Select Page

Date: February 14, 2021

‘ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ’; ಮಲ್ಪೆ ಬೀಚ್ ನಲ್ಲಿ ಮನಮುಟ್ಟುವ ಮರಳು ಶಿಲ್ಪ ರಚನೆ

ಮಲ್ಪೆ: ಉಡುಪಿಯ ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್, ಉಡುಪಿ-ಮಣಿಪಾಲ, ಐ.ಎಂ.ಎ. ಉಡುಪಿ ಕರಾವಳಿ ಸಹಯೋಗದಲ್ಲಿ ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ಸುಂದರ ಮರಳು ಶಿಲ್ಪ ಕಲಾಕೃತಿಯನ್ನು ಮಲ್ಪೆ ಕಡಲ ಕಿನಾರೆಯಲ್ಲಿ ರಚಿಸಲಾಯಿತು. ಮಕ್ಕಳ ಮೇಲಾಗುವ ಪರಿಣಾಮದ ದೃಶ್ಯದೊಂದಿಗೆ ಬದುಕಿನಲ್ಲಿ ಭರವಸೆ ನೀಡುವ “ನೀನು ಒಂಟಿಯಲ್ಲ” ಸಂದೇಶದೊಂದಿಗೆ ಜನ ಜಾಗೃತಿ ಸಾರುವ ಮರಳು ಶಿಲ್ಪದ ರಚನೆ ಉಡುಪಿಯ ‘ಸ್ಯಾಂಡ್ ಥೀಂ’ ತಂಡದಿಂದ ಬಹು ಸುಂದರವಾಗಿ ಮೂಡಿ ಬಂತು.
ಮದ್ಯದ ಬಾಟಲಿಯ ಮಧ್ಯೆ ಸಿಲುಕಿದ ಮಗು ಕಣ್ಣೀರು ಹಾಕುತ್ತಾ ಸಹಾಯಕ್ಕಾಗಿ ಹಾತೊರೆಯುತ್ತಿರುವುದಲ್ಲದೆ, ಒಡೆದ ಗಾಜಿನ ಬಾಟಲಿಯಂತೆ ಛಿದ್ರಗೊಂಡ ಮತ್ತು ಇನ್ನೊಬ್ಬಳು ಬಾಲೆ ಹತಾಶೆಯಿಂದ ಕುಳಿತಿರುವ ದೃಶ್ಯ ಒಂದು ಕಡೆಯಾದರೆ, ಸಮಾಜ, ಕುಟುಂಬ, ಶಾಲೆ, ಗೆಳೆಯರಿಂದ ಮಾನಸಿಕ ಸ್ಥೈರ್ಯದ ಅವಶ್ಯಕತೆಯ ದೃಢ ನಿರ್ಧಾರದ ಕಲ್ಪನೆಯನ್ನು ಕಲ್ಲುಗಳ ಮೂಲಕ ಬಿಂಬಿಸಿ, “ನೀ ಒಬ್ಬಂಟಿಯಲ್ಲ” ಎನ್ನುವ ಪ್ರತಿಬಿಂಬವನ್ನು 3.5 ಅಡಿ ಎತ್ತರ ಮತ್ತು 7 ಅಡಿ ಅಗಲದೊಂದಿಗೆ ಮರಳಿನಲ್ಲಿ ರಚಿಸಲಾಯಿತು. ಬೀಚ್ ಗೆ ಬಂದ ನೂರಾರು ಪ್ರವಾಸಿಗರು ಈ ಆಕರ್ಷಕ ಮರಳು ಶಿಲ್ಪವನ್ನು ಕಣ್ತುಂಬಿಕೊಂಡರು.
ಈ ಸಂದರ್ಭ ಐ.ಎಂ.ಎ. ಉಡುಪಿ ಕರಾವಳಿ ಅಧ್ಯಕ್ಷ ಡಾ.ಉಮೇಶ್ ಪ್ರಭು, ರೋಟರಿ ಮಣಿಪಾಲ ಅಧ್ಯಕ್ಷ ಪ್ರಶಾಂತ್ ಹೆಗ್ಡೆ ಹಾಗೂ ಉಡುಪಿಯ ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಪಿ. ವಿ. ಭಂಡಾರಿ ಹಾಗೂ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆಯವರ ಉಪಸ್ಥಿತಿಯೊಂದಿಗೆ ಉದ್ಘಾಟಿಸಿ, ನೆರೆದ ಪ್ರವಾಸಿಗರಿಗೆ ಮಾಹಿತಿ ನೀಡಿದರು  “ನೀನು ಒಂಟಿಯಲ್ಲ’ ಎಂಬ ಶೀರ್ಷಿಕೆಯಡಿಯಲ್ಲಿ ‘ಸ್ಯಾಂಡ್ ಥೀಂ’ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಜೈ ನೇರಳಕಟ್ಟೆ, ಪ್ರಸಾದ್ ಈ ಮರಳುಶಿಲ್ಪದ ರೂವಾರಿಗಳು.