ಜೀವನದ ಕೊನೆಯ ಹಂತದಲ್ಲಿ ಮಾನವೀಯ ಸ್ಪರ್ಶ
ನಿನ್ನೆಯ ದಿನ ಮಣಿಪಾಲದ ಹಾಸ್ಪಿಸ್ ಮತ್ತು ವಿಶ್ರಾಂತಿ ಕೇಂದ್ರ ಇಲ್ಲಿ ಭೇಟಿ ನೀಡಿದೆ. ಆ ಸಂದರ್ಭದಲ್ಲಿ ಅಲ್ಲಿಯ ನಿರ್ದೇಶಕರು ಮಿತ್ರರಾದ ಡಾ ಸಿಮಾ ರಾವ್ ಅವರು ತಿಳಿಸಿದ ಕೆಲವು ವಿಷಯಗಳು ಜನಸಾಮಾನ್ಯರಿಗೆ ಅರ್ಥವಾಗುವಂತೆ ಬರೆಯುವ
ಅಂದುಕೊಂಡೆ. ಹಾಸ್ಪಿಸ್ ಮತ್ತು ವಿಶ್ರಾಂತಿ ಕೇಂದ್ರ ನಮ್ಮ ದೇಶದಲ್ಲಿ ಇನ್ನೂ ಕೂಡ ನಗರ ಪ್ರದೇಶಗಳಲ್ಲಿ ಮಾತ್ರ ಲಭ್ಯವಿರುವ ಒಂದು ವ್ಯವಸ್ಥೆಯಾಗಿದೆ. ನಮ್ಮ ದೇಶದಲ್ಲಿ ಇದು ಮೊದಲು ಪ್ರಾರಂಭವಾದದ್ದು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ವೆಲ್ಲೂರು ಇಲ್ಲಿ.1986 ರಲ್ಲಿ ಈ ಕೇಂದ್ರವು ಪ್ರಾರಂಭವಾಯಿತು. ಈಗಲೂ ಮುಂಬೈ ,ಬೆಂಗಳೂರು , ಚೆನ್ನೈ ಮುಂತಾದ ನಗರಗಳಲ್ಲಿ ಇದೆ. ಮನುಷ್ಯರಾಗಿ ಹುಟ್ಟಿದ ಮೇಲೆ ನಾವು ಎಲ್ಲರೂ ಜೀವನದ ಕೊನೆಯ ಹಂತದಲ್ಲಿ ಮಾನವೀಯತೆ ಆರೈಕೆ ಮತ್ತು ಗೌರವದಿಂದ
ನಮ್ಮ ಜೀವನವನ್ನು ಮುಗಿಸಲು ಇಚ್ಚಿಸುತ್ತೇವೆ. ತೀವ್ರ ಬಗೆಯ ಖಾಯಿಲೆಗಳು ಅಂದರೆ ಕ್ಯಾನ್ಸರ್ ರೋಗ, ತೀವ್ರ ಬಗೆಯ ಏಡ್ಸ್ರೋ ಗ, ಮರಿಗುಳಿತನ ಅದರಲ್ಲಿಯೂ ಆಲ್ಜಿಮರ್ ಕಾಯಿಲೆ, ಪಾರ್ಕಿನ್ ಸನ್ ಕಾಯಿಲೆ, ತೀವ್ರ ಬಗೆಯ ಹೃದ್ರೋಗಗಳು, ತೀವ್ರ
ಬಗೆಯ ಶ್ವಾಸಕೋಶದ ತೊಂದರೆಗಳು, ತೀವ್ರ ಬಗೆಯ ಕಿಡ್ನಿ ವೈಫಲ್ಯ , ಪಾರ್ಶ್ವ ವಾಯು ಸಮಸ್ಯೆಯಿಂದ ನುಂಗಲು ನಡೆದಾಡಲು, ಓಡಾಡಲು ಕಷ್ಟ ಪಡುತ್ತಿರುವವರು, ರಸ್ತೆ ಅಪಘಾತದಿಂದಾಗಿ ಹಾಸಿಗೆ ಹಿಡಿದವರು ಮುಂತಾದ ಸಮಸ್ಯೆಗಳು ಇರುವ ವ್ಯಕ್ತಿಗಳನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುವುದು ಕಷ್ಟ. ಅಂತಹ ಸಮಯದಲ್ಲಿ ಮನೆಯಲ್ಲಿ ನೋಡಿಕೊಳ್ಳಬೇಕಾದರೆ ಅವರ ಆರೈಕೆಯ ಬಗ್ಗೆ ಸರಿಯಾದ ಮಾಹಿತಿ ಕೂಡ ಅಗತ್ಯ ಹಾಗೂ ಅವರನ್ನು ನೋಡಿಕೊಳ್ಳುವ ಆರೈಕೆದಾರರಿಗೆ ತರಬೇತಿ ಹಾಗೂ
ಸಂಪನ್ಮೂಲಗಳು ಕೂಡ ಅಗತ್ಯ. ಇಂತಹ ತರಬೇತಿ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಕೇಂದ್ರವೇ ಈ ಹಾಸ್ಪಿಸ್ ಸೆಂಟರ್.
ಮೊದಲನೆಯದಾಗಿ ಬರುವುದು ಸಾಂತ್ವನ ಆರೈಕೆ (Palliative Care – ಸಾಂತ್ವನ ಆರೈಕೆ)
ಸಾಂತ್ವನ ಆರೈಕೆ ಎಂದರೆ ಮೇಲೆ ತಿಳಿಸಿದ ಗಂಭೀರ ಹಾಗೂ ಜೀವಕ್ಕೆ ಅಪಾಯವಿರುವ ಕಾಯಿಲೆ ಹೊಂದಿರುವವರಿಗೆ ನೀಡುವ ಸಮಗ್ರ ಆರೈಕೆ. ಇದರಲ್ಲಿ ಕಾಯಿಲೆಯ ಲಕ್ಷಣಗಳನ್ನು ಕಡಿಮೆ ಮಾಡುವುದು, ನೋವು ನಿವಾರಣೆ, ಹಾಗೂ ಭಾವನಾತ್ಮಕ,
ಸಾಮಾಜಿಕ ಮತ್ತು ಆಧ್ಯಾತ್ಮಿಕ ಬೆಂಬಲವನ್ನು ಒದಗಿಸುವುದು ಈ ಬಗ್ಗೆ ಯೋಚಿಸಲಾಗುತ್ತದೆ. ಉದಾಹರಣೆಗೆ ಕ್ಯಾನ್ಸರ್ ಅಥವಾ ಹೃದಯ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಸಾಂತ್ವನ ಆರೈಕೆ ನೀಡಿದರೆ, ಅವರ ನೋವು, ಉಸಿರಾಟದ ತೊಂದರೆ, ಮನಸ್ಸಿನ ಭಯ ಅಥವಾ ದುಃಖ ಇತ್ಯಾದಿಗಳನ್ನು ನಿರ್ವಹಿಸಲು ಸಹಾಯ ಮಾಡಬಹುದು.ಇದು ಕಾಯಿಲೆ ಗುಣಪಡಿಸುವ ಚಿಕಿತ್ಸೆಯ ಜೊತೆಗೆ ಕೂಡ ನೀಡಬಹುದು.
ನಿಜವಾಗಿ ನೋಡಿದರೆ ಪ್ರತಿಯೊಂದು ಆಸ್ಪತ್ರೆಯಲ್ಲಿ ಈ ಬಗ್ಗೆ ಪ್ರಯತ್ನಗಳು ನಡೆಯಬೇಕು. ಆದರೆ ಇಲ್ಲಿಯವರೆಗೆ ಹೆಚ್ಚಿನ ಆಸ್ಪತ್ರೆಗಳಲ್ಲಿ ಈ ಬಗ್ಗೆ ಏನು ಮಾಡಲಾಗುತ್ತಿಲ್ಲ ಏಕೆಂದರೆ ಇದಕ್ಕೆ ಬೇಕಾದ ಮಾನವ ಸಂಪನ್ಮೂಲಗಳಾಗಲಿ ಇತರ
ಸಂಪನ್ಮೂಲಗಳಾಗಲಿ ಆಸ್ಪತ್ರೆಗಳಲ್ಲಿ ಇಲ್ಲ.
ಅಂತಿಮ ಆರೈಕೆ (Hospice Care – ಅಂತಿಮ ಆರೈಕೆ / ಸಾಂತ್ವನ ಗೃಹ ಆರೈಕೆ)
ಅಂತಿಮ ಆರೈಕೆ ಎಂದರೆ ಜೀವನದ ಕೊನೆಯ ಹಂತದಲ್ಲಿರುವವರಿಗೆ ನೀಡುವ ವಿಶೇಷ ಆರೈಕೆ. ಸಾಮಾನ್ಯವಾಗಿ, ವೈದ್ಯರು ಆರೈಕೆ ಪಡೆಯುತ್ತಿರುವ ವ್ಯಕ್ತಿಯ ಜೀವನಾವಧಿ ಆರು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಎಂದು ನಿರ್ಧರಿಸಿದಾಗ, ಗುಣಪಡಿಸುವ ಚಿಕಿತ್ಸೆ ನಿಲ್ಲಿಸಿ, ಸಂಪೂರ್ಣವಾಗಿ ಆರಾಮ ದಿಂದ ಬದುಕಲು ಮತ್ತು ಗೌರವದಿಂದ ಬದುಕಲು ಒತ್ತು ನೀಡಲಾಗುತ್ತದೆ. ಅಂತಿಮ ಹಂತದ ಕಾಯಿಲೆ ಹೊಂದಿರುವವರು ಶಾಂತಿಯುತ ವಾತಾವರಣದಲ್ಲಿ, ಕುಟುಂಬದವರೊಂದಿಗೆ ಸಮಯ ಕಳೆಯಲು ಇಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ, ವೈದ್ಯರು, ನರ್ಸ್ಗಳು, ಸಮಾಲೋಚಕರು ಮತ್ತು ಧಾರ್ಮಿಕ
ಮಾರ್ಗದರ್ಶಕರು ಒಟ್ಟಾಗಿ ಕೆಲಸ ಮಾಡಿ, ರೋಗಿಯ ಮತ್ತು ಕುಟುಂಬದ ಭಾವನಾತ್ಮಕ ಅಗತ್ಯ ಗಳನ್ನು ಪೂರೈಸಲು ಪ್ರಯತ್ನಿಸುತ್ತಾರೆ.
ತಾತ್ಕಾಲಿಕ ವಿಶ್ರಾಂತಿ ಆರೈಕೆ (Respite Care – ತಾತ್ಕಾಲಿಕ ವಿಶ್ರಾಂತಿ ಆರೈಕೆ)
ತಾತ್ಕಾಲಿಕ ವಿಶ್ರಾಂತಿ ಆರೈಕೆ ಎಂದರೆ ಗಂಭೀರ ಕಾಯಿಲೆ ಹೊಂದಿರುವವರನ್ನು ನೋಡಿಕೊಳ್ಳುವ ಕುಟುಂಬದ ಸದಸ್ಯರಿಗೆ ತಾತ್ಕಾಲಿಕವಾಗಿ ವಿಶ್ರಾಂತಿ ನೀಡುವ ಸೇವೆ. ದಿನನಿತ್ಯದ ಆರೈಕೆ ಕಾರ್ಯದಲ್ಲಿ ಅವರು ದಣಿವಿನಿಂದ ಬಳಲದಂತೆ, ಕೆಲ
ಸಮಯದವರೆಗೆ ರೋಗಿಯನ್ನು ವೃತ್ತಿಪರರು ನೋಡಿಕೊಳ್ಳುತ್ತಾರೆ. ಹಲವು ಆರೈಕೆದಾರರು ವರ್ಷಾನುಗಟ್ಟಲೆ ರೋಗಿಗಳನ್ನು ನೋಡಿಕೊಂಡು ಮಾನಸಿಕವಾಗಿ ದೈಹಿಕವಾಗಿ ಬಳಲುವುದು ಸಂಶೋಧಕರು ಗಮನಿಸಿದ್ದಾರೆ. ಇಂತಹ ಆರೈಕೆದಾರರಿಗೆ ಕೆಲವು ದಿನಗಳು ಬೇರೆಯವರಿಗೆ ತಮ್ಮ ಪ್ರೀತಿ ಪಾತ್ರರ ಜವಾಬ್ದಾರಿಯನ್ನು ಒಪ್ಪಿಸಿ ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಉತ್ತಮಗೊಳಿಸಲು ಒಂದು ಅವಕಾಶ ನೀಡುವುದು ಇಂತಹ ಕೇಂದ್ರಗಳ ಉದ್ದೇಶ.
ಉದಾಹರಣೆಗೆ ಡಿಮೆನ್ಷಿಯಾ ಅಥವಾ ಪಾರ್ಕಿನ್ಸನ್ ಕಾಯಿಲೆ ಇರುವವರನ್ನು ನೋಡಿಕೊಳ್ಳುತ್ತಿರುವ ಕುಟುಂಬದವರು, ತಮ್ಮ ವೈಯಕ್ತಿಕ ಕೆಲಸ ಅಥವಾ ವಿಶ್ರಾಂತಿಯ ಅವಶ್ಯಕತೆ ಇದ್ದಾಗ, ತಾತ್ಕಾಲಿಕವಾಗಿ ಈ ಸೇವೆಯನ್ನು ಬಳಸಬಹುದು.
ಈ ಸೇವೆಗಳ ವಿಭಿನ್ನತೆ ಮತ್ತು ಪರಸ್ಪರ ಪೂರಕತೆ ಕೂಡ ಗಮನಿಸಿ.
ಸಾಂತ್ವನ ಆರೈಕೆ: ಯಾವುದೇ ಹಂತದ ಗಂಭೀರ ಕಾಯಿಲೆಗೆ, ಲಕ್ಷಣ ನಿರ್ವಹಣೆ ಮತ್ತು ಗುಣಪಡಿಸುವ ಚಿಕಿತ್ಸೆಯ ಜೊತೆಗೆ ನೀಡಲಾಗುತ್ತದೆ. ತೀವ್ರ ನಿಘಾ ಘಟಕಗಳಲ್ಲಿ ಮೆದುಳು ನಿಷ್ಕ್ರಿಯವಾದ ರೋಗಿಗಳು, ಲಿವರ್ , ಕಿಡ್ನಿ ಹೃದಯ ಅಥವಾ ಶ್ವಾಶಕೋಶದ ಫೇಲ್ಯೂರ್ ನಿಂದ ಉಂಟಾಗುವ ಸಮಸ್ಯೆಗಳ ಕಾರಣ ರೋಗಿ ಇನ್ನು ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದಾಗ ಈ ಸಾಂತ್ವಾನ ಆರೈಕೆ ಆಸ್ಪತ್ರೆಯಲ್ಲಿ ಪ್ರಾರಂಭಿಸುತ್ತಾರೆ. ಕಾನೂನು ಬದ್ಧವಾಗಿ ಮತ್ತು ಮೌಲ್ಯ ಆಧಾರಿತವಾಗಿ ಜೀವ ರಕ್ಷಕ ಚಿಕಿತ್ಸೆಯನ್ನು ಹಂತಹಂತವಾಗಿ ಕಡಿತಗೊಳಿಸುವುದು, ಈ ಬಗ್ಗೆ ಕುಟುಂಬದವರ ಭಾವನೆಗಳನ್ನು ಗೌರವಿಸಿ, ಅವರ ಹಣ ಕಾಸು ಪರಿಸ್ಥಿತಿಯನ್ನು ಗಮನಿಸಿ ಗೌರವ ಘನತೆಯಿಂದ ಕೆಲವು ಚಿಕಿತ್ಸೆಗಳನ್ನು ನಿಲ್ಲಿಸುವುದು ಕೂಡ ಈ ಚಿಕಿತ್ಸೆಯ ಭಾಗವಾಗಿದೆ.
ಅಂತಿಮ ಆರೈಕೆ: ಜೀವನದ ಕೊನೆಯ ಹಂತದಲ್ಲಿ, ಸಂಪೂರ್ಣವಾಗಿ ಆರಾಮ ಮತ್ತು ಗೌರವಕ್ಕೆ ಒತ್ತು ನೀಡುವ ಆರೈಕೆ.
ತಾತ್ಕಾಲಿಕ ವಿಶ್ರಾಂತಿ ಆರೈಕೆ: ಆರೈಕೆದಾರರಿಗೆ ವಿಶ್ರಾಂತಿ ನೀಡಲು, ರೋಗಿಗೆ ತಾತ್ಕಾಲಿಕ ವೃತ್ತಿಪರ ಆರೈಕೆ.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ಎಲ್ಲಾ ಸೇವೆಗಳಲ್ಲಿಯೂ ರೋಗಿಯ ಮತ್ತು ಕುಟುಂಬದವರ ಭಾವನಾತ್ಮಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಭಯ, ದುಃಖ, ಒಂಟಿತನ ನಿರಾಸೆ ಇವುಗಳನ್ನು ಗಮನಿಸಿ ಆಪ್ತ ಸಮಾಲೋಚನೆ, ವೃತ್ತಿಪರ ಬೆಂಬಲ ಹಾಗೆ ಅಂತಿಮ ಹಂತದಲ್ಲಿ ಕುಟುಂಬದವರಿಗೆ ದುಃಖ ನಿರ್ವಹಣೆಯಲ್ಲಿ ಕೂಡ ಸಹಾಯ ಮಾಡಲಾಗುತ್ತದೆ. ಮಣಿಪಾಲ ಸಂಸ್ಥೆಗಳು ಇಂತಹ ಉಚಿತ ಮತ್ತು ಮಾನವೀಯ ಸೇವೆಯನ್ನು ನೀಡುವ ಕೇಂದ್ರವನ್ನು ಸ್ಥಾಪಿಸಿರುವುದು ಶ್ಲಾಘನೀಯ.








