ಹಾಗೆ. ದೇಹದ ಬೇರೆ ಬೇರೆ ಭಾಗಗಳಿಗೆ ರಕ್ತವನ್ನು ಇದು ಪಂಪ್ ಮಾಡುತ್ತದೆ. ಈ ಪಂಪ್ ದುರ್ಬಲವಾಗಿ ಬಿಡುತ್ತದೆ. ಇದನ್ನು cardiomyopathy ಎಂದು ಕರೆಯುತ್ತೇವೆ. ಈ ಕಾರಣದಿಂದ ಮದ್ಯ ವ್ಯಸನಿಯು ಸ್ವಲ್ಪ ನಡೆದರೂ ಸುಸ್ತಾಗಿ ಬಿಡುತ್ತಾನೆ. ದಮ್ಮು ಬಂದಹಾಗೆ ಅನ್ನಿಸುತ್ತದೆ. ಸ್ವಲ್ಪ ದೂರ ನಡೆದರೆ ಸುಸ್ತಾಗುತ್ತದೆ. ರಾತ್ರಿ ಮಲಗಿದಾಗ ಸುಸ್ತಿನಿಂದ ಎಚ್ಚರಿಕೆ ಆಗುತ್ತದೆ. ಬರ ಬರುತ್ತಾ ಇವರಲ್ಲಿ ಬಹಳಷ್ಟು ಸುಸ್ತು, ಹೃದಯ ಬಡಿತ ಹೆಚ್ಚಳ ಮತ್ತು ಅನಿಯಮಿತ ಹೃದಯ ಬಡಿತ, ಕೈ ಕಾಲುಗಳಲ್ಲಿ ಊತ, ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು ಆಗುತ್ತದೆ. ಹೃದಯ ದುರ್ಬಲ ಗೊಂಡು ಹೃದಯ ವೈಫಲ್ಯ ಉಂಟಾಗಬಹುದು. ಇವೆಲ್ಲವೂ “ಕಾರಡಿಯೋ ಮಯೋಪತಿ”ಯ ಸಂಕೇತಗಳು. ಕೆಲವರು ಹೇಳುವುದು ಇದೆ “ನಾನು ವಾರದ ಕೊನೆಯಲ್ಲಿ ಮಾತ್ರ ಕುಡಿಯುತ್ತೇನೆ.. ಒತ್ತಡ ಮರೆಯಲು ಕುಡಿಯುತ್ತೇನೆ..”. ಇದು ಕೂಡ ಅಘಾತಕಾರಿ ಎಂದು ಈ ವರದಿ ತಿಳಿಸುತ್ತದೆ. ಒಂದು ದಿನದಲ್ಲಿ ನಾಲ್ಕರಿಂದ 10 ಪೆಗ್ ಒಮ್ಮೆಲೆ ಹೊಡೆದಾಗ ಇದನ್ನು” ಬಿಂಜ್ ಡ್ರಿಂಕಿಂಗ್ “ಎನ್ನುತ್ತಾರೆ.( ಈ ಬಗ್ಗೆ ಹಿಂದೆ ಬರೆದಿದ್ದೇನೆ). ಹಲವು ಯುವಕರು ಈ ವಾರದ ಕೊನೆಯ ಕುಡಿತಕ್ಕೆ ಬಲಿಯಾಗಿ Holiday heart syndrome ಎಂಬ ಒಂದು ಸಮಸ್ಯೆಯೇ ಉಂಟುಮಾಡಿದ್ದಾರೆ. ವಾರದ ಕೊನೆಯಲ್ಲಿ ತೀವ್ರವಾಗಿ ಕುಡಿದು
ಹೃದಯಾಘಾತ, ಸ್ಟ್ರೋಕ್ ಮುಂತಾದ ಸಮಸ್ಯೆಗಳಿಗೆ ತುತ್ತಾಗಿ ಕಷ್ಟಪಡುತ್ತಿದ್ದಾರೆ. ಹೃದಯದ ವಿದ್ಯುತ್ ಕಂಪನದಲ್ಲಿ ಬದಲಾವಣೆಗಳು ಈ ತೀವ್ರ ಮದ್ಯಪಾನದಿಂದ ಉಂಟಾಗುತ್ತದೆ. ಆದ್ದರಿಂದ ವಾರಕ್ಕೊಮ್ಮೆ ಕುಡಿತ ಕೂಡ ನಿಲ್ಲಿಸಬಹುದು ನಿಮ್ಮ ಎದೆ ಬಡಿತ. ಮದ್ಯಪಾನ ಟ್ರೈಗ್ಲಿಸರೈಡ್ ಎಂಬ ಒಂದು ಬಗೆಯ ಕೊಲೆಸ್ಟ್ರಾಲನ್ನು ಹೆಚ್ಚಿಸುತ್ತದೆ, ಇದರ ಅರ್ಥವೆಂದರೆ ದೇಹದ ಉರಿಯುತ ಹೆಚ್ಚಾಗುತ್ತದೆ . ಇದರಿಂದಾಗಿ ಸಕ್ಕರೆ ಕಾಯಿಲೆ ಕ್ಯಾನ್ಸರ್ ಹೃದಯ ರೋಗ ಉಂಟಾಗುವ ಸಂಭವಗಳು ಹೆಚ್ಚು. ಮದ್ಯಪಾನ ನಿದ್ರಾ ಸಮಸ್ಯೆಗಳನ್ನು ಕೂಡ ಉಂಟುಮಾಡುತ್ತದೆ, ನೀವು ತೆಗೆದುಕೊಳ್ಳುವ ಇತರ ಕಾಯಿಲೆಗಳಿಗೆ ಮಾತ್ರೆಗಳು ಸರಿಯಾಗಿ ಕೆಲಸ ಮಾಡದಂತೆ ಮಾಡುತ್ತದೆ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಹಲವು ಬಗೆಯ ಕ್ಯಾನ್ಸರ್ ಗಳನ್ನು ಉಂಟುಮಾಡುತ್ತದೆ. ಇದೆ ಸಂಶೋಧನೆಗಳು ತಿಳಿಸುವುದೇನೆಂದರೆ ಪ್ರತಿದಿನ ಮದ್ಯ ಸೇವನೆ ಮಾಡುವವರಲ್ಲಿ ಪಾರ್ಶ್ವ ವಾಯು ಉಂಟಾಗುವ ಸಾಧ್ಯತೆಗಳು ಸಾಮಾನ್ಯ ಜನರಿಗಿಂತ ಹೆಚ್ಚು.. ಪ್ರತಿದಿನ ಒಂದೆರಡು ಪೆಗ್ ಮಾತ್ರ ಸೇವಿಸುತ್ತೇನೆ ಎನ್ನುವವರು ತಿಳಿದುಕೊಳ್ಳಬೇಕಾದ ವಿಷಯ ಎಂದರೆ ಇದರಿಂದಾಗಿ ನಿಮ್ಮ ಸಿಸ್ಟೋಲಿಕ್ ಮತ್ತು ಡೈಸ್ಟೋಲಿಕ ಬಿಪಿ ಕುಡಿದ ಕೆಲವು ಗಂಟೆಗಳ ಕಾಲ ಹೆಚ್ಚಾಗುತ್ತದೆ. ಇದರಿಂದ ಪಾರ್ಶ್ವವಾಯು ಉಂಟಾಗುವ ಸಾಧ್ಯತೆಗಳು ಹೆಚ್ಚು. ಪ್ರತಿದಿನ ಸ್ವಲ್ಪ ಸ್ವಲ್ಪ ಮದ್ಯಪಾನವು ಹೃದಯದ ರಕ್ತನಾಳಗಳಲ್ಲಿ ಉರಿಯುತವನ್ನು ಹೆಚ್ಚಿಸುತ್ತದೆ ಇದರಿಂದಾಗಿ ಹೃದಯದ ಅಘಾತ ಮತ್ತು ಪಾರ್ಶ್ವವಾಯು ಉಂಟಾಗುತ್ತದೆ ಎಂಬುದನ್ನು ಕೂಡ ತಿಳಿಸುತ್ತದೆ.
ಈ ಲೇಖನದ ಕೊನೆಯಲ್ಲಿ ವೈದ್ಯರು ಏನು ತಿಳಿದುಕೊಳ್ಳಬೇಕು ಎಂಬುದನ್ನು ತಿಳಿಸುತ್ತಾ ಒಂದೇ ಒಂದು ಹನಿ ಮದ್ಯಪಾನ ಕೂಡ ಹೃದಯಕ್ಕೆ ಒಳ್ಳೆಯದಲ್ಲ, ಹೃದಯದ ಆರೋಗ್ಯಕ್ಕಾಗಿ ನಿಮ್ಮ ರೋಗಿಗಳಿಗೆ ಪ್ರತಿದಿನ ನಡಿಗೆ ಅಥವಾ ವ್ಯಾಯಾಮ, ರಕ್ತದ ಒತ್ತಡವನ್ನು ನಿಯಂತ್ರಿಸುವುದು, ತೂಕ ಕಡಿಮೆ ಮಾಡಿಕೊಳ್ಳುವುದು ,ಧೂಮಪಾನ ನಿಲ್ಲಿಸುವುದು ಹಾಗೂ ಆರೋಗ್ಯಕರ ಊಟ ಇದನ್ನು ತಿಳಿಸಿ. ಬಹಳ ಕುಡಿಯುತ್ತಿದ್ದರೆ ಕಡಿಮೆ ಮಾಡಿ ನಿಲ್ಲಿಸಲು ಹೇಳಿ. ಅದರಲ್ಲಿಯೂ ಮಹಿಳೆಯರು ,ವಯೋವೃದ್ಧರು, ಸಕ್ಕರೆ ಕಾಯಿಲೆ ,ಬಿಪಿ ಮತ್ತು ಹೃದಯದ ಸಮಸ್ಯೆಗಳಿಂದ ಬಳಲುತ್ತಿರುವವರು ಮದ್ಯಪಾನವನ್ನು ಮಾಡಲೇಬಾರದು ಎಂದು ತಿಳಿಸಿ. ಇದು ವೈದ್ಯರಿಗೆ ಈ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಲೇಖನದ ಸಂದೇಶ. ಅಲ್ಲಿಗೆ ನಿಲ್ಲಿಸದೆ ರೋಗಿಗಳಿಗೆ ಕೂಡ ಸಲಹೆಯನ್ನು ನೀಡುತ್ತದೆ. ಹೃದಯದ ಆರೋಗ್ಯಕ್ಕಾಗಿ ಕುಡಿಯಲು ಪ್ರಾರಂಭಿಸಬೇಡಿ. ಕುಡಿಯುತ್ತಾ ಇದ್ದರೆ ಅದು ನಿಮ್ಮ ರಕ್ತದೊತ್ತಡ, ಹೃದಯ ಬಡಿತ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ನಿಮ್ಮ ಹೃದಯದ ಆರೋಗ್ಯಕ್ಕಾಗಿ ತಾರ್ಕಿಕವಾಗಿ ಆಲೋಚಿಸಿ ಬುದ್ದಿವಂತಿಕೆಯಿಂದ ಈ ಮದ್ಯಪಾನ ತ್ಯಜಿಸಿ ಎಂದು ಹೇಳುತ್ತದೆ. ಹಾಗೆಯೇ ಮದ್ಯಪಾನ ಸೇವನೆಯಿಂದ ಲಿವರ್ ನ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು, ವಿವಿಧ ಕ್ಯಾನ್ಸರ್ ಗಳು ಉಂಟಾಗುತ್ತದೆ ಆದ್ದರಿಂದ ಮದ್ಯಪಾನ ತ್ಯಜಿಸುವುದೇ ಲೇಸು ಎಂಬುದು ಈ ಲೇಖನದ ಸಾರಾಂಶ. ಈ ಲೇಖನ ಓದಲು ನನಗೆ ಮುಖ್ಯ ಪ್ರೇರಣೆ ಲಿವರ್ ಡಾಕ್ ಎಂದೆ ಪ್ರಚಲಿತರಾಗಿರುವ ಕೇರಳದ ಲಿವರ್ ವೈದ್ಯ ಅಬ್ಬಿ ಫಿಲಿಪ್..








