Select Page

ಆತ್ಮಹತ್ಯಾ ಸಹಾಯವಾಣಿಗಳು: ಹತಾಶೆಯ ಸಮಯದಲ್ಲಿ ಆಶಾದಾಯಕ ಜೀವನಾಡಿ

ಪ್ರತಿ ವರ್ಷ, ಜಗತ್ತಿನಾದ್ಯಂತ ಸುಮಾರು 700,000 ಜನರು ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ – ಮತ್ತು ಇದರಲ್ಲಿ ಹೃದಯ ವಿದ್ರಾವಕ ವಿಷಯವೆಂದರೆ, ಈ ಸಾವುಗಳಲ್ಲಿ ಸುಮಾರು 25% ಭಾರತದಲ್ಲಿ ಸಂಭವಿಸುತ್ತಿವೆ. ರಸ್ತೆ ಅಪಘಾತಗಳು ಮತ್ತು ಹೆರಿಗೆ ಸಮಯದಲ್ಲಿನ ಸಾವಿನ ಸಂಖ್ಯೆಯನ್ನು ಮೀರಿಸಿ, 15 ರಿಂದ 39 ವರ್ಷ ವಯಸ್ಸಿನ ಯುವ ಭಾರತೀಯರಲ್ಲಿ ಆತ್ಮಹತ್ಯೆ ಈಗ ಪ್ರಮುಖ ಸಾವಿನ ಕಾರಣವಾಗಿದೆ. ಈ ತರಹದ ಪ್ರತಿ ಅಂಕಿ-ಅಂಶದ ಹಿಂದೆ ಆಳವಾದ ನೋವು, ಏಕಾಂತ ಮತ್ತು ನಿರಾಶೆಯ ಕಥೆ ಅಡಗಿದೆ – ಆದರೂ, ಈ ಸಾವುಗಳಲ್ಲಿ ಹೆಚ್ಚಿನವು ತಡೆಗಟ್ಟಬಹುದಾದವು. ಮಾನಸಿಕ ಆರೋಗ್ಯ ಸೇವೆಗಳು ಇನ್ನೂ ವಿರಳವಾಗಿರುವ ದೇಶದಲ್ಲಿ – ಪ್ರತಿ 100,000 ಜನರಿಗೆ ಒಬ್ಬರಿಗಿಂತ ಕಡಿಮೆ ಮನೋವೈದ್ಯರು ಇದ್ದಾರೆ – ಆತ್ಮಹತ್ಯಾ ಸಹಾಯವಾಣಿಗಳು ದುಃಖ ಮತ್ತು ಆರೈಕೆಯ ನಡುವಿನ ಅತ್ಯಂತ ಸುಲಭವಾಗಿ ಲಭ್ಯವಿರುವ ಮತ್ತು ಸಹಾನುಭೂತಿಯ ಸೇತುವೆಯಾಗಿ ಹೊರಹೊಮ್ಮಿವೆ.
ಆತ್ಮಹತ್ಯಾ ಸಹಾಯವಾಣಿ ಎಂದರೇನು?
ಆತ್ಮಹತ್ಯಾ ಸಹಾಯವಾಣಿಯು ಗೌಪ್ಯ, ಉಚಿತ ದೂರವಾಣಿ ಅಥವಾ ಆನ್‌ಲೈನ್ ಸೇವೆಯಾಗಿದೆ, ಇದು ತೊಂದರೆಯಲ್ಲಿರುವ
ಯಾರಿಗಾದರೂ ತಕ್ಷಣದ ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ. ಯಾರಾದರೂ ಹತಾಶೆ, ತಲ್ಲಣ, ಅಥವಾ ಸ್ವಯಂ-ಹಾನಿಯ
ಬಗ್ಗೆ ಆಲೋಚಿಸುತ್ತಿದ್ದರೂ, ಸಹಾಯವಾಣಿಯು ಯಾವುದೇ ಬಗೆಯ ಪೂರ್ವಗ್ರಹ ಇಲ್ಲದೆ, ಹಣೆಪಟ್ಟಿಗಳಿಲ್ಲದೆ ಮತ್ತು ವಿಳಂಬವಿಲ್ಲದೆ ಕಿವಿಗೊಡಲು ಸಿದ್ಧವಿರುತ್ತದೆ. ಇದರ ಗುರಿ ಕೇವಲ "ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವೊಲಿಸುವುದು" ಮಾತ್ರವಲ್ಲ, ಆತ್ಮಹತ್ಯೆ ಆಲೋಚನೆ ಇರುವವರು ಅವರು ಆಲಿಸಲ್ಪಟ್ಟಿದ್ದಾರೆ, ಬೆಂಬಲಿಸಲ್ಪಟ್ಟಿದ್ದಾರೆ ಮತ್ತು ಸುರಕ್ಷತೆ ಹಾಗೂ ವೃತ್ತಿಪರ ಸಹಾಯದತ್ತ ಮಾರ್ಗದರ್ಶನ ನೀಡಲಾಗಿದೆ ಎಂದು ಭಾವಿಸಲು ಸಹಾಯ ಮಾಡುವುದಾಗಿದೆ.
ಸಹಾಯವಾಣಿ ಕರೆಯ ಹಿಂದಿನ ವಿಜ್ಞಾನ
ಆತ್ಮಹತ್ಯೆ ತಡೆಗಟ್ಟುವಿಕೆ ಕೇವಲ ಊಹೆಯಲ್ಲ – ಇದು ಮನೋವಿಜ್ಞಾನ ಮತ್ತು ನರವಿಜ್ಞಾನದ ಮೇಲೆ ಆಧಾರಿತವಾಗಿದೆ. ಒಬ್ಬ ವ್ಯಕ್ತಿಯು ಆತ್ಮಹತ್ಯೆಯ ಆಲೋಚನೆಯಲ್ಲಿದ್ದಾಗ, ಅವರ ಆಲೋಚನೆಗಳು ಅತ್ಯಂತ ಸಂಕುಚಿತ, ಬಿಗಿತ ಮತ್ತು ನಿರಾಶೆಯಿಂದ ತುಂಬಿರುತ್ತವೆ – ಇದನ್ನು ಕಾಗ್ನಿಟಿವ್ ಕನ್ಸ್ಟ್ರಿಕ್ಷನ್ (Cognitive Constriction) ಎಂದು ಕರೆಯಲಾಗುತ್ತದೆ. ಶಾಂತ, ಸಹಾನುಭೂತಿಯ ಸಂಭಾಷಣೆಯು ಮೆದುಳಿನ ಭಾವನೆ ಮತ್ತು ತರ್ಕವನ್ನು ಪ್ರಕ್ರಿಯೆಗೊಳಿಸುವ ಭಾಗಗಳನ್ನು ಸಕ್ರಿಯಗೊಳಿಸುತ್ತದೆ, ಕ್ರಮೇಣ ದೃಷ್ಟಿಕೋನ ಮತ್ತು ನಿಯಂತ್ರಣದ ಪ್ರಜ್ಞೆಯನ್ನು ಮರಳಿ ತರುತ್ತದೆ. ತರಬೇತಿ ಪಡೆದ ಆಲಿಸುವವರೊಂದಿಗಿನ ಒಂದೇ ಒಂದು ಸಂಭಾಷಣೆಯು ಆತ್ಮಹತ್ಯೆಯ ಆಲೋಚನೆಗಳು ಮತ್ತು ಭಾವನಾತ್ಮಕ ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. .
ಈ ಕರೆಗಳನ್ನು ಯಾರು ನಿರ್ವಹಿಸುತ್ತಾರೆ?
ಪ್ರತಿ ಸಹಾಯವಾಣಿಯ ಹಿಂದೆ ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಮೇಲ್ವಿಚಾರಣೆಯಲ್ಲಿರುವ ಸ್ವಯಂಸೇವಕರ ತರಬೇತಿ
ಪಡೆದ ತಂಡವಿದೆ. ಅವರು ಸಕ್ರಿಯವಾಗಿ ಆಲಿಸುವುದು, ಸಹಾನುಭೂತಿ ಮತ್ತು ಬಿಕ್ಕಟ್ಟು ನಿವಾರಣೆಯಲ್ಲಿ ಕಟ್ಟುನಿಟ್ಟಾಗಿ ತರಬೇತಿ
ಪಡೆದಿರುತ್ತಾರೆ. ಕರೆಗಳು ಯಾವಾಗಲೂ ಗೌಪ್ಯವಾಗಿರುತ್ತವೆ, ಆದರೆ ಜೀವನಕ್ಕೆ ತಕ್ಷಣದ ಅಪಾಯವಿದ್ದರೆ, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಂಡವು ಪೊಲೀಸ್, ಆಂಬುಲೆನ್ಸ್ ಸೇವೆಗಳು ಅಥವಾ ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸಬಹುದು –
ಆದರೆ ಇದನ್ನು ಆರೈಕೆ ಮತ್ತು ಘನತೆಯಿಂದ ಆದಷ್ಟು ಗೌಪ್ಯತೆಯನ್ನು ಕಾಪಾಡಿಕೊಂಡು ನಿರ್ವಹಿಸಲಾಗುತ್ತದೆ. ಭಾರತ ಸರ್ಕಾರ ಮತ್ತು ನಿಮ್ಹಾನ್ಸ್ (NIMHANS) ಪ್ರಾರಂಭಿಸಿದ ಭಾರತದ ಕಿರಣ್ ಮಾನಸಿಕ ಆರೋಗ್ಯ ಸಹಾಯವಾಣಿ (1800-599-0019) ಅಂತಹ ಒಂದು ರಾಷ್ಟ್ರೀಯ ಸಂಪನ್ಮೂಲವಾಗಿದೆ. ಇದರಲ್ಲಿ ಮನಶ್ಶಾಸ್ತ್ರಜ್ಞರು, ಸಮಾಜ ಕಾರ್ಯಕರ್ತರು ಮತ್ತು ತರಬೇತಿ ಪಡೆದ ಸಲಹೆಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ನೇಹ (ಚೆನ್ನೈ), ಆಸ್ರಾ (ಮುಂಬೈ), ಮತ್ತು ಸ್ನೇಹಿ (ದೆಹಲಿ) ಯಂತಹ ಹಲವಾರು ಎನ್‌ಜಿಒಗಳು ವರ್ಷಗಳಿಂದ ಈ ಸೇವೆಗಳನ್ನು ಅಪಾರ ಸಮರ್ಪಣೆಯೊಂದಿಗೆ ಒದಗಿಸುತ್ತಿವೆ.
ಅನಾಮಧೇಯತೆ ಏಕೆ ಮುಖ್ಯ?
ಹಲವಾರು ಜನರು ಕಳಂಕದ (stigma) ಕಾರಣದಿಂದಾಗಿ ಚಿಕಿತ್ಸೆ ಅಥವಾ ಮಾನಸಿಕ ಸಹಾಯ ಪಡೆಯಲು ಹಿಂಜರಿಯುತ್ತಾರೆ – ನಾವು ಹೇಡಿಗಳು, ಜೀವನ ಮಾಡಲು ಗೊತ್ತಿಲ್ಲದವರು , ಮುಂತಾದ ತೀರ್ಪಿಗೆ ಒಳಪಡುವ, ಹಣೆಪಟ್ಟಿ ಹಚ್ಚುವ ಅಥವಾ ತಪ್ಪಾಗಿ ಅರ್ಥೈಸಿಕೊಳ್ಳುವ ಭಯ ಇವರನ್ನು ಕಾಡುತ್ತಿರುತ್ತದೆ. ಸಹಾಯವಾಣಿಗಳು ಸಂಪೂರ್ಣ ಅನಾಮಧೇಯತೆಯನ್ನು ಅನುಮತಿಸುವ
ಮೂಲಕ ಈ ಅಡೆತಡೆಯನ್ನು ನಿವಾರಿಸುತ್ತವೆ. ಕರೆ ಮಾಡುವವರು ತಮ್ಮ ನೋವನ್ನು ಮುಕ್ತವಾಗಿ ಹಂಚಿಕೊಳ್ಳಬಹುದು, ಅವರು
ಗುರುತಿಸಲ್ಪಡುವುದಿಲ್ಲ ಅಥವಾ ನಿರ್ಣಯಕ್ಕೆ ಒಳಪಡುವುದಿಲ್ಲ ಎಂದು ತಿಳಿದಿರುತ್ತಾರೆ. ಈ ಮೊದಲ ಗೌಪ್ಯ ಹೆಜ್ಜೆಯೇ ಸಾಮಾನ್ಯವಾಗಿ ನಂತರದ ವೃತ್ತಿಪರ ಆರೈಕೆಗೆ ದಾರಿಯಾಗುತ್ತದೆ.
ಟೆಲಿಮೆಡಿಸಿನ್ ಮತ್ತು ಡಿಜಿಟಲ್ ಪ್ರಯೋಜನ
ಟೆಲಿಮೆಡಿಸಿನ್ ಮತ್ತು ಡಿಜಿಟಲ್ ಆರೋಗ್ಯದ ಏರಿಕೆಯು ಮಾನಸಿಕ ಆರೋಗ್ಯ ಬೆಂಬಲವನ್ನು ಎಂದಿಗಿಂತಲೂ ಹೆಚ್ಚು ಸುಲಭಗೊಳಿಸಿದೆ. ಸರ್ಕಾರದ ಟೆಲಿ-ಮಾನಸಿಕ ಆರೋಗ್ಯ ಮಾರ್ಗಸೂಚಿಗಳೊಂದಿಗೆ (Tele-Mental Health Guidelines), ಸಹಾಯವಾಣಿಗಳು ಈಗ ವ್ಯಾಖ್ಯಾನಿಸಲಾದ ನೈತಿಕ ಮತ್ತು ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಿವೆ – ಗೌಪ್ಯತೆ, ತಿಳುವಳಿಕೆ ಕೊಟ್ಟು ಒಪ್ಪಿಗೆ ಪಡೆಯುವುದು ಮತ್ತು ಅಗತ್ಯವಿದ್ದಾಗ ಅರ್ಹ ವೃತ್ತಿಪರರಿಗೆ ಸುರಕ್ಷಿತವಾಗಿ ಸಮಸ್ಯೆಗಳನ್ನು ನಿರ್ವಹಿಸಲು ವರ್ಗಾವಣೆಯನ್ನು ಖಚಿತಪಡಿಸುತ್ತವೆ. ತಂತ್ರಜ್ಞಾನ, ವಿಶೇಷವಾಗಿ ಎಐ-ಆಧಾರಿತ ಚಾಟ್‌ಬಾಟ್‌ಗಳು, ಪ್ರಾಯೋಗಿಕ ಹಂತದಲ್ಲಿವೆ ಮತ್ತು ಕೆಲವು ಸಹಾಯವಾಣಿಗಳಲ್ಲಿ ಮಾತ್ರ ಪ್ರಯೋಗಾತ್ಮಕವಾಗಿ ಬಳಸಲಾಗುತ್ತದೆ. ಆದರೆ ತಂತ್ರಜ್ಞಾನವು ಸಹಾಯವನ್ನು ಸುಲಭಗೊಳಿಸಬಹುದಾದರೂ, ಮಾನವನ ಸಹಾನುಭೂತಿ ಅತಿ ಅಗತ್ಯ.
ಕರೆಯ ನಂತರ ಏನಾಗುತ್ತದೆ?
ಆತ್ಮಹತ್ಯಾ ಸಹಾಯವಾಣಿ ಕೇವಲ ಒಂದು ಬಾರಿ ಸಂಭಾಷಣೆಯಲ್ಲ. ಅಗತ್ಯವಿದ್ದರೆ, ಕರೆ ಮಾಡುವವರಿಗೆ ಮನೋವೈದ್ಯಕೀಯ
ಸಮಾಲೋಚನೆ, ಚಿಕಿತ್ಸೆ, ಅಥವಾ ಸಮುದಾಯ ಬೆಂಬಲ ಸೇವೆಗಳ ಕಡೆಗೆ ಸೌಮ್ಯವಾಗಿ ಮಾರ್ಗದರ್ಶನ ನೀಡಲಾಗುತ್ತದೆ. ಕೆಲವು ಸಹಾಯವಾಣಿಗಳು ವ್ಯಕ್ತಿಯ ಯೋಗಕ್ಷೇಮವನ್ನು ಪರಿಶೀಲಿಸಲು ಫಾಲೋ-ಅಪ್ ಕರೆಗಳನ್ನು ಸಹ ಒದಗಿಸುತ್ತವೆ, ಆರೈಕೆಯ ನಿರಂತರತೆಯನ್ನು ಖಚಿತಪಡಿಸುತ್ತವೆ.
ಸಮಾಜವು ಸಹಾಯವಾಣಿಗಳನ್ನು ಏಕೆ ಬೆಂಬಲಿಸಬೇಕು?
ಆತ್ಮಹತ್ಯಾ ಸಹಾಯವಾಣಿ ಕೇವಲ ದೂರವಾಣಿ ಸೇವೆಯಲ್ಲ – ಇದು ಸಮಾಜದ ಆತ್ಮಸಾಕ್ಷಿಯ ಪ್ರತಿಬಿಂಬವಾಗಿದೆ. ಇದು ಪರಸ್ಪರ ಕಾಳಜಿ ವಹಿಸುವ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಪ್ರತಿನಿಧಿಸುತ್ತದೆ. ಉತ್ತರಿಸಿದ ಪ್ರತಿಯೊಂದು ಕರೆಯು ಸಂಭಾವ್ಯವಾಗಿ ಉಳಿಸಿದ ಒಂದು ಜೀವವಾಗಿದೆ. ಆದರೆ ಸಹಾಯವಾಣಿಗಳು ನಿಜವಾಗಿಯೂ ಪರಿಣಾಮ ಬೀರಬೇಕಾದರೆ, ಅವುಗಳಿಗೆ ನಿರಂತರ ಧನಸಹಾಯ, ತರಬೇತಿ ಪಡೆದ ಮಾನವಶಕ್ತಿ ಮತ್ತು ಸಾರ್ವಜನಿಕ ಜಾಗೃತಿ ಬೇಕು. ದೈಹಿಕ ತುರ್ತು ಪರಿಸ್ಥಿತಿಗಳಿಗಾಗಿ ನಾವು ಆಂಬುಲೆನ್ಸ್‌ಗಳಲ್ಲಿ ಹೂಡಿಕೆ ಮಾಡುವಂತೆಯೇ, ಭಾವನಾತ್ಮಕ ತುರ್ತು ಪರಿಸ್ಥಿತಿಗಳಿಗಾಗಿ ನಾವು ಸಹಾಯವಾಣಿಗಳಲ್ಲಿ ಹೂಡಿಕೆ ಮಾಡಬೇಕು.
ಸಹಾಯವಾಣಿಗೆ ಯಾವಾಗ ಕರೆ ಮಾಡಬೇಕು?
ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ: ಹತಾಶೆ, ನಿಷ್ಪ್ರಯೋಜಕತೆ, ಅಥವಾ ಗಾಢವಾದ ಸಮಸ್ಯೆ ಒಂದರಲ್ಲಿ ಸಿಕ್ಕಿ ಬಿದ್ದಿದ್ದೇನೆ ಎಂಬ ಭಾವನೆಯನ್ನು ಅನುಭವಿಸುತ್ತಿದ್ದರೆ ತೀವ್ರ ಭಾವನಾತ್ಮಕ ನೋವು ಅಥವಾ ಏಕಾಂತವನ್ನು ಅನುಭವಿಸುತ್ತಿದ್ದರೆ ಸ್ವಯಂ-ಹಾನಿ ಅಥವಾ ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದರೆ ಅಥವಾ ಕೇವಲ ಯಾರಾದರೂ ಆಲಿಸಬೇಕೆಂದು ಬಯಸಿದರೆ – ದಯವಿಟ್ಟು ಸಂಪರ್ಕಿಸಿ.
ನೀವು ಒಂಟಿಯಲ್ಲ. ಸಹಾಯ 24/7 ಲಭ್ಯವಿದೆ.
�� ಾಷ್ಟ್ರೀಯ ಸಹಾಯವಾಣಿ (ಕಿರಣ್): 1800-599-0019
�� ಆಸ್ರಾ (ಮುಂಬೈ): 91-9820466726
�� ೇಹ (ಚೆನ್ನೈ): 91-44-2464 0050
�� ಐಕಾಲ್iCall): 91-9152987821

ಕೊನೆಯ ಮಾತು
ಒಬ್ಬ ಮನೋವೈದ್ಯನಾಗಿ, ನಾನು ಪದೇ ಪದೇ ನೋಡಿದ್ದೇನೆಂದರೆ, ಜೀವಗಳನ್ನು ಉಳಿಸುವುದು ಕೇವಲ ಔಷಧಿ ಅಥವಾ ಚಿಕಿತ್ಸೆಯಿಂದಲ್ಲ – ಅದು ಸಂಪರ್ಕ, ಸಹಾನುಭೂತಿ ಮತ್ತು ಸಮಯೋಚಿತ ಸಹಾಯದಿಂದ. ಆತ್ಮಹತ್ಯೆ ತಡೆಗಟ್ಟಬಹುದಾದ್ದು. ಮತ್ತು ಕೆಲವೊಮ್ಮೆ, ದೂರವಾಣಿಯ ಇನ್ನೊಂದು ತುದಿಯಲ್ಲಿರುವ ಒಂದು ಧ್ವನಿಯು – “ನಾನು ಇಲ್ಲಿದ್ದೇನೆ. ನಾನು ಆಲಿಸುತ್ತಿದ್ದೇನೆ. ನೀವು ಒಂಟಿಯಲ್ಲ,” ಎಂದು ಹೇಳುವುದಷ್ಟೇ ಬೇಕಾಗುತ್ತದೆ.