Select Page

ಮಾನಸಿಕ ಆರೋಗ್ಯ ಮತ್ತು ದಾದಿಯರು. ಮನೋವೈದ್ಯ ಹಾಗೂ ಆಡಳಿತ ಅಧಿಕಾರಿಯೊಬ್ಬನ ಆತ್ಮ ನಿವೇದನೆ
ಮೇ 12 ಅಂತರಾಷ್ಟ್ರೀಯ ನರ್ಸಸ್ ದಿನಾಚರಣೆ ಈ ಕಾರಣದಿಂದ ಈ ಬಗ್ಗೆ ಬರೆಯುವ ಎಂದುಕೊಂಡೆ.
ಆರೋಗ್ಯ ಕ್ಷೇತ್ರದಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುವವರು ನಮ್ಮ ದಾದಿಯರು. ಅವರ ನಗುಮುಖದ ಸೇವೆ, ಎಚ್ಚರದ
ಕಾಯುವಿಕೆ, ಸಾಂತ್ವಾನದ ಮಾತುಗಳು, ವೈದ್ಯರು ತಿಳಿಸಿದ ಮಾತ್ರೆಗಳನ್ನು ಸರಿಯಾದ ಕ್ರಮದಲ್ಲಿ ಕೊಡುವುದು ಮತ್ತು
ಕಾಯಿಲೆಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವುದು ಹಲವಾರು ರೋಗಗಳನ್ನು ಗುಣಪಡಿಸ ಬಲ್ಲದು. ವೈದ್ಯನಾಗಿ ನಾನು
ನೋಡಿರುವುದೆಂದರೆ ಹಲವಾರು ದಾದಿಯರು ತಮ್ಮ ನಾಯಕತ್ವ ಗುಣದಿಂದ ರೋಗಿಗಳ ಹಾಗೂ ವೈದ್ಯರ ಜೀವನದಲ್ಲೂ ಕೂಡ
ಬದಲಾವಣೆ ತರಬಲ್ಲರು. ನಾನೊಬ್ಬ ಕಿರಿಯವೈದ್ಯನಾಗಿದ್ದಾಗ ಕೆಲವೊಮ್ಮೆ ಹಿರಿಯ ದಾದಿಯರ ಮಾರ್ಗದರ್ಶನದಲ್ಲಿ ಹಲವಾರು
ವೈದ್ಯಕೀಯ ಪ್ರೊಸೀಜರ್ಗಳನ್ನು ಮಾಡುವುದು ಉದಾಹರಣೆಗೆ ಮೂತ್ರನಾಳಕ್ಕೆ ಕೆತೆಟರ್ ಹಾಕುವುದು, ನಿರ್ಜಲೀಕರಣದ
ಸಮಯದಲ್ಲಿ ರಕ್ತನಾಳಗಳನ್ನು ಹುಡುಕುವುದು ಮುಂತಾದವುಗಳನ್ನು ಕಲಿತಿದ್ದೇನೆ. ಇವತ್ತಿಗೂ ವೈದ್ಯಕೀಯ ತುರ್ತು
ಪರಿಸ್ಥಿತಿಗಳಲ್ಲಿ ನಮ್ಮ ಆಸ್ಪತ್ರೆಯ ನರ್ಸಿಂಗ್ ಮೇಲ್ವಿಚಾರಕರು ಹಲವಾರು ವಿಷಯಗಳಲ್ಲಿ ನಮಗೆ ಮಾರ್ಗದರ್ಶಕರಾಗುತ್ತಾರೆ.
ಮನೋವೈದ್ಯಕೀಯ ವಾರ್ಡ್ಗಳಲ್ಲಿ ಆಕ್ರಮಣಕಾರಿಯಾಗಿರುವ ರೋಗಿಗಳನ್ನು ಎದುರಿಸುವುದು, ಆತ್ಮಹತ್ಯೆ ಪ್ರಯತ್ನ ಮಾಡುವ
ರೋಗಿಗಳನ್ನು ನೋಡಿಕೊಳ್ಳುವುದು, ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ ಸಂಬಂಧಿಕರು ಹಾಗೂ ವೈದ್ಯರು ಗಳ ಮೇಲೆ ಇರುವ
ಸಿಟ್ಟನ್ನು ಹೆಚ್ಚಿನ ರೋಗಿಗಳು ದಾದಿಯರ ಮೇಲೆ ತೋರಿಸುವುದು ಸಾಮಾನ್ಯ . ಕೆಲವೊಮ್ಮೆ ಹಿರಿಯ ಅಥವಾ ಕಿರಿಯ ವೈದ್ಯರ
ಕೆಂಗಣ್ಣಿಗೆ ಕೂಡ ಇವರು ಗುರಿಯಾಗುತ್ತಾರೆ. ಹಾಗೆಯೇ ವೈದ್ಯರುಗಳ ನಡುವಿನ ಪರಸ್ಪರ ಸಮಸ್ಯೆಗಳು ಅದನ್ನು ದಾದಿಯರ
ಮೇಲೆ ಅವರು ತೀರಿಸಿಕೊಳ್ಳುವುದು ಕೂಡ ಸಾಮಾನ್ಯವಾಗಿ ನೋಡುತ್ತೇವೆ.
ನಾನು ವೈದ್ಯನಾಗಿ ಒಂದು ಹತ್ತು ನಿಮಿಷ ರೋಗಿಯೊಂದಿಗೆ ವಾರ್ಡಿನಲ್ಲಿ ಮಾತನಾಡಬಹುದು ಅಥವಾ ನನ್ನ ಸಲಹಾ ಕೊಠಡಿಗೆ
ಕರೆದು ಆಪ್ತ ಸಲಹೆ ನೀಡಬಹುದು. ಆದರೆ ಅವರೊಂದಿಗೆ ಅತಿ ಹೆಚ್ಚು ಸಮಯ ಕಳೆಯುವವರು ನಮ್ಮ ದಾದಿಯರು. ರೋಗಿಯ
ಯೋಗಕ್ಷೇಮವೇ ಮೊದಲು ಎಂಬ ಧ್ಯೇಯವನ್ನು ಇಟ್ಟುಕೊಂಡು ರೋಗಿಗಳೊಂದಿಗೆ ಮಾನವೀಯವಾಗಿ ವರ್ತಿಸಿ ಅವರನ್ನು
ಗುಣಮುಖರನ್ನಾಗಿ ಮಾಡಿರುವುದು ನಮ್ಮ ದಾದಿಯರು. ಆಸ್ಪತ್ರೆಯಲ್ಲಿ ರೋಗಿಗಳ ಸುರಕ್ಷತೆಗಾಗಿ ಹಾಗೆಯೆ ಸೋಂಕು
ಹರಡದಂತೆ ನೋಡಿಕೊಳ್ಳಲು ಹಾಗೂ ರೋಗಿಗಳು ಬೇಗ ಗುಣಮುಖರಾಗಲು ದಾದಿಯರ ಜವಾಬ್ದಾರಿಗಳೆ ಹೆಚ್ಚು. ತೀವ್ರನಿಗಾ
ಘಟಕದಲ್ಲಿ ಅಂತೂ ಜೀವನ್ಮರಣದ ಸನ್ನಿವೇಶದಲ್ಲಿ ದಾದಿಯರು ತೋರುವ ದಯೆ, ಅನುಕಂಪ ಎಷ್ಟೋ ರೋಗಿಗಳಿಗೆ
ಗುಣಮುಖರಾಗಲು ಪ್ರಮುಖ ಕಾರಣ. ಹಾಗೆಯೇ ಜೀವನ್ಮರಣದ ನಡುವೆ ಹೋರಾಟದಲ್ಲಿರುವ ಹಲವಾರು ರೋಗಿಗಳಿಗೆ ಇದು
ಬದುಕಲು ಪ್ರೇರಣೆ ಕೊಡುತ್ತದೆ.
ಹೀಗೆ ಆಸ್ಪತ್ರೆಯಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುವ ದಾದಿಯರು ಅವರ ದೈನಂದಿನ ಕೆಲಸಗಳಿಂದ ಸಾಕಷ್ಟು ಒತ್ತಡಕ್ಕೆ
ಕೂಡ ಒಳಗಾಗುತ್ತಾರೆ. ಆಸ್ಪತ್ರೆಗಳಲ್ಲಿ ನೋವು, ಸಾವುಗಳನ್ನು ಬಹಳ ಹತ್ತಿರದಿಂದ ನೋಡಿರುತ್ತಾರೆ. ಆಸ್ಪತ್ರೆಯಲ್ಲಿ ತಿಳಿದು
ತಿಳಿಯದೆಯೋ ನಡೆಯುವ ಹಲವಾರು ನೈತಿಕ ಸಂದಿಗ್ದತೆಗಳನ್ನು ಗಮನಿಸಿ ಒತ್ತಡಕ್ಕೆ ಒಳಗಾಗುತ್ತಾರೆ. ಆತಂಕ ಖಿನ್ನತೆ ಪೋಸ್ಟ್
ಟ್ರೋಮ್ಯಾಟಿಕ್ ಸ್ಟ್ರೆಸ್ ಡಿಸ್ಆರ್ಡರ್ (ಸುದೀರ್ಘ ಕಾಲ ಒತ್ತಡಗಳ ನಡುವೆ ಬದುಕಿದವರಲ್ಲಿ ಉಂಟಾಗುವ ಒಂದು ಸಮಸ್ಯೆ) ಇವು
ಸಾಮಾನ್ಯ ಜನರಿಗಿಂತ ಜಾಸ್ತಿ ಇವರಲ್ಲಿ ಕಂಡು ಬರುತ್ತದೆ. ಒತ್ತಡದ ತೀಕ್ಷ್ಣ ಅಂಶವಾದ ಬರ್ನೌಟ್ (burnout) ಅಂದರೆ

“ದಹನತೆ” ಅಂದರೆ ಬಹಳಷ್ಟು ವರ್ಷಗಳ ಕಾಲ ದಾದಿಯಾಗಿ ಕೆಲಸ ನಿರ್ವಹಿಸಿ ಒಂದು ರೀತಿಯ ಶಕ್ತಿ ಕುಂದುವಿಕೆ, ಆಯಾಸ
,ಉತ್ಸಾಹ ಕುಗ್ಗುವಿಕೆ ಇವರಲ್ಲಿ ಉಂಟಾಗುತ್ತದೆ.
ಇಂತಹ ಸಮಯದಲ್ಲಿ ದಾದಿಯರ ಆರೋಗ್ಯದ ಹಾಗೂ ಯೋಗ ಕ್ಷೇಮದ ಮೇಲೆ ಪರಿಣಾಮಗಳೊಂದಿಗೆ ಅವರ ಕೆಲಸದ ಮೇಲೆ
ಕೂಡ ಪರಿಣಾಮಗಳು ಉಂಟಾಗುತ್ತದೆ. ಅವರು ರೋಗಿಗಳನ್ನು ನೋಡಿಕೊಳ್ಳುವ ರೀತಿಯಲ್ಲಿ ಬದಲಾವಣೆಗಳು ಬರುತ್ತವೆ,
ತಪ್ಪುಗಳು ಜಾಸ್ತಿ ಆಗುತ್ತದೆ ಹಾಗೂ ರೋಗಿಗಳು ಅತೃಪ್ತರಾಗುತ್ತಾರೆ.
ಮನೋವೈದ್ಯನಾಗಿ ನನ್ನ ಅನಿಸಿಕೆ ಏನಂದರೆ ಆಸ್ಪತ್ರೆಗಳು ದಾದಿಯರ ಮಾನಸಿಕ ಆರೋಗ್ಯದತ್ತ ಗಮನ ನೀಡಲೇಬೇಕು. ಇತ್ತ
ಆಸ್ಪತ್ರೆಯ ವೃತ್ತಿಯ ಸಮಸ್ಯೆಗಳು ಅತ್ತ ಮನೆಯ ಜವಾಬ್ದಾರಿಗಳು ಇದರಿಂದಾಗಿ ಹಲವು ದಾದಿಯರು ಒತ್ತಡದಿಂದ
ವಿಚಲಿತರಾಗುತ್ತಾರೆ.
ದಾದಿಯರ ಮಾನಸಿಕ ಆರೋಗ್ಯದಲ್ಲಿ ಆಸ್ಪತ್ರೆಗಳ ಪಾತ್ರ
ಆಸ್ಪತ್ರೆಯ ದಾದಿಯರ ಮಾನಸಿಕ ಆರೋಗ್ಯವನ್ನು ಒಂದು ಆದ್ಯತೆಯ ವಿಷಯವಾಗಿ ಆಸ್ಪತ್ರೆಗಳು ಪರಿಗಣಿಸಬೇಕು.
ಆಸ್ಪತ್ರೆಗಳಲ್ಲಿ ಸಾವು ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಯಿಂದ ಸಮಸ್ಯೆಗಳಾದಾಗ ಅದನ್ನು ಹೇಗೆ ನಿಭಾಯಿಸಬೇಕು ಹೇಗೆ
ಎದುರಿಸಬೇಕು ಎಂಬ ತರಬೇತಿ ದಾದಿಯರಿಗಾಗಿ ಆಸ್ಪತ್ರೆಗಳು ನೀಡಲೇಬೇಕು. ದಾದಿಯರಿಗಾಗಿ ನಿಯಮಿತ ಮಾನಸಿಕ
ಆರೋಗ್ಯ ತಪಾಸಣೆಗಳು ಅಗತ್ಯ.ಅವರಲ್ಲಿ ಉಂಟಾಗುವ ಭಾವನಾತ್ಮಕ ಗೊಂದಲಗಳ ಬಗ್ಗೆ ಮುಕ್ತವಾದ ಚರ್ಚೆ ಮತ್ತು ಸಂವಾದ
ನಡೆಯಬೇಕು. ಅವರ ಕೆಲಸದ ಹೊರೆ ಜಾಸ್ತಿ ಆಗುತ್ತಿದ್ದರೆ ಅದರ ಬಗ್ಗೆ ಸ್ಪಷ್ಟವಾದ ನಿರ್ಣಯ ಅಗತ್ಯ. ಹಾಗೆ ಅವರಿಗೆ ವೃತ್ತಿ ಜೀವನ
ಸಮತೋಲನತೆ (ವರ್ಕ್ ಲೈಫ್ balance) ಹೆಚ್ಚಿಸುವ ಬಗ್ಗೆ ಮಾಹಿತಿ ನೀಡುವುದು ಅಗತ್ಯ. ಹೀಗೆ ಮಾಡಿದಾಗ ಪೂರಕವಾಗಿ
ರೋಗಿಗಳ ಸುರಕ್ಷತೆ ಕೂಡ ಹೆಚ್ಚಾಗುತ್ತದೆ ಎಂಬುದನ್ನು ಆಸ್ಪತ್ರೆಗಳು ಅರಿತುಕೊಳ್ಳಬೇಕು.
ಆಸ್ಪತ್ರೆಗಳು ವೈದ್ಯಕೀಯವಾಗಿ ಬಹಳ ಮುಂದುವರಿದಿದ್ದರು ಹಾಗೂ ತಾಂತ್ರಿಕ ಪರಿಣತಿ ಪಡೆದಿದ್ದರು ಸಹನುಭೂತಿಯ ಆರೈಕೆ
ಬಹಳ ಕಡಿಮೆಯಾಗುತ್ತಿದೆ ಎಂಬುದು ತಜ್ಞರ ಅಂಬೋಣ. ಈ ಸಹಾನುಭೂತಿಯ ಆರೈಕೆಗೆ ದಾದಿಯರು ಅನಿವಾರ್ಯ. ಇಂದು
ನರ್ಸಸ್ ದಿನಾಚರಣೆ ಎನ್ನುವಾಗ ಒಬ್ಬ ಮನೋವೈದ್ಯನಾಗಿ, ಆಡಳಿತ ನಿರ್ದೇಶಕನಾಗಿ ನನ್ನ ಮನಸ್ಸಿಗೆ ಅನ್ನಿಸುವುದಂದರೆ
ನಾವು ಅಂದರೆ ವೈದ್ಯ ವೃತ್ತಿಯವರು ಹಾಗೂ ಆಡಳಿತಾತ್ಮಕ ಕೆಲಸಗಳನ್ನು ಮಾಡುತ್ತಿರುವವರು ದಾದಿಯರಿಗಾಗಿ ಹೆಚ್ಚು ಏನು
ಮಾಡುತ್ತಿಲ್ಲ, ಕೇವಲ ಆಚರಣೆಗಾಗಿ ನರ್ಸಸ್ ದಿನಾಚರಣೆ ಮಾಡಿ ಪ್ರಯೋಜನವಿಲ್ಲ ಅಂತ ಅನಿಸಿತು. ಈ ಬಗ್ಗೆ ಕೆಲವು
ನಿರ್ಧಾರಗಳನ್ನು ಖಂಡಿತ ಜಾರಿ ಮಾಡುವ ನಿರ್ಧಾರ ಮಾಡಿದೆ.
ದಾದಿಯರಿಗಾಗಿ ಕೆಲವು ಸ್ವಆರೈಕೆಯ ಸಲಹೆಗಳು:
1. ದಿನಕ್ಕೆ ಆರ ರಿಂದ ಎಂಟು ಗಂಟೆಗಳ ನಿದ್ರೆ ಅತಿ ಅಗತ್ಯ
2. ಫಾಸ್ಟ್ ಫುಡ್ ,ಬೇಕರಿ ಪದಾರ್ಥಗಳು ಬ್ರೆಡ್ ,ಬನ್, ನೂಡಲ್ಸ್ ತ್ಯಜಿಸಿ ಬಿಪಿ ಸಕ್ಕರೆ ಕಾಯಿಲೆ ಇಲ್ಲದಿದ್ದರೆ ಹಣ್ಣು ,ಸಂಪೂರ್ಣ
ಧಾನ್ಯಗಳು ಇವುಗಳನ್ನು ತಿನ್ನಿ. ಬಿಪಿ ಸಕ್ಕರೆ ಕಾಯಿಲೆ ಇದ್ದರೆ ವೈದ್ಯರಿಂದ ಸರಿಯಾದ ಅಹಾರ ಕ್ರಮವನ್ನು ತಿಳಿದುಕೊಳ್ಳಿ.
3. ದಿನಕ್ಕೆ 10 ನಿಮಿಷ ದೀಪ್ ಬ್ರೀತಿಂಗ್ (ಗಾಡ ಉಸಿರಾಟ) ಪ್ರಾಣಾಯಮ ,ಧ್ಯಾನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿದರೆ
30 ನಿಮಿಷ ನಡಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮ ಮಾಡುತ್ತದೆ.

4. ಮನಸ್ಸಿನ ಒತ್ತಡ ಹೆಚ್ಚಾದಾಗ ಯಾರಾದರೂ ಇತರ ಹಿರಿಯ ದಾದಿ ಯೊಂದಿಗೆ ಇಲ್ಲವೇ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ
,ಆಡಳಿತ ಅಧಿಕಾರಿ ಅಥವಾ ವೈದ್ಯಕೀಯ ಅಧೀಕ್ಷಕರೊಂದಿಗೆ ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ .A problem shared is
problem halved, problem kept in mind is problem doubled.
5. ರಜೆಯ ದಿನಗಳಲ್ಲಿ ಕುಟುಂಬದವರೊಂದಿಗೆ ಸ್ನೇಹಿತರೊಂದಿಗೆ ಸಮಯ ಕಳೆಯಿರಿ.
6. ಆಸ್ಪತ್ರೆಯಲ್ಲಿ ನಿರೀಕ್ಷೆಗೂ ಮೀರಿ ಒತ್ತಡವನ್ನು ನಿಮ್ಮ ಮೇಲ್ವಿಚಾರಕರು ಹೇರುತ್ತಿದ್ದಾರೆ ಎಂದು ಅನಿಸಿದರೆ”ನನ್ನಿಂದ ಸಾಧ್ಯವಿಲ್ಲ
“ಎಂದು ಹೇಳುವುದು ಕಲಿಯಿರಿ.
7. ಒತ್ತಡ ಅತಿ ಹೆಚ್ಚಾದರೆ ವೃತ್ತಿಪರ ಕೌನ್ಸಿಲಿಂಗ್ ಅಥವಾ ಮನೋ ಸಾಮಾಜಿಕ ಸಹಾಯ ಪಡೆಯಿರಿ
8. ದಾದಿಯಾಗಿ ನೀವು ಹಲವಾರು ಒಳ್ಳೆಯ ಕೆಲಸಗಳನ್ನು ಆಸ್ಪತ್ರೆಯಲ್ಲಿ ಮಾಡುತ್ತೀರಿ. ದಿನದ ಕೊನೆಯಲ್ಲಿ ನಾನು ಇಂದು
ಇಂತಹ ಒಳ್ಳೆಯ ಕೆಲಸ ಮಾಡಿದೆ ಎಂದು ಗುರುತಿಸಿಕೊಳ್ಳಿ. “ನಾನು ಇತರರಿಗೆ ಸಹಾಯ ಮಾಡುತ್ತಿದ್ದೇನೆ “ಎಂಬ ಧನಾತ್ಮಕ
ಮನೋಭಾವ ಹೆಚ್ಚಾಗಲಿ.
ಆಸ್ಪತ್ರೆಗಳಲ್ಲಿ ನಿಮಗೆ ಸಮಸ್ಯೆಗಳಾಗುತ್ತಿದ್ದರೆ ಆಸ್ಪತ್ರೆಯ” ಗ್ರೀವೆನ್ಸ್ ಸೇಲ್” ಸಂಪರ್ಕಿಸಿ. ಲಿಖಿತ ದೂರು ಅಥವಾ ಆನ್ಲೈನ್
ಪೋರ್ಟಲ್ ನಲ್ಲಿ ದೂರು ದಾಖಲಿಸಿ. ಹಾಸ್ಪಿಟಲ್ ನೀತಿಗಳನ್ನು ಅವಲಂಬಿಸಿ ಏಳರಿಂದ ಹದಿನೈದು ದಿನಗಳೊಂದಿಗೆ ಪ್ರತಿಕ್ರಿಯೆ
ನೀಡಲಾಗುತ್ತದೆ. ನೀವು ನೀಡುವ ದೂರು ಗೌಪ್ಯವಾಗಿ ಇಡಲಾಗುತ್ತದೆ. ನಿಮ್ಮ ಸಮಸ್ಯೆಗಳನ್ನು ಮುಕವಾಗಿ ಸಹಿಸಿಕೊಳ್ಳಬೇಡಿ
“ಗ್ರಿವನ್ಸ್ ಸೆಲ್ ನಿಮ್ಮ ಹಕ್ಕು”.
ನಿಮ್ಮ ಸಹ ಕಾಳಜಿ ನಿಮ್ಮನ್ನು ಇನ್ನಷ್ಟು ದೀರ್ಘಕಾಲದ ವರೆಗೆ ಉತ್ತಮ ಸೇವೆ ನಡೆಸಲು ಸಹಾಯ ಮಾಡುತ್ತದೆ. ಇದು ನನ್ನ
ಸ್ವಂತ ಅನುಭವ ಕೂಡ.
Happy Nurses Day