Select Page

ಮದ್ಯಪಾನ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ಒಂದು ಅಪನಂಬಿಕೆ ಜನಮಾನಸದಲ್ಲಿ ಇದೆ. ಗಂಡಸರಾಗಲಿ
ಹೆಂಗಸರಲಾಗಲಿ ಇಬ್ಬರಲ್ಲೂ ಮದ್ಯಪಾನದ ಉಪಯೋಗ ಹೆಚ್ಚಾದಾಗ ಲೈಂಗಿಕ ಸಮಸ್ಯೆಗಳನ್ನು ಅದು ಹೆಚ್ಚಿಸುತ್ತದೆ.
ಶೇಕ್ಸ್ಪಿಯರ್ ತನ್ನ Macbeth ನಾಟಕದಲ್ಲಿ ಮದ್ಯಪಾನದ ಬಗ್ಗೆ ಹೇಳುವಂತೆ” It provoketh’s the desire,but takes away the
performance “
ಮದ್ಯಪಾನದ ಮತ್ತಿನಲ್ಲಿ ಲೈಂಗಿಕ ಕಾಮನೆಗಳು ಹೆಚ್ಚಾಗುತ್ತದೆ. ಆದರೆ ಲೈಂಗಿಕ ನಿರ್ವಹಣೆ ಸರಿಯಾಗಿ ನಡೆಯುವುದಿಲ್ಲ.
ಮದ್ಯಪಾನದ ಮತ್ತಿನಲ್ಲಿ ನಡವಳಿಕೆಯಲ್ಲಿ ಬದಲಾವಣೆಗಳನ್ನು ಗಮನಿಸಿರುತ್ತೀರಿ.ಮಿದುಳು ಮನುಷ್ಯನ ಅತ್ಯಂತ ಮುಖ್ಯ
ಲೈಂಗಿಕ ಅಂಗಾಂಗ ಎಂಬುದು ತಜ್ಞರ ಅಭಿಪ್ರಾಯ. ಹಲವೊಮ್ಮೆ ಮದ್ಯಪಾನ ಸ್ಪಲ್ಪ ಸೇವಿಸಿದ ಸಮಯದಲ್ಲಿ ಲೈಂಗಿಕ
ಆಸಕ್ತಿ ಜಾಸ್ತಿಯಾಗುವುದು ಹಾಗು ಸಾಮಾಜಿಕ ಜೀವನದಲ್ಲಿ ಸಾರ್ವಜನಿಕವಾಗಿ ಪ್ರತಿಭಂದಕವಾಗಿದ್ದ ವಿಷಯಗಳಲ್ಲಿ
ಲೈಂಗಿಕತೆ ಒಂದಾಗಿದ್ದರು ಕೂಡ ಪಾನಮತ್ತತೆಯ ಸಂಧರ್ಬದಲ್ಲಿ ಲೈಂಗಿಕ ಕಾಮನೆಗಳು ಎಲ್ಲಿ ಪ್ರಕಟಗೊಳ್ಳಬಾರದೋ
ಆಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಹೆಚ್ಚು.
ಮದ್ಯಪಾನದ ಮತ್ತಿನಲ್ಲಿ ಲೈಂಗಿಕ ಅತ್ಯಾಚಾರಗಳು ನಡೆಯುವುದು ಕೂಡ ಪತ್ರಿಕೆಗಳಲ್ಲಿ ಟಿವಿಯಲ್ಲಿ ಕಂಡಿರುತ್ತೀರಿ. ಮದ್ಯಪಾನಕ್ಕು
ಲೈಂಗಿಕ ಅಪರಾಧಗಳಿಗೂ ಬಹಳಷ್ಟು ನಂಟು ಇದೆ. ನಮ್ಮ ಈ ಕಾಲದಲ್ಲಿ ಚರ್ಚೆಗೆ ವಿಷಯವಾದ “ನಿರ್ಭಯ “ ಳ ಮೇಲೇ
ಉಂಟಾದ ಲೈಂಗಿಕ ಅತ್ಯಾಚಾರದಲ್ಲಿ ಕೂಡ ಮದ್ಯಪಾನದ ಪಾತ್ರ ಎದ್ದು ಕಾಣುತ್ತಾ ಇತ್ತು.ಮದ್ಯಪಾನದ ನಿಮಿತ್ತ ಅಮಾಯಕರು
ಸಮಸ್ಯೆಗೆ ಒಳಗಾಗುತ್ತಾರೆ. ಹಾಗೆಯೇ ಮದ್ಯಪಾನ ಮತ್ತಿನಲ್ಲಿ ಸುರಕ್ಷಿತ ಲೈಂಗಿಕತೆಯುತ್ತ ಗಮನ ಕೊಡದೆ ಹಲವಾರು ಗುಹ್ಯ
ರೋಗಗಳು ಕೂಡ ಹರಡಬಹುದು.
ಮದ್ಯಪಾನ ಮಾಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಲೈಂಗಿಕ ಕ್ರಿಯೆಯ ನಿರ್ವಹಣಾ ಸಾಮರ್ಥ್ಯ ದಲ್ಲಿ ಕೊರತೆ ಕಂಡು
ಬರುತ್ತದೆ.ಹಾಗೆ ಗಂಡಸರಲ್ಲಿ ಶಿಶ್ನದ ಸ್ಪರ್ಶ ಜ್ಞಾನ ಕಡಿಮೆಯಾಗುವುದು, ಶಿಶ್ನ ನಿಮಿರದಿರುವುದು, ಶಿಗ್ರಸ್ಖಲನ ವಾಗುವುದು
ಅಥವಾ ಸ್ಖಲನವೇ ಆಗದೆ ಇರುವುದು ವೈದ್ಯರು ಗಮನಿಸಿದ್ದಾರೆ. ಇದನ್ನು brewers droop ಎಂದು ಕರೆಯುತ್ತಾರೆ.ಹೆಚ್ಚಿನ
ಸಂದರ್ಭಗಳಲ್ಲಿ ಮದ್ಯಪಾನ ದ ಅಭ್ಯಾಸವನ್ನು ತ್ಯಜಿಸಿದ ಮೇಲೂ ಕೂಡ ಈ ಸಮಸ್ಯೆಗಳು ದೀರ್ಘಕಾಲೀನವಾಗಿ
ಉಳಿದುಕೊಳ್ಳುವುದು ಅಂದರೆ ಮದ್ಯಪಾನ ಲೈಂಗಿಕ ಅಂಗಾಂಗಗಳ ಮೇಲೆ ಶಾಶ್ವತ ಪರಿಣಾಮಗಳ ಮಾಡುತ್ತದೆ ಎಂಬುದು
ಕೂಡ ದೃಡಪಟ್ಟಿದೆ. ಗಂಡಸರಲ್ಲಿ ಮದ್ಯಪಾನದ ಸೇವನೆ ತೀವ್ರತೆ ಹೆಚ್ಚಾದಾಗ ಟೆಸ್ಟೋಸ್ಟೆರಾನ್ ಶೇಖರಣೆಯು ಕಡಿಮೆಯಾಗಿ
ಇದರಿಂದಾಗಿ ವೀರ್ಯಾಣುಗಳ ಉತ್ಪಾದನೆ ಕುಂಠಿತಗೊಂಡು ನಪುಂಸಕತ್ವ ಉಂಟಾಗಬಹುದು.
ವಿದೇಶಗಳಲ್ಲಿ “ಬಿಯರ್ ಗಾಗಲ್ಸ್ “ಎಂಬ ಒಂದು ಸ್ಲಾಂಗ್ ಪದವಿದೆ. ಇದರ ಪ್ರಕಾರ ಪಾನಮತ್ತತೆ ತೀವ್ರವಾದಾಗ ಅದರಿಂದಾಗಿ
ಮದ್ಯ ವ್ಯಸನಿಗೆ ಲೈಂಗಿಕ ಆಸೆ ತೀವ್ರವಾಗಿ ಕೆಲವೊಮ್ಮೆ ತಾವು ಕುಡಿಯದೇ ಇದ್ದಾಗ ಯಾವ ಹೆಣ್ಣಿನ ಬಗ್ಗೆ ಹೆಚ್ಚು ಆಸಕ್ತಿ
ಇರಲಿಲ್ಲವೋ ಅಂತಹ ಹೆಣ್ಣಿನೊಂದಿಗೆ ಲೈಂಗಿಕ ಕಾಮನೆಯನ್ನು ಬಯಸುವಂತೆ ಮಾಡುತ್ತದೆ. ಅಂದರೆ ಮದ್ಯಪಾನವು ಒಂದು
ಕೃತಕ ಕನ್ನಡಕವನ್ನು ಧರಿಸುವಂತೆ ಮಾಡುತ್ತದೆ ಎಂಬುದು ಹಾಗೂ ಇಷ್ಟವಿಲ್ಲದವರು ಆಕರ್ಷಕವಲ್ಲದವರು ಕೂಡ ಇಷ್ಟವಾಗುವ
ರೀತಿಯಲ್ಲಿ ಪ್ರೇರೇಪಿಸುತ್ತದೆ ಎಂದು ಹೇಳಲಾಗಿದೆ.

ಮಹಿಳೆ ಮತ್ತು ಮದ್ಯಪಾನ
ಮದ್ಯವು ಮಹಿಳೆಯರಲ್ಲಿ ಲೈಂಗಿಕ ಪ್ರಚೋದನೆ ಮತ್ತು ಬಯಕೆಯನ್ನು ಹೆಚ್ಚಿಸುತ್ತದೆ ಆದರೆ ಸೂಕ್ಷ್ಮತೆಯನ್ನು ಕಡಿಮೆ
ಮಾಡುತ್ತದೆ.
ಅತಿಯಾದ ಮದ್ಯಪಾನದಿಂದಾಗಿ ದೇಹವು ನಿರ್ಜಲೀಕರಣಗೊಳ್ಳುವ ಕಾರಣದಿಂದಾಗಿ ಯೋನಿ ಕೂಡ ಒಣಗಬಹುದು
ಮತ್ತು ಉತ್ತೇಜಿಸಿದರೂ ಅದರಿಂದ ಯೋನಿಯು ನಯ ( lubricate) ಆಗಲು ತುಂಬಾ ಸಮಸ್ಯೆ ಆಗುವುದು.
ರಸದೂತಗಳ ಅಸಮತೋಲನದ ಸಮಸ್ಯೆ ಮೊದಲೇ ಇರುವಂತಹ ಮಹಿಳೆಯರಲ್ಲಿ ಈ ಸಮಸ್ಯೆಯು ಇನ್ನಷ್ಟು
ಹೆಚ್ಚಾಗಿರುವುದು ಮತ್ತು ಇವರಲ್ಲಿ ಯೋನಿ ಒಣಗುವುದು ಇನ್ನು ಹೆಚ್ಚಾಗುವುದು. ಹಾಗೆಯೆ ಅತಿಯಾಗಿ ಕುಡಿದರೆ
ಮಹಿಳೆಯರಿಗೆ ಸಂಭೋಗದ ಸಮಯದಲ್ಲಿ ಪರಾಕಾಷ್ಠೆ (orgasm)ತಲುಪಲು ಸಾಕಷ್ಟು ವಿಳಂಬವಾಗಬಹುದು. ಇದು
ಯಾಕೆಂದರೆ ಪಾನಮತ್ತತೆಯಿಂದ ದೈಹಿಕ ಸ್ಪರ್ಶವು ಸರಿಯಾಗಿ ಗೊತ್ತಾಗುವುದಿಲ್ಲ ಮತ್ತು ಹಾಗೆಯೇ ಶಿಶ್ನ ಅಥವಾ
ಯೋನಿಗೆ ಹೆಚ್ಚು ಉದ್ರೇಕವಾಗದೆ ಹೋಗಬಹುದು.ಪರಾಕಾಷ್ಠೆ (orgasm) ಮೇಲೆ ಮದ್ಯದ ಪ್ರಭಾವ ಗಂಡು ಹಾಗು
ಹೆಣ್ಣು ಇಬ್ಬರಲ್ಲೂ ಕಂಡುಬರುತ್ತದೆ.
ಮಹಿಳೆಯರು ತೀವ್ರ ಮದ್ಯ ವ್ಯಸನಿ ಆದಲ್ಲಿ ಅವರು ಗರ್ಭಧರಿಸಿದ ನಂತರವೂ ಮದ್ಯಪಾನ ಮುಂದುವರಿಸಿದಲ್ಲಿ
ಅವರಿಗೆ ಹುಟ್ಟುವ ಮಗುವಿಗೆ ಬುದ್ಧಿಮಾಂದ್ಯತೆ,ಸೀಳು ತುಟಿ,ಮುಂತಾದ ನ್ಯೂನತೆಗಳು ಉಂಟಾಗಬಹುದು. ಈ ಮಕ್ಕಳ
ನ್ಯೂನತೆಯನ್ನು fetal alcohol syndrome ಎನ್ನುತ್ತಾರೆ. ಮದ್ಯ ವ್ಯಸನವು ಮಹಿಳೆಯರಲ್ಲಿ ಋತುಸ್ರಾವದ ಪ್ರಮಾಣ
ಹೆಚ್ಚಿಸುವುದು ಹಾಗೂ ಋತುಸ್ರಾವದ ಸಮಯದಲ್ಲಿ ಉಂಟಾಗುವ ಹೊಟ್ಟೆ ನೋವು ಜಾಸ್ತಿ ಮಾಡುವುದು.
ಮದ್ಯಪಾನವು ಆಂಡೋತ್ಪತ್ತಿಯ ಮೇಲೆ ಪರಿಣಾಮವನ್ನು ಬೀರಿ ಹಲವರಲ್ಲಿ ಬಂಜೆತನವನ್ನುಂಟು ಮಾಡಬಹುದು.
ಹಾಗೆಯೇ ಮದ್ಯಪಾನದ ಕಾರಣದಿಂದ ರಸದೂತಗಳ ಏರುಪೇರು ಉಂಟಾಗಿ ಮದ್ಯ ವ್ಯಸನ ಮಾಡುತ್ತಿರುವ
ಮಹಿಳೆಯರಲ್ಲಿ ಖಿನ್ನತೆ ಆತಂಕ ಮುಂತಾದ ಸಮಸ್ಯೆಗಳು ಕೂಡ ಹೆಚ್ಚು.
ಈ ವಿಷಯಗಳು ಜನಸಾಮಾನ್ಯರಿಗೆ ಗೊತ್ತಾಗುವುದಿಲ್ಲ. ಮದ್ಯಪಾನ ಲೈಂಗಿಕ ಶಕ್ತಿವರ್ಧಕ ಎಂಬ ತಪ್ಪು ಅಭಿಪ್ರಾಯ
ಜನಮಾನಸದಲ್ಲಿ ಬೇರೂರಿದೆ. ಇದರಿಂದಾಗಿ ಬಹಳಷ್ಟು ಜನರು ಮದ್ಯ ಸೇವನೆಯತ್ತಾ ವಾಲುತ್ತಾರೆ. ಕೆಲವರು
ಲೈಂಗಿಕ ಕ್ರಿಯೆಯ ಬಗ್ಗೆಯೇ ಆತಂಕ ಇಟ್ಟುಕೊಂಡಿರುತ್ತಾರೆ ಹಾಗು ಮದ್ಯ ಸೇವನೆ ಮಾಡಿದಾಗ ಈ ಆತಂಕ
ಕಡಿಮೆಯಾಗಿ ಲೈಂಗಿಕ ಸಂಭೋಗ ಮಾಡುವಂತೆ ಆಗುತ್ತದೆ. ಇದು ಅವರಲ್ಲಿ ಮದ್ಯ ಸೇವನೆಯೂ ತನ್ನ ಸಮಸ್ಯೆ ದೂರ
ಮಾಡಿತು , ಅದು ಲೈಂಗಿಕ ಶಕ್ತಿವರ್ಧಕ ಅನ್ನುವ ಯೋಚನೆ ಉಂಟುಮಾಡುತ್ತದೆ.ಇದೇ ರೀತಿಯಲ್ಲಿ ಮದ್ಯ ಪಾನ ಸ್ಟೇಜ್
ಮೇಲೆ ಮಾತಾಡಲು ಹೆದರಿಕೆಗೆ ಮದ್ದು, ಮನಸ್ಸಿನ ಒತ್ತಡಕ್ಕೆ ಮದ್ದು ಎಂದೆಲ್ಲ ಪ್ರಚಾರ ಪಡೆದಿದೆ.
ಹೀಗೆ ಜನರಿಂದ ಜನರಿಗೆ ಈ ರೀತಿ ಮಾಹಿತಿಗಳು ಹರಡಿ ಈ ರೀತಿಯ ನಂಬಿಕೆಗಳು ಸಮಾಜದಲ್ಲಿ ರೂಪುಗೊಳ್ಳುತ್ತವೆ.
ಸಣ್ಣ ಪ್ರಮಾಣದಲ್ಲಿ ಮದ್ಯಪಾನವು ಆತಂಕವನ್ನು ಕಡಿಮೆ ಮಾಡಿ ಲೈಂಗಿಕ ನಿರ್ವಹಣೆ ಇರಬಹುದು ಅಥವಾ

ಸಾಮಾಜಿಕ ಸನ್ನಿವೇಶಗಳ ನಿರ್ವಹಣೆ ಇರಬಹುದು ಇದಕ್ಕೆ ಸಹಾಯ ಮಾಡುತ್ತದೆ. ಅದರೆ ಮದ್ಯ ಸೇವನೆಯ
ಪ್ರಮಾಣವು ಜಾಸ್ತಿಯಾದಾಗ ಲೈಂಗಿಕ ನಿರ್ವಹಣೆ,ಸ್ಟೇಜ್ ಮೇಲೆ ಮಾತಾಡುವುದು ಎರಡನ್ನು ಕೂಡ ಕುಗ್ಗಿಸುತ್ತದೆ.
ಮದ್ಯಪಾನ ಸೇವನೆ ಒಮ್ಮೆ ಶುರು ಮಾಡಿದ ಮೇಲೆ ಅದರ ಪರಿಮಾಣ ಮತ್ತು ಪರಿಣಾಮ ಕೂಡ ಜಾಸ್ತಿಯಾಗುತ್ತಾ
ಹೋಗುತ್ತದೆ ಹಾಗು ದುಷ್ಪರಿಣಾಮಗಳು ಜಾಸ್ತಿಯಾಗುತ್ತಾ ಹೋಗುತ್ತದೆ. ನೆನಪಿರಲಿ ಮದ್ಯಪಾನ ಲೈಂಗಿಕ ಶಕ್ತಿವರ್ಧಕ
ಅಲ್ಲ