Select Page

ಹದಿ ಹರೆಯದವರ ಆತ್ಮಹತ್ಯೆಗಳನ್ನು ತಡೆಗಟ್ಟುವಲ್ಲಿ ಪೋಷಕರ ಪಾತ್ರ
ಹದಿಹರೆಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಯೋಚನೆಗಳು ಹಠಾತ್ ಆಗಿ ಮನಸ್ಸಿಗೆ ಬರುತ್ತವೆ. ತನ್ನನ್ನು ಶಾಲೆಯ
ಮಕ್ಕಳೊಂದಿಗೆ ಟ್ರಿಪ್ ಗೆ ಕಳಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡು ಮಗುವಿನ ಬಗ್ಗೆ ಮಗುವಿನ ತಾಯಿಯಿಂದಲೇ
ಕೇಳಿದ್ದೇನೆ. ಘಟನೆ ಸಂಭವಿಸಿ 25 ವರ್ಷ ಆದರೂ ತಾಯಿ ಈಗ ಕೂಡ ಖಿನ್ನತೆಯಿಂದ ಬಳಲುತ್ತಿದ್ದಾರೆ. ಈ ರೀತಿ ಆತ್ಮಹತ್ಯಾ
ಪ್ರವೃತ್ತಿ ಬೆಳೆಯಲು ಕಾರಣಗಳು ಏನು? ಅವುಗಳನ್ನು ಬೆಳೆಸದಿರಲು ಪೋಷಕರು ಏನು ಮಾಡಬಹುದು ಈ ಬಗ್ಗೆ ಓದುಗರು ಒಬ್ಬರ
ಆಶಯದಂತೆ ಬರೆಯುತ್ತಿದ್ದೇನೆ.
ನಮ್ಮ ದೇಶದ ಪರಿಸ್ಥಿತಿಯಲ್ಲಿ ಹದಿಹರೆಯದವರ ಪಾಡು ನಿಜವಾಗಲೂ ಒಂದು ವಿಶಿಷ್ಟ ಜಾಡನ್ನು ಹಿಡಿದು ಹೋಗುತ್ತಿದೆ
ಎನಿಸುತ್ತದೆ. ಈ ವಯಸ್ಸಿನಲ್ಲಿ ಮಕ್ಕಳ ಮೇಲೆ ಮೂರು ಮುಖ್ಯವಾದ ಒತ್ತಡಗಳು ಇವೆ.ಜೀವನದಲ್ಲಿ ಸಾಧನೆ ಮಾಡಬೇಕೆಂಬ
ಒತ್ತಡ, ಶಾಲಾ ಕಾಲೇಜುಗಳಲ್ಲಿ ಕೊಟ್ಟ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಬೇಕೆಂಬ ಒತ್ತಡ ಹಾಗೂ ತಾವು ಇದ್ದ
ಪರಿಸ್ಥಿತಿಯಿಂದ ಬದಲಾಗಿ ಮಿತ್ರರೊಂದಿಗೆ ಚೆನ್ನಾಗಿ ಬೆರೆತುಕೊಳ್ಳಬೇಕೆಂಬ ಒತ್ತಡ. ಈ ಒತ್ತಡಗಳನ್ನು ನಿಭಾಯಿಸಲು
ಹದಿಹರೆದವರು ಬಹಳ ಕಷ್ಟ ಪಡುತ್ತಿರುತ್ತಾರೆ. ಹೆಚ್ಚಿನ ಮಕ್ಕಳಿಗೆ ಜೀವನದ ಸಾಧನೆ ಎಂದರೆ ಮಾರ್ಕ್ಸ್ ತೆಗೆಯುವುದು ಒಂದು
ಕಡೆ ಆದರೆ ಮಿತ್ರರನ್ನು ಮೆಚ್ಚಿಸುವುದು , ಅವರೊಂದಿಗೆ ಕೂಡಿ ಮೋಜು ಮಾಡುವುದು ಇನ್ನೊಂದು ಕಡೆ. ಕೆಲವು ಮಕ್ಕಳು ಸ್ವಯಂ
ಪ್ರೇರಿತರಾಗಿ ತಮ್ಮ ಮೇಲೆ ತಾವೇ ಒತ್ತಡ ಹೇರಿಕೊಳ್ಳುತ್ತಾರೆ. ಬೇರೆ ಮಿತ್ರರೊಂದಿಗೆ ತುಲನೆ ಮಾಡಿಕೊಂಡು ಒತ್ತಡ
ಮಾಡಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ತಾಯಿ-ತಂದೆಯರು ಶಾಲಾ ಶಿಕ್ಷಕರು ಒತ್ತಡ ಹಾಕುತ್ತಾರೆ. ಈ ಎಲ್ಲಾ ಒತ್ತಡಗಳ
ನಡುವೆಯೂ ಹದಿಹರೆಯದ ಮಕ್ಕಳು ಇವುಗಳನ್ನು ನಿಭಾಯಿಸಿಕೊಂಡು ಹೋಗಲು ಸಶಕ್ತರಾಗಿದ್ದಾರೆ. ಆದರೆ ಕೆಲವು ಮಕ್ಕಳು
ಸಮಸ್ಯೆಗಳನ್ನು ಅನುಭವಿಸುತ್ತಾರೆ. ಸ್ಪರ್ಧಾತ್ಮಕ ಜೀವನದಲ್ಲಿ ಹಿಂದೆ ಬೀಳುತ್ತಾರೆ. ಆ ಸಂದರ್ಭದಲ್ಲಿ ಯಾರೊಂದಿಗೆ
ಮಾತನಾಡಬೇಕು ,ಏನು ಮಾಡಬೇಕು ತಿಳಿಯದೆ ಸಮಸ್ಯೆಗೆ ಒಳಗಾಗುತ್ತಾರೆ. ಈ ವಯಸ್ಸಿನಲ್ಲಿ ತಾಯಿ ತಂದೆಯರ ಇಲ್ಲವೇ
ಹಿರಿಯರ ಅಥವಾ ಶಿಕ್ಷಕರ ಸಹಾಯ ಬಹಳಷ್ಟು ಬೇಕಾಗುತ್ತದೆ. ತಾಯಿ ತಂದೆ ಇಂತಹ ಮಕ್ಕಳು ಯಾರು ?ಹಾಗೂ ಯಾರಿಗೆ
ಸಹಾಯ ಅಗತ್ಯವಿದೆ ಅನ್ನೋದನ್ನ ಗುರುತಿಸುವುದು ಕಲಿಯಬೇಕು.
ಸಹಾಯ ಬೇಕಾದ ಮಕ್ಕಳನ್ನು ಗುರುತಿಸುವುದು ಹೇಗೆ?
ಇದ್ದಕ್ಕಿದ್ದಂತೆ ಶಾಲೆಯಲ್ಲಿ ಮಾರ್ಕ್ಸ್ ಕಡಿಮೆ ತೆಗೆಯುತ್ತಿರುವ ಮಕ್ಕಳು ಹಾಗೂ ನೋಡು ನೋಡುತ್ತಿದ್ದಂತೆ ಓದುವಿಕೆಯಲ್ಲಿ ಆಸಕ್ತಿ
ಕಳೆದುಕೊಂಡ ಮಕ್ಕಳು ಅಥವಾ ಶಾಲೆಗೆ ಹೋಗಲು ಇಷ್ಟಪಡುವುದಿಲ್ಲ ಎಂದು ಹೇಳುವ ಮಕ್ಕಳು
ಪರೀಕ್ಷೆಯ ಸಮಯದಲ್ಲಿ ಆತಂಕ ಹೆಚ್ಚಿಸಿಕೊಂಡು ಯಾರೊಂದಿಗೂ ಬೆರೆಯದೆ ಊಟ, ನಿದ್ರೆ ಸರಿಯಾಗಿ ಮಾಡದೆ
ಒತ್ತಡಕ್ಕೊಳಗಾದ ಮಕ್ಕಳು
ತನ್ನನ್ನು ಇತರ ಸಹಪಾಠಿಗಳೊಂದಿಗೆ ಅತಿಯಾಗಿ ತುಲನೆ ಮಾಡಿಕೊಂಡು ಕೊರಗುತ್ತಿರುವ ಮಕ್ಕಳು
ಹಳೆಯ ಸ್ನೇಹಿತರನ್ನು ಹಠಾತ್ತನೆ ತ್ಯಜಿಸಿ ಒಬ್ಬಂಟಿಗರಾಗುತ್ತಿರುವ ಮಕ್ಕಳು
ಇತ್ತೀಚೆಗೆ ಮೊಬೈಲ್ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾ ಒಬ್ಬಂಟಿಗರಾಗಿರುವ ಮಕ್ಕಳು
ಈ ಹಿಂದೆ ಇದ್ದ ಹವ್ಯಾಸಗಳನ್ನು ಕಡೆಗಣಿಸಿ ಒಂಟಿಯಾಗಿರುವ ಮಕ್ಕಳು

ಇದ್ದಕ್ಕಿದ್ದಂತೆ ಮನಸ್ಸಿನ ಭಾವನೆಗಳಲ್ಲಿ ಏರಿಳಿತ, ಬಹಳ ಬೇಗ ಸಿಟ್ಟು ಮಾಡಿಕೊಳ್ಳುವುದು, ಹಿರಿಯರೊಂದಿಗೆ ವಾದಕ್ಕಿಳಿಯುವುದು
ಇಂತಹ ವರ್ತನೆಗಳನ್ನು ಮಾಡುವ ಮಕ್ಕಳು
ಜೀವನದಲ್ಲಿ ಜಿಗುಪ್ಸೆ ,ಮುಂದೆ ಏನು ದಾರಿ ತೋಚುತ್ತಿಲ್ಲ ಎಂದು ಪದೇ ಪದೇ ಆಗಿ ಹೇಳುತ್ತಿರುವ ಮಕ್ಕಳು
ಮಾದಕ ದ್ರವ್ಯ ಸೇವನೆ ಅಥವಾ ಸ್ವಯಂ ಹಾನಿ ಅಥವಾ ವೇಗದಲ್ಲಿ ಮೋಟಾರ್ ಬೈಕ್ ಬಿಡುವುದು ಮುಂತಾದ ಅಪಾಯಕಾರಿ
ನಡವಳಿಕೆಗಳನ್ನು ಅನುಸರಿಸಲು ಪ್ರಾರಂಭಿಸಿರುವ ಮಕ್ಕಳು
ಇವರುಗಳು ತಮ್ಮ ಮನಸ್ಸಿನ ನೋವುಗಳನ್ನು ಮರೆಯಲು ಈ ರೀತಿ ಮಾಡುತ್ತಾ ಇರಬಹುದು ಎಂಬುದನ್ನು ಹಿರಿಯರು
ಗುರುತಿಸಬೇಕು.
ಹಸಿವೆ ನಿದ್ರೆ ಇವುಗಳಲ್ಲಿ ಏರುಪೇರು ಕಂಡರೆ ಅಂದರೆ ಅತಿಯಾಗಿ ಮಲಗುವುದು ಇಲ್ಲವೇ ನಿದ್ರಾಹೀನತೆಯಿಂದ ಬಳಲುವುದು
ಹಾಗೆಯೆ ಅತಿಯಾಗಿ ತಿನ್ನುವುದು ಇಲ್ಲವೇ ಹಸಿವೆ ಇಲ್ಲ ಎನ್ನುವುದು ಇವುಗಳು ಭಾವನಾತ್ಮಕ ಸಮಸ್ಯೆಗಳ
ಕುರುಹುಗಳಾಗಿರಬಹುದು.
ಮೇಲೆ ಹೇಳಿದ ಚಿಹ್ನೆಗಳನ್ನು ತೋರ್ಪಡಿಸುವ ಮಕ್ಕಳ ಬಗ್ಗೆ ತಾಯಿ ತಂದೆಯರು ಗಮನಹರಿಸಬೇಕು. ಅವರ ಚಲನವಲನಗಳನ್ನು
ಗಮನಿಸಬೇಕು. ಅವರ ವರ್ತನೆಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಆತ್ಮಹತ್ಯಾ ಪ್ರವೃತ್ತಿಯ ಬಗ್ಗೆ ಹಲವು ಕುರುಹುಗಳು
ಇರುತ್ತವೆ. ಕೆಲವೊಮ್ಮೆ ಆತ್ಮಹತ್ಯೆಯ ಕುರಿತು ವ್ಯಂಗ್ಯವಾದ ಮಾತುಗಳು ,ಜೋಕುಗಳು ಕೂಡ ಅವರು ಹೇಳಬಹುದು. ಹಾಗೆಯೇ
ತಾವು ಇಷ್ಟಪಟ್ಟಂತಹ ಆಟದ ಸಾಮಾನುಗಳು ಅಥವಾ ವಸ್ತುಗಳನ್ನು ಇನ್ನೊಬ್ಬರಿಗೆ ನೀಡುವ ಬಗ್ಗೆ ಮಾತನಾಡಬಹುದು. ಹಾಗೆ
ಕೆಲವೊಮ್ಮೆ ವಿದಾಯ ಪತ್ರಗಳನ್ನು ಬರೆಯುತ್ತಿರಬಹುದು. ಇಂತಹ ವಿಷಯಗಳು ಗಮನಕ್ಕೆ ಬಂದಾಗ ತಾಯಿ ತಂದೆಯರು
ನಿರ್ಲಕ್ಷಿಸಬಾರದು.
ಮನೋವೈದ್ಯನಾಗಿ ನಾನು ಗಮನಿಸಿರುವುದೇನೆಂದರೆ ಹಲವೊಮ್ಮೆ ಈ ಮಕ್ಕಳು ನೇರವಾಗಿ ಅಥವಾ ಪರೋಕ್ಷವಾಗಿ ಮೇಲೆ
ತಿಳಿಸಿದ ನಡವಳಿಕೆಗಳನ್ನು ತೋರುತ್ತಿದ್ದರು ಹಿರಿಯರು ನಿರ್ಲಕ್ಷಿಸುತ್ತಾರೆ. ಮಕ್ಕಳಿಗೆ ಅಗತ್ಯವಾದ ಮುಕ್ತ ಮಾತುಕತೆ ಅಥವಾ ಆಪ್ತ
ಸಮಾಲೋಚನೆ ಕೆಲವೊಮ್ಮೆ ಮಾತ್ರೆ ಚಿಕಿತ್ಸೆ ಸರಿಯಾದ ಸಮಯಕ್ಕೆ ಸಿಗುವುದಿಲ್ಲ.
ಮುಕ್ತ ಮಾತುಕತೆ ಮಾಡಲು ತಾಯಿ ತಂದೆಯರಿಗೆ ಸಮಯವಿರುವುದಿಲ್ಲ. ಅಥವಾ ಅದರ ಅಗತ್ಯತೆ ಇದೆ ಎಂದು ಕೂಡ
ಅನಿಸುವುದಿಲ್ಲ. ಮಕ್ಕಳೇನಾದರೂ ತಮಗೆ ಆಪ್ತ ಸಮಾಲೋಚನೆಯ ಅಗತ್ಯತೆ ಇದೆ ಅಥವಾ ಮನೋವೈದ್ಯರಲ್ಲಿ ಕರೆದುಕೊಂಡು
ಹೋಗಿ ಎಂದರೆ ಅವರು ಬೇಕಂತೆ ನಾಟಕ ಮಾಡುತ್ತಾರೆ, ಟಿವಿ ಸೀರಿಯಲ್ ಗಳಿಂದ ಪ್ರಭಾವಿತರಾಗಿದ್ದಾರೆ ಮುಂತಾದ ಕುಂಟು
ನೆಪ ತಾಯಿ-ತಂದೆ ಮಾಡುತ್ತಾರೆ. ಹಲವಾರು ಬಾರಿ ಮಾನಸಿಕ ತುಮುಲಗಳನ್ನು ಪ್ರಾರಂಭದಲ್ಲಿ ಗುರುತಿಸಿ ಆಪ್ತ
ಸಮಾಲೋಚನೆ ಮಾಡಿದ್ದಲ್ಲಿ ಹಲವಾರು ಆತ್ಮಹತ್ಯೆಗಳನ್ನು ತಡೆಗಟ್ಟಬಹುದಾಗಿತ್ತು ಎನ್ನುವುದು ಮನೋವೈದ್ಯನಾಗಿ ನನ್ನ
ಅನಿಸಿಕೆ. ತೀವ್ರವಾದ ಖಿನ್ನತೆ, ಚಿತ್ತ ವಿಕಲತೆ, ಅತಿಯಾದ ಆತಂಕ ಇಂತಹ ಪರಿಸ್ಥಿತಿಗಳಲ್ಲಿ ಮಾತ್ರೆ ಚಿಕಿತ್ಸೆ ಕೂಡ ಅತಿ ಅಗತ್ಯ.
ಮಾನಸಿಕ ತಜ್ಞರು ನೀಡುವ ಚಿಕಿತ್ಸೆ ಕೇವಲ ನಿದ್ರೆ ಮಾತ್ರಗಳು ಅಥವಾ ಅಡಿಕ್ಷನ್ ಉಂಟು ಮಾಡುವ ಮಾತ್ರೆಗಳು ಎಂಬ ತಪ್ಪು
ನಂಬಿಕೆಯನ್ನು ಹಲವು ಹೆತ್ತವರು ಇಟ್ಟುಕೊಂಡಿರುತ್ತಾರೆ. ಇದನ್ನು ಹೆತ್ತವರು ತ್ಯಜಿಸಬೇಕು.
ಸಣ್ಣ ವಯಸ್ಸಿನಿಂದಲೇ ಹೆತ್ತವರಲ್ಲಿ ಯಾರಾದರೂ ಒಬ್ಬರಾದರೂ ಮಗುವಿನೊಂದಿಗೆ ಪ್ರತಿದಿನ ನಿರ್ದಿಷ್ಟ ಸಮಯ ಕಳೆಯುವ
ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಮಗುವು ತನ್ನ ಜೀವನದ ಆಗುಹೋಗುಗಳ ಬಗ್ಗೆ ಮಾತನಾಡುವ ಒಂದು ವ್ಯವಸ್ಥೆಯನ್ನು

ಮಾಡಬೇಕು. ಆದರೆ ಈ ವಯಸ್ಸಿನಲ್ಲಿ ಮಕ್ಕಳ ಕೆಲವು ನಿಲುವುಗಳು ಒಮ್ಮಿಂದೊಮ್ಮೆಲೆ ಪ್ರಕಟಗೊಳ್ಳುತ್ತವೆ ಮತ್ತು ತನ್ನಷ್ಟಕ್ಕೆ
ಬದಲಾಗುತ್ತವೆ. ಮಿತ್ರರ ಬಗ್ಗೆ ಇರಬಹುದು, ಅನ್ಯಲಿಂಗ ಆಕರ್ಷಣೆಯ ಬಗ್ಗೆ ಇರಬಹುದು, ಹೊಸ ಹವ್ಯಾಸದ ಬಗ್ಗೆ ಇರಬಹುದು
ಇವೆಲ್ಲಾ ಸರ್ವೇಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ತಾಯಿ ತಂದೆಯರು ಅತಿಯಾಗಿ ಹಸ್ತಕ್ಷೇಪ ಮಾಡಕೂಡದು. ಮಕ್ಕಳ
ಮೇಲೆ ಅನಗತ್ಯ ಒತ್ತಡ ಹೇರಕೂಡದು. ಮಕ್ಕಳು ಇದ್ದಂತೆ ಇರಲು ಬಿಡುವುದು ಬಹಳಷ್ಟು ಸರಿ ಅವರ ನಿಲುವುಗಳಲ್ಲಿ
ಬದಲಾವಣೆಯನ್ನು ತರಲು ಸಹಾಯಕಾರಿ.
ಇಂದು ಆತ್ಮಹತ್ಯಾ ಪ್ರಯತ್ನಗಳು, ಆತ್ಮಹತ್ಯೆಗಳು ಹೆಚ್ಚಾಗುತ್ತಿದೆ ಎಂಬ ವ್ಯಾಪಕ ಚರ್ಚೆ ಎಲ್ಲೆಡೆ ಆಗುತ್ತಿದೆ. ಆದರೆ ಅದಕ್ಕೆ ಕಾರಣ
ಇಂದಿನ ಶಿಕ್ಷಣ ವ್ಯವಸ್ಥೆ, ತಾಯಿ ತಂದೆಯರ ಗುರು ಹಿರಿಯರ ಧೋರಣೆಗಳು ಹೆಚ್ಚುತ್ತಿರುವ ಸ್ಪರ್ಧಾತ್ಮಕತೆ ಹಾಗೆಯೇ ಮೊಬೈಲ್
ಮೀಡಿಯಾ ಮುಂತಾದವುಗಳು ನಮ್ಮ ಮೆದುಳುಗಳ ಮೇಲೆ ಮಾಡುತ್ತಿರುವ ಹಸ್ತಕ್ಷೇಪ. ಇವುಗಳನ್ನು ಸರಿಪಡಿಸಲು ಏನು
ಮಾಡಬೇಕು ?ಬದಲಾವಣೆಗಳನ್ನು ಯಾರು ಮಾಡಬೇಕು ?ಈ ಬಗ್ಗೆ ಚರ್ಚೆಗಳು ಆಗುತ್ತಿಲ್ಲ. ಬೆಕ್ಕಿಗೆ ಘಂಟೆ ಕಟ್ಟುವವರು ಯಾರು?