ಗಾಂಧಾರಿ ವಿದ್ಯೆ!! ಮೂರನೇ ಕಣ್ಣಿನ ಜಾಗೃತಿ!! ವಿಜ್ಞಾನದ ಮುಖವಾಡದಲ್ಲಿ ಅಂಧವಿಶ್ವಾಸದ ಅಪಾಯ.
ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ಪೋಷಕರ ಆತಂಕ, ಆಕಾಂಕ್ಷೆ ಮತ್ತು ಉನ್ನತೋನ್ನತಿಯ ದಾಹ ಗುರಿಯಾಗಿಸಿಕೊಂಡುಹುಸಿ ವೈಜ್ಞಾನಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳ ಬುದ್ಧಿಶಕ್ತಿ ಜಾಸ್ತಿ ಮಾಡುತ್ತೇವೆ ,ಏಕಾಗ್ರತೆ ಹೆಚ್ಚಿಸುತ್ತೇವೆ ಮುಂತಾದ ವಿಷಯಗಳನ್ನು ಜನಮಾನಸದಲ್ಲಿ ಪಸರಿಸಿ ಜನಮಾನಸದಲ್ಲಿ ಪಸರಿಸಿ ಹಣ ಮಾಡುವ ಕಾರ್ಯಕ್ರಮಗಳು ಹೆಚ್ಚಾಗುತ್ತಿವೆ.
ಉಡುಪಿಯಲ್ಲಿ ಈ ತರಹದ ಕಾರ್ಯಕ್ರಮ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂತು. ಪೋಷಕರು ತಪ್ಪು ಮಾಹಿತಿಗೆ ಎಷ್ಟು ಸುಲಭವಾಗಿ ಬಲಿಯಾಗಬಹುದು ಮತ್ತು ಈ “ಗಾಂಧಾರಿ ವಿದ್ಯೆ” ಎಂದು ಕರೆಯಲ್ಪಡುವ ,ಮಕ್ಕಳ ಕಣ್ಣು ಕಟ್ಟಿನಿಂದ” ಸಕ್ರಿಯೆಗೊಂಡ ಮೂರನೇ ಕಣ್ಣಿನಿಂದ” ನೋಡಬಹುದು ಎಂದು ಹೇಳಿಕೊಳ್ಳುವ ಕಾರ್ಯಕ್ರಮ ಇದು ಹೇಗೆ ಅವೈಜ್ಞಾನಿಕ ಈ ಬಗ್ಗೆ ಬರೆಯುವ ಅಂದುಕೊಂಡೆ. ಆಶ್ಚರ್ಯವಾಗುವುದೆಂದರೆ ಇಲ್ಲಿ “ಮಧ್ಯ ಮಸ್ತಿಷ್ಕ ಸಕ್ರಿಯಗೊಳಿಸುವಿಕೆ” mid brain activation ಎಂಬ ವೈಜ್ಞಾನಿಕ ಪದ ಒಂದನ್ನು ಬಳಸಿ ಜನರನ್ನು ಮರಳು ಮಾಡಲಾಗುತ್ತಿದೆ. ಹಣ ಮಾಡಲು ಮಾರುಕಟ್ಟೆ ತಂತ್ರವನ್ನು ಬಹಳ ಚೆನ್ನಾಗಿ ಉಪಯೋಗಿಸಿ ಮಕ್ಕಳ
ಸ್ಮರಣ ಶಕ್ತಿ ,ಏಕಾಗ್ರತೆಯನ್ನು ಹೆಚ್ಚಿಸುವುದು ,ರಹಸ್ಯಮಯ ಸಾಮರ್ಥ್ಯಗಳನ್ನು ಅನಾವರಣ ಗೊಳಿಸಿ ಅವರನ್ನು
ಸ್ಪರ್ಧಾತ್ಮಕವಾಗಿ ಬೆಳೆಸುವುದು ಮುಂತಾದ ವಿಷಯಗಳನ್ನು ತಿಳಿಸಿ ಇದನ್ನು ಜನಮಾನಸದಲ್ಲಿ ಜನಪ್ರಿಯಗೊಳಿಸಲು ಪ್ರಯತ್ನಿಸಲಾಗುತ್ತಿದೆ.
ಈ ಬಗ್ಗೆ ಇದರ ವಿರುದ್ಧ ಹೋರಾಟದಲ್ಲಿ ನನ್ನ ಗುರುಗಳಾದ ನರೇಂದ್ರ ನಾಯಕ್ ಮುಂಚೂಣಿಯಲ್ಲಿದ್ದಾರೆ. ಈ ಕಾರ್ಯಕ್ರಮ ಮಂಗಳೂರು, ಪುತ್ತೂರು ,ಆಲ್ದೂರು ಹೀಗೆ ದಿಲ್ಲಿಯಿಂದ ಹಳ್ಳಿಯವರೆಗೆ ನಡೆಯುತ್ತಲೇ ಬಂದಿದೆ. ಇದರ ಜನಪ್ರಿಯತೆ ಎಷ್ಟಿತೆಂದರೆ ಅಮಿತಾ ಬಚ್ಚನ್ ಅವರ “ಕೌನ್ ಬನೆಗಾ ಕರೋಡ್ಪತಿ “ಕಾರ್ಯಕ್ರಮದಲ್ಲಿ ಕೂಡ ಇದು ಮೂಡಿಬಂದಿದ್ದು,ಇದನ್ನು ವಿರೋಧಿಸಿದ ನರೇಂದ್ರ ನಾಯಕ್ ಅದು ಆ ಕಾರ್ಯಕ್ರಮದಿಂದ ಹೊರಗೆ ಹೋಗುವಂತೆ ಮಾಡಿದರು. ಗೋವಾ ಸೈನ್ಸ್ ಫೋರಂ, ಕೇರಳದ ಮಾಯಾಜಾಲಗಾರ ಮತ್ತು ಶಿಕ್ಷಣ ತಜ್ಞ ಗೋಪಿನಾಥ್ ಮುತ್ತುಕಾಡ್, ನಮ್ಮದೇ ಉಡುಪಿಯ ಗಿಲಿ ಗಿಲಿ ಮ್ಯಾಜಿಕ್ ಖ್ಯಾತಿಯ ಜೂನಿಯರ್ ಶಂಕರ್ ತೇಜಸ್ವಿ ಮುಂತಾದವರು ಈ ಬಗ್ಗೆ ಬಹಳಷ್ಟು ಕಾರ್ಯಕ್ರಮಗಳಲ್ಲಿ ಇದು ಅವೈಜ್ಞಾನಿಕ ಎಂಬ ವಿಷಯದ ಬಗ್ಗೆ
ಜಾಗೃತಿ ಮೂಡಿಸಿದ್ದಾರೆ.
ನರೇಂದ್ರ ನಾಯಕ್ ಅವರು ಆಲ್ದೂರಿನಲ್ಲಿ ಮಾಡಿದ ತನಿಖೆಯಲ್ಲಿ ವೈಜ್ಞಾನಿಕವಾಗಿ ನಿಯಂತ್ರಿತ ಸನ್ನಿವೇಶಗಳಲ್ಲಿ ಇಂತಹ ಸಾಮರ್ಥ್ಯಗಳನ್ನು ಪರೀಕ್ಷಿಸಿದಾಗ ಸತ್ಯ ಬಯಲಾಯಿತು. ಮಕ್ಕಳು ಕೇವಲ ಕಣ್ಣು ಕಟ್ಟಿದ “ಗ್ಯಾಪ್ “ಗಳ ಮೂಲಕ ಇಣುಕಿ ನೋಡುತ್ತಿದ್ದರು, ಇಲ್ಲಿ ಯಾವುದೇ ಮಾಯಾಜಾಲ ಅಥವಾ ಮೂರನೇ ಕಣ್ಣು ಅಥವಾ ಭಾರತೀಯ ಪುರಾತನ ಜ್ಞಾನ ಏನು ಇರಲಿಲ್ಲ ಎಂಬುದನ್ನು ಅವರು ತೋರ್ಪಡಿಸಿರುವರು.
ಯುವಜನರು ಮತ್ತು ಹದಿಹರೆಯದವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಮನೋವೈದ್ಯನಾಗಿ ನನಗೆ ಈ ರೀತಿಯ ಆಚರಣೆಗಳು ಗಾಬರಿ ಉಂಟು ಮಾಡಿವೆ. ಈ ಕಾರ್ಯಕ್ರಮಗಳು ಮಕ್ಕಳಿಗೆ ತಾವು ಅತೀಂದ್ರಿಯ ಸಾಮರ್ಥ್ಯ ಹೊಂದಿದ್ದೇವೆ ಎಂಬ ತಪ್ಪು ನಂಬಿಕೆಯನ್ನು ತುಂಬುತ್ತದೆ. ಹಾಗೆ ಅವರಿಗೆ ಬಹಳ ದೊಡ್ಡ ಸಾಧನೆ ಮಾಡಬೇಕು ಎಂದು ಒತ್ತಡಕ್ಕೆ ಒಳಪಡಿಸುತ್ತದೆ.
ಇದನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ಅವರು ಅದನ್ನು ಮಾಡಲು ವಿಫಲರಾದಾಗ ಅವರ ಮನಸ್ಸಿನಲ್ಲಿ ಅಪರಾಧಿ ಮನೋಭಾವ, ಸ್ವ ಗೌರವ ಕಡಿಮೆಯಾಗುವುದು ಮತ್ತು ಹಲವು ಗೊಂದಲಗಳು ಉಂಟಾಗುತ್ತವೆ. ಮಕ್ಕಳು ತಮ್ಮ ನೈಜ ಜೀವನ ಕೌಶಲ್ಯಗಳನ್ನು ಬೆಳೆಸುವ ಬದಲು ಅವೈಜ್ಞಾನಿಕ ಗಿಮಿಕ್ ಗಳ ಮೇಲೆ ಅವಲಂಬಿತರಾಗಬಹುದು. ಹಲವು ಪೋಷಕರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಮಕ್ಕಳನ್ನು ಈ ಕೋರ್ಸ್ ಗೆ ಸೇರಿಸುತ್ತಾರೆ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ ರಷ್ಯಾದಲ್ಲಿ ಭ್ರಾಣಿಕೋವ್ ವಿಧಾನ, ದಕ್ಷಿಣ ಏಷ್ಯಾದಲ್ಲಿ “ಕಣ್ಣುಗಳಿಲ್ಲದೆ ನೋಡುವ ವಿಧಾನ” ಹೀಗೆ ಹಲವು ಹೆಸರುಗಳಿಂದ ಜನಪ್ರಿಯಗೊಳಿಸಲಾಗಿದೆ.
ವಿಜ್ಞಾನ ಹೇಳುವುದು ಇಷ್ಟೇ. ಮಕ್ಕಳಿಗೆ ಇಣುಕಲು ಅಥವಾ ತಮ್ಮ ಸ್ಮರಣ ಶಕ್ತಿಯನ್ನು ಬಳಸಲು ತರಬೇತಿ ನೀಡಲಾಗುತ್ತದೆ ಆದರೆ ಇದು ಜ್ಞಾನ ಅಥವಾ ಸಂವೇದನಾ ಸಾಮರ್ಥ್ಯಗಳನ್ನು ಬೆಳೆಸುವುದಿಲ್ಲ.
ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಹಾನಿ ಉಂಟು ಮಾಡಬಹುದು. ಹಾಗೆ ಗಂಭೀರ ನೈತಿಕ ಪ್ರಶ್ನೆಗಳನ್ನು ಎತ್ತುತ್ತದೆ. ನಕಲಿ ಸಾಮರ್ಥ್ಯಗಳನ್ನು ಕಲಿಸಲು ಹೆಚ್ಚಿನ ಶುಲ್ಕವನ್ನು ವಿಧಿಸುವುದು ಇದು ಸ್ಪಷ್ಟವಾಗಿ ಕಂಡುಬಂದಿದೆ. ಮಕ್ಕಳಿಗೆ ಕಾಲ್ಪನಿಕ “ಸೂಪ ರ್ಪವರ್” ಗಳನ್ನು ನಂಬುವಂತೆ ತರಬೇತಿ ನೀಡಿದಾಗ ಅವರಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ವೈಜ್ಞಾನಿಕ ಕುತೂಹಲವನ್ನು ಸೂಕ್ಷ್ಮವಾಗಿ ತಡೆಯಲಾಗುತ್ತದೆ. ಇವೆರಡು ವೈಯಕ್ತಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಅತಿ ಅಗತ್ಯ ಕೌಶಲ್ಯಗಳಾಗಿವೆ.
ಈ ಬಗ್ಗೆ ಪೋಷಕರು ಏನು ಮಾಡಬೇಕು?
ಮಗುವಿನ ಜ್ಞಾಪಕ ಶಕ್ತಿ ಅಭಿವೃದ್ಧಿ ಮಾಡುವ ಯಾವುದೇ ಕೋರ್ಸ್ ಸೇರುವ ಮೊದಲು ಪರಿಶೀಲಿಸಿ. ಸ್ವತಂತ್ರ ವೈಜ್ಞಾನಿಕ ಸಂಶೋಧನೆಯಿಂದ ಬೆಂಬಲಿತ ಕಾರ್ಯಕ್ರಮಗಳೇ ನೋಡಿ ಹಾಗಿದ್ದರೆ ಮಾತ್ರ ಸೇರಿಸಿ.
ನಿಮ್ಮ ಮಗುವಿನಲ್ಲಿ ಕಲಿಕೆಯ ಸಮಸ್ಯೆಗಳ ಬಗ್ಗೆ ಚಿಂತಿತರಾಗಿದ್ದರೆ ಶಾಲೆಯ ಆಪ್ತ ಸಲಹಾಕಾರರು ಅಥವಾ ಮಾನಸಿಕ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ.
ನೈಜ ರೀತಿಯಲ್ಲಿ ಜ್ಞಾನಾತ್ಮಕ ಕೌಶಲ್ಯಗಳನ್ನು ಬೆಳೆಸುವ ಕಡಿಮೆ ವೆಚ್ಚದ ಸಂಪನ್ಮೂಲಗಳು ಅಂದರೆ ಒಗಟುಗಳು, ಸ್ಮರಣೆಯ ಆಟಗಳು, ಸಂಗೀತ ಪಾಠಗಳು ,ಓದುವಿಕೆ ಮತ್ತು ದೈಹಿಕ ಚಟುವಟಿಕೆಗಳು ಮುಂತಾದವುಗಳು ಬಹಳಷ್ಟು ಇದೆ. ಅವುಗಳನ್ನು ನಿಮ್ಮ ಮಕ್ಕಳಲ್ಲಿ ಬೆಳೆಸಿ.
ಭಾರತದ ಸಂವಿಧಾನದಲ್ಲಿ ಲೇಖನ 51-A(h) ಅಡಿಯಲ್ಲಿ ನಾಗರಿಕರಿಗೆ ವೈಜ್ಞಾನಿಕ ಮನೋಭಾವ ,ಮಾನವತವಾದ ಮತ್ತು ತನಿಖೆಯ ಭಾವನೆಗಳನ್ನು ಬೆಳೆಸುವ ಕರೆ ನೀಡಲಾಗಿದೆ. ಇಂತಹ ಕಾರ್ಯಕ್ರಮಗಳು ನಮ್ಮ ಸಂವಿಧಾನಕ್ಕೆ ವಿರೋಧವಾದ ಕಾರ್ಯಕ್ರಮಗಳಾಗಿವೆ, ಜನರಲ್ಲಿ ಅಂಧ ವಿಶ್ವಾಸ ಮತ್ತು ಹುಸಿ ವಿಜ್ಞಾನ ಉತ್ತೇಜಿಸುವ ಕಾರ್ಯಕ್ರಮಗಳಾಗಿವೆ ಒಬ್ಬ ಮನೋವೈದ್ಯನಾಗಿ ನನ್ನ ಅನಿಸಿಕೆ ಏನಂದರೆ ನಮ್ಮ ಮಕ್ಕಳ ಏಳಿಗೆಗಾಗಿ ನಾವು ಭ್ರಮೆಯನ್ನು ತಿರಸ್ಕರಿಸಬೇಕು ಮತ್ತು ತನಿಖಾ ಪ್ರವೃತ್ತಿಯನ್ನು ಎತ್ತಿ ಹಿಡಿಯಬೇಕು. ಪೋಷಕರು ನೆನಪಿಡಬೇಕಾದ ವಿಷಯವೆಂದರೆ ಮಕ್ಕಳಲ್ಲಿ ಕಲಿಕೆಗೆ ಪ್ರೀತಿಯನ್ನು ಬೆಳೆಸುವುದು, ಸಮತೋಲಿತ ದಿನಾಚರಣೆಯನ್ನು ಕಾಪಾಡಿಕೊಳ್ಳುವುದು, ಸೃಜನಶೀಲತೆಯನ್ನು ಪ್ರೋತ್ಸಾಹಿಸುವುದು ಮತ್ತು ಅಗತ್ಯವಿದ್ದರೆ ವೃತ್ತಿಪರ ಶೈಕ್ಷಣಿಕ ಅಥವಾ ಮಾನಸಿಕ ತಜ್ಞರ ಮಾರ್ಗದರ್ಶನದೊಂದಿಗೆ ಅವರನ್ನು ಬೆಂಬಲಿಸುವುದು ಮುಖ್ಯವೆ ಹೊರತು ಯಶಸ್ಸಿಗೆ ಯಾವುದೇ ಅತಿಂದ್ರಿಯ ತಂತ್ರಗಳು ಇಲ್ಲ.








