ತಾರೀಖು 01-01-2024 ರ ಸೋಮವಾರದಂದು ಕಮಲ್. ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್, ಮುಂಬೈ; ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ; ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ 32ನೆಯ ಮದ್ಯವ್ಯಸನ ವಿಮುಕ್ತಿ ವಸತಿ ಶಿಬಿರವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಘನ ಕರ್ನಾಟಕ ಸರ್ಕಾರದ, ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ. ಕೆ. ವಿದ್ಯಾಕುಮಾರಿಯವರು ಸರಕಾರ ಮಾಡಬೇಕಾದ ಕಾರ್ಯವನ್ನು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯು ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಅದು ಶ್ಲಾಘನೀಯವಾದುದು ಎಂದರು. ಮಾನ್ಯ ಜಿಲ್ಲಾಧಿಕಾರಿಯವರು ಘನ ಸರಕಾರದ ಅಂಗವಾಗಿ ಇಂತಹ ಮಾತನ್ನು ಹೇಳಿರುವುದು ಬಹಳ ಗಮನಾರ್ಹವಾದುದು. ಯುವಜನತೆ ಮಾದಕದ್ರವ್ಯದ ವ್ಯಸನಕ್ಕೆ ಬಲಿಯಾಗುತ್ತಿರುವ ಬಗ್ಗೆ ತೀವ್ರವಾದ ಕಳವಳವನ್ನು ವ್ಯಕ್ತಪಡಿಸುತ್ತಾ ಯುವಜನತೆಯನ್ನು ಸರಿದಾರಿಗೆ ತರುವಲ್ಲಿ ಸಮಾಜದ ಎಲ್ಲಾ ಅಂಗಗಳ ಕರ್ತವ್ಯದ ಕುರಿತಾಗಿ ಎಚ್ಚರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಎನಪೋಯ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಅನಿಲ್ ಕಾಕುಂಜೆಯವರು ಕೆಲವು ವರ್ಷಗಳ ಹಿಂದೆ ಡಾ. ಪಿ. ವೆಂಕಟರಾಯ ಭಂಡಾರಿಯವರ ಮಾನಸಿಕ ವಿಭಾಗದ ಹೊರರೋಗಿ ವಿಭಾಗದಲ್ಲಿ ಕಂಡು ಬಂದ ಸರತಿಯ ಸಾಲನ್ನು ಉಲ್ಲೇಖಿಸುತ್ತಾ ಮನೋವೈದ್ಯಕೀಯ ಕ್ಷೇತ್ರದಲ್ಲಿ ಡಾ. ಭಂಡಾರಿಯವರ ಪ್ರಾಮಾಣಿಕ ತೊಡಗಿಕೊಳ್ಳುವಿಕೆ ಹಾಗೂ ಪೇಷೆಂಟ್ ಕೇರ್ ಕುರಿತು ನೆನಪಿಸಿಕೊಳ್ಳುತ್ತಾ ತಮ್ಮ ಶಿಷ್ಯತ್ವದ ಉಲ್ಲೇಖವನ್ನೂ ಮಾಡಿದರು. ಹಲವು ವರ್ಷಗಳಿಂದ ನಿರಂತರವಾಗಿ ಮದ್ಯವಿಮುಕ್ತಿ ವಸತಿ ಶಿಬಿರಗಳನ್ನು ನಡೆಸಿಕೊಂಡು ಬಂದು ಸದ್ಯ 32ನೆಯ ಶಿಬಿರದ ಬಗ್ಗೆ ಹೇಳುತ್ತಾ ಇಷ್ಟು ಸಂಖ್ಯೆಯ ಶಿಬಿರಗಳ ಆಯೋಜನೆ ನಿಜವಾದ ಸಾಮಾಜಿಕ ಕಳಕಳಿಯ ಕಾರ್ಯವೆಂದು ಶ್ಲಾಘಿಸುವುದರ ಜೊತೆಗೆ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸ್ತ್ರೀರೋಗ ಹಾಗೂ ಪ್ರಸೂತಿತಜ್ಞರಾದ ಮತ್ತು ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿಯ ಅಧ್ಯಕ್ಷರಾದ ಡಾ. ರಾಜಲಕ್ಷ್ಮೀಯವರು ಹಿಂದಿನ ದಿನದಂತೆ ಇಂದು, ಇಂದಿನಂತೆ ನಾಳೆ ಕಳೆದು ಹೋಗುತ್ತಲೇ ಇರುವ ಮಧ್ಯೆ ಹೊಸ ವರ್ಷಾರಂಭವನ್ನು ವಿನೂತನ ದೃಷ್ಟಿಕೋನದಿಂದ ಕಂಡು ನಮ್ಮಲ್ಲಿರಬಹುದಾದ ಕೆಡುಕುಗಳನ್ನು ಕಳೆದುಕೊಂಡು ಒಳ್ಳೆಯ ಬದುಕನ್ನು ಆರಿಸುವ ಕುರಿತಾದ ದಾರಿಯಲ್ಲಿ ಭದ್ಯವಿಮುಕ್ತಿ ವಸತಿ ಶಿಬಿರದ ಪ್ರಯೋಜನವನ್ನು ಶಿಬಿರಾರ್ಥಿಗಳು ಪಡೆದುಕೊಳ್ಳಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷರಾದ ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕರಾದ ಡಾ.ಪಿ. ವಿ. ಭಂಡಾರಿಯವರು ಮಾತಾಡುತ್ತ ಸಮಾಜ ಸಮುದಾಯದ ಒಂದು ವರ್ಗದ ವ್ಯಕ್ತಿಗಳು ಹೇಗೆ ಮಾದಕದ್ರವ್ಯ ವ್ಯಸನ ಹೆಚ್ಚಾಗುವುದಕ್ಕೆ ಪ್ರೇರಕ ಕಾರಣರಾಗುತ್ತಾರೆಯೋ ಅಂತೆಯೇ ಸಮಾಜ ಸಮುದಾಯದ ಮಗದೊಂದು ವರ್ಗದ ಮಂದಿಗಳು ಇಂತಹ ಮದ್ಯವಿಮುಕ್ತಿ ವಸತಿ ಶಿಬಿರಗಳ ಮೂಲಕ ಮದ್ಯವ್ಯಸನಿಗಳ ಪರವಾಗಿ ನಿಲ್ಲುವುದನ್ನು ವ್ಯಸನಿಗಳು ಗಮನಿಸಬೇಕು. ಯಾರೋ ಮಿತ್ರರು ಮದ್ಯಪಾನಕ್ಕೆ ಒತ್ತಾಯಿಸುವಾಗ, ತಮ್ಮ ಒತ್ತಾಸೆಗೆ ನಿಂತು ಮದ್ಯವನ್ನು ತ್ಯಜಿಸುವಲ್ಲಿ ಸಹಕರಿಸಿದ ವೈದ್ಯರ, ದಾದಿಯರ ಹಾಗೂ ಶಿಬಿರಕ್ಕೆ ಧನಸಹಾಯ ಮಾಡಿದ ಸಮುದಾಯದ ಮಂದಿಗಳನ್ನು ನೆನಪಿಸಿಕೊಂಡು ಮತ್ತೆ ಮದ್ಯಪಾನದತ್ತ ಮನ ಮಾಡಬಾರದು ಎನ್ನುವ ಮಾರ್ಮಿಕ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದ ಮಧ್ಯೆ ಮದ್ಯವ್ಯಸನದಿಂದ ವಿಮುಕ್ತರಾಗಿ ಸದ್ಯ ಒಳ್ಳೆಯ ಆರೋಗ್ಯವಂತ ಜೀವನವನ್ನು ನಿರ್ವಹಿಸುತ್ತಿರುವ ನಾಲ್ಕು ಮಂದಿಗಳನ್ನು ಸಮ್ಮಾನಿಸಲಾಯಿತು. ಎರಡು ಮಂದಿ ಈ ಶಿಬಿರದಿಂದ ಹೇಗೆ ಪ್ರಯೋಜನ ಲಭಿಸಿತು ಎನ್ನುವುದನ್ನು ವಿವರಿಸಿದರು.
ರಂಗನಾಥ. ಬಿ. ರಾವ್ ಪ್ರಾರ್ಥಿಸಿದರು. ಕಾರ್ಯಕ್ರಮಕ್ಕೆ ಡಾ. ವಿರೂಪಾಕ್ಷ ದೇವರಮನೆಯವರು ಸ್ವಾಗತಿಸಿದರು. ಡಾ. ಮಾನಸ್. ಇ. ಆರ್ ಅವರು ಶಿಬಿರದ ಕುರಿತಾಗಿ ಮಾತನಾಡಿದರು. ಡಾ.ದೀಪಕ್ ಮಲ್ಯರು ಧನ್ಮವಾದವನ್ನು ಅರ್ಪಿಸಿದರು.